ಹೆಂಡತಿಯ 2ನೇ ಮದುವೆ ಸಂಭ್ರಮದ ಬೆನ್ನಲ್ಲೇ ಗಂಡನ ಶವ ಹೊರಕ್ಕೆ!
ತುಮಕೂರು: ಗಂಡ ಮೃತಪಟ್ಟ ಕೆಲವೇ ದಿನಗಳಲ್ಲಿ ಪತ್ನಿ ಮರುಮದುವೆಯಾಗಿರುವ ಘಟನೆ ಇದೀಗ ಸಂಶಯಕ್ಕೆ ಕಾರಣವಾಗಿ, ಸಮಾಧಿ ಮಾಡಿದ ಶವವನ್ನು 23 ದಿನಗಳ ಬಳಿಕ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಘಟನೆ ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ನಡೆದಿದೆ.
ಜನವರಿ 31ರಂದು ಪರಮೇಶ್ (50) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತಪಟ್ಟ ದಿನವೇ ಅಂತ್ಯಕ್ರಿಯೆ ನೆರವೇರಿಸಿ ಮಣ್ಣಿನಲ್ಲಿ ಸಮಾಧಿ ಮಾಡಲಾಗಿತ್ತು. ಆದರೆ, ಪತಿ ಸಾವಿನ 19 ದಿನಗಳಲ್ಲೇ, ಅಂದರೆ ಇದೇ ತಿಂಗಳ 19ರಂದು ಪರಮೇಶ್ ಪತ್ನಿ ಮತ್ತೊಂದು ಮದುವೆಯಾಗಿರುವುದು ಸಂಬಂಧಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ಪತ್ನಿಯ ನಡೆಗೆಯಿಂದ ಗೊಂದಲಗೊಂಡ ಮೃತನ ಸಹೋದರಿ, ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪರಮೇಶ್ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ದೂರಿನಲ್ಲಿ ಪರಮೇಶ್ ಮೃತಪಟ್ಟ ವೇಳೆ ಅವರ ಮೂಗಿನ ಪಕ್ಕ ಗಾಯದ ಗುರುತು ಇದ್ದದ್ದು ಹಾಗೂ ಗುಪ್ತಾಂಗ ಊದಿಕೊಂಡಿದ್ದ ಬಗ್ಗೆ ಉಲ್ಲೇಖಿಸಲಾಗಿದೆ. ಇದರಿಂದ ಇದು ಹೃದಯಾಘಾತವಲ್ಲ, ವ್ಯವಸ್ಥಿತ ಹತ್ಯೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ದೂರು ಹಿನ್ನೆಲೆ ಪೊಲೀಸರು ತಹಶೀಲ್ದಾರ್ ರಾಜೇಶ್ವರಿ ಅವರ ಸಮ್ಮುಖದಲ್ಲಿ ಶವವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅನುಮಾನಾಸ್ಪದ ಸಾವು ಹಿನ್ನೆಲೆ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಒಂದು ವಾರದಲ್ಲಿ ಮರಣೋತ್ತರ ಪರೀಕ್ಷಾ ವರದಿ ಲಭ್ಯವಾಗುವ ನಿರೀಕ್ಷೆಯಿದ್ದು, ಅದರ ಆಧಾರದಲ್ಲಿ ಪರಮೇಶ್ ಅವರ ಸಾವಿನ ನಿಜವಾದ ಕಾರಣ ಬಹಿರಂಗವಾಗಲಿದೆ.






