No menu items!
12.7 C
Munich
Monday, May 11, 2026

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಶೇ.1.50 ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಆದೇಶ

Must read

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಶೇ.1.50 ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತಿ ವೇತನದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ತುಟ್ಟಿಭತ್ಯೆ (ಡಿಎ)ಯನ್ನು ಶೇ.1.50ರಷ್ಟು ಹೆಚ್ಚಿಸಿ ಅಧಿಕೃತ ಆದೇಶ ಹೊರಡಿಸಿದೆ.
2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 2026ರ ಜನವರಿ 1ರಿಂದ ಜಾರಿಗೆ ಬರುವಂತೆ ಪ್ರಸ್ತುತ ಶೇ.14.25ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ.15.75ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲಾಗಿದೆ. ಏಪ್ರಿಲ್ನಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.2ರಷ್ಟು ಡಿಎ ಹೆಚ್ಚಳ ಘೋಷಿಸಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರವೂ ಈ ನಿರ್ಧಾರ ಕೈಗೊಂಡಿದೆ.
ಸರ್ಕಾರದ ಆದೇಶದ ಪ್ರಕಾರ, ತುಟ್ಟಿಭತ್ಯೆ ಲೆಕ್ಕಾಚಾರಕ್ಕೆ ನೌಕರರು ಹೊಂದಿರುವ ಹುದ್ದೆಯ ಮೂಲ ವೇತನವನ್ನು ಪರಿಗಣಿಸಲಾಗುತ್ತದೆ. ಜೊತೆಗೆ, 2024ರ ಪರಿಷ್ಕೃತ ವೇತನ ಶ್ರೇಣಿಯಡಿ ಮಂಜೂರಾಗಿರುವ ಸ್ಥಗಿತ ವೇತನ ಬಡ್ತಿ, ವೈಯಕ್ತಿಕ ವೇತನ ಹಾಗೂ ಹೆಚ್ಚುವರಿ ವೇತನ ಬಡ್ತಿಗಳನ್ನೂ ಇದರಲ್ಲಿ ಸೇರಿಸಿ ಲೆಕ್ಕ ಹಾಕಲಾಗುತ್ತದೆ.
ಇದೇ ಹೆಚ್ಚಳ ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು ಹಾಗೂ ರಾಜ್ಯದ ಸಂಚಿತ ನಿಧಿಯಿಂದ ಪಿಂಚಣಿ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತರಿಗೂ ಅನ್ವಯವಾಗಲಿದೆ. ಇವರಿಗೂ ಹಾಲಿ ಶೇ.14.25ರಷ್ಟಿದ್ದ ಡಿಎ ದರವನ್ನು ಶೇ.15.75ಕ್ಕೆ ಏರಿಕೆ ಮಾಡಲಾಗಿದೆ.
ಯುಜಿಸಿ, ಎಐಸಿಟಿಇ ಮತ್ತು ಐಸಿಎಆರ್ ವೇತನ ಶ್ರೇಣಿಯ ನಿವೃತ್ತ ನೌಕರರಿಗೂ ಈ ಪರಿಷ್ಕರಣೆ ಅನ್ವಯವಾಗಲಿದ್ದು, ಸಂಬಂಧಿತ ನೌಕರರು ಹಾಗೂ ಎನ್ಜೆಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳಿಗೆ ಪ್ರತ್ಯೇಕ ಆದೇಶ ಹೊರಡಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್ಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಯ ವರ್ಕ್ಚಾರ್ಜ್ ಸಿಬ್ಬಂದಿ, ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಪೂರ್ಣಾವಧಿ ನೌಕರರು ಈ ಆದೇಶದ ಪ್ರಯೋಜನ ಪಡೆಯಲಿದ್ದಾರೆ.
ಹೆಚ್ಚಿದ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿಸಲಾಗುತ್ತದೆ. 50 ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಭಿನ್ನಾಂಕವನ್ನು ಮುಂದಿನ ಪೂರ್ಣ ರೂಪಾಯಿಗೆ ಏರಿಕೆ ಮಾಡಲಾಗುತ್ತದೆ. 50 ಪೈಸೆಗಿಂತ ಕಡಿಮೆ ಭಿನ್ನಾಂಕವನ್ನು ಪರಿಗಣಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

- Advertisement -spot_img

More articles

- Advertisement -spot_img

Latest article