LPG ಕೊರತೆ ಹೊಡೆತ: ಮುಂಬೈಯಲ್ಲಿ 20% ಹೋಟೆಲ್‌ಗಳು ಬಂದ್, ಇನ್ನೂ 50% ಮುಚ್ಚುವ ಭೀತಿ
ಮುಂಬೈ: ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾದ ಅಡಚಣೆಯಿಂದ ಮುಂಬೈ ನಗರದಲ್ಲಿ ಸುಮಾರು 20 ಶೇಕಡಾ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಈಗಾಗಲೇ ಬಂದ್ ಆಗಿವೆ ಎಂದು ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ AHAR ತಿಳಿಸಿದೆ.
ಅನಿಲ ಪೂರೈಕೆಯ ಪರಿಸ್ಥಿತಿ ಶೀಘ್ರದಲ್ಲಿ ಸುಧಾರಿಸದಿದ್ದರೆ ಮುಂದಿನ ಎರಡು ದಿನಗಳಲ್ಲಿ ನಗರದ ಸುಮಾರು 50 ಶೇಕಡಾ ಹೋಟೆಲ್‌ಗಳು ಮುಚ್ಚುವ ಸಾಧ್ಯತೆ ಇದೆ ಎಂದು ಸಂಘ ಎಚ್ಚರಿಸಿದೆ. AHAR ಪ್ರಕಾರ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರೆಸ್ಟೋರೆಂಟ್‌ಗಳ ಸಂಖ್ಯೆ ಅವುಗಳಲ್ಲಿರುವ LPG ಸ್ಟಾಕ್ ಮೇಲೆ ಅವಲಂಬಿತವಾಗಿದೆ.
ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ ಮುಂಬೈನ ಅರ್ಧದಷ್ಟು ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಸಂಘ ಹೇಳಿದೆ.
ಆದರೆ ಹೋಟೆಲ್‌ಗಳನ್ನು ಸಾಮೂಹಿಕವಾಗಿ ಮುಚ್ಚುವ ಬಗ್ಗೆ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದು AHAR ಸ್ಪಷ್ಟಪಡಿಸಿದೆ. ರೆಸ್ಟೋರೆಂಟ್‌ಗಳನ್ನು ತೆರೆದಿಡುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರವನ್ನು ಪ್ರತ್ಯೇಕವಾಗಿ ಹೋಟೆಲ್ ಮಾಲೀಕರು ತಮ್ಮ ಸಂಸ್ಥೆಗಳಲ್ಲಿ ಇರುವ ಅನಿಲ ಪೂರೈಕೆಯ ಲಭ್ಯತೆಯನ್ನು ಆಧರಿಸಿ ತೆಗೆದುಕೊಳ್ಳುತ್ತಿದ್ದಾರೆ.
ಇದಲ್ಲದೆ ಅನಿಲ ಕೊರತೆ ಹಿನ್ನೆಲೆ ಹಲವಾರು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮೆನು ಐಟಂಗಳನ್ನು ಕಡಿತಗೊಳಿಸುವುದು ಅಥವಾ ಕಾರ್ಯಾಚರಣೆಯನ್ನು ಸೀಮಿತಗೊಳಿಸುವ ನಿರ್ಧಾರಕ್ಕೂ ಮುಂದಾಗಿವೆ ಎಂದು ತಿಳಿದುಬಂದಿದೆ.






