ಯುವತಿ ವಿಚಾರವಾಗಿ ಕಿರುಕುಳ ಆರೋಪ; ಆಡಿಯೋ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆಗೆ ಶರಣು
ಹಾಸನ: ಯುವತಿ ವಿಚಾರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಯುವಕನೊಬ್ಬ ಆಡಿಯೋ ದಾಖಲಿಸಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆ ಸಮೀಪ ನಡೆದಿದೆ.ತಾಲೂಕಿನ ಮಾಕವಳ್ಳಿ ಗ್ರಾಮದ ಅಭಿಷೇಕ್ (26) ಮೃತ ಯುವಕನಾಗಿದ್ದಾನೆ. ಇದೇ ಗ್ರಾಮದ ಶಂಕರ, ದರ್ಶನ್, ಚೇತನ್ ಹಾಗೂ ದಿನೇಶ್ ಎಂಬವರು ಯುವತಿಯೊಬ್ಬಳ ವಿಚಾರದಲ್ಲಿ ತನಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಭಿಷೇಕ್ ಆತ್ಮಹತ್ಯೆಗೆ ಮುನ್ನ ಆಡಿಯೋ ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ.ಆಡಿಯೋದಲ್ಲಿ ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ. ಬಳಿಕ ಭಾನುವಾರ ಸಂಜೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ಯುವಕನ ಆಡಿಯೋವನ್ನು ಆಧರಿಸಿ ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



