CM ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್ ಅಹ್ಮದ್ ರಾಜೀನಾಮೆ: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್ಸಿ ನಜೀರ್ ಅಹ್ಮದ್ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೀಡಿದ್ದ ಕಟ್ಟುನಿಟ್ಟಿನ ಸೂಚನೆ ಮತ್ತು ಗಡುವಿನ ಬೆನ್ನಲ್ಲೇ ನಜೀರ್ ಅಹ್ಮದ್ ಈ ನಿರ್ಧಾರ ಕೈಗೊಂಡಿದ್ದಾರೆ.
ಸೋಮವಾರ (ಏಪ್ರಿಲ್ 13)ರಂದು ಸುರ್ಜೇವಾಲಾ ಅವರು ನಜೀರ್ ಅಹ್ಮದ್ ಅವರಿಗೆ ರಾಜೀನಾಮೆ ಸಲ್ಲಿಸಲು ಅಂತಿಮ ಗಡುವು ನೀಡಿದ್ದರು. ಗಡುವಿನೊಳಗೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡದಿದ್ದರೆ, ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಪಕ್ಷದ ವರಿಷ್ಠರ ಕಠಿಣ ನಿಲುವಿನ ಹಿನ್ನೆಲೆಯಲ್ಲಿ ಅನಿವಾರ್ಯ ಪರಿಸ್ಥಿತಿ ಎದುರಿಸಿದ ನಜೀರ್ ಅಹ್ಮದ್ ಕೊನೆಗೂ ತಮ್ಮ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಈ ಹುದ್ದೆಯ ಬದಲಾವಣೆ ಕುರಿತು ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಬಿದ್ದಂತಾಗಿದೆ.



