ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ: ಸರ್ಕಾರದಿಂದ 60 ದಿನಗಳ ವಿನಾಯಿತಿ
ಬೆಂಗಳೂರು: ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ತುಂಬಿರಬೇಕು ಎಂಬ ಕಡ್ಡಾಯ ನಿಯಮದಲ್ಲಿ ಸರ್ಕಾರ ಈ ವರ್ಷವೂ 60 ದಿನಗಳ ಸಡಿಲಿಕೆ ನೀಡುವ ಮಹತ್ವದ ತೀರ್ಮಾನ ಕೈಗೊಂಡಿದೆ.
ವಿಧಾನಸಭೆಯಲ್ಲಿ ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದು, 2026-27ನೇ ಶೈಕ್ಷಣಿಕ ವರ್ಷಕ್ಕೆ ಈ ಸಡಿಲಿಕೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಈ ನಿರ್ಧಾರದಂತೆ 5 ವರ್ಷ 10 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸು ಹೊಂದಿರುವ ಮಕ್ಕಳು ಕೂಡ ಒಂದನೇ ತರಗತಿಗೆ ದಾಖಲಾಗಲು ಅವಕಾಶ ದೊರೆಯಲಿದೆ. ಈ ಸಡಿಲಿಕೆ ಎಲ್ಕೆಜಿ, ಯುಕೆಜಿ ಹಾಗೂ ಮೊದಲ ತರಗತಿಗೂ ಅನ್ವಯವಾಗುತ್ತದೆ.
ವಯೋಮಿತಿ ಸಡಿಲಿಕೆಗೆ ಆಗ್ರಹಿಸಿ ಪೋಷಕರು ಹಲವು ಬಾರಿ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆದಿದ್ದರು. ಇದೀಗ ಸರ್ಕಾರದ ನಿರ್ಧಾರದಿಂದ ಪೋಷಕರಿಗೆ ದೊಡ್ಡ ಮಟ್ಟದ ನಿರಾಳತೆ ದೊರೆತಿದೆ.
ಪ್ರತಿ ವರ್ಷ ಈ ಸಮಸ್ಯೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಹೊಸ ಕಾನೂನು ತರಲು ನಿರ್ಧರಿಸಿದೆ. ಇದುವರೆಗೆ ಎಲ್ಕೆಜಿ ಮತ್ತು ಯುಕೆಜಿ ಪ್ರವೇಶಕ್ಕೆ ಸ್ಪಷ್ಟ ನಿಯಮಾವಳಿ ಇರಲಿಲ್ಲ. ಮುಂದಿನ ದಿನಗಳಲ್ಲಿ ಈ ಹಂತದಲ್ಲೇ ವಯೋಮಿತಿ ನಿಗದಿ ಮಾಡಿ ಸ್ಪಷ್ಟತೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
ಈ ಸಂಬಂಧದ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.






