12 ವರ್ಷಗಳಿಂದ ಡ್ರಗ್ ಪೆಡ್ಲಿಂಗ್ – ನೈಜೀರಿಯಾ ಪ್ರಜೆ ಬಂಧನ, ₹14 ಕೋಟಿ ಮಾದಕ ವಸ್ತು ಜಪ್ತಿ
ಬೆಂಗಳೂರು: ನಗರದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ಡ್ರಗ್ ಪೆಡ್ಲಿಂಗ್ ಜಾಲವನ್ನು ಹೆಬ್ಬಗೋಡಿ ಪೊಲೀಸರು ಭೇದಿಸಿ, ನೈಜೀರಿಯಾ ಮೂಲದ ಇಮ್ಯಾನ್ಯುಯಲ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು ₹14 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಇಮ್ಯಾನ್ಯುಯಲ್ 2014ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದು, ಬಳಿಕ ಬೆಂಗಳೂರಿನಲ್ಲಿ ನೆಲೆಸಿ ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದಾನೆ. ಕಳೆದ 12 ವರ್ಷಗಳಿಂದ ನಗರದಲ್ಲೇ ಅಡಗಿ ಡ್ರಗ್ ವ್ಯಾಪಾರ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಆರೋಪಿ 4ರಿಂದ 5 ಮನೆಗಳನ್ನು ಬಾಡಿಗೆಗೆ ಪಡೆದು, ಅಲ್ಲಿಂದಲೇ ಡ್ರಗ್ ಪೆಡ್ಲಿಂಗ್ ನಡೆಸುತ್ತಿದ್ದ. ಹೊರ ರಾಜ್ಯಗಳು ಹಾಗೂ ವಿದೇಶಗಳಿಂದ ಮಾದಕ ವಸ್ತುಗಳನ್ನು ತರಿಸಿಕೊಂಡು, ಸಬ್ ಪೆಡ್ಲರ್‌ಗಳ ಮೂಲಕ ನಗರ ಸೇರಿದಂತೆ ವಿವಿಧ ಕಡೆಗಳಿಗೆ ಸರಬರಾಜು ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಹೆಬ್ಬಗೋಡಿ ಪೊಲೀಸರು, ಆರೋಪಿಯನ್ನು ಬಂಧಿಸಿ MDMA, LSD ಸೇರಿದಂತೆ ವಿವಿಧ ಸಿಂಥೆಟಿಕ್ ಡ್ರಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
