ಬೆಂಗಳೂರು ಜನ ಬಕ್ರಾಗಳು..! ಮತ್ತೆ ಮುಂದಿನ ಸಲಾನೂ ಓಟು ಹಾಕೇಹಾಕ್ತಾರೆ…!

0
93

ಒಂದು ಎಲೆಕ್ಷನ್ ನಡೆಯೋಕೆ ಏನೇನೋ ಕಿತ್ತಾಟ..! ಕೆಲವರಿಗೆ ಎಲೆಕ್ಷನ್ ಬೇಕು, ಮತ್ತೆ ಕೆಲವರಿಗೆ ಬೇಡ..! ಅದಕ್ಕೆ ಕೋರ್ಟ್ ತನಕ ಹೋಗಿ ಗುದ್ದಾಡಬೇಕು..! ಆಮೇಲೆ ಕೋರ್ಟ್ ಆರ್ಡರ್ ಮಾಡುತ್ತೆ, ಎಲೆಕ್ಷನ್ ನಡೀಲೇಬೇಕು ಅಂತ..! ಆಮೇಲೆ ಪಕ್ಷಗಳು ರೇಸಿಗೆ ಬಿದ್ದ ಹಾಗೆ ಪ್ರಚಾರಕ್ಕೆ ಇಳೀತಾವೆ. ಟಿವಿಯ ತುಂಬಾ ಬಿಬಿಎಂಪಿ ಬಿಬಿಎಂಪಿ..! ಸಮೀಕ್ಷೆಗಳು ಹೆಚ್ಚು ಕಮ್ಮಿ ರಿಸಲ್ಟೇ ಕೊಟ್ಟು ಬಿಡ್ತವೆ..! ಎಲೆಕ್ಷನ್ ಮುಗಿದು ಎರಡೇ ದಿನಕ್ಕೆ ಕೌಂಟಿಂಗೂ ಮುಗಿದು ಹೋಗುತ್ತೆ.. ಜನ ತಮ್ಮ ತೀರ್ಮಾನ ಕೊಟ್ಟುಬಿಡ್ತಾರೆ. ಯಾವುದೋ ಒಂದು ಪಕ್ಷ ನೂರು ಸೀಟ್ ತಗೊಳುತ್ತೆ. ಉಳಿದ ಅಷ್ಟೂ ಪಕ್ಷದ ಸೀಟು ಸೇರಿಸಿದ್ರೂ 100ರ ಗಡಿ ಮುಟ್ಟೋದಿಲ್ಲ.. ಆದ್ರೆ ನೂರು ತಗೊಂಡ ಪಕ್ಷವನ್ನೇ ಪೇಚಿಗೆ ಸಿಲುಕಿಸಿ ಪಾಲಿಕೇತರ, ಪಾಲಿಕೆ ಅಂತ ಲೆಕ್ಕಾಚಾರದಲ್ಲಿ ಸಮ್ಮಿಶ್ರ ಆಡಳಿತ ಅಂತ ಹೊಂದಾಣಿಕೆ ಮಾಡಿಕೊಳ್ಳೋಕೆ ರೆಡಿಯಾಗುತ್ತೆ..! ಯಾವ ಜನ, ಇವರು ಬೇಡ ಅಂತ ಸೋಲಿಸಿದ್ರೋ ಅದೇ ಊರಲ್ಲಿ, ಅದೇ ಜನರೆದುರು, ಅದೇ ಸೋತವರು, ಅಧಿಕಾರದ ಗದ್ದುಗೆ ಏರೋಕೆ ರಾಜಕೀಯ ನಡೆಸ್ತಾರೆ..! ಓಟು ಹಾಕಿದವನು ಇಂಗು ತಿಂದವನ ಹಾಗೆ ಟಿವಿ ನೋಡಿಕೊಂಡು, ಏನಾಗಿಬಿಡುತ್ತೆ ಅಂತ ಕಾಯ್ತಾ ಕೂತಿರ್ತಾನೆ..! ಇದು ಪ್ರಸ್ತುತ ಬೆಂಗಳೂರು ಮಹಾನಗರ ಪಾಲಿಕೆಯ ರಾಜಕೀಯ ಪ್ರಹಸನ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಕರ್ನಾಟಕಕ್ಕೆ ಈ ಬೆರಕೆ ಆಡಳಿತ ಹೊಸದೇನಲ್ಲ..! ಈ ಹಿಂದೆ ಕಾಂಗ್ರೆಸ್ ಜೊತೆ ಜೆಡಿಎಸ್ ಹಾಗು ಬಿಜೆಪಿ ಜೊತೆ ಜೆಡಿಎಸ್ ಎಂಬ ವಿಧಾನಸೌಧದ ಮಿಕ್ಸೆಡ್ ಆಡಳಿತದ ಆಟ ನೋಡಿದ್ವಿ..! ಬಿಜೆಪಿ-ಜೆಡಿಎಸ್ ಟ್ವೆಂಟಿ ಟ್ವೆಂಟಿ ಅಂತೂ ವರ್ಲ್ಡ್ ಕಪ್ ಫೈನಲ್ ಗಿಂತ ಇಂಟರೆಸ್ಟಿಂಗ್ ಆಗಿತ್ತು..! ಅದಾದ ಮೆಲೆ ಜೆಡಿಎಸ್ ಪಕ್ಷದ ವರ್ಚಸ್ಸು ಸಹ ಕಡಿಮೆಯಾಯ್ತು ಅನ್ನೋದು ಸ್ವತಃ ದೇವೇಗೌಡರಿಗೂ, ಕುಮಾರ ಸ್ವಾಮಿಯವರಿಗೂ ಗೊತ್ತು..! ಆದ್ರೆ ಈಗ ಪಾಲಿಕೆ ಎಲೆಕ್ಷನ್ನಲೂ ಇಂತದ್ದೇ ಸಮ್ಮಿಶ್ರ ಗಾಳಿ ಬೀಸಿಬಿಟ್ರೆ ಬೆಂಗಳೂರಿನ ಜನ ಏನು ಮಾಡಬೇಕು ಸ್ವಾಮಿ..? ಜನರ ತೀರ್ಪಿಗೆ ಬೆಲೆಯೇ ಇಲ್ಲ ಅಂತಾದರೆ ಇಂತಹ ಚುನಾವಣೆಗಳಾದ್ರೂ ಯಾಕೆ ಬೇಕು ಸ್ವಾಮಿ..? ನೆಟ್ಟಗಿರೋರು ಯಾರೂ ಇಲ್ಲ.. ಎಲ್ಲರ ಮೇಲೂ ನೂರಾರೂ ಆರೋಪಗಳಿವೆ, ಸಾವಿರಾರು ಕಳಂಕಗಳಿವೆ..! ಅದ್ರಲ್ಲೇ ಬೆಸ್ಟ್ ಯಾರು ಅಂತ ಯೋಚನೆ ಮಾಡಿ ಜನ ಓಟು ಹಾಕಿ ಗೆಲ್ಲಿಸಿದ್ರೆ ಮಿಕ್ಸೆಡ್ ಸರ್ಕಾರ ಮಾಡಿ ಗೆದ್ದವರಿಗೇ ಚೋಕ್ ಕೊಡೋಕೆ ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ..! ಇದೊಂತರಾ ಗೆದ್ದೋನ್ ಕೋಡಂಗಿ, ಸೋತೋನ್ ಈರಭದ್ರ ಅನ್ನೋ ಹಂಗಾಗಿದೆ..!
ಅಷ್ಟಕ್ಕೂ ಇಷ್ಟೆಲ್ಲಾ ರಾಜಕೀಯ ಗೇಮ್ ಗಳು, ಸೋತ ಎರಡು ಪಕ್ಷಗಳು ಒಂದಾಗಿ ಗದ್ದುಗೆ ಏರೋಕೆ ಒದ್ದಾಡೋದು, ಪಕ್ಷೇತರರಾಗಿ ಗೆದ್ದವರನ್ನು ದೂರದ ರೆಸಾರ್ಟ್ ಗೆ ಕರ್ಕೊಂಡು ಹೋಗಿ ರೆಸಾರ್ಟ್ ರಾಜಕಾರಣ ಮಾಡೋದು..! ಇದೆಲ್ಲಾ ಮಾಡ್ತಿರೋದು ಬೆಂಗಳೂರಿಗರ ಸೇವೆ ಮಾಡೋ ಸಲುವಾಗೀನಾ..? ಓ ಮೈ ಗಾಡ್… ನಮ್ಮ ರಾಜಕಾರಣಿಗಳು ಅದೆಷ್ಟು ಒಳ್ಳೆಯವರು, ಜನ ಸೇವೆ ಮಾಡೋಕೋಸ್ಕರ ನಾನು ನಾನು ಅಂತ ಒದ್ದಾಡ್ತಾ ಇದ್ದಾರೆ..! ನಮ್ಮ ಪಕ್ಷ ಇನ್ನೊಂದು ಪಕ್ಷದ ಜೊತೆ ಸೇರಿ ಅಧಿಕಾರಕ್ಕೆ ಬಂದ್ರೆ ಜನರ ಕಷ್ಟ ಕೇಳಬಹುದು, ರೋಡು ರಿಪೇರಿ ಮಾಡಿಸಬಹುದು, ಎಲ್ಲಿ ನೀರು ಬರ್ತಿಲ್ಲ ಅಂತ ಕೇಳಿ ನೀರು ಬಿಡಿಸಬಹುದು, ಇಡೀ ಬೆಂಗಳೂರನ್ನು ಭ್ರಷ್ಟಾಚಾರ ಮುಕ್ತ ಮಾಡಬಹುದು ಅನ್ನೋ ಕಾರಣಕ್ಕೆ ಪಾಪ ಇಷ್ಟೆಲ್ಲಾ ಮಾಡ್ತಿದ್ದಾರಾ…? ಈ ಎಲ್ಲಾ ಪ್ರಶ್ನೆಗಳಿಗೆ ಯಾರಾದ್ರೂ ಒಬ್ಬರು `ಹೌದು, ಅದಕ್ಕೋಸ್ಕರಾನೇ ಅವರು ಇಷ್ಟೆಲ್ಲಾ ಸರ್ಕಸ್ ಮಾಡ್ತಿರೋದು’ ಅಂದುಬಿಟ್ರೆ ಈ ಲೇಖನ ಬರೆದ ತಪ್ಪಿಗೆ ಕ್ಷಮೆ ಕೇಳ್ತೀನಿ..! ಆದ್ರೆ ಇಡೀ ರಾಷ್ಟ್ರಕ್ಕೆ ಗೊತ್ತು, ಇದು ಜನಸೇವೆ ಮಾಡೋ ಹಠವಲ್ಲ… ಅಧಿಕಾರದ ಗದ್ದುಗೆ ಏರೋ ಚಟ..!
ಎಲ್ಲವೂ ಶುರುವಾಗಿದ್ದೇ ಈ ಬಿಜೆಪಿ ಪಕ್ಷದಿಂದ… ಅವರು ಆ ಕಾಲದಲ್ಲಿ ಈ ಆಪರೇಶನ್, ರೆಸಾರ್ಟ್ ರಾಜಕಾರಣ ಅಂತ ಮಾಡಿದ್ದು ಈಗ ರಾಜ್ಯಕ್ಕೆ `ಮಾದರಿ’ಯಾಗಿದೆ..! ಅವರದೇ ಗುಂಡಿಯಲ್ಲಿ ಈಗ ಅವರೇ ಬಿದ್ದಿದ್ದಾರೆ..! ಅಷ್ಟಕ್ಕೂ ಈ ಮಿಕ್ಸೆಡ್ ಆಡಳಿತದ ಕಾನ್ಸೆಪ್ಟೇ ದಟ್ಟ ದರಿದ್ರವಾಗಿದೆ..! ಇದು ಹೇಗಿದೆ ಗೊತ್ತಾ..? ದೇಶದ ಬೆಸ್ಟ್ ಕ್ರಿಕೆಟರ್ ಯಾರು ಅಂತ ಒಂದು ಕಾಂಪಿಟೇಶನ್ ನಡೆಯುತ್ತೆ. ಸಚಿನ್ ಗೆ 100 ಓಟು, ಧೋನಿಗೆ 75 ಓಟು, ರವಿಂದ್ರ ಜಡೇಜಾಗೆ 20 ಓಟು, ಆರ್.ಅಶ್ವಿನ್ ಗೆ 10 ಓಟು ಸಿಗುತ್ತೆ..! ಸಚಿನ್ ವಿನ್ ಆದ್ರು ಅನೌನ್ಸ್ ಸಹ ಆಗುತ್ತೆ..! ಆಗ ಧೋನಿ, ರವೀಂದ್ರ ಜಡೇಜಾ, ಆರ್.ಅಶ್ವಿನ್ ಮೂರೂ ಜನ ಸೇರ್ಕೊಂಡು, ನಮ್ಮ ಮೂರೂ ಜನರ ಓಟು ಲೆಕ್ಕ ಹಾಕಿದ್ರೆ 105 ಆಗುತ್ತೆ, ಸೋ ನಾವೇ ಗೆದ್ದಂಗೆ ಅಂದ್ರೆ ಹೆಂಗಿರುತ್ತೆ..! ಗೆದ್ದ ಸಚಿನ್ನೂ ಕಂಗಾಲು, ಸಚಿನ್ ಗೆಲ್ಲಿಸಿದ ಜನರೂ ಕಂಗಾಲು..! ಪ್ರಸ್ತುತ ಬಿಜೆಪಿ ಮತ್ತು ಬೆಂಗಳೂರು ಜನರ ಪರಿಸ್ಥಿತಿ ಹಿಂಗೇ ಆಗಿದೆ..!
ಸಾಲದಲ್ಲಿರೋ ಯಾವುದೇ ಕಂಪನಿಗೂ ಯಾರೂ ಕೆಲಸಕ್ಕೆ ಸೇರೋಕೂ ಹಿಂದೆಮುಂದೆ ನೊಡ್ತಾರೆ. ಅಂತದ್ರಲ್ಲಿ ಸಾಲದಲ್ಲಿ ಮುಳುಗಿ ಹೋಗಿರೋ ಬಿಬಿಎಂಪಿ ಗದ್ದುಗೆ ಏರೋಕೆ ಇವರೆಲ್ಲಾ ಶತಾಯಗತಾಯ ಹೋರಾಟ ಮಾಡ್ತಿರೋದು ನೋಡುದ್ರೆ ಅಲ್ಲೇನೋ ಇದೆ ಅನ್ನೋದು ಗ್ಯಾರಂಟಿ..! ಪಕ್ಷೇತರರಿಗೆ ಕೋಟಿಗಟ್ಟಲೇ ಕೊಡ್ತಾರೆ ಅನ್ನೋ ಹಾಗೆ ಕೆಲವು ಪತ್ರಿಕೆಗಳು ವರದಿ ಮಾಡಿವೆ..! ಅವರಿಗೆ ಕೊಟಿಕೊಟಿ ಕೊಟ್ಟು ಗದ್ದುಗೆ ಹಿಡಯೋದು ನಿಜವಾದ್ರೆ, ಆ ಕೋಟಿಕೋಟಿ ಕೊಡೋ ಉದ್ದೇಶ ಏನು..? ಜನ ಸೇವೆ ಮಾಡೋಕಾ..? ನಾಳೆ ಮೈತ್ರಿ ಮಾಡಿಕೊಳ್ತಿರೋ ಪಕ್ಷಗಳು 14 ಸೀಟು ಪಡೆದ ಪಕ್ಷದ ಯಾರನ್ನೋ ಮೇಯರ್ ಮಾಡಿ ಕೂರಿಸಿದರೆ ಜನಾಭಿಪ್ರಾಯಕ್ಕೆ ಎಲ್ಲಿದೆ ಮರ್ಯಾದೆ..? ಅತ್ತ ಬಿಜೆಪಿಯವರೂ ಪಕ್ಷೇತರರನ್ನು ಹೈಜಾಕ್ ಮಾಡುತ್ತವೆ ಅಂತ ಮಾಧ್ಯಮಗಳು ಹೇಳ್ತಿದೆಯಲ್ಲಾ, ಅಷ್ಟು ಕಷ್ಟಪಟ್ಟು ಬಿಬಿಎಂಪಿ ತನ್ನದಾಗಿಸಿಕೊಳ್ಳೋಕೆ ಒದ್ದಾಡ್ತಿರೋದು ಯಾಕೆ..? ಯಾಕೆ..? ಯಾಕೆ..?
ಬಿಬಿಎಂಪಿಯನ್ನು ಸಾಲಮುಕ್ತ ಮಾಡೋಕೆ ನಮ್ಮ ಹೋರಾಟ, ಬೆಂಗಳೂರನ್ನು ಲಕಲಕ ಹೊಳೆಯುವಂತೆ ಮಾಡೋಕೆ ನಮ್ಮ ಹೋರಾಟ, ದೇಶದ ಬೆಸ್ಟ್ ಸಿಟಿ ಅಂತ ಬೆಂಗಳೂರು ಕರೆಸಿಕೊಳ್ಳಬೇಕು ಅನ್ನೋಕೆ ನಮ್ಮ ಹೋರಾಟ. ಬಿಜೆಪಿಯವರು ಉದ್ಧಾರ ಮಾಡಲ್ಲ ಅಂತ ನಾವು, ಜೆಡಿಎಸ್-ಕಾಂಗ್ರೆಸ್ ಉದ್ಧಾರ ಮಾಡಲ್ಲ ಅಂತ ನಾವು..! ಯಾವ ಕಾರಣಕ್ಕೆ ಈ ಗದ್ದುಗೆ ಗುದ್ದಾಟ..? ಮೇಯರ್ ಯಾರಾಗ್ತಾರೋ ಆ ಪಕ್ಷಕ್ಕೆ ಕೋಟಿಕೋಟಿ ಪಾರ್ಟಿ ಫಂಡ್ ಕೊಡ್ತಾರಾ..? ಮೇಯರ್ ಆದ ಪಕ್ಷದವರಿಗೆ ತಿಂಗಳಿಗೆ ಕೋಟಿಕೋಟಿ ಸಂಬಳ ಕೊಡ್ತಾರಾ..? ಎಲ್ಲ ಅಂತಾದ್ರೆ ನೀವು ಇಷ್ಟು ತಲೆ ಕೆಡಿಸ್ಕೊಂಡು, ಇಷ್ಟು ಒದ್ದಾಡಿಕೊಂಡು ಬಿಬಿಎಂಪಿ ಗದ್ದುಗೆ ಏರೋಕೆ ಹೋರಾಡ್ತಾ ಇರೋದು ಯಾಕೆ..? ವನ್ಸ್ ಎಗೇನ್ ಜನಸೇವೆ ಮಾಡೋಕಾ..? ನೀವು ಸಮ್ಮಿಶ್ರಾನದ್ರೂ ಮಾಡ್ಕೊಳಿ, ಮೈತ್ರಿನಾದ್ರೂ ಮಾಡ್ಕೊಳಿ, ಪಕ್ಷೇತರರನ್ನು ಕೊಂಡುಕೊಳ್ಳಿ, ರೆಸಾರ್ಟ್ ರಾಜಕಾರಣ ಮಾಡ್ಕೊಳಿ..! ಏನಾದ್ರೂ ಮಾಡ್ಕೊಳಿ.. ಆದ್ರೆ ಇಷ್ಟೆಲ್ಲಾ ಮಾಡ್ತಿರೋದು ಯಾಕೆ ಅಂತ ಜನರಿಗೆ ಹೇಳಿ..! ನೂರು ಸೀಟು ಪಡೆದ ಪಕ್ಷ ಕಕ್ಕಾಬಿಕ್ಕಿಯಾಗಿದ್ದು, 14 ಸೀಟು ಪಡೆದ ಪಕ್ಷ ಕೇಕೆಹೊಡೆಯೋಕೆ ರೆಡಿಯಾಗಿದ್ದು ಹಿಂದೆಂದೂ ಕೇಳಿಲ್ಲ..! ನೀವೇನಾದ್ರೂ ಮಾಡ್ಕೊಳಿ, ಆದ್ರೆ ನಿಮ್ಮ ಮೈತ್ರಿಯಿಂದಾಗಿ ನಮ್ಮ ಬೆಂಗಳೂರು ಅಪವಿತ್ರ ಆಗದಿರಲಿ..ಇವತ್ತು ಬೆಂಗಳೂರಲ್ಲಿ ನೂರಕ್ಕೆ 50 ಜನ ಓಟು ಹಾಕಲ್ಲ..! ಹೀಗೇ ಆದ್ರೆ ಮುಂದೊಂದು ದಿನ ಎಲೆಕ್ಷನ್ ಅಂದ್ರೆ ಮುಖದ ಮೇಲೆ ಕ್ಯಾಕರಿಸಿ ಉಗಿತಾರೆ, ನೆನಪಿರಲಿ..!
ಫೈನಲಿ ಮೂರೂ ಪಕ್ಷದವರಿಗೆ ಒಂದು ಬ್ಯೂಟಿಫುಲ್ ಐಡಿಯಾ..! ಮೂರೂ ಪಕ್ಷದವರು ಅಧಿಕಾರ ಬೇಕೇಬೇಕು ಅನ್ನೋ ಹಠದಲ್ಲಿ ಬೆಂಗಳೂರನ್ನು, ಬೆಂಗಳೂರಿಗರನ್ನು ಅತಂತ್ರ ಮಾಡೋ ಬದಲು, ಮೂರೂ ಪಕ್ಷದವರು ಮೈತ್ರಿ ಮಾಡ್ಕೊಂಡು ಬಿಡಿ..! ಮೂವರೂ ಸೇರಿ ಸೋ ಕಾಲ್ಡ್ `ಜನಸೇವೆ’ ಮಾಡಿ..! ನಿಮ್ಮನ್ನು ಗೆಲ್ಲಿಸಿ ಕಳಿಸಿದ ತಪ್ಪಿಗೆ ನಮ್ಮ ಕಣ್ಣಲ್ಲಿ ಅದನ್ನೂ ನೋಡಿಬಿಡ್ತೀವಿ..! ಮೂರೂ ಪಕ್ಷಗಳು 20-20-20 ಆಡಿ..! ಐದು ವರ್ಷ ಇಪ್ಪತ್ತಿಪ್ಪತ್ತು ತಿಂಗಳ ಲೆಕ್ಕದಲ್ಲಿ ಮೂರೂ ಪಕ್ಷಕ್ಕೂ ಅಧಿಕಾರ..! ಎನಿವೇ ನಿಮಗೆ ಗೊತ್ತೇ ಇದೆ ಅಲ್ವಾ..? ಬೆಂಗಳೂರು ಜನ ಬಕ್ರಾಗಳು, ಮತ್ತೆ ಐದು ವರ್ಷದ ನಂತರ ಓಟು ಹಾಕೋಕೆ ಬಂದೇ ಬರ್ತಾರೆ..! ತಾಯಿ ಬೆಂಗಳೂರು ದೇವಿ `ಅಣ್ಣಮ್ಮ’ ಇನ್ನೂ ಏನೇನು ನೋಡಬೇಕೋ ತಾಯಿ ನೀನು ನಾವು..!
ಜೈ ಬೆಂಗಳೂರು… ಜೈ ಅಣ್ಣಮ್ಮ..!

-ಕೀರ್ತಿ ಶಂಕರಘಟ್ಟ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here