ಮನೆ ಕಟ್ಟೋಕೆ ಹೇಳೋ ಹೆಂಡತಿ, ಆಗಲ್ಲ ಅನ್ನೋ ಗಂಡ..!

0
71

ಅವಳು ಗಂಡನ ಬೆನ್ನುಬಿದ್ದು ವರ್ಷಗಳೇ ಕಳೀತು, `ನಂಗದೆಲ್ಲಾ ಗೊತ್ತಿಲ್ಲ, ಮನೆ ಕಟ್ಟು, ಇಲ್ಲಾ ಅಂದ್ರೆ ಫ್ಲ್ಯಾಟ್ ತಗೋ..!, ನಂಗೆ ಬಾಡಿಗೆ ಮನೇಲೆಲ್ಲಾ ಇರೋಕೆ ಆಗಲ್ಲ..’ ಅವನು ಹೇಳ್ತಾನೇ ಬಂದ, `ಲೇ, ಮನೆ ಅಂತ ಈಗ ಕೈ ಹಾಕಿದ್ರೆ, ಅದೇ ಮನೆಯಲ್ಲಿ ಸಾಲದವರ ಕಾಟ ತಡ್ಕೊಳೋಕಾಗದೇ ವಿಷ ಕುಡೀಬೇಕಾಗುತ್ತೆ, ಸ್ವಲ್ಪ ದಿನ ತಡ್ಕೊ, ಎಲ್ಲಾ ಸರಿ ಹೋಗುತ್ತೆ. ನಂಗೂ ಮನೆ ಕಟ್ಟೋ ಆಸೆ ಇದೆ..!’
ಈ ತರಹದ ಅದೆಷ್ಟೋ ಕಾನ್ವರ್ಸೇಶನ್ ಪ್ರತಿ ಮನೆಯಲ್ಲೂ ನಡೆಯುತ್ತೆ. ಮಿಡ್ಲ್ ಕ್ಲಾಸ್ ಮನೆಗಳಲ್ಲಂತೂ ಇದೆಲ್ಲಾ ಪ್ರತಿದಿನದ ಕತೆ..! ಯಾರದಾದ್ರೂ ಮನೆಯ ಗೃಹಪ್ರವೇಶಕ್ಕೆ ಹೋಗಿ ಬಂದ ದಿನ, ಗಂಡನ ಪಾಲಿಗೆ ಕರಾಳ ದಿನ..! `ನೋಡ್ರಿ ಅವ್ರೂ ಮನೆ ಕಟ್ಟುದ್ರು, ನೀವಿನ್ನೂ ನಾಳೆ ನಾಳೆ ಅಂತ ಕಾಗೆ ಹಾರಿಸ್ತಾನೇ ಇದೀರ..! ನಿಮ್ಮುನ್ ಕಟ್ಕೊಂಡ್ ದೊಡ್ಡ ತಪ್ಪು ಮಾಡ್ಬಿಟ್ಟೆ ನಾನು’ ಅಂತ ಮಾತು ಶುರುಮಾಡಿದ ಅವಳು ಮನಸ್ಸು ಮುರಿದು ಹೋಗೋ ತನಕ ಮಾತು ನಿಲ್ಲಿಸಲೇ ಇಲ್ಲ..! ಅವನು ಮನೆಯೊಂದ ಹೊರಗೆ ಹೊರಟೋನು ತಲುಪಿದ್ದು ಅವನ ಏರಿಯಾದ ಬಾರ್..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಯಾಕೆ ಹೀಗೆ..? ಈ ಮನೆ ಅನ್ನೋ ಕಾನ್ಸೆಪ್ಟು ಅದೆಷ್ಟೋ ಸಂಸಾರಗಳಿಗೆ ಯಾಕೆ ಶಾಪವಾಗಿದೆ..? ಅಷ್ಟಕ್ಕೂ ಈ ಮನೆಯಲ್ಲಿದೆ..? ಮನಸ್ಸು ನೋಯಿಸಿ ಮನೆ ಮಾಡೋ ಹಠ ಅದ್ಯಾಕೆ ಈ ಹೆಣ್ಣುಮಕ್ಕಳಿಗೆ..? ಅವರ್ಯಾಕೆ `ಬೇಕೇ ಬೇಕು, ಮನೆ ಬೇಕು’ ಅಂತ ರಚ್ಚೆ ಹಿಡೀತಾರೆ..? ಅಂತಹ ಟೈಮಲ್ಲಿ ಗಂಡನಾದವನು ಏನು ಮಾಡಬೇಕು..? ಉತ್ತರವಿಲ್ಲದ ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡೋ ಪ್ರಯತ್ನ ಈ ಲೇಖನ..!
ಅಷ್ಟಕ್ಕೂ ಈ ಮನೆ ಬೇಕಾಗಿರೋದು ಆಶ್ರಯ ಪಡೆಯೋಕೆ, ನೆಮ್ಮದಿಯ ಜೀವನ ನಡೆಸೋಕೆ, ನಮ್ಮದು ಅಂತ ಹೆಮ್ಮೆಯಿಂದ ಬೀಗೋಕೆ..! ಆದ್ರೆ ಮನೆ ಅನ್ನೋದು ಯಾವಾಗ ಪ್ರತಿಷ್ಟೆಯ ವಿಷಯವಾಗುತ್ತೋ, ಅಲ್ಲಿಂದ ಶುರುವಾಗುತ್ತೆ ನೋಡಿ ಕಿರಿಕ್..! ಅವಳಿಗೆ ಮನೆ ಬೇಕೇಬೇಕು, ಇವನಿಗೆ ನೆಮ್ಮದಿಯ ಜೀವನ ನಡೆದ್ರೆ ಸಾಕು..! ಅವಳು ಹೇಳೋದು ಇವನಿಗೆ ಅರ್ಥವಾದ್ರೂ ಏನೂ ಮಾಡಕ್ಕಾಗಲ್ಲ, ಇವನು ಹೇಳೋದು ಅವಳು ಅದ್ಯಾವತ್ತೂ ಕೇಳಿಸಿಕೊಳ್ಳೋಕೇ ರೆಡಿ ಇಲ್ಲ..! ಇನ್ನೇನಾಗುತ್ತೆ..? ಮನೆ ಮನೆ ಅಂತ ಶುರುವಾಗೋ ಜಗಳ ಮನೆಯ ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತೆ..! ಹಾಗಂತ ಗಂಡನಾದವನಿಗೆ ಮನೆ ಕಟ್ಟೋ ಮನಸ್ಸೇ ಆಗೋದಿಲ್ವಾ..? ಅವನಿಗೂ ಮನೆ ಕಟ್ಟಬೇಕು, ನನ್ನ ಹೆಂಡತಿ ಮಕ್ಕಳ ಜೊತೆ ಖುಷಿಯಾಗಿರಬೇಕು ಅಂತ ಆಸೆ ಇರಲ್ವಾ..? ತನ್ನ ಹೆಂಡತಿಯನ್ನು ಗೃಪ್ರವೇಶದ ದಿನ ರಾಣಿಯಂತೆ ಮೆರೆಸಬೇಕು ಅಂತ ಆಸೆ ಇರಲ್ವಾ..? ಖಂಡಿತ ಇರುತ್ತೆ.. ಆದ್ರೆ,…
ಆದ್ರೆ ಅದಷ್ಟು ಸುಲಭವಲ್ಲ ಅನ್ನೋದು ಅವನಿಗೆ ಗೊತ್ತಿರುತ್ತೆ..! ಅದೊಂದು ಕಮಿಟ್ಮೆಂಟ್ ಅವನನ್ನು ಎಂತಹ ಕೆಟ್ಟ ಪರಿಸ್ಥಿತಿಗೆ ಕರ್ಕೊಂಡು ಹೋಗಿ ನಿಲ್ಲುಸುತ್ತೆ ಅನ್ನೋದು ಅವನಿಗೆ ಗೊತ್ತಿರುತ್ತೆ. ಸಾಲ ಮಾಡಿ ಮನೆ ಕಟ್ಟಿ ಗೃಹಪ್ರವೇಶದ ದಿನ ಸಂಭ್ರಮಿಸಿಬಿಡಬಹುದು, ಆದ್ರೆ ಅದಾದ ಮೇಲೆ ಪ್ರತಿದಿನವೂ ಸಾಲದ ಶೂಲ ಚುಚ್ಚುವ ಹೊಡೆತಕ್ಕೆ ಸಂಸಾರವೇ ಬೀದಿಗೆ ಬಂದುಬಿಡಬಹುದು ಅನ್ನೋ ಭಯ ಅವನಿಗಿರುತ್ತೆ..! ತನ್ನ ಕೈಲಿ ಎಷ್ಟು ಸಾಧ್ಯ ಅನ್ನೋದು ಅವನಿಗೆ ಗೊತ್ತಿರುತ್ತೆ, ಅಪ್ಪಿತಪ್ಪಿ ಧೈರ್ಯ ಮಾಡಿ ಮನೆ ಕಟ್ಟುವ ಕೆಲಸಕ್ಕೆ ಕೈಹಾಕಿದ ಮೇಲೆ ಅರ್ಧಕ್ಕೇ ನಿಂತುಬಿಟ್ಟರೆ ಅನ್ನೋ ಭಯ ಇರುತ್ತೆ. ಈಗಿರುವ ಸಂತೋಷವನ್ನೂ ಆ ಮನೆ ನುಂಗಿಹಾಕಿಬಿಟ್ಟರೆ ಏನು ಮಾಡೋದು ಅನ್ನೋ ಆತಂಕ ಇರುತ್ತೆ..! ಅದಕ್ಕೇ ಅವನು ನೂರು ಸಲ ಯೋಚನೆ ಮಾಡಿರ್ತಾನೆ..!
ಎರಡು ಉದಾಹರಣೆಗಳನ್ನು ಕೊಡ್ತೀನಿ ಕೇಳಿ. ಕಿರಣ್ ಮತ್ತು ಸುಶಾಂತ್ ಇಬ್ಬರೂ ಫ್ರೆಂಡ್ಸ್ 20 ವರ್ಷಗಳಿಂದ..! ಇಬ್ಬರೂ ಮೂಲತಃ ದಾವಣಗೆರೆಯವರು, ಈಗ ಬೆಂಗಳೂರಿನಲ್ಲಿ ಕೆಲಸ. ಇಬ್ಬರೂ ಇಷ್ಟಪಟ್ಟ ಹುಡುಗಿಯ ಜೊತೆಗೆ ಮದುವೆಯಾಗಿ ನೆಮ್ಮದಿಯ ಜೀವನ ನಡೆಸ್ತಿದ್ರು..! ಆದ್ರೆ ಇಬ್ಬರಿಗೂ ಗೊತ್ತಿರೋ ಸ್ನೇಹಿತನ ಮನೆಯ ಗೃಹಪ್ರವೇಶಕ್ಕೆ ಸುಶಾಂತ್ ಹಾಗೂ ಕಿರಣ್ ತಮ್ಮ ಹೆಂಡತಿಯರನ್ನು ಕರ್ಕೊಂಡು ಹೋಗಿದ್ರು. ಆ ಮನೆ ಗೃಹಪ್ರವೇಶ ಇವರಿಬ್ಬರ ಪಾಲಿಗೆ ಅದೆಂತಹಾ ನೆಮ್ಮದಿ ಕೆಡಿಸಬಹುದು ಅಂತ ಅವರು ಯೋಚನೇನೇ ಮಾಡಲಿಲ್ಲ..! ನಿಮ್ಮ ಜೊತೆಗೇ ಓದಿದವನು ಮನೆ ಕಟ್ಟಿದಾನೆ, ನೀನಿನ್ನೂ ಬಾಡಿಗೆ ಮನೆಯಲ್ಲೇ ಸಾಯಿಸ್ತಾ ಇದಿಯ ಅಂತ ಇಬ್ಬರ ಮನೆಯಲ್ಲೂ `ಮನೆ ಜಗಳ’ ವಿಕೋಪಕ್ಕೆ ಹೋಗಿತ್ತು..! ಕಿರಣ್ ಹಾಗೂ ಸುಶಾಂತ್ ಇನ್ನರಿಗೂ ತಲಾ 40 ಸಾವಿರ ಸಂಬಳ..! ಲೋನ್ ಮಾಡಿ ಮನೆ ಕಟ್ಟೋದು ಕಷ್ಟದ ಮಾತಲ್ಲ, ಆದ್ರೆ ಮನೆ ಅನ್ನೋ ಒಂದೇ ಒಂದು ಕಾರಣಕ್ಕೆ ಉಳಿದ ಸಂತೋಷವೆಲ್ಲಾ ಸತ್ತುಹೋಗುತ್ತೆ ಅನ್ನೋ ಭಯ ಇಬ್ಬರಿಗೂ ಇತ್ತು..! ಸುಶಾಂತ್ ತನ್ನ ಹೆಂಡತಿ ಕೊಡ್ತಿದ್ದ ಟಾರ್ಚರ್ ತಡ್ಕೊಳೋಕಾಗದೇ ಮನೆ ತಗೊಳೋಕೆ ಒಪ್ಪಿಕೊಂಡ. ಆಯ್ತು ತಗೋತೀನಿ, ಆದ್ರೆ ನಾನು ನೀನು ತಿಂಗಳಿಗೆ ಎರಡು ಮೂರು ಸಿನಿಮಾ ನೋಡೋಕಾಗಲ್ಲ, ಹೋಟೆಲ್ ಗೆ ಹೋಗೋದು ಕಟ್. ಟ್ರಿಪ್, ಟೂರ್ ಎಲ್ಲಾ ಇಂಪಾಸಿಬಲ್..!’ ಅಂತೆಲ್ಲ ಅವಳಿಗೆ ಬಿಡಿಸಿ ಹೇಳ್ದ..! ಅವಳಿಗೆ ಅವನು ಒಪ್ಪಿದ್ದೇ ದೊಡ್ಡ ವಿಷಯ ಅಂತ ಎಲ್ಲದಕ್ಕೂ ತಲೆ ಆಡಿಸಿದ್ಲು..! ಒಂದು ಫ್ಲ್ಯಾಟ್ ಇಬ್ಬರಿಗೂ ಇಷ್ಟವಾಯ್ತು, ಅದನ್ನು ತಗೊಳೋಣ ಅಂತ ಡಿಸೈಡ್ ಮಾಡ್ದ..! ಅದರ ಬೆಲೆ 40 ಲಕ್ಷ..! `ನಿಮ್ಮ ಸಂಬಳಕ್ಕೆ ಮ್ಯಾಕ್ಸಿಮಂ 25 ಲಕ್ಷ ಲೋನ್ ಆಗುತ್ತೆ’ ಅಂದ್ರು ಬ್ಯಾಂಕಿನವರು..! ಉಳಿದ 15 ಲಕ್ಷ ಸ್ನೇಹಿತರು, ನೆಂಟರು ಅಂತ ಕಾಡಿಬೇಡಿ ಕಲೆಕ್ಟ್ ಮಾಡ್ದ..! ಯೆಸ್, ಅವರದೀಗ ಸ್ವಂತ ಮನೆ..! ಅದರ ಗೃಹಪ್ರವೇಶವೂ ಭರ್ಜರಿಯಾಗೇ ನಡೀತು.. ಅಲ್ಲಿಗೆ ಬಂದಿದ್ದ ಕಿರಣ್ ಮತ್ತು ಅವನ ಪತ್ನಿ ಶುಭಕೋರಿ ಮನೆಗೆ ಬಂದಮೇಲೆ, ಮತ್ತೆ `ಮನೆ ಜಗಳ’ ಜೋರಾಗಿತ್ತು.. ಆದ್ರೆ ಕಿರಣ್ ಮಾತ್ರ ಧೃಡನಿರ್ಧಾರ ಮಾಡಿದ್ದ. ನನ್ನಿಂದ ಸಾಧ್ಯ ಅಂತ ಅನ್ನಿಸೋವರೆಗೂ ಮನೆಕಟ್ಟೋ ಮತೇ ಇಲ್ಲ, ಕಷ್ಟವೋ, ಸುಖವೋ ಬಾಡಿಗೆ ಮನೆಯಲ್ಲೇ ಅಡ್ಜಸ್ಟ್ ಮಾಡ್ಕೊ ಅಂತ ಹೇಳಿ ಹೊರಗೆ ಹೋಗ್ತಿದ್ದ..! ಈ ಕಡೆ ಸುಶಾಂತ್ ಮನೆಯಲ್ಲಿ ಹೊಸ ಸಮಸ್ಯೆಗಳು ಶುರುವಾಯ್ತು. ಎಲ್ಲಾ ಸ್ನೇಹಿತರು ಸಿನಿಮಾಗೆ ಹೊರಟ್ರೆ ಸುಶಾಂತ್ ಫ್ಯಾಮಿಲಿ ಆಬ್ಸೆಂಟ್, ಟ್ರಿಪ್ ಅಂತ ಮಾತಾಡಿದ್ರೆ ಅವರಿಂದ ಆನ್ಸರ್ರೇ ಇಲ್ಲ..! ಅವರ ಜೀವನದ ಸಂತೋಷಗಳು ಮನೆಯ ಜೊತೆಗೇ ಸತ್ತುಹೋಗಿತ್ತು..! ಬರ್ತಿದ್ದ 40 ಸಾವಿರದಲ್ಲಿ 30 ಸಾವಿರ ಮನೆಸಾಲದ ಕಂತಿಗೆ ಹೋಗ್ತಿತ್ತು..! ರೇಶನ್ ತಂದು, ಪೆಟ್ರೋಲ್ ಹಾಕಿಸಿ, ಕರೆಂಟ್ ಬಿಲ್, ಪೇಪರ್ ಬಿಲ್, ಮಿಲ್ಕ್ ಬಿಲ್, ಕೇಬಲ್ ಬಿಲ್, ವಾಟರ್ ಬಿಲ್ ಕಟ್ಟೋ ಟೈಮಿಗೆ ಆಫೀಸ್ ಫ್ರೆಂಡ್ಸ್ ಹತ್ತಿರ ಕನಿಷ್ಟ ಐದಾರು ಸಾವಿರ ಸಾಲ ಆಗಿರೋದು..! ಈ ಕಡೆ ಹೆಂಡತಿಯ ಹೊಸ ಖ್ಯಾತೆ ಶುರುವಾಗಿತ್ತು..! `ಒಂದು ಫಿಲ್ಮ್ ನೋಡಿ ಅಷ್ಟ್ ದಿನ ಆಯ್ತು, ಡೋಮಿನಾಸ್ ಇರೋ ರೋಡಲ್ಲಿ ಹೋಗಿ ತಿಂಗಳಾಯ್ತು’ ಅಂತ..! ಟೋಟಲಿ ಆ ಮನೆ ಅವನ ನೆಮ್ಮದಿ ಕೆಡಿಸಿತ್ತು..! ಆರು ತಿಂಗಳಾಗೋದ್ರೊಳಗೆ ಫ್ರೆಂಡ್ಸ್, ಫ್ಯಾಮಿಲಿಯವರು ಕೊಟ್ಟ ದುಡ್ಡು ವಾಪಸ್ ಕೇಳೋಕೆ ಶುರು ಮಾಡಿದ್ರು..! ಸುಶಾಂತ್ ಲೈಫ್ ಸಂಕಷ್ಟಕ್ಕೆ ಬಿದ್ದಿತ್ತು..! ಸಾಲದವರನ್ನು ಮ್ಯಾನೇಜ್ ಮಾಡೋಕೆ ಬಡ್ಡಿಕೊಡ್ತೀನಿ ಅಂತ ಒಪ್ಪಿಕೊಂಡ. ಬಡ್ಡಿ ಕಟ್ಟೋಕೆ ಹೋಗಿ ಆ ಕಡೆ ಬ್ಯಾಂಕಿನ ಕಂತುಗಳ ಚೆಕ್ ಬೌನ್ಸ್ ಆಗೋಕೆ ಶುರುವಾಯ್ತು..! ಅವನ ಲೈಫ್ ಇನ್ನಿಲ್ಲದಂತೆ ಟ್ರ್ಯಾಕ್ ಬಿಟ್ಟು ಹೋಗಿತ್ತು..! ಈ ಕಷ್ಟ ನೋಡೋಕೆ ಸಾಧ್ಯ ಆಗದೇ ಅವನ ಹೆಂಡತಿ ಮನೆಬಿಟ್ಟು ಅವರಮ್ಮನ ಮನೆಗೆ ಹೋಗಿಬಿಟ್ಲು..! ಅವನು ಇವತ್ತಿಗೂ ಸಾಲದ ಶೂಲದಲ್ಲಿ ಬಿದ್ದು ಒದ್ದಾಡ್ತಾ ಇದ್ದಾನೆ..!
ಈ ಕಡೆ ಕಿರಣ್ ಹೆಂಡತಿಯ ಮಾತಿಗೆ ಕಿವಿಗೊಡದೇ ಅವಳನ್ನು ಸರಿಯಾಗಿ ಮನವೊಲಿಸಿ ಬಾಡಿಗೆ ಮನೆಯಲ್ಲಿದ್ದರೂ ನೆಮ್ಮದಿಯ ಬದುಕು ಸಾಗಿಸ್ತಾ ಇದ್ದಾನೆ..! ಇತ್ತೀಚೆಗೆ 10 ಲಕ್ಷ ಬ್ಯಾಂಕ್ ಲೋನ್ ಮಾಡಿ ಸಿಟಿಯ ಹೊರಭಾಗದಲ್ಲಿ ಒಂದು ಸೈಟ್ ತಗೊಂಡಿದ್ದಾನೆ.. ಇನ್ನು ಒಂದೆರೆಡು ವರ್ಷಕ್ಕೆ ಅದಕ್ಕೆ ಇಳ್ಳೇ ರೇಟ್ ಬರುತ್ತೆ, ಅಷ್ಟರಲ್ಲಿ ಸಾಲವೂ ಒಂದಷ್ಟು ತೀರುತ್ತೆ..! ಸಂಬಳವೂ ಸ್ವಲ್ಪ ಜಾಸ್ತಿ ಆಗುತ್ತೆ.. ಆಗ ಆ ಸೈಟ್ ಮಾರಿ ಯಾವ್ದಾದ್ರೂ ಫ್ಲ್ಯಾಟ್ ತಗೋಬಹುದು ಅನ್ನೋ ಪ್ಲ್ಯಾನ್ ಅವನದು..! ಸುಶಾಂತ್ ಲೈಫ್ ನೋಡಿದ ಮೇಲೆ, ಕಿರಣ್ ಪತ್ನಿಗೂ ಗಂಡ ತನ್ನ ಮಾತು ಕೇಳದೇ ಇದ್ದಿದ್ದು ಒಳ್ಳೇದಾಯ್ತು ಅಂತ ಅನ್ನಿಸ್ತು..!
ಈ ಸ್ಟೋರಿ ಕೇಳಿದ ಮೇಲೆ ನಿಮಗೂ ಅರ್ಥವಾಗಿರುತ್ತೆ. ಮನೆ ಅನ್ನೋದು ಪ್ರತಿಯೊಬ್ಬರ ಕನಸು. ಆದ್ರೆ ಅದು ಸುಲಭದ ಕನಸಲ್ಲ..! ಅದಕ್ಕೆ ಸಾಕಷ್ಟು ಶ್ರಮ ಬೇಕು, ಲೈಫಲ್ಲಿ ತುಂಬಾ ಸ್ಯಾಕ್ರಿಫೈಸ್ ಮಾಡ್ಬೇಕು. ಅದಕ್ಕೆಲ್ಲಾ ರೆಡಿ ಇರಬೇಕು..! ನಮ್ಮ ಕೈಲಿ ಸಾಧ್ಯಾನಾ ಅನ್ನೋದು ಅರ್ಥ ಮಾಡ್ಕೋಬೇಕು..! ಆಗಿದ್ದಾಗ್ಲಿ ಅಂತ ಕೈ ಹಾಕಿದ್ರೆ ಸುಶಾಂತ್ ಲೈಫಿಗಿಂತ ನಿಮ್ಮದೇನೂ ಭಿನ್ನವಾಗಿರಲ್ಲ..! ಹಾಗಂತ ಮನೆ ಕಟ್ಟೋದೇ ತಪ್ಪಾ ಅಂತ ಕೇಳಬಹುದು, ಇದನ್ನು ಓದಿದ ಹೆಂಡತಿಯರಂತೂ ಚೆನ್ನಾಗಿ ಬೈಕೋಬಹುದು..! ಆದ್ರೆ ಸತ್ಯ ಕಹಿಯೇ ಅಲ್ವಾ..? ಏನೂ ಮಾಡೋಕಾಗಲ್ಲ… ಲೈಫಲ್ಲಿ ಸರಿಯಾಗಿ ಪ್ಲ್ಯಾನ್ ಮಾಡಿ, ಹಣ ಉಳಿಸಿ, ನಿಮ್ಮದೇ ಅಂತ ಕನಿಷ್ಟ 25-30% ಹಣ ನಿಮ್ಮ ಕೈಲಿರಲಿ. ಸಾಲ ಮಾಡಿದ ಮೇಲೆ ಹೇಗೋ ಆಗುತ್ತೆ ಅನ್ನೋ ಯೋಚನೆ ಕಿತ್ತುಹಾಕಿ..! ಕರ್ನಾಟಕದಲ್ಲಿ ಈಗ ಲಾಟರಿಯೂ ಇಲ್ಲ, ಬೈ ಚಾನ್ಸ್ ಲಾಟರಿ ಹೊಡೀಬೋದು ಅಂತ ಅನ್ಕೊಳೋಕೆ..! ಕಷ್ಟಪಟ್ಟರಷ್ಟೇ ದುಡ್ಡು, ಉಳಿತಾಯ ಮಾಡಿದರಷ್ಟೇ ಮನೆ..! ವಾರಕ್ಕೊಂದು ಸಿನಿಮಾನೂ ನೋಡ್ಬೇಕು, ಹೋಟೆಲ್ ಊಟ ಬೇಕೇಬೇಕು, ಶಾಪಿಂಗ್ ಮಾಡದಿದ್ರೇ ಲೈಫೇ ಇಲ್ಲ, ತಿಂಗಳಿಗೆ ಒಂದಾದ್ರೂ ಟ್ರಿಪ್ ಮಾಡಿಲ್ಲ ಅಂದ್ರೆ ಅದೊಂದು ಜೀವನಾನಾ ಅಂತೆಲ್ಲಾ ಯೋಚನೆ ಮಾಡೋರು ಯಾವತ್ತೂ ಮನೆಕಟ್ಟೋ ಯೋಚನೆ ಮಾಡಬೇಡಿ..! ನಿಮ್ಮ ಕೈಲಿ ಲಕ್ಷಾಂತರ ರೂಪಾಯಿ ಸೇವಿಂಗ್ಸ್ ಇದ್ರೆ, ನೋ ಪ್ರಾಬ್ಲಂ..! ಈಗಲೇ ಮನೆ ಕಟ್ಟೋಕೆ ಶುರು ಮಾಡಿ. ಇಲ್ಲದಿದ್ರೆ ಮೊದಲು ಖರ್ಚು ಬಿಡಿ, ಕಾಂಪ್ರಮೈಸ್ ಆಗಿ, ಗಂಡನಿಗೆ ನೆಮ್ಮದಿಯಾಗಿ ದುಡಿಯೋಕೆ ಬಿಡಿ..! ಇಲ್ಲದಿದ್ರೆ ಮನೆ ಮಾಡೋ ಯೋಚನೇನೆ ಬಿಟ್ಟುಬಿಡಿ..!
ಗಂಡನಾದವನಿಗೆ ತಿಂಗಳ ಬಾಡಿಗೆ, ಚೀಟಿ, ಕಾರ್ ಲೋನ್, ರೇಶನ್, ಕರೆಂಟ್ ಬಿಲ್, ನಿಮ್ಮ ಬಟ್ಟೆಬರೆ ಹೀಗೆ ನೂರು ಯೋಚನೆಗಳಿರುತ್ತೆ..! ಅದೆಲ್ಲಾ ಆದಮೇಲೂ ಕೈಯಲ್ಲಿ ದುಡ್ಡು ಉಳಿದ್ರೆ ಅದನ್ನು ಸೇವಿಂಗ್ಸ್, ಇನ್ಷೂರೆನ್ಸ್ ಅದು ಇದು ಅಂತ ಲೆಕ್ಕಾಚಾರ ಹಾಕಬೇಕು..! ನಿಜಾ ಅಲ್ವಾ..? ಗಂಡನಾದವನಿಗೆ ಹೆಂಡತಿ ಮಕ್ಕಳನ್ನು ಖುಷಿಯಾಗಿಡೋದೇ ಪರಮೋಚ್ಛ ಕರ್ತವ್ಯ…! ಹಾಗಂತ ಪ್ರತಿಷ್ಟೆಯ ಖುಷಿಗೆ ಸಂಸಾರ ಬೀದಿಗೆ ಬರಬಾರದು..! ಇದ್ದಿದ್ರಲ್ಲೇ ಎಂಜಾಯ್ ಮಾಡಿ, ಸ್ವಲ್ಪ ಕಾಂಪ್ರಮೈಸ್ ಆಗಿ.. 100% ನಿಮ್ಮ ಗಂಡ ನಿಮಗೊಂದು ಚೆಂದದ ಮನೆಮಾಡಿ ರಾಣಿ ಹಾಗೆ ನೋಡ್ಕೋತಾರೆ..! ಸಂತೋಷ ಅನ್ನೋದು ಮನೆಯಲ್ಲಿರಬೇಕು. ಅದು ಸ್ವಂತ ಮನೆಯಾಗಲಿ, ಬಾಡಿಗೆ ಮನೆಯಲ್ಲಾಗಲಿ..! ನೆಮ್ಮದಿ ಇಲ್ಲದಿದ್ರೆ ಮನೆ ಅಲ್ಲ, ಅರಮನೆಯಲ್ಲೂ ಬದುಕೋದು ಕಷ್ಟ..! ಪ್ರತಿಷ್ಟೆ ಪಕ್ಕಕ್ಕಿಡಿ, ಪ್ರೀತಿ ಕೊಟ್ಟು ನೋಡಿ. ಭಗವಂತನ ಇಚ್ಛೆ ಇದ್ದರೆ ಇವತ್ತಲ್ಲಾ ನಾಳೆ ಎಲ್ಲರಿಗಿಂತ ಬ್ಯೂಟಿಫುಲ್ ಮನೆ ನೀವೂ ಕಟ್ತೀರಿ, ನಮ್ಮನ್ನೂ ಗೃಹಪ್ರವೇಶಕ್ಕೆ ಕರೀತೀರಿ..! ನಿಮ್ಮ ಮನೇಲೂ `ಮನೆ ಜಗಳ’ ನಡೀತಿದ್ರೆ, ಇದನ್ನು ಓದಿದ ಮೇಲಾದ್ರೂ ಸುಮ್ಮನಾಗಿಬಿಡಿ ಪ್ಲೀಸ್..!

– ಕೀರ್ತಿ ಶಂಕರಘಟ್ಟ

LEAVE A REPLY

Please enter your comment!
Please enter your name here