SSLC ಹಿಂದಿಗೆ ‘ಗ್ರೇಡ್’ ಬದಲು ‘ಅಂಕ’ ಕಡ್ಡಾಯ: ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು: ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇನ್ಮುಂದೆ ಹಿಂದಿ ವಿಷಯಕ್ಕೆ ‘ಗ್ರೇಡ್’ ಬದಲು ಇತರ ವಿಷಯಗಳಂತೆ ಅಂಕಗಳನ್ನು (ಮಾರ್ಕ್ಸ್) ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ಹೈಕೋರ್ಟ್ ಈಗಾಗಲೇ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಆದರೆ, ಆ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ, ಹಿಂದಿ ವಿಷಯಕ್ಕೂ ಅಂಕ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸ್ಪಷ್ಟ ಸೂಚನೆ ನೀಡಿದೆ.
ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಹಿಂದಿ ವಿಷಯಕ್ಕೆ ಗ್ರೇಡ್ ಬದಲು ಅಂಕ ನೀಡಬೇಕು ಎಂದು ತಿಳಿಸಿದೆ.
ವಿಚಾರಣೆಯ ವೇಳೆ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಹಿಂದಿ ವಿಷಯದಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಹಿನ್ನೆಲೆಯಲ್ಲಿ, ಅವರ ಮೇಲೆ ಒತ್ತಡ ಕಡಿಮೆ ಮಾಡಲು ಗ್ರೇಡ್ ಪದ್ಧತಿ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪರೀಕ್ಷೆಯ ಅಧಿಸೂಚನೆ ಹೊರಡಿಸುವಾಗಲೇ ಮೌಲ್ಯಮಾಪನ ವಿಧಾನವನ್ನು ಸ್ಪಷ್ಟಪಡಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿತು. ಅಧಿಸೂಚನೆಯಲ್ಲಿ ಉಲ್ಲೇಖಿಸದ ಗ್ರೇಡ್ ಪದ್ಧತಿಯನ್ನು ಬಳಿಕ ಜಾರಿಗೊಳಿಸುವುದು ಸೂಕ್ತವಲ್ಲ ಎಂದು ಹೇಳಿತು.
ಇದೇ ವೇಳೆ, “ವಿದ್ಯಾರ್ಥಿಗಳನ್ನು ಪಾಸ್ ಮಾಡಿಸುವುದೇ ಉದ್ದೇಶವಾದರೆ ಪರೀಕ್ಷೆಯನ್ನೇ ರದ್ದು ಮಾಡಬಹುದು” ಎಂದು ಕಟುವಾಗಿ ಹೇಳಿದ ನ್ಯಾಯಪೀಠ, ನಿಯಮ ರೂಪಿಸಿದ ನಂತರವೇ ಯಾವುದೇ ಬದಲಾವಣೆಗಳನ್ನು ಜಾರಿಗೆ ತರುವುದು ಸೂಕ್ತ ಎಂದು ತಿಳಿಸಿತು.
ಹೀಗಾಗಿ, 2025–26ನೇ ಶೈಕ್ಷಣಿಕ ಸಾಲಿನಿಂದ ಹಿಂದಿ ವಿಷಯಕ್ಕೂ ಅಂಕಗಳನ್ನು ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ.



