ಪ್ರೀತಿ ಕೊಂದ ಅವಳ ತಾಯಿ ಈಗೇನು ಹೇಳ್ತೀರಿ..? ಮಗಳ ಲೈಫಿಗೆ ವಿಲನ್ ಆದ ತಾಯಿ..!

0
133
ಅದು ಅವನ ಮದುವೆಯ ದಿನ. ಬಹಳ ಜನರೇನೂ ಸೇರಿರಲಿಲ್ಲ. ಮನೆಯಲ್ಲಿ ತುಂಬಾ ಕಷ್ಟ ಇತ್ತು! ಆದ್ರಿಂದ ಕುಟುಂಬದ ನಾಲ್ಕೈದು ಮನೆಗೆ ಮಾತ್ರ ಮದುವೆ ಆಮಂತ್ರಣ ನೀಡಿದ್ದ! ಲವ್ ಮ್ಯಾರೇಜ್ ಆಗಿದ್ರಿಂದ ಹುಡುಗಿ ಕಡೆಯಿಂದಲೂ ಅವರ ಕುಟುಂಬದ ನಾಲ್ಕೈದು ಜನರಿಗೆ ಮಾತ್ರ ಆಮಂತ್ರಣವಿತ್ತು! ಪ್ರೀತಿಸಿದ ಹುಡುಗಿ ಪಲ್ಲವಿ ಮಧ್ಯಾಹ್ನ 12ಗಂಟೆ ಆದರೂ ಬರಲೇ ಇಲ್ಲ, ಫೋನ್ ಮಾಡಿದ್ರೆ ಸ್ವಿಚ್ ಆಫ್! ಬೈಕ್ ತಗೊಂಡು ಅವಳ ಮನೆ ಹತ್ರ ಹೋದ್ರೆ ಮನೆ ಬೀಗ ಹಾಕಿತ್ತು! ಪಕ್ಕದ ಮನೆಯವರನ್ನ ಕೇಳಿದ. “ಇವತ್ತು ಬೆಳಗ್ಗೇನೆ ಮನೆಯಿಂದ ಹೋಗಿದ್ದಾರೆ. ಎಲ್ಲಿಗೆ ಹೋಗ್ತೀವಿ ಅಂತನೂ ಹೇಳಿಲ್ಲ! ಅವಳ ಇಬ್ಬರು ಸೋದರ ಮಾವಂದಿರು ಬಂದಿದ್ರು, ಬೆಳಿಗ್ಗೆ ಬೆಳಿಗ್ಗೇನೆ ಸಿಕ್ಕಾಪಟ್ಟೆ ಜಗಳ ನಡೀತಾ ಇತ್ತಪ್ಪ, ಪಲ್ಲವಿ ಜೋರಾಗಿ ಅಳ್ತಾ ಇದ್ಲು” ಅಂತ ಹೇಳ್ತಾರೆ. ಆಗ ಅವನಿಗೆ ದುಃಖ ತಡೆದುಕೊಳ್ಳೋಕೆ ಆಗಲಿಲ್ಲ. ನಿನ್ನೆ ರಾತ್ರಿ 9 ಗಂಟೆವರೆಗೂ ಅವನೊಡನೆ ಸುತ್ತಿದ್ದ ಹುಡುಗಿ ಇವತ್ತು ಜತೆಗಿಲ್ಲ..! ಹೇಗ್ ಆಗ್ಬೇಡ?
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಡಿಗ್ರಿ ಓದುತ್ತಿರುವಾಗಲೇ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಡಿಗ್ರಿ ಮುಗಿದ ಮೇಲೆ ಪಿಜಿ-ಗೀಜಿ ಅಂತ ಹೈಯರ್ ಎಡುಕೇಷನ್ ಮಾಡೋಕೆ ಹೋದ್ರೆ, ಕಡಿಮೆ ಅಂದ್ರೆ ಮತ್ತೆರಡು ವರ್ಷ ಓದ್ಬೇಕು. ಆಮೇಲೆ ಕೆಲಸ. ಕೆಲಸ ಸಿಕ್ಕಿದ ಮೇಲೆ ಏನಿಲ್ಲ ಅಂದ್ರು ಎರಡರಿಂದ ಮೂರು ವರ್ಷ ಆದ್ರು ಮದ್ವೆ ಮಾಡ್ಕೊಳ್ಳಕ್ಕೆ ಆಗಲ್ಲ! ನಾನೂ ಈಗ ಕೆಲಸಕ್ಕೆ ಹೋಗದೆ, ಓದೋಕೆ ಹೋದ್ರೆ ಪಲ್ಲವಿ ನನಗೆ ಸಿಗುವುದು ಅನುಮಾನ! ಅವಳ ಮನೇಲಿ ಈಗಾಗ್ಲೆ ಹುಡುಗನನ್ನ ನೋಡ್ತಾ ಇದ್ದಾರೆ ಅಂತೆಲ್ಲಾ ಯೋಚ್ನೆ ಮಾಡಿದ ಪ್ರೀತಮ್ ತನ್ನ ಕ್ವಾಲಿಫಿಕೇಷನ್ಗೆ ಸಂಬಂಧವೇ ಇಲ್ಲದಂತೆ ತನ್ನ ತಾಲೂಕು ಸೆಂಟರ್ ನ ಅಡಿಕೆಮಂಡಿಯೊಂದೆರಲ್ಲಿ ಕೆಲಸಕ್ಕೆ ಸೇರಿಕೊಳ್ತಾನೆ! ಅವನ ಡಿಗ್ರಿಗೂ, ಅವನ ಟ್ಯಾಲೆಂಟಿಗೂ ಅವನು ಸೇರ್ಕೊಂಡ ಕೆಲಸಕ್ಕೂ ಸಂಬಂಧನೇ ಇರಲಿಲ್ಲ. ಕೆಲಸ ಹುಡ್ಕೊಂಡು ಬೆಂಗಳೂರಿನಂತ ನಗರಕ್ಕೆ ಬಂದಿದ್ರೆ ಅವನ ಟ್ಯಾಲೆಂಟ್, ಕ್ರಿಯೇಟಿವಿಟಿಗೆ ಒಳ್ಳೆ ಕೆಲಸನೇ ಸಿಗ್ತಾ ಇತ್ತು! ಆದ್ರೆ ವಿಧಿ ಲಿಖಿತವೇ ಬೇರೆ ಕಣ್ರೀ! ಆ ಹುಡುಗಿಗಾಗಿ ಅವ್ನು ಅಲ್ಲೇ ಉಳಿದುಕೊಳ್ತಾನೆ! ಮನೆಯಲ್ಲಿದ್ದರೆ ಬೇಗ ಮದುವೆ ಮಾಡ್ತಾರೆ, ಅದಕ್ಕೆ ಕೆಲಸಕ್ಕೆ ಹೋದ್ರೆ ಹೇಗೋ ಎರಡು ವರ್ಷ ಮನೆಯಲ್ಲಿ ಮದುವೆ ಮಾತು ಆಡದಂತೆ ನೋಡಿಕೊಳ್ಳಬಹುದೆಂದು ಪಲ್ಲವಿ ಕೂಡ ಸಹಕಾರಿ ಸಂಘದಲ್ಲಿ ಅಕೌಂಟೆಂಟ್ ಕೆಲಸಕ್ಕೆ ಸೇರಿಕೊಳ್ತಾಳೆ! ಇವ್ಳ ಅಪ್ಪ ಅಮ್ಮಗೆ ಮಗಳು ಕೆಲಸಕ್ಕೆ ಹೋಗುವುದು ಬಿಲ್ ಕುಲ್ ಇಷ್ಟ ಇರೊಲ್ಲ, ಆದ್ರೂ ಹಠಮಾಡಿ ಕೆಲಸಕ್ಕೆ ಹೋಗ್ತಾ ಇರ್ತಾಳೆ!
ಅದೊಂದು ಭಾನುವಾರ ಸಂಜೆ, ಪಲ್ಲವಿ ಶಾಪಿಂಗ್ ಹೋಗಿ ಬರ್ತೀನಿ ಅಂತ ಮನೆಯಿಂದ ಆಚೆ ಬರ್ತಾಳೆ. ಮಗಳ ಮೇಲೆ ಅನುಮಾನವಿದ್ದ ತಾಯಿ ಆಕೆಯನ್ನು ಹಿಂಬಾಲಿಸುತ್ತಾಳೆ. ಆಗಲೇ ಗೊತ್ತಾಗಿದ್ದು ಪಲ್ಲವಿ, ಪ್ರೀತಮ್ ಪ್ರೇಮ್ ಕಹಾನಿ! ಅಲ್ಲಿಂದ ಆರಂಭವಾಗುತ್ತೆ ಮನೆಯಲ್ಲಿ ಜಗಳ! ಆಮೇಲೆ ಪಲ್ಲವಿ ಕೆಲಸಕ್ಕೂ ಹೋಗುವುದಿಲ್ಲ. ಅವಳಿಗೆ ಮನೆಯಲ್ಲಿ ಅವಸರದ ಮದುವೆ ಮಾಡೋಕೆ ತಯಾರಿ ನಡೆಸಿರುತ್ತಾರೆ! ಪಲ್ಲವಿ ಪ್ರೀತಮನೊಡನೆ ಓಡಿಬರಲೂ ತಯಾರಾಗುತ್ತಾಳೆ! ಆದ್ರೆ ಹೆಣ್ಣೆತ್ತವರ ಕಷ್ಟ ಏನೂ ಅಂತ ಗೊತ್ತಿದ್ದ ಪ್ರೀತಮ್ ಇದಕ್ಕೆ ಒಪ್ಪಲಿಲ್ಲ! ಅವಳ ಮನೆ ಬಳಿ ಹೋಗುತ್ತಾನೆ. ಅವರ ಅಪ್ಪ ಅಮ್ಮ ಕೂಗಾಡಿದರೂ ಬೇಜಾರು ಮಾಡಿಕೊಳ್ಳದೆ ಪಲ್ಲವಿಯನ್ನು ತಾನೆಷ್ಟು ಪ್ರೀತಿಸುತ್ತಿದ್ದೇನೆಂಬುದನ್ನು ಅರ್ಥ ಮಾಡಿಸುತ್ತಾನೆ. ಪಲ್ಲವಿ ಮನೆಯವರು ಮದುವೆಗೆ ಒಪ್ಪಿಸಲು ಹೆಚ್ಚು ಕಡಿಮೆ ತಿಂಗಳು ಬೇಕಾಗುತ್ತೆ! ಪ್ರೀತಮ್ ಮನೆಯಲ್ಲಿಯೂ ಮದುವೆಗೆ ಗ್ರೀನ್ ಸಿಗ್ನಲ್ ಸಿಗುತ್ತೆ! ಪಲ್ಲವಿ ತಂದೆಯೇನೋ ತುಂಬು ಮನಸ್ಸಿನಿಂದ ಮದುವೆಗೆ ಒಪ್ಪಿಕೊಂಡಿದ್ದರು, ಆದರೆ ಅವಳ ತಾಯಿಗೆ ಇಷ್ಟವಿರಲಿಲ್ಲ! ಒಪ್ಪಿಕೊಂಡವರಂತೆ ನಗುವಿನ ಮುಖವಾಡವನ್ನು ಹಾಕಿಕೊಂಡಿದ್ದರು. ಅದು ಮುಖವಾಡ ಅಂತ ಗೊತ್ತಾಗಿದ್ದು ಮದುವೆ ದಿನವೇ!
ಎರಡೂ ಮನೆಯವರು ಒಪ್ಪಿಕೊಂಡ ಬಳಿಕವೇ ಮದುವೆ ದಿನವನ್ನು ಪ್ರೀತಮ್ ಗೊತ್ತುಮಾಡಿದ್ದ. ತುಂಬಾ ಜನರಿಗೆ ಆಮಂತ್ರಣ ಕೊಟ್ಟು ಮದುವೆ ಮಾಡೋ ಸ್ಥಿತಿಯಲ್ಲಿ ಇವನು ಇರಲಿಲ್ಲ! ಆಗತಾನೆ ಅಣ್ಣನ ಮದುವೆ ಆಗಿತ್ತು! ಅದಕ್ಕೂ ಅಲ್ಪ ಸ್ವಲ್ಪ ಹಣ ಖರ್ಚು ಮಾಡಿದ್ದ. ಪಲ್ಲವಿ ಮನೆಯಲ್ಲಿ ಲಕ್ಷಾನುಗಟ್ಟಲೆ ಖರ್ಚು ಮಾಡಿ ಮಗಳ ಮದುವೆ ಮಾಡಬಹುದಿತ್ತು. ಆದ್ರೆ  ಅದಕ್ಕೆ ಅಡ್ಡಿ ಬಂದಿದ್ದು ಪ್ರೀತಮ್ನ ಬಡತನ! ತನ್ನ ಮಗಳನ್ನು ಇವನಿಗೆ ಕೊಟ್ಟು ಮದುವೆ ಮಾಡಿದರೆ ನೆಂಟರಿಷ್ಚರು ಏನೆಂದು ಕೊಳ್ಳುತ್ತಾರೋ? ಎಂಬ ಕೆಟ್ಟ ಪ್ರತಿಷ್ಠೆ ಪ್ರಶ್ನೆ! ಆದ್ರಿಂದ ಇವರೂ ಕೂಡ ಕೆಲವೇ ಕೆಲವು ಆಪ್ತರಿಗೆ ಆಹ್ವಾನವಿತ್ತಿದ್ದರಷ್ಟೆ!
ಪ್ರೀತು ಮನೆಯವರು, ಸ್ಥಳೀಯ ರಾಮ ದೇವಸ್ಥಾನದಲ್ಲಿ ಮದುವೆ ತಯಾರಿ ಮಾಡಿಕೊಂಡಿದ್ದರು! ಅಡುಗೆ ತಯಾರಿ ಜೋರಾಗಿತ್ತು! ಮದುಮಗಳು ತನ್ನ ಕುಟುಂಬದವರೊಡನೆ ಬರುವುದನ್ನೇ ಕಾಯುತ್ತಿದ್ದರು.! ಮದುಮಗಳ ಕಡೆಯವರ ಕತೆ ಬಿಡಿ ಸಾರ್… ಮದುಮಗಳೂ ಕೂಡ ನಾಪತ್ತೆ!
 ಮದುವೆ ಹಿಂದಿನ ದಿನ ತಾಳಿಸರ, ನೆಕ್ಲೇಸ್, ರೇಷ್ಮೆಸೀರೆ, ಚೂಡಿದಾರ್ ಇತ್ಯಾದಿ ಇತ್ಯಾದಿಗಳನ್ನು ಪ್ರೀತಮ್ ಕೊಡಿಸಿದ್ದ! ಬ್ಯೂಟಿ ಪಾರ್ಲರ್ ಗೂ ಕರ್ಕೊಂಡು ಹೋಗಿ ಮದುಮಗಳನ್ನು ರೆಡಿಮಾಡಿಸಿದ್ದ ಪ್ರೀತಮ್! ರಾತ್ರಿ ಸುಮಾರು ಒಂಬತ್ತು ಗಂಟೆವರೆಗೂ ಇವನೊಡನೆ ಬೈಕೇರಿ ಸುತ್ತಿದ್ದ ಪಲ್ಲವಿ ನಾಳಿನ ಮದುವೆಯ ಕನಸು ಕಾಣುತ್ತಿದ್ದಳು! ಇವಳಿಗೆ ತನ್ನ ತಾಯಿಯ ಆಟ ತಿಳಿದಿರಲಿಲ್ಲ. ಅವಳ ತಾಯಿ ತನ್ನ ಸೋದರರಿಗೆ ಮದುವೆ ಕತೆ ಹೇಳಿ, ಅದನ್ನು ತಡೆಯುವಂತೆ ಕಿವಿಚುಚ್ಚಿದ್ದರು! ಪಲ್ಲವಿ ತಂದೆಗೆ ಇದು ಇಷ್ಟವಾಗಿರಲಿಲ್ಲ. ಅವರು ತನ್ನ ಹೆಂಡತಿಗೆ ಬುದ್ದಿಹೇಳಿದ್ದರು. ಆದರೆ ಅದಕ್ಕೆ ಬೆಲೆ ಕೊಡದ ಅವರು ತನ್ನ ಸೋದರರನ್ನು ಮದುವೆ ಹಿಂದಿನ ದಿನ ತಡ ರಾತ್ರಿ ಕರೆಸಿಯೇ ಬಿಟ್ಟಿದ್ದರು! ಪಲ್ಲವಿ ತನ್ನ ಮಾವಂದಿರು ಮದುವೆಗೆ ಬಂದಿದ್ದಾರೆಂದೇ ಕೊಂಡಿದ್ದಳು. ಬೆಳಿಗ್ಗೆ ಮೂರು ಗಂಟೆಗೆ ಎಬ್ಬಿಸಿ ಕಾರು ಹತ್ತುವಂತೆ ಆದೇಶಿಸಿದಾಗಲೇ ತಿಳಿದಿದ್ದು, ಮದುವೆ ತಪ್ಪಿಸಲು ಬಂದಿದ್ದಾರೆಂದು! ತಾಯಿ ಮತ್ತು ಮಾವಂದಿರೊಡನೆ ಜಗಳಕ್ಕೆ ಇಳಿದಳು! ರಾತ್ರಿಯಿಡಿ ಕುಳಿತು ಮಾವಂದಿರು ಪಲ್ಲವಿಯ ತಂದೆಯ ಮೈಂಡ್ ವಾಶ್ ಮಾಡಿದ್ದರು! ಅದರಿಂದ ತಂದೆ ತನ್ನ ಬೆಂಬಲಕ್ಕೆ ನಿಲ್ಲುತ್ತಾರೆಂಬ ನಂಬಿಕೆಕೂಡ ಸುಳ್ಳಾಯಿತು! ಪ್ರೀತಮ್ ನಿಗೆ ಫೋನ್ ಮಾಡೋಣ ಅಂದ್ರೆ ಮೊಬೈಲ್ ಕಸಿದುಕೊಂಡಿದ್ದಾರೆ! ಅಳುತ್ತಾ, ಕಿರುಚಾಡಿ, ಕಾಲಿಗೆ ಬಿದ್ದು ಬೇಡಿದರೂ ಯಾರಿಗೂ ಕನಿಕರ ಹುಟ್ಟಲಿಲ್ಲ! ಸೂರ್ಯ ಉದಯಿಸುವ ಮೊದಲೇ ಮನೆ ಕಾಲಿ ಮಾಡಿ ಅವರ ಊರಿಗೆ ಎಳೆದುಕೊಂಡು ಹೋಗಿಯೇ ಬಿಟ್ಟಿದ್ದರು! ಪ್ರೀತಮ್ಗೆ ಇಷ್ಟೆಲ್ಲಾ ಆಗಿದ್ದು ತಿಳಿಯಲಿಲ್ಲ! ಪಲ್ಲವಿಯೇ ನನಗೆ ಮೋಸ ಮಾಡಿದಳೆಂದೇ ಭಾವಿಸಿದ್ದ!
ಎರಡು ವರ್ಷದ ಬಳಿಕ ತವರಿಗೆ ಬಂದ ಪಲ್ಲವಿ ಪ್ರೀತಮ್ಗೆ ಸಿಕ್ಕಿ ನಡೆದ ಕತೆಯನ್ನೆಲ್ಲಾ ಹೇಳಿದ್ದಳು! ಅವಳ ಮಗು ಇವನನ್ನು ನೋಡುತ್ತಾ, ನಗುಬೀರುತ್ತಾ, ನನ್ನನ್ನೂ ಎತ್ತಿಕೋ ಅನ್ನೂ ರೀತಿ ಕೈ ಚಾಚಿ ಇವನ ಬಳಿ ಬಂದರೆ ಇವನಿಗೆ ಹೇಗಾಗ ಬೇಡ! ಪಲ್ಲವಿ ಒಂದು ಮಗುವಿನ ತಾಯಿ ಆಗಿದ್ದಳು. ಗಂಡ ಅನಿಸಿಕೊಂಡ ಪುಣ್ಯಾತ್ಮ ಶೀಲ ಅನುಮಾನಿಸಿ ಮನೆಯಿಂದ ಆಚೆ ಅಟ್ಟಿದ್ದ, ತವರಿನಲ್ಲೇ ಆಶ್ರಯ ಪಡೆದಿದ್ದಾಳೆ. ಶ್ರೀಮಂತ ಹುಡುಗನಿಗೆ ಕೊಟ್ಟು ಮಗಳ ಮದುವೆ ಮಾಡಿದ್ದ ತಾಯಿಗೆ ತನ್ನ ತಪ್ಪಿನ ಅರಿವಾಗಿತ್ತು! ಆದರೆ ಅದೂ ತುಂಬಾ ತಡವಾಯಿತು ಅಲ್ವೇನ್ರೀ? ಆಗಾಗಲೇ ಕಾಲ ಮಿಂಚಿ ಹೋಗಿತ್ತು. ಪಲ್ಲವಿಯ ಬಾಳು ನರಕವಾಗಿದೆ! ಗಂಡನಿಲ್ಲ, ಮಗುವನ್ನು ಶಾಲೆಗೆ ಸೇರಿಸ ಬೇಕು! ತಂದೆ-ತಾಯಿ ಬದುಕಿರೋ ತನಕ ಆಸರೆ ಇದೆ. ಆಮೇಲೆ ಒಂಟಿ ಬಾಳು, ಮಗ ಇನ್ನೂ ಚಿಕ್ಕವನು! ದುಡಿದು ಮಗವನ್ನು ಸಾಕಬೇಕು! ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾಳೆ! ಪ್ರೀತಮ್ ಇವಳ ಜೀವನ ಹೀಗಾಯಿತಲ್ಲಾ ಅಂತ ಕೊರಗುತ್ತಿದ್ದಾನೆ! ನಾನೇ ಮದುವೆ ಆಗೋಣ ಅಂತ ಒಮ್ಮೊಮ್ಮೆ ಯೋಚಿಸಿದರೂ, ಇದನ್ನು ಪಲ್ಲವಿ ಬಳಿ ಹೇಳಿದರೆ ಏನಂದುಕೊಂಡಾಳೋ ಎಂಬ ಭಯ. ಜತೆಗೆ ಸಮಾಜ ಏನನ್ನುತ್ತದೋ ಎಂಬ ಆತಂಕ!
ಪ್ರೀತಿಸಿ ಮೋಸ ಮಾಡೋ ಹುಡುಗರು, ಹುಡುಗಿಯರೂ ಇದ್ದಾರೆ. ಪ್ರೀತಮ್, ಪಲ್ಲವಿ ಲವ್ ಸ್ಟೋರಿಯಲ್ಲಾದಂತೆ ಕುಟುಂಬ, ಸಂಬಂಧಿಕರೇ, ಮದುವೆಗೆ ಅಡ್ಡಿ ಆಗುತ್ತಾರೆ! ಇವತ್ತು ಪಲ್ಲವಿ ದಿನಾಲೂ ಕಣ್ಣೀರಲ್ಲೇ ಕಾಲ ಕಳೆಯುತ್ತಿದ್ದಾಳೆ, ಅಂದು ಪಲ್ಲವಿ ಪ್ರೀತಿಯನ್ನು ಕೊಂದ ಸೋದರ ಮಾವಂದಿರು ಈಗ ಎಲ್ಲಿ?
ಇದು ಕಟ್ಟು ಕತೆ ಅಲ್ಲ, ಯಾರೋ ನನಗೆ ಹೇಳಿದ ಕತೆನೂ ಅಲ್ಲ. ಪ್ರೀತಮ್(ಹೆಸರು ಬದಲಿಸಿದೆ) ನನ್ನ ಸೋದರ ಸಂಬಂಧಿ! ಇವತ್ತಿಗೂ ದುಃಖದಲ್ಲೇ ಕಾಲ ಕಳೆಯುತ್ತಿದ್ದಾನೆ! ಮನೆ ಕಡೆಯೂ ತುಂಬಾ ಸಮಸ್ಯೆ ಇದೆ. ಅವನ ತಾಯಿ ಕೂಡ ಇತ್ತೀಚೆಗೆ ತೀರಿಕೊಂಡಿದ್ದಾರೆ. ಯಾರಿಗೂ ಇಂಥ ಪರಿಸ್ಥಿತಿ ಬರಬಾರ್ದು ರೀ.
ಅಂದು ತನ್ನ ಸೋದರರ ಸಾಥ್ ನಿಂದ ಮಗಳ ಪ್ರೀತಿಯನ್ನು ಕೊಂದಿದ್ದ ಪಲ್ಲವಿಯ ಅಮ್ಮ ಇಂದು ಪಶ್ಚಾತ್ತಾಪ್ಪ ಪಡುತ್ತಿದ್ದಾರೆ! ಆ ಸೋದರರು ಅಂದರೆ ಪಲ್ಲವಿಯ ಮಾವಂದಿರು ಮಕ್ಕಳು, ಸೊಸೆಯಂದಿರ ಜತೆಯಲ್ಲಿ ಇಂದು ಆರಾಮಾಗಿದ್ದಾರೆ. ಪಾಪಿ ಚಿರಾಯು ಅಲ್ವಾ?
ಪ್ರೇಮಿಗಳನ್ನು ಒಂದು ಮಾಡಲು ಸಾಧ್ಯವಿಲ್ಲವೆಂದರೆ ಸುಮ್ಮನಿರಬೇಕು, ಹುಳಿ ಹಿಂಡಿ ಹಾಳು ಮಾಡಲು ಹೋಗಬಾರದು! ಯಾರಿಗಾದರೂ ಅನ್ಯಾಯ ಮಾಡಿದರೆ ಖಂಡಿತಾ ನಾವು ಅವರಿಗಿಂತಲೂ ಹೆಚ್ಚು ನೋವನ್ನು ಅನುಭವಿಸೆಯೇ ಅನುಭವಿಸುತ್ತೇವೆ. ಏನಂತಿರಾ ಫ್ರೆಂಡ್ಸ್.
-ಶಶಿಧರ ಡಿ ಎಸ್ ದೋಣಿಹಕ್ಲು

LEAVE A REPLY

Please enter your comment!
Please enter your name here