ಎಲ್ಲಿಂದಲೋ ಬೆಂಗಳೂರಿಗೆ ಬಂದವನ ಕಥೆ..! ಇಲ್ಲಿ ಎಷ್ಟೋ ಜನರ ಕನಸುಗಳು ಹೇಗೆ ಸತ್ತುಹೋಗುತ್ತೆ ನೋಡಿ..!

0
165

ಶಿವಮೊಗ್ಗದ ಹತ್ತಿರದ ಒಂದು ಹಳ್ಳಿಯ ಹುಡುಗ ಅವನು. ಡಿಗ್ರಿ ಮುಗೀತು, ಊರಲ್ಲಿದ್ದು ಏನು ಮಾಡೋದು ಅಂತ ಯೋಚನೆ ಮಾಡ್ದ. ಅಪ್ಪ-ಅಮ್ಮನ್ನ ಕೇಳಿ ಬೆಂಗಳೂರಿಗೆ ಹೋಗಿ ಕೆಲಸ ಮಡೋಣ ಅಂತ ಡಿಸೈಡ್ ಮಾಡ್ದ. ಅಪ್ಪಅಮ್ಮಂಗೆ ಮಗ ಬೆಂಗಳೂರಿಗೆ ಹೋಗೋಕೆ ಇಷ್ಟವಿರಲಿಲ್ಲ, ಆದ್ರೂ ಅಷ್ಟು ಓದಿ ಈ ಊರಲ್ಲಿ ಏನು ಮಾಡೋಕೆ ಸಾಧ್ಯ ಅನ್ಕೊಂಡು ಅವರೂ ಒಪ್ಪಿಕೊಂಡ್ರು..! ಅವನ ಕೆಲವು ಫ್ರೆಂಡ್ಸ್ ಈಗಾಗಲೇ ಬೆಂಗಳೂರಲ್ಲಿದ್ರು, ಹೇಗಾದ್ರೂ ಮಾಡಿ ಅವರ ಜೊತೆ ಸ್ವಲ್ಪ ದಿನ ಇದ್ದು, ಆಮೇಲೆ ಕೆಲಸ ಸಿಕ್ಕಿದ ಮೇಲೆ ಬೇರೆ ಮನೆ ಮಾಡೋಣ ಅಂತ ಡಿಸೈಡ್ ಮಾಡಿದ್ದ. ಒಂದು ತಿಂಗಳಿಗೆ ಸಾಕಾಗೋ ಅಷ್ಟು ಅಕ್ಕಿ, ಬೇಳೆ, ಉಪ್ಪಿನಕಾಯಿ, ಹಪ್ಪಳ ಎಲ್ಲಾ ಪ್ಯಾಕ್ ಆಯ್ತು. ಸರ್ಟಿಫಿಕೇಟ್, ಬಟ್ಟೆಬರೆ ಎಲ್ಲಾ ಜೋಡಿಸಿಕೊಂಡು ಬ್ಯಾಗ್ ಹೊತ್ಕೊಂಡು ಬೆಂಗಳೂರಿನ ಕಡೆ ಬಸ್ ಹತ್ತೇಬಿಟ್ಟ. ಕಣ್ಣೀರು ಹಾಕಿಕೊಂಡೇ ಅಮ್ಮನೂ ಮಗನನ್ನು ಕಳಿಸಿಕೊಟ್ರು. ಯಾವತ್ತೂ ಬೆಂಗಳೂರಿಗೆ ಬಂದವನಲ್ಲ, ಬೆಂಗಳೂರಿನ ಬಗ್ಗೆ ಕೇಳಿದ್ದ ಅಷ್ಟೆ..! ಆದ್ರೆ ಈ ಊರು ಯಾರನ್ನೂ ಹಸಿದ ಹೊಟ್ಟೆಯಲ್ಲಿ ಮಲಗಿಸಲ್ಲ ಅನ್ನೋ ನಂಬಿಕೆ ಇತ್ತು ಅವನಿಗೆ. ಬೆಳಗ್ಗೆ ಮೆಜೆಸ್ಟಿಕ್ಕಲ್ಲಿ ಬಸ್ ಬಂದು ನಿಂತಾಗ ಬೆಳಗ್ಗೆ 5 ಗಂಟೆ. ಫ್ರೆಂಡ್ ನಂಬರ್ರಿಗೆ ಎಷ್ಟು ಫೋನ್ ಮಾಡಿದ್ರೂ ಎತ್ತಲೇಇಲ್ಲ..! ಪಾಪ ಅವರೂ ರಾತ್ರಿ ಮಲಗಿದಾಗ ಲೇಟ್ ಆಗಿತ್ತು ಅನ್ಸುತ್ತೆ, ಎಷ್ಷರ ಆಗಿಲ್ಲ..! ಆರೂವರೆ ಟೈಮಿಗೆ ಫೋನ್ ಬಂತು, `ಲೋ ಎಲ್ಲಿದಿಯ ಮಗಾ..? ಸಾರಿ ಕಣೋ, ಸಖತ್ ನಿದ್ರೆ..! ಒಂದ್ ಕೆಲಸ ಮಾಡು, ಅಲ್ಲೇ ಪಕ್ಕದಲ್ಲಿ ಬಿ.ಎಂ.ಟಿ.ಸಿ ಬಸ್ ಸ್ಟಾಪ್ ಇದೆ, ಅಲ್ಲಿಗೆ ಹೋಗಿ, 14ನೇ ನಂಬರ್ ಫ್ಲಾಟ್ ಫಾರ್ಮಲ್ಲಿ ರೂಟ್ ನಂಬರ್ 171 ಬಸ್ ಹತ್ತು. ಲಕ್ಕಸಂದ್ರ ಸ್ಟಾಪಲ್ಲಿ ಇಳ್ಕೋ. ನಾನಲ್ಲಿಗೆ ಬರ್ತೀನಿ.! ಅಂದ. ಅವನು ಹೇಳಿದ ಹಾಗೇ ಇವನು ಅದೇ ಫ್ಲಾಟ್ ಫಾರ್ಮ್, ಅದೇ ರೂಟ್ ಬಸ್ ಹಿಡಿದು ಕೂತ. ಅಷ್ಟು ಹೊತ್ತಿಗೆ ಬೆಂಗಳೂರಿನ ಸೂರ್ಯ ಅವನಿಗೆ ಗುಡ್ ಮಾರ್ನಿಂಗ್ ಹೇಳ್ತಿದ್ದ. ಕನಸು ಹೊತ್ತುಬಂದವನನ್ನು ಕರ್ಕೊಂಡು ಹೊರಟಿತ್ತು ಬಿ.ಎಂ.ಟಿ.ಸಿ ಬಸ್..! ಲಕ್ಕಸಂದ್ರ ಸ್ಟಾಪಲ್ಲಿ ಇಳಿದಾಗ ಅವನ ಫ್ರೆಂಡ್ ಅಲ್ಲೇ ಇದ್ದ, ಊರಿನ ಸುದ್ದಿ ಕೇಳ್ತಾ ಅವನನ್ನು ಹಾಗೇ ತನ್ನ ರೂಮಿನ ಕಡೆ ಕರ್ಕೊಂಡು ಹೊರಟ. ಅದೊಂದು ಗಲ್ಲಿ, ಅಲ್ಲಿ ಒಂದು ಹಳೇಯ ಬಿಲ್ಡಿಂಗ್, ಅದರ ಮೂರನೇ ಮಹಡೀಲಿ ಅವನ ರೂಂ..! ಮುರಿದ ಮೆಟ್ಟಿಲು ಹತ್ಕೊಂಡು, ಲಗೇಜ್ ಹೊತ್ಕೊಂಡು ರೂಮ್ ತಲುಪಿದ್ರು. ರೂಮಿನ ಹೊರಗೆ 10-12 ಜೊತೆ ಚಪ್ಪಲಿ, ಶೂ..! ಒಳಗೆ ಹೋದ್ರೆ ಅದು ಹೆಚ್ಚಂದ್ರೆ ಟೆನ್ ಬೈ ಫಿಫ್ಟೀನ್ ರೂಮು. ಅದರೊಳಗೆ ಆಲ್ರೆಡಿ 5 ಜನ ಮಲಗಿದ್ದಾರೆ..! ಅದೂ ಒಂದಿಬ್ಬರು ನೆಲದ ಮೇಲೆ, ಮತ್ತೆ ಕೆಲವರು ಚಾಪೆ ಮೇಲೆ..! ಅವ್ರೆಲ್ಲಾ ಅವನ ಸುತ್ತಮುತ್ತಲ ಊರಿನ ಹುಡುಗರೇ, ಅಲ್ಲಿ ಕಾಲೇಜಲ್ಲಿ ಅಪ್ಪ-ಅಮ್ಮನ ದುಡ್ಡಲ್ಲಿ ಬೇಜಾನ್ ಮೆರೀತಾ ಇದ್ದವರು..! ಆದ್ರೆ ಇಲ್ಲಿ ಹೀಗಾ..? ಅವನ ಫ್ರೆಂಡಿಗೆ ಇವನ ಮನಸಲ್ಲಿ ಏನು ಓಡ್ತಿದೆ ಅಂತ ಅರ್ಥ ಆಗಿಹೋಯ್ತು, `ಲೋ, ಜಾಸ್ತಿ ಹುಳಬಿಟ್ಕೋಬೇಡ, ಆರಾಮಾಗಿ ಸ್ವಲ್ಪ ಹೊತ್ತು ಮಲಗು, ನಾವು ಸ್ವಲ್ಪ ಹೊತ್ತಲ್ಲಿ ಎಲ್ಲಾ ಕೆಲಸಕ್ಕೆ ಹೊರಡಬೇಕು’ ಅಂತ ಮೂಲೆಯಲ್ಲಿದ್ದ ಸೀಮೆಎಣ್ಣೆ ಸ್ಟವ್ ಹಚ್ಚಿ ತಿಂಡಿಗೆ ರೆಡಿ ಮಾಡ್ತಿದ್ದ..! ಇವನು ಮಲಗಿದ್ರೂ ನಿದ್ದೆ ಬರ್ತಿಲ್ಲ, ಉಳಿದವರು ಒಬ್ಬೊಬ್ಬರಾಗಿ ಎದ್ದು ರೂಮಿನ ಹೊರಗೆ ಆ ಮೂಲೇಲಿದ್ದ ಟಾಯ್ಲೆಟ್ಟಲ್ಲಿ ಅದು ಇದು ಮತ್ತು ಸ್ನಾನ ಮುಗಿಸಿ ಬಂದು ಪ್ಯಾಂಟ್ ಶರ್ಟ್ ಏರಿಸಿಕೊಳ್ತಿದ್ರು. ಇವನಿಗೂ ನಿದ್ದೆ ಬರ್ತಿರಲಿಲ್ಲ, ಎದ್ದು ಕೂತ..! ಎಲ್ಲರೂ ಅವನ ಕಡೆಗೊಂದು ನಾಟಕದ ನಗುಬೀರಿದ್ರು..! `ಆರಾಮಾ’ ಅಂತ ಅವರು ಕೇಳುವ ಸ್ಟೈಲಲ್ಲೇ `ಮುಂದೈತೆ ಮಾರಿಹಬ್ಬ’ ಅನ್ನೋ ಟೋನ್ ಇತ್ತು..! ಅವರು ಫಾರ್ಮಲ್ ಬಟ್ಟೆ ಮೇಲೆ ಟೈ ಹಾಕ್ಕೊಂಡು ಗಡಿಬಿಡಿಯಲ್ಲಿ ಮಾಡಿಟ್ಟಿದ್ದ ಚಿತ್ರಾನ್ನ ಗಬಗಬ ಅಂತ ತಿಂದು ಗಬ್ಬು ನಾರ್ತಾ ಇದ್ದ ಸಾಕ್ಸ್ ಹಾಕ್ಕೊಂಡು, ಅದನ್ನು ಹಳೇ ಬಟ್ಟೇಲಿ ಒರುಸ್ಕೊಂಡು, ಮತ್ತದೇ ಮುರಿದ ಮೆಟ್ಟಿಲು ಇಳಿದು ಓಡ್ತಾ ಇದ್ರು..! ಇವನನ್ನು ಪಿಕಪ್ ಮಾಡಲು ಬಂದಿದ್ದ ಫ್ರೆಂಡ್ ಅವರೆಲ್ಲರೂ ಹೋದ ಮೇಲೆ ಇವನ ಜೊತೆ ಮತಿಗೆ ಕೂತ. `ಇವತ್ತು ನಾನು ರಜಾ ಹಾಕಿದೀನಿ ಮಗಾ, ನಿಂಗೆ ಎಲ್ಲಿ ಕೆಲಸ ಸಿಕ್ಕಿದೆ ಅಂತ ಕೇಳ್ದ..?’ ` ಇನ್ನೂ ಎಲ್ಲೂ ಕೆಲಸ ಸಿಕ್ಕಿಲ್ಲ, ನೀವೆಲ್ಲಾ ಎಲ್ಲಿ ಕೆಲಸ ಮಾಡ್ತಿರೋ ಅಲ್ಲೇ ನಂಗೂ ಒಂದು ಕೆಲಸ ಕೊಡಿಸಿ’ ಅಂದ. ನಮ್ಮ ಕೆಲಸಾನ ಅಂತ ಅವನೇ ಶಾಕ್ ಆದ..! ನಮ್ಮ ಕೆಲಸ ಬೇಡ, ಬೇರೆ ಏನಾದ್ರೂ ಟ್ರೈ ಮಾಡು. ಎಲ್ಲೂ ಸಿಕ್ಕಿಲ್ಲ ಅಂದ್ರೆ ಆಮೇಲೆ ನಾನೇ ನಮ್ಮ ಜಾಗದಲ್ಲೇ ಕೆಲಸ ಕೊಡಿಸ್ತೀನಿ ಅಂದ.

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಇವನ ಕೆಲಸದ ಭೇಟೆ ಶುರುವಾಯ್ತು. ಹತ್ತಿರದ ಅಂಗಡಿಗೆ ಹೋಗಿ ಎಂಪ್ಲಾಯ್ ಮೆಂಟ್ ನ್ಯೂಸ್ ಪೇಪರ್ ತಂದು, ಇದ್ದ ನಂಬರ್ರಿಗೆಲ್ಲಾ ಫೋನ್ ಮಾಡ್ದ,..! ಅಲ್ಲಲ್ಲಿ ಬಸ್ ಸ್ಟ್ಯಾಂಡಲ್ಲಿ, ಮರದ ಮೇಲೆ ಅಂಟಿಸಿದ್ದ ನಂಬರ್ರಿಗೂ ಫೋನ್ ಮಾಡ್ದ..! `ಒಂದು ತಿಂಗಳಲ್ಲಿ 20 ಸಾವಿರದವರೆಗೆ ದುಡಿಯಿರಿ’ ಅನ್ನೋ ಪೋಸ್ಟರ್ ಗಳು ಅವನ ಮುಖದಲ್ಲಿ ಖುಷಿ ಮೂಡಿಸೋದು. ಆದ್ರೆ ಅಲ್ಲಿಗೆ ಹೋಗಿ ಅವರು ಹೇಳಿದ್ದು ಕೇಳಿದ ಮೇಲೆ, ಇದೆಲ್ಲಾ ಆಗಿಹೋಗೋ ಕೆಲಸ ಅಲ್ಲ ಅಂತ ವಾಪಸ್ ಬರ್ತಿದ್ದ ಕೆಲವು ಕಡೆ ಬೈಕ್ ಇದ್ರೆ ಕೆಲಸ ಅಂದ್ರು, ಮತ್ತೆ ಕೆಲವರು ಎಕ್ಸ್ ಪೀರಿಯೆನ್ಸ್ ಕೇಳಿದ್ರು, ಮತ್ತೆ ಕೆಲವರು ಮಾರ್ಕ್ಸ್ ಕಾರ್ಡ್ ಒರಿಜಿನಲ್ ಕೊಡಬೇಕು ಅಂದ್ರು, ಇನ್ನು ಕೆಲವರು ಹತ್ತು ಸಾವಿರ ಕೊಟ್ರೆ ಕೆಲಸ ಗ್ಯಾರಂಟಿ ಅಂದ್ರು..! ಅಷ್ಟರಲ್ಲಿ ಒಂದು ವಾರ ಆಗಿಹೋಯ್ತು..! ಅವತ್ತು ಬೆಳಗಿನ ಸೂರ್ಯ ಹಾಯ್ ಹೇಳಿದ್ದ, ಇವತ್ತು ಅದೇ ಸೂರ್ಯ ನೆತ್ತಿಸುಟ್ಟು ಸುಸ್ತು ಮಾಡಿಸ್ತಿದ್ದಾನೆ..! ಬೆಂಗಳೂರಿನ ರೋಡ್ ಕ್ರಾಸ್ ಮಾಡೋದ್ರಲ್ಲೇ ಅವನ ಸಾಕಷ್ಟು ಟೈಂ ವೇಸ್ಟ್ ಆಗ್ತಿದೆ. ಬೆಂಗಳೂರಿನ ಟ್ರಾಫಿಕ್ಕಲ್ಲಿ ಲಕ್ಕಸಂದ್ರದಿಂದ ರಾಜಾಜಿನಗರ, ಮಲ್ಲೇಶ್ವರಂ, ಬನ್ನೇರುಘಟ್ಟ ರೋಡ್, ಹೆಬ್ಬಾಳ ತಲುಪೋ ಅಷ್ಟರಲ್ಲಿ ದಿನಗಳೇ ಕಳೆದು ಹೋಗ್ತಿವೆ. ಭರವಸೆಯ ಬೆಂಗಳೂರು ಭರವಸೆ ಕಳೆದುಕೊಳ್ಳೋಕೆ ಶುರು ಮಾಡ್ತು..! ಊರಿಂದ ತಂದಿದ್ದ 3 ಸಾವಿರ ರೂಪಾಯಿಯಲ್ಲಿ ಉಳಿದಿರೋದು ಒಂದು ಸಾವಿರ ಮಾತ್ರ..! ಅವತ್ತು ಬೆಳಗ್ಗೆ ತಿಂಡಿ ಹೊರಗೆ ತಿಂದಿದ್ದಕ್ಕೆ 40 ರೂಪಾಯಿ ಖರ್ಚಾಗಿ ಬಿಡ್ತು..! ಹೀಗೇ ಮೂರು ಹೊತ್ತು ತಿಂದ್ರೆ ದಿನಕ್ಕೆ 150-200 ರೂಪಾಯಿ ಊಟಕ್ಕೇ ಬೇಕು..! ಹಾಗಾದ್ರೆ ಕೆಲಸ ಸಿಗೋ ತನಕ ಮಧ್ಯಾಹ್ನ ಊಟ ಮಡೋದು ಬೇಡ ಅಂತ ಡಿಸೈಡ್ ಮಾಡ್ತಾನೆ..! ಬೆಳಗ್ಗೆ ತಿಂಡಿ ತಿಂದು ಹೋಗೋಣ ಅಂದ್ರೆ ಒಂಭತ್ತು ಗಂಟೆಗೇ ಆ ಮೂಲೆಯಲ್ಲಿರೋ ಯವುದೋ ಏರಿಯಾಗೆ ಕೆಲಸ ಹುಡುಕಿ ಹೋಗಬೇಕು..! ರಾತ್ರಿ ಊಟ ಮಾತ್ರ ರೂಮಲ್ಲಿ..! ಅಲ್ಲೂ ಫ್ರೆಂಡ್ ರೂಮಲ್ಲಿರೋ ಉಳಿದ ಹುಡುಗರು ಇವನ ಮೇಲೆ ರೇಗಾಡೋಕೆ ಶುರು ಮಾಡಿದ್ರು. `ಕೆಲಸ ಸಿಗೋದು ಯಾವಾಗ..? ಇಲ್ಲಿ ನಮಗೇ ಜಾಗ ಇಲ್ಲ ಅಂತ ಹೇಳ್ತಿದ್ರು..! ಏನೋ ಅನ್ಕೊಂಡು ಬೆಂಗಳೂರಿಗೆ ಬಿದ್ದವನು ಮತ್ತೆ ಊರಿಗೆ ಹೋಗೋಣ ಅಂತ ಅನ್ಕೊಂಡ..! ಆದ್ರೆ ಅಪ್ಪ-ಅಮ್ಮ, ಊರಿನ ಜನ ಏನಂದುಬಿಡ್ತಾರೋ ಅಂತ ಯೋಚನೆ ಮಾಡಿ ಮತ್ತೆ ಕೆಲಸ ಹುಡುಕೋ ಕೆಲಸ ಮುಂದುವರೆಸ್ದ..! ಎಲ್ಲೂ ಕೆಲಸ ಸಿಗಲೇ ಇಲ್ಲ..! ಮತ್ತೆ ಬಂದು ಫ್ರೆಂಡ್ ಎದುರು ಕೂತ. `ಮಗಾ ಪ್ಲೀಸ್ ನಿಮ್ಮ ಆಫೀಸಲ್ಲೇ ಕೆಲಸ ಕೊಡಿಸೋ, ನಂಗೆ ಎಲ್ಲೂ ಕೆಲಸ ಸಿಗ್ತಿಲ್ಲ..!’ ಅಂದ.. ಸರಿ ಬೆಳಗ್ಗೆ ರೆಡಿಯಾಗು ಅಂತ ಅವನು ಮಲಗಿಬಿಟ್ಟ. ಆದ್ರೆ ಇವನಿಗೆ ಮಾತ್ರ ನಿದ್ದೆ ಬರಲೇ ಇಲ್ಲ.. ಭಯಾನಕ ಬೆಂಗಳೂರು ಅವನನ್ನು ಹೆದರಿಸಿಬಿಟ್ಟಿತ್ತು..!
ಬೆಳಗ್ಗೆ ಎದ್ದು ಫ್ರೆಂಡ್ ಜೊತೆ ಇವನೂ ರೆಡಿಯಾಗಿ ಹೊರಟ. ಆಫೀಸ್ ಬಂತು.. ಅಲ್ಲಿ ನೂರಾರು ಇವನ ವಯಸ್ಸಿನವರೇ ಇದ್ದಾರೆ. ಎಲ್ಲರೂ ಫುಲ್ ಫಾರ್ಮಲ್, ಟೈ, ಶೂ…! ಯಾವ್ದೋ ಒಳ್ಳೇ ಕೆಲಸ ಅಂತ ಮನಸಲ್ಲೇ ಖುಷಿ ಅವನಿಗೆ. ಅವನ ಫ್ರೆಂಡ್ ಇವನನ್ನು ಕರ್ಕೊಂಡ್ ಹೋಗಿ ಅವನ ಬಾಸ್ ಎದುರಿಗೆ ನಿಲ್ಲಿಸ್ದ. `ತಿಂಗಳಿಗೆ 12 ಸಾವಿರ ಸಂಬಳ, ಆದ್ರೆ ಮಿನಿಮಂ 100 ಪೀಸ್ ಸೇಲ್ ಮಾಡಲೇಬೇಕು..’ ಅಂದ್ರು ಬಾಸ್..! ಸರಿ ಅನ್ನೋ ಹಾಗೆ ತಲೆಯಾಡಿಸ್ದ. ಅವನಿಗೆ ಕೆಲಸ ಸಿಕ್ಕಿಬಿಡ್ತು..! ಟೀಮ್ ಲೀಡರ್ ಅಂತ ಒಬ್ಬ ಬಂದು ಅವನಿಗೆ ಒಂದು ದೊಡ್ಡ ಬ್ಯಾಗ್ ಕೊಟ್ಟ..! ಸಿಕ್ಕಾಪಟ್ಟೆ ಭಾರ ಇದೆ, ಏನಿದು ಅಂತ ನೋಡಿದ್ರೆ ಅದರೊಳಗೆ ಇಷ್ಟಿಷ್ಟು ದಪ್ಪದ 30 ಪುಸ್ತಕ ಇದೆ..! ಅವನಿಗೆ ಸಣ್ಣದೊಂದು ಟ್ರೈನಿಂಗ್ ಶುರುವಾಯ್ತು. ನೀವು ಕಸ್ಟಮರ್ಸ್ ಹತ್ತಿರ ಹೋಗಿ ಹೀಗೆ ಹೇಳಬೇಕು. `ನಾನು ರಾಧಾ ಮ್ಯಾನೇಜ್ ಮೆಂಟ್ ಕಾಲೇಜಿಂದ ಬಂದಿದೀವಿ, ನಮಗೆ ಪ್ರಾಕ್ಟಿಕಲ್ ಮಾರ್ಕ್ಸ್ ಸಿಗಬೇಕು ಅಂದ್ರೆ ಈ ಬುಕ್ಸ್ ಎಲ್ಲಾ ಮಾರಬೇಕು. ಇದು ಮಾರ್ಕೇಟಲ್ಲಿ 1000 ರೂಪಾಯಿ ಇದೆ. ನಾವು ನಿಮಗೆ 499 ರೂಪಾಯಿಗೆ ಕೊಡ್ತೀವಿ’ ಅಂತ ಹೇಳಬೇಕು..! ಒಂದು ತಿಂಗಳಿಗೆ ಮಿನಿಮಂ 100 ಪೀಸ್ ಸೇಲ್ ಮಾಡಲೇಬೇಕು. ಇಲ್ಲ ಅಂದ್ರೆ ಸಂಬಳ ಕಟ್ ಆಗುತ್ತೆ…!
ಕೆಜಿಗಟ್ಟಲೇ ತೂಕದ ಬ್ಯಾಗ್ ಬೆನ್ನಿಗೇರಿಸಿ ಫೀಲ್ಡಿಗೆ ಇಳಿದೇಬಿಟ್ಟ.. ಯಾರಿಗೇ ಕೇಳಿದ್ರೂ ಉತ್ತರ ರೆಡಿ ಇತ್ತು.. `ಸುಮ್ನೆ ಹೋಗಪ್ಪಾ, ನಾಟ್ ಇಂಟರೆಸ್ಟೆಡ್, ನಿನ್ನೆ ಬರೋಕಾಗಿಲ್ವಾ..? ಈಗಲೂ ಯಾರ್ ಬುಕ್ ಓದ್ತಾರೆ ಗುರೂ..? ಹೀಗೇ ವೆರೈಟಿ ವೆರೈಟಿ ಉತ್ತರ..! ಬೆಳಗ್ಗೆಯಿಂದ ಸಂಜೆ ತನಕ ಸುತ್ತಿದ್ರೂ ಒಂದೇಒಂದು ಬುಕ್ ಸೇಲಾಗಲಿಲ್ಲ..! ಅವನ ಕಣ್ಣಲ್ಲಿ ನೀರು ತುಂಬಿಬಂತು..! ಇಲ್ಲಿ ನಂಗೇನೂ ಆಗಲ್ಲ ಅನ್ನಿಸೋಕೆ ಶುರುವಾಯ್ತು..! ರಾಜಾಜಿನಗರದಿಂದ ಅವನ ಆಫೀಸಿನ ತನಕ ಬಸ್ಸಿನ ಹಿಂದಿನ ಕಿಟಕಿಯಲ್ಲಿ ಕೂತವನು ಕರ್ಚೀಫ್ ಅಡ್ಡಹಿಡಿದು ಬಿಕ್ಕಿಬಿಕ್ಕಿ ಅತ್ತಿದ್ದ..! ಕೈಯಲ್ಲಿ ಉಳಿದಿರೋದು 460 ರೂಪಾಯಿ ಅಷ್ಟೆ..! ಮಧ್ಯಾಹ್ನ ಊಟ ಸಹ ಮಾಡಿಲ್ಲ, ಕೈಕಾಲು ಹಸಿವಿಗೆ ನಡುಗ್ತಾ ಇದೆ..! ಆಫೀಸಿಗೆ ಹೋಗಿ ಮತ್ತೆ ಬ್ಯಾಗ್ ವಾಪಸ್ ಕೊಟ್ಟು` ಇವತ್ತು ಒಂದೂ ಸೇಲಾಗಿಲ್ಲ’ ಅಂತ ಹೇಳಿದಾಗ ಟೀಮ್ ಲೀಡರ್ ಬೈದ ಮಾತುಗಳು ಇನ್ನೂ ನೋವುಕೊಟ್ಟುಬಿಡ್ತು..! ಅಲ್ಲಿಂದ ನಡ್ಕೊಂಡೇ ರೂಮಿನ ಕಡೆ ಹೊರಟ, ಅಮ್ಮನಿಗೆ ಫೋನ್ ಮಾಡಿ ಬಿಕ್ಕಿಬಿಕ್ಕಿ ಅತ್ತ. `ಅಮ್ಮಾ, ನಂಗಾಗ್ತಿಲ್ಲ ಅಮ್ಮ.. ತುಂಬಾ ಹೊಟ್ಟೆ ಹಸೀತಾ ಇದೆ. ಇವತ್ತು ಮಧ್ಯಾಹ್ನ ಊಟ ಮಾಡಿದ್ರೆ ಮುಂದಿನ ವಾರ ಬಸ್ಸಲ್ಲಿ ಓಡಾಡೋಕೂ ದುಡ್ಡಿರಲ್ಲ, ನಂಗೆ ಈ ಬೆಂಗಳೂರು ಬೇಡಮ್ಮ..!’ ಆ ಕಡೆ ಅಮ್ಮನ ಪರಿಸ್ಥಿತಿ ಹೇಗಾಗಬೇಡ. ಅವರೂ ಅತ್ತುಅತ್ತೂ ಊರಿಗೆ ವಾಪಸ್ ಬಾ ಅಂತ ಹೇಳಿ ಫೋನ್ ಇಟ್ಟುಬಿಟ್ರು..! ಆದ್ರೆ ಯಾವುದೇ ಕಾರಣಕ್ಕೂ ಸೋಲಬಾರದು ಅಂತ ಡಿಸೈಡ್ ಮಾಡಿದ್ದ ಅವನು..! ಅವತ್ತು ಮಧ್ಯಾಹ್ನ ಊಟ ಮಾಡದೇ ಇದ್ದವನು ರಾತ್ರಿ ಅನ್ನ ನೋಡಿದ ಕೂಡಲೇ ಸ್ವರ್ಗ ಸಿಕ್ಕಹಾಗೆ ಗಬಗಬ ತಿಂದಿದ್ದ. ಊರಲ್ಲಿ ತಟ್ಟಯಲ್ಲಿ ಬಿಡ್ತಿದ್ದ ಅನ್ನದ ಬೆಲೆ ಅಷ್ಟರಲ್ಲಿ ಗೊತ್ತಾಗಿಹೋಗಿತ್ತು. ಮತ್ತೆ ಬೆಳಗ್ಗೆ ಎದ್ದರೆ ಮತ್ತದೇ ಪುಸ್ತಕದ ಬ್ಯಾಗ್, ಅದೃಷ್ಟ ಸರಿಯಿದ್ದಾಗ ಸೇಲ್ ಆಗೋ ಪುಸ್ತಕಗಳು ಅವನ ಭರವಸೆ ಹೆಚ್ಚಿಸ್ತು. ಅದರಲ್ಲೇ ಅವನಿಗೆ ಒಂದಷ್ಟು ಮಾತು ಕಲಿತುಕೊಂಡ, ಹೇಗೆ ಮಾತಾಡಿದ್ರೆ ಜನ ಬುಕ್ ತಗೋತಾರೆ ಅಂತ ಅರ್ಥ ಮಾಡಿಕೊಂಡ..! ದಿನಕ್ಕೂ ಒಂದೇ ಒಂದು ಬುಕ್ ಸೇಲ್ ಮಾಡಲು ಸಾಧ್ಯವಾಗದೇ ಇದ್ದವನು 7-8 ಬುಕ್ ಸೇಲ್ ಮಾಡೋಕೆ ಶುರು ಮಾಡಿದ್ದ..! ಬಸ್ ನಲ್ಲಿ ಓಡಾಡೋ ಟೈಮಲ್ಲಿ ಅವನ ಬ್ಯಾಗಲ್ಲಿದ್ದ ರ್ಯಾಪಿಡೆಕ್ಸ್ ಓದೋಕೆ ಶುರು ಮಾಡ್ದ. ಇಂಗ್ಲೀಷ್ ಕಲಿಯೋ ಹಸಿವು ಆರಂಭವಾಯ್ತು. ದುಡ್ಡು ಖಾಲಿ ಫ್ರೆಂಡ್ ಹತ್ರ 500- ಸಾವಿರ ಸಾಲ ತಗೊಂಡ…! ಹೀಗೇ ಜೀವನ ನಡೆಯೋಕೆ ಶುರುವಾಗುತ್ತೆ. ರೂಮಿನ ಬಾಡಿಗೆಯಲ್ಲಿ ಶೇರ್ ಕೊಡೋಕೆ ಶುರುವಾದ ಮೇಲೆ ಉಳಿದವರೂ ಅವನನ್ನು ಒಪ್ಪಿಕೊಂಡ್ರು..! ನೋಡನೋಡ್ತಿದ್ದ ಹಾಗೇ ಬೆಂಗಳೂರಿಗೆ ಅವನು ಅಡ್ಜಸ್ಟ್ ಆಗಿಬಿಟ್ಟ..! ಟೈಮ್ ಸಿಕ್ಕಾಗ ಅಲ್ಲಲ್ಲಿ ಬೇರೆ ಕಂಪನಿಯ ಇಂಟರ್ ವ್ಯೂ ಅಟಂಡ್ ಮಾಡ್ತಿದ್ದ. ಅಲ್ಲಿಂದ ಮತ್ಯಾವುದೋ ಕಂಪನಿ. ತಿಂಗಳ ಆರಂಭದಲ್ಲಿ ಒಂದು ಸಿನಿಮಾ ಹೋಟೆಲ್ ಊಟ, ತಿಂಗಳ ಕೊನೆ ಬಂದ್ರೆ ಮತ್ತದೇ ಯಾವುದಾದ್ರೂ ಒಂದು ಹೊತ್ತು ಉಪವಾಸ ಅಥವಾ ಪಚ್ಚಬಾಳೆ ಹಣ್ಣು..! ಬಂದು 4 ವರ್ಷವಾದ್ರೂ ತಿಂಗಳ ಕೊನೆಯಲ್ಲಿ ಎಷ್ಟೇ ಪಲ್ಟಿಹೊಡುದ್ರೂ 100 ರೂಪಾಯಿ ಉಳಿಯಲ್ಲ..! ಅದೇ ಬೆಂಗಳೂರಿನ ಸ್ಪೆಷಾಲಿಟಿ..! ಇವತ್ತಿಗೂ ಅವನ ಜೀವನ ಹಂಗೂಹಿಂಗೂ ನಡೀತಾ ಇದೆ ಅಷ್ಟೆ.. ಅದು ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ..! 5000 ಸಂಬಳ ಬಂದ್ರೂ ಅದೇ ಕಥೆ, 50 ಸಾವಿರ ಬಂದ್ರೂ ಅದೇ ಕಥೆ..! ಸಂಬಳ ಹೆಚ್ಚಾದಂತೆ ಲೈಫದ ಸ್ಟೈಲ್ ಚೇಂಜ್ ಆಗುತ್ತೆ ನಿಜ. ಆದ್ರೆ ಬ್ಯಾಂಕಿಂದ ಬರೋ `ಲೋ ಬ್ಯಾಲೆನ್ಸ್’ ಮೆಸೇಜ್ ತಪ್ಪೋದೇ ಇಲ್ಲ..! ಬೆಂಗಳೂರನಲ್ಲಿರೋರಿಗೇ ಅತ್ಯಂತ ಸಂತಸದ ಕ್ಷಣ ಅಂತಿದ್ರೆ ಅದು ತಿಂಗಳಿಗೇ ಒಂದೇ ಸಲ …’ ಅದರ ನಡುವೆ ಮತ್ತೂ ಸ್ವಲ್ಪ ಖುಷಿಯಾಗಬೇಕು ಅಂದ್ರೆ ಬೈಕ್ ಲೋನ್, ಕ್ರೆಡಿಟ್ ಕಾರ್ಡ್ ಅಪ್ರೂವಲ್ ಆಗಬೇಕು ಅಷ್ಟೆ..! ಇಲ್ಲಿ ಫೇಸ್ ಬುಕ್ಕಲ್ಲಿ ಓರಿಯನ್ ಮಾಲ್ ಎದುರು ನಿಂತು ಹಾಕಿರೋ ಫೋಟೋ ಊರಲ್ಲಿರೋ ಯಾರೋ ನೋಡಿ, `ನಮ್ ಹುಡುಗ ಬೆಂಗಳೂರಲ್ಲಿ ಸಖತ್ತಾಗ್ ಸೆಟಲ್ ಆಗಿದ್ದಾನೆ’ ಅಂತ ಮಾತಾಡಿಕೊಳ್ಳೋದಷ್ಟೇ ಲಾಭ..! ಆದ್ರೆ ಬೆಂಗಳೂರು ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಕಮರ್ಶಿಯಲ್ ಸ್ಟ್ರೀಟ್ ಗಳ ಹಾಗೆ ಕಲರ್ ಫುಲ್ ಮಾತ್ರವೇ ಆಗಿರಲ್ಲ..! ಇಲ್ಲಿ ಕಲಾಸಿಪಾಳ್ಯ, ಶಿವಾಜಿನಗರ, ಮೆಜೆಸ್ಟಿಕ್ ಸಹ ಇದೆ..! ದುಡ್ಡಿದ್ರೆ ಎಂಪೈರ್ ಬಿರ್ಯಾನಿ, ಇಲ್ದಿದ್ರೆ ಫುಟ್ ಪಾತ್ ಚಿತ್ರಾನ್ನ..! ನಿಮಗೆ ಹೇಗೆಬೇಕೋ ಹಾಗೆ..!
(ಬೆಂಗಳೂರು ಗೂಗಲ್ ತೋರಿಸೋ ಅಷ್ಟು ಸೂಪರ್ರಾಗಿ ಇರಲ್ಲ, ಇಲ್ಲೂ ನೋವಿದೆ, ಕಷ್ಟ ಇದೆ..! ಒದ್ದಾಡಿದ್ರೆ ಯಾವುದೂ ಅಸಾಧ್ಯ ಅಲ್ಲ, ಹಠ ಛಲ ಬೇಕು ಅಷ್ಟೆ..! ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬರೋಕೆ ಮುಂಚೆ ಇದಕ್ಕೆಲ್ಲಾ ರೆಡಿ ಇದ್ರೆ, ವೆಲ್ ಕಮ್ ಟು ನಮ್ಮ ಬೆಂಗಳೂರು..!

-ಕೀರ್ತಿ ಶಂಕರಘಟ್ಟ

LEAVE A REPLY

Please enter your comment!
Please enter your name here