No menu items!
11.8 C
Munich
Friday, May 8, 2026

ಸಾಲದ ಹಣಕ್ಕಾಗಿ ವೃದ್ಧೆಯ ಹತ್ಯೆ; ಆಕ್ಸಿಡೆಂಟ್ ನಾಟಕವಾಡಿ ಮನೆ ದೋಚಲು ಯತ್ನಿಸಿದ ಐವರ ಗ್ಯಾಂಗ್ ಬಂಧನ

Must read

ಸಾಲದ ಹಣಕ್ಕಾಗಿ ವೃದ್ಧೆಯ ಹತ್ಯೆ; ಆಕ್ಸಿಡೆಂಟ್ ನಾಟಕವಾಡಿ ಮನೆ ದೋಚಲು ಯತ್ನಿಸಿದ ಐವರ ಗ್ಯಾಂಗ್ ಬಂಧನ

ಬೆಂಗಳೂರು: ಹಣಕ್ಕಾಗಿ ಸಾಲ ಕೊಟ್ಟಿದ್ದ ವೃದ್ಧೆಯನ್ನೇ ಅಪಘಾತದ ರೂಪದಲ್ಲಿ ಕೊಲೆ ಮಾಡಿ, ಬಳಿಕ ಆಸ್ಪತ್ರೆ ಸೇರಿಸುವ ನೆಪದಲ್ಲಿ ಮನೆಯ ಕೀ ಪಡೆದು ಹಣ ಹಾಗೂ ಚಿನ್ನಾಭರಣ ದೋಚಲು ಯತ್ನಿಸಿದ್ದ ಐವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ವೇಳೆ ಇದು ಸಾಮಾನ್ಯ ರಸ್ತೆ ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ ಎಂಬುದು ಬಯಲಾಗಿದೆ.
ಮೃತ ಮಹಿಳೆಯನ್ನು ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಏಪ್ರಿಲ್ 21ರಂದು ಕುರುಬರಹಳ್ಳಿ ಪೈಪ್ಲೈನ್ ರಸ್ತೆಯಲ್ಲಿ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆರಂಭದಲ್ಲಿ ಇದನ್ನು ಅಪಘಾತ ಪ್ರಕರಣವೆಂದು ಪರಿಗಣಿಸಲಾಗಿದ್ದರೂ, ತನಿಖೆ ಮುಂದುವರಿದಂತೆ ಕೊಲೆಯ ಸಂಚು ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಚೇತನ್ ವಿಜಯಲಕ್ಷ್ಮಿ ಬಳಿ ಹಣ ಸಾಲ ಪಡೆದಿದ್ದ. ಆದರೆ ಸಾಲ ಮರುಪಾವತಿ ಮಾಡದೇ ಕಾಲಹರಣ ಮಾಡುತ್ತಿದ್ದ. ವಿಜಯಲಕ್ಷ್ಮಿ ಹಣ ವಾಪಸ್ ಕೇಳಿ ಒತ್ತಾಯಿಸುತ್ತಿದ್ದಂತೆ, ಆಕೆಯನ್ನು ಕೊಲೆ ಮಾಡಿ ಮನೆಯಲ್ಲಿದ್ದ ಹಣ ದೋಚುವ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಪ್ಲಾನ್ ಪ್ರಕಾರ, ರಾಕೇಶ್ ಬೈಕ್ನಿಂದ ವಿಜಯಲಕ್ಷ್ಮಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಇದೇ ವೇಳೆ ಆಟೋದಲ್ಲಿ ಬಂದಿದ್ದ ಪ್ರದೀಪ್, ಯೋಹಾನ್ ಹಾಗೂ ಮಂಜುನಾಥ್ ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಸಂದರ್ಭ ಮಂಜುನಾಥ್ ವಿಜಯಲಕ್ಷ್ಮಿಯ ಪರ್ಸ್ನಲ್ಲಿದ್ದ ಮನೆ ಕೀ ಪಡೆದು ನೇರವಾಗಿ ಮನೆಗೆ ತೆರಳಿ ಹಣ ಹಾಗೂ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯೊಳಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಂಜುನಾಥ್ನನ್ನು ಅಕ್ಕಪಕ್ಕದ ನಿವಾಸಿಗಳು ಪ್ರಶ್ನಿಸಿದಾಗ, “ವಿಜಯಲಕ್ಷ್ಮಿಗೆ ಅಪಘಾತವಾಗಿದೆ. ಆಧಾರ್ ಕಾರ್ಡ್ ಬೇಕಾಗಿದೆ” ಎಂದು ಸುಳ್ಳು ಹೇಳಿದ್ದಾನೆ. ಬಳಿಕ ಸ್ಥಳೀಯರು ಹೆಚ್ಚಿನ ಪ್ರಶ್ನೆ ಕೇಳುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ.
ಇನ್ನೊಂದೆಡೆ, ವಿಜಯಲಕ್ಷ್ಮಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆರೋಪಿ ರಾಕೇಶ್ ತಾನೇ ವಿಜಯನಗರ ಸಂಚಾರ ಪೊಲೀಸ್ ಠಾಣೆಗೆ ತೆರಳಿ, “ಪರಿಚಿತ ಮಹಿಳೆಯನ್ನು ಕಾಪಾಡಿದ್ದೇನೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ” ಎಂದು ದೂರು ನೀಡಿದ್ದಾನೆ. ಈ ನಡೆ ಪೊಲೀಸರಲ್ಲಿ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿತ್ತು.
ಘಟನೆಯ ಎರಡು ದಿನಗಳ ಬಳಿಕ ವಿಜಯಲಕ್ಷ್ಮಿ ಮನೆ ಮಾಲೀಕರು ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಕಳ್ಳತನ ಯತ್ನದ ದೂರು ನೀಡಿದ್ದರು. ಈ ಎರಡೂ ಪ್ರಕರಣಗಳನ್ನು ಜೋಡಿಸಿ ತನಿಖೆ ನಡೆಸಿದ ಪೊಲೀಸರಿಗೆ ಕೊಲೆಯ ಸಂಪೂರ್ಣ ಸಂಚು ಬಯಲಾಗಿದೆ.
ಪ್ರಕರಣದಲ್ಲಿ ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್ ಹಾಗೂ ಯೋಹಾನ್ ಎಂಬ ಐವರನ್ನು ಬಂಧಿಸಲಾಗಿದೆ. ಆದರೆ ವಿಧಿಯಾಟವೆಂದರೆ, ವಿಜಯಲಕ್ಷ್ಮಿ ಪೋಸ್ಟ್ಮಾರ್ಟಂ ನಡೆದ ದಿನವೇ ಆರೋಪಿ ಮಂಜುನಾಥ್ ಪೊಲೀಸ್ ಕಸ್ಟಡಿಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.
ಸದ್ಯ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

- Advertisement -spot_img

More articles

- Advertisement -spot_img

Latest article