ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ರಾಜೀನಾಮೆ: ‘ಮತ್ತೆ ಗೆಲ್ಲುತ್ತೇವೆ’ ಎಂದು ಕಾರ್ಯಕರ್ತರಿಗೆ ಸಂದೇಶ
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಸ್ಟಾಲಿನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಕಚೇರಿಗೆ ಔಪಚಾರಿಕವಾಗಿ ಕಳುಹಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಬಹುಮತ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ಇನ್ನೊಂದೆಡೆ, ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ನಾಯಕ ದಳಪತಿ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು, ಮುಂದಿನ ಎರಡು ವಾರಗಳಲ್ಲಿ ಬಹುಮತ ಸಾಬೀತುಪಡಿಸುವುದಾಗಿ ತಿಳಿಸಿದ್ದಾರೆ.
ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಸ್ಟಾಲಿನ್ ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘ ಸಂದೇಶ ಹಂಚಿಕೊಂಡಿದ್ದಾರೆ. ಚುನಾವಣೆಯಲ್ಲಿ ತಮ್ಮ ಮೈತ್ರಿಕೂಟಕ್ಕೆ ಬೆಂಬಲ ನೀಡಿದ ಜನತೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ ಅವರು, ದೊರೆತ ಪ್ರತಿಯೊಂದು ಮತವನ್ನೂ ಅಮೂಲ್ಯ ನಂಬಿಕೆ ಎಂದು ಪರಿಗಣಿಸುತ್ತೇನೆ ಎಂದಿದ್ದಾರೆ.
ಲಭ್ಯ ಅಂಕಿಅಂಶಗಳ ಪ್ರಕಾರ, ಡಿಎಂಕೆ ಮೈತ್ರಿಕೂಟವು 1 ಕೋಟಿ 54 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದೆ ಎಂದು ತಿಳಿಸಿದ ಅವರು, ಗೆದ್ದ ಪಕ್ಷದೊಂದಿಗೆ ಮತಗಳ ವ್ಯತ್ಯಾಸ ಅತಿ ಕಡಿಮೆ ಎಂದು ಹೇಳಿದ್ದಾರೆ. ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆ ಇನ್ನೂ ಬಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ಗೆದ್ದ ಅಭ್ಯರ್ಥಿಗಳು ತಮಗೆ ಮತಹಾಕಿದ ಜನರನ್ನು ನೇರವಾಗಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಮುಖರು ಎಂಬ ಸಂದೇಶವನ್ನು ಮತ್ತೊಮ್ಮೆ ಒತ್ತಿಹೇಳಿದ್ದಾರೆ.
ಡಿಎಂಕೆ ಪಕ್ಷ ಆರು ಬಾರಿ ಅಧಿಕಾರಕ್ಕೆ ಬಂದಿದ್ದು, ಗೆಲುವು-ಸೋಲು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಪರಂಪರೆ ಹೊಂದಿದೆ ಎಂದು ಹೇಳಿದ ಸ್ಟಾಲಿನ್, ಕಾರ್ಯಕರ್ತರು ತಮ್ಮ ಆದರ್ಶದ ಪಯಣವನ್ನು ಮುಂದುವರಿಸಬೇಕು ಎಂದು ಕರೆ ನೀಡಿದ್ದಾರೆ.
ನಾವು ಆಡಳಿತದಲ್ಲಿದ್ದರೆ ಜನಪರ ಯೋಜನೆಗಳನ್ನು ರೂಪಿಸುತ್ತೇವೆ; ವಿರೋಧ ಪಕ್ಷದಲ್ಲಿದ್ದರೆ ಜನರ ಬೇಡಿಕೆಗಾಗಿ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷವನ್ನು ಪ್ರಬಲ ವಿರೋಧ ಪಕ್ಷವಾಗಿ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಪೆರಿಯಾರ್, ಅಣ್ಣಾ ಹಾಗೂ ಕಲೈಗ್ನಾರ್ ಅವರ ತತ್ವಗಳನ್ನು ಮುಂದುವರಿಸಿಕೊಂಡು ಜನಾಂಗ, ಭಾಷೆ ಮತ್ತು ದೇಶದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. “ನಾವು ಮತ್ತೆ ಗೆಲ್ಲುತ್ತೇವೆ” ಎಂದು ಸ್ಟಾಲಿನ್ ತಮ್ಮ ಸಂದೇಶದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



