‘ನನ್ನ ಸ್ಥಾನ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ’: ಸಿಎಂ ಸ್ಥಾನ ಬದಲಾವಣೆ ಚರ್ಚೆಗೆ ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಲ್ಲಿ ಐದು ವರ್ಷ ಮುಂದುವರಿಯುವ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಸ್ಪಷ್ಟನೆ ನೀಡಿದ್ದು, ತಮ್ಮ ಹುದ್ದೆಯ ಕುರಿತ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸುವುದು ಖಚಿತ ಎಂದು ತಿಳಿಸಿದರು.
“ನಮ್ಮ ಪಕ್ಷ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತದೆ. ಆದರೆ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ,” ಎಂದು ಸಿದ್ದರಾಮಯ್ಯ ಹೇಳಿದರು.
ದೆಹಲಿ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ವರಿಷ್ಠರು ಕರೆದರೆ ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮಯ ನೀಡಿದರೆ ದೆಹಲಿಗೆ ತೆರಳಿ ಚರ್ಚೆ ನಡೆಸುವುದಾಗಿ ಹೇಳಿದರು.
“ಹೈಕಮಾಂಡ್ ಕರೆದರೆ ಅಥವಾ ರಾಹುಲ್ ಗಾಂಧಿ ಅಪಾಯಿಂಟ್ಮೆಂಟ್ ನೀಡಿದರೆ ಸಂಪುಟ ಪುನರ್ರಚನೆ ಸೇರಿದಂತೆ ಇತರೆ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ದೆಹಲಿಗೆ ಹೋಗುತ್ತೇನೆ. ಇದುವರೆಗೆ ನಾನು ಯಾವುದೇ ಅಪಾಯಿಂಟ್ಮೆಂಟ್ ಕೇಳಿಲ್ಲ,” ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪರ ಜನಾಭಿಪ್ರಾಯ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಜನರು ಸರ್ಕಾರದ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲಾಗುವುದು,” ಎಂದು ಹೇಳಿದರು.
ಇದೇ ವೇಳೆ ವಿರೋಧ ಪಕ್ಷಗಳ ತಂತ್ರಗಳ ಕುರಿತು ವ್ಯಂಗ್ಯವಾಡಿದ ಅವರು, “ವಿರೋಧ ಪಕ್ಷಗಳಿಗೆ ಯಾವುದೇ ರಾಜಕೀಯ ತಂತ್ರಗಳಿಲ್ಲ. ಅವರ ಬಳಿ ಇರುವುದೆಲ್ಲಾ ಕುತಂತ್ರಗಳಷ್ಟೇ,” ಎಂದು ಟೀಕಿಸಿದರು.



