ಮೇ 20ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಬಂದ್? ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ ಘೋಷಣೆ
ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಸಂಘರ್ಷ ಮತ್ತೊಮ್ಮೆ ತೀವ್ರಗೊಂಡಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.ಸರ್ಕಾರದೊಂದಿಗೆ ನಡೆದ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ, ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ಗಳನ್ನು ರಸ್ತೆಗಿಳಿಸದಿರಲು ನೌಕರರ ಸಂಘಟನೆಗಳು ನಿರ್ಧರಿಸಿವೆ.ಇಂದು ಸುದ್ದಿಗೋಷ್ಠಿ ನಡೆಸಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಖಂಡರು, ಸರ್ಕಾರ ತಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿ, ಈ ಬಾರಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.“ಮೇ 20ರ ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಲಿದೆ. ಈ ಬಾರಿ ಮಾತುಕತೆಗೆ ಅವಕಾಶವಿಲ್ಲ, ಸಮಸ್ಯೆ ಇತ್ಯರ್ಥವಾದರೆ ಮಾತ್ರ ಹೋರಾಟ ಹಿಂತೆಗೆದುಕೊಳ್ಳಲಾಗುತ್ತದೆ,” ಎಂದು ಸಮಿತಿ ಸ್ಪಷ್ಟಪಡಿಸಿದೆ.ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು:• 38 ತಿಂಗಳ ಹಿಂಬಾಕಿ ವೇತನ ಬಿಡುಗಡೆ• 2024ರ ಜನವರಿ 1ರಿಂದ ಮೂಲ ವೇತನದಲ್ಲಿ ಶೇ.25ರಷ್ಟು ಹೆಚ್ಚಳ• ಮೂಲ ವೇತನದಲ್ಲಿ ಶೇ.31ರಷ್ಟು ತುಟ್ಟಿ ಭತ್ಯೆ ವಿಲೀನ• 26 ತಿಂಗಳ ಬಾಕಿ 1,272 ಕೋಟಿ ರೂಪಾಯಿಯನ್ನು ಒಂದೇ ಕಂತಿನಲ್ಲಿ ಪಾವತಿ• ಕೋವಿಡ್ ಅವಧಿಯ ಬಾಕಿ ವೇತನ ಹಾಗೂ ಅರಿಯರ್ಸ್ ಬಿಡುಗಡೆಈ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ರಾಜ್ಯಾದ್ಯಂತ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ನೌಕರರು ಎಚ್ಚರಿಕೆ ನೀಡಿದ್ದಾರೆ.ಸಾರ್ವಜನಿಕರಿಗೆ ಆಗುವ ತೊಂದರೆಗೆ ಸರ್ಕಾರವೇ ಹೊಣೆ ಹೊರಬೇಕು, ನೌಕರರು ಅಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಹೇಳಿದೆ.ಸುಮಾರು 1.25 ಲಕ್ಷಕ್ಕೂ ಹೆಚ್ಚು ನೌಕರರು ಈ ಹೋರಾಟದಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ನಾಲ್ಕೂ ಸಾರಿಗೆ ನಿಗಮಗಳ ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.“ಚಾಲಕರು ಸ್ಟೇರಿಂಗ್ ಹಿಡಿಯುವುದಿಲ್ಲ, ಕಂಡಕ್ಟರ್ಗಳು ಟಿಕೆಟ್ ಹರಿಯುವುದಿಲ್ಲ, ತಾಂತ್ರಿಕ ಸಿಬ್ಬಂದಿ ಕೆಲಸ ನಿರ್ವಹಿಸುವುದಿಲ್ಲ,” ಎಂದು ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದು, ಮೇ 20ರೊಳಗೆ ಸರ್ಕಾರ ಕೈಗೊಳ್ಳುವ ನಿರ್ಧಾರ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಭವಿಷ್ಯವನ್ನು ನಿರ್ಧರಿಸಲಿದೆ.



