ಇಂಧನ ಮಾರಾಟಕ್ಕೆ ಹೊಸ ಮಾರ್ಗಸೂಚಿ; ಬಾಟಲಿ, ಕ್ಯಾನ್ ಗಳಲ್ಲಿ ಪೆಟ್ರೋಲ್-ಡೀಸೆಲ್ ನೀಡಿದರೆ ಕಠಿಣ ಕ್ರಮ
ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಹಾಗೂ ರಾಜ್ಯದಲ್ಲಿ ಇಂಧನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ನಾಗರಿಕ ಮತ್ತು ಆಹಾರ ಸರಬರಾಜು ಇಲಾಖೆ ಪೆಟ್ರೋಲ್ ಹಾಗೂ ಡೀಸೆಲ್ ವಿತರಣೆಗೆ ಸಂಬಂಧಿಸಿದಂತೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಗ್ರಾಹಕರ ಸುರಕ್ಷತೆ ಮತ್ತು ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದ ಎಲ್ಲಾ ಪೆಟ್ರೋಲ್ ಬಂಕ್ಗಳು ಮತ್ತು ಇಂಧನ ವಿತರಣಾ ಕೇಂದ್ರಗಳಿಗೆ ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ಪೆಟ್ರೋಲ್ ಬಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.
ಪೆಟ್ರೋಲಿಯಂ ನಿಯಮಗಳು-2002 ಅನ್ವಯ, ಇಂಧನವನ್ನು ವಾಹನಗಳ ಟ್ಯಾಂಕ್ಗಳಿಗೆ ಅಥವಾ ಅಧಿಕೃತ ಅನುಮೋದಿತ ಕಂಟೇನರ್ಗಳಿಗೆ ಮಾತ್ರ ಪೂರೈಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಒಂದೇ ಬಾರಿ ಗರಿಷ್ಠ 200 ಲೀಟರ್ಗಳವರೆಗೆ ಮಾತ್ರ ಇಂಧನ ವಿತರಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸುರಕ್ಷತಾ ಕಾರಣಗಳಿಂದ ಬಾಟಲಿ, ಕ್ಯಾನ್ ಅಥವಾ ಇತರ ಅನಧಿಕೃತ ಪಾತ್ರೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಿತ ಪೆಟ್ರೋಲ್ ಬಂಕ್ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಇದರ ಜೊತೆಗೆ, ರಿಟೇಲ್ ಔಟ್ಲೆಟ್ಗಳು ದೊಡ್ಡ ಪ್ರಮಾಣದಲ್ಲಿ ಇಂಧನ ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಬಲ್ಕ್ ಇಂಧನ ವಿತರಣೆಯನ್ನು ಕೇವಲ ‘ನೇರ ಮಾರಾಟ ವ್ಯವಸ್ಥೆ’ ಮೂಲಕವೇ ನಡೆಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ನಿಯಮ ಮೀರಿ ಬಲ್ಕ್ ಮಾರಾಟ ನಡೆಸಿದರೆ ಪರವಾನಗಿ ರದ್ದತಿ ಸೇರಿದಂತೆ ಗಂಭೀರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ಕೃಷಿ ಚಟುವಟಿಕೆಗಳು ಹಾಗೂ ಜಲಚರ ಸಾಕಾಣಿಕೆಗೆ ಅಗತ್ಯವಿರುವ ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಲಾಗಿದೆ. ರೈತರ ಬೇಡಿಕೆಯನ್ನು ಪರಿಶೀಲಿಸಿ ಅಗತ್ಯ ಪ್ರಮಾಣದಲ್ಲಿ ಇಂಧನ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಇಲಾಖೆ ನಿರ್ದೇಶನ ನೀಡಿದೆ.
ಇದೇ ವೇಳೆ, ಬಲ್ಕ್ ಇಂಧನ ಕಾರ್ಯಾಚರಣೆಗಳಲ್ಲಿ ಯಾವುದೇ ಅವ್ಯವಹಾರ ಕಂಡುಬಂದರೆ ಅದನ್ನು ಸುರಕ್ಷತಾ ಹಾಗೂ ಲೈಸೆನ್ಸಿಂಗ್ ನಿಯಮಗಳ ಗಂಭೀರ ಉಲ್ಲಂಘನೆ ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.



