No menu items!
15.6 C
Munich
Monday, May 11, 2026

ಪ್ರಧಾನಿ ಮೋದಿ ಸಂಚಾರ ಮಾರ್ಗದ ಬಳಿ ಜಿಲೆಟಿನ್ ಪತ್ತೆ; ತನಿಖೆಗೆ ಆರು ವಿಶೇಷ ತಂಡಗಳ ರಚನೆ

Must read

ಪ್ರಧಾನಿ ಮೋದಿ ಸಂಚಾರ ಮಾರ್ಗದ ಬಳಿ ಜಿಲೆಟಿನ್ ಪತ್ತೆ; ತನಿಖೆಗೆ ಆರು ವಿಶೇಷ ತಂಡಗಳ ರಚನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಅವರು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಬೆಂಗಳೂರು ದಕ್ಷಿಣ ಹಾಗೂ ರಾಮನಗರ ಭಾಗದ ಕ್ವಾರಿಗಳಲ್ಲಿ ಬಳಕೆಯಾಗುವ ಜಿಲೆಟಿನ್ ಕಡ್ಡಿಗಳ ಕುರಿತು ಕೂಡ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಭಾನುವಾರ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದರು. ಅವರ ಆಗಮನಕ್ಕೂ ಸುಮಾರು ಎರಡು ಗಂಟೆಗಳ ಮೊದಲು, ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಸಮೀಪ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿತ್ತು.
ಭದ್ರತಾ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ಒಬ್ಬರು ರಸ್ತೆ ಬದಿಯಲ್ಲಿ ಬಿದ್ದಿದ್ದ ಬಾಕ್ಸ್ ಗಮನಿಸಿದ್ದು, ತಕ್ಷಣವೇ ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಧಾವಿಸಿದ ತಂಡ ಪರಿಶೀಲನೆ ನಡೆಸಿದಾಗ ಬಾಕ್ಸ್ನಲ್ಲಿ ಎರಡು ಜಿಲೆಟಿನ್ ಕಡ್ಡಿಗಳು, ನಾಲ್ಕು ಗಂಧದ ಕಡ್ಡಿಗಳು, ಒಂದು ಬೆಂಕಿ ಪೊಟ್ಟಣ ಹಾಗೂ ಎರಡು ಬ್ಯಾಟರಿಗಳು ಪತ್ತೆಯಾಗಿದ್ದವು.
ತಕ್ಷಣವೇ ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆದ ಪೊಲೀಸರು, ಪ್ರಧಾನಿಯವರ ಸಂಚಾರ ಮಾರ್ಗವನ್ನು ಮತ್ತೊಮ್ಮೆ ಸಂಪೂರ್ಣ ತಪಾಸಣೆ ನಡೆಸಿದ ಬಳಿಕವೇ ಸಂಚಾರಕ್ಕೆ ಅನುಮತಿ ನೀಡಿದ್ದರು. ಪ್ರೋಟೋಕಾಲ್ ಪ್ರಕಾರ ಪ್ರಧಾನಿ ಭೇಟಿ ಮುನ್ನವೇ ಮಾರ್ಗದ ಸಂಪೂರ್ಣ ಪರಿಶೀಲನೆ ನಡೆದಿದ್ದರೂ, ಬೆಳಗಿನ ಜಾವ ಈ ಬಾಕ್ಸ್ ಪತ್ತೆಯಾಗಿರುವುದು ಭದ್ರತಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳಿಗ್ಗೆ ಬೆದರಿಕೆ ಕರೆ ಮಾಡಿದ್ದ ಲೋಹಿತ್ ಎಂಬಾತನನ್ನು ಕೋರಮಂಗಲ ಠಾಣೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಜಿಲೆಟಿನ್ ಪತ್ತೆಯಾಗುವ ಕೆಲವೇ ಗಂಟೆಗಳ ಮೊದಲು ಆತ ಬೆದರಿಕೆ ಕರೆ ಮಾಡಿದ್ದ ಹಿನ್ನೆಲೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ಮಾನಸಿಕ ಸ್ಥಿತಿ ಸಮರ್ಪಕವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಜಿಲೆಟಿನ್ ಪತ್ತೆಯಾದ ಸ್ಥಳಕ್ಕೆ ಆತ ತೆರಳಿರುವ ಸಾಧ್ಯತೆ ಕಡಿಮೆ ಎಂದು ಪೊಲೀಸರು ಶಂಕಿಸಿದ್ದಾರೆ. ಹೀಗಾಗಿ ಸ್ಫೋಟಕ ಸಾಮಗ್ರಿಗಳನ್ನು ಅಲ್ಲಿ ಇಟ್ಟವರು ಯಾರು? ಆರೋಪಿಗೂ ಅವರಿಗೂ ಯಾವುದೇ ಸಂಪರ್ಕವಿದೆಯೇ? ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ.

- Advertisement -spot_img

More articles

- Advertisement -spot_img

Latest article