ಉಪೇಂದ್ರ ಫಿಲ್ಮೀ ಬದುಕು ಹೇಗೆಲ್ಲಾ ಇತ್ತು..!? ಸಕ್ಸಸ್ ಅನ್ನೋದು ಸುಮ್ಮನೆ ಸಿಕ್ಕಿಬಿಡಲ್ಲ..!

Date:

ಅವತ್ತು ಅವರ ಅವತಾರ ನೋಡಿ ಇವನ್ಯಾರೋ ಲೂಸು, ಹಿಂಗೆಲ್ಲಾ ಮನಸ್ಸಿಗೆ ಬಂದಹಾಗೆ ಮಾಡ್ತಾನೆ, ಮೆಂಟಲ್ ಗಿರಾಕಿ ಅಂತೆಲ್ಲಾ ಬೈಕೊಂಡ್ರು..! ಇವತ್ತು ಅದೇ ಜನ ಅವರ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಅಂತ ಕಾಯ್ತಿದ್ದಾರೆ..! ಏನೂ ಅಲ್ಲದ ಉಪೇಂದ್ರ ಇವತ್ತು ರಿಯಲ್ ಸ್ಟಾರ್ ಉಪ್ಪಿ..! ಅವರ ಅಭಿಮಾನಿಗಳ ಪಾಲಿಗೆ ಯಾವತ್ತೂ ಸೂಪರ್ ಸ್ಟಾರ್ ಈ ರಿಯಲ್ ಸ್ಟಾರ್..!
ಕಾಶೀನಾಥ್ ಫಿಲ್ಮಿ ಫ್ಯಾಮಿಲಿಯಿಂದ ತುಂಬಾ ಜನ ಪ್ರತಿಭೆಗಳು ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಬಂದಿದ್ದಾರೆ, ಕೆಲವರು ಬಂದಿದ್ದಾರೆ, ಕೆಲವರು ಬಂದು ಹೋಗಿದ್ದಾರೆ, ಇನ್ನು ಕೆಲವರು ಬಂದು ಉಳಿದಿದ್ದಾರೆ, ಆದ್ರೆ ಇವರು ಮಾತ್ರ ಬಂದು ಸೂಪರ್ ಸ್ಟಾರ್ ಆಗಿದ್ದಾರೆ..! ಅದು ಹಸಿವು, ಅನ್ನದ ಹಸಿವಿಗಿಂತ ಜಾಸ್ತಿ ಸಿನಿಮಾದ ಹಸಿವು..! ಅದೇ ಹಸಿವು ಇವತ್ತು ಅವರ ಈ ಮಹಾನ್ ಸಾಧನೆಗೆ ಕಾರಣವಾಗಿರೋದು..! ಕೈ ತೋರಿಸಿ `ಇವನೇನು’ ಮಾಡ್ತಾನೆ ಅಂದವರ ಎದುರೇ `ಇವನೇನೋ ಮಡಿಬಿಟ್ಟ’ ಅಂತ ಹೇಳಿಸಿಕೊಳ್ಳೋಕೆ ಅದೆಂತಾ ತಾಕತ್ತಿರಬೇಕು ಗೊತ್ತಾ..? ಅದು ಉಪ್ಪಿಗೆ ಇತ್ತು, ಇದೆ, ಇರುತ್ತೆ…! ಕಾಶೀನಾಥ್ ಹತ್ತಿರ ಉಪ್ಪಿ ಬಂದು ಸೇರಿಕೊಂಡಾಗ, ಮುಂದೊಂದು ದಿನ ಉಪೇಂದ್ರ ಹಿಂಗೆಲ್ಲಾ ಆಗಿಬಿಡ್ತಾರೆ ಅಂತ ಸ್ವತಃ ಕಾಶೀನಾಥ್ ಸಹ ಅನ್ಕೊಂಡಿರ್ಲಿಲ್ಲ ಅನ್ಸುತ್ತೆ, ಆದ್ರೆ ನೋಡನೋಡ್ತಿದ್ದ ಹಾಗೇ ಸಿನಿಮಾದ ರೇಸಲ್ಲಿ ತಾನೇ ಕಿಂಗ್ ಅಂತಿದ್ದವರನ್ನೆಲ್ಲಾ ಆಮೆಯ ಹಾಗೆ ತನ್ನ ಅದ್ಭುತ ಪ್ರತಿಭೆಯಿಂದ ಹಿಂದೆಹಾಕಿ ಇವತ್ತು ತಮ್ಮದೇ ಅಭಿಮಾನಿ ಸಾಮ್ರಾಜ್ಯ ಕಟ್ಟಿಕೊಂಡಿರೋ ಉಪ್ಪಿಗೆ ಬಹುಪರಾಕ್..!
ಅವತ್ತು ಉಪ್ಪಿ ಅಂದ್ರೆ ಏನೂ ಅಲ್ಲ, ಏನೇನೂ ಅಲ್ಲ..! ಅವರು, ಅವರ ಸ್ಟೈಲು, ಅವರ ಗೆಟಪ್ಪು..! ಶಿವಶಿವಾ ನೆನಸ್ಕೊಂಡ್ರೆ ಇದು ಅದೇ ಉಪ್ಪೀನಾ ಅಂತ ಡೌಟ್ ಶುರುವಾಗುತ್ತೆ..! ಆನಂತನ ಅವಾಂತರ ಸಿನಿಮಾದಲ್ಲಿ ಕಾಮಣ್ಣನ ವೇಷದಲ್ಲಿ ಉಪೇಂದ್ರನ್ನ ನೋಡಿದವರು ಈಗಿನ ಉಪ್ಪಿ ಇವರೇ ಅಂದ್ರೆ `ಹುಚ್ಚು ಹಿಡಿದರಬೇಕು ನಿಮಗೆ’ ಅಂತ ನಿಮ್ಮನ್ನು ನೋಡೋಕೆ ಶುರು ಮಾಡ್ತಾರೆ. ಹಂಗಿದ್ರು ಉಪೇಂದ್ರ,.! ಆದ್ರೆ ತನ್ನ ಸಿನಿಮಾ ಬದುಕಿನ ಜೊತೆಜೊತೆಗೆ ತನ್ನನ್ನೂ ಟ್ಯೂನ್ ಮಾಡಿಕೊಂಡೇ ಬಂದ ಉಪ್ಪಿ, ಇವತ್ತು ಉಪ್ಪಿಟು ಬಡಿಸೋಕೆ ರೆಡಿಯಾಗಿದ್ದಾರೆ, ಅದಕ್ಕೆ ಇಡೀ ರಾಜ್ಯ ಮಾತ್ರವಲ್ಲದೇ, ಪಕ್ಕದ ಆಂಧ್ರ ತೆಲಾಂಗಣ ಸಹ ಕಾಯ್ತಾ ಇದೆ..! ‘ಶ್’ ಸಿನಿಮಾದಲ್ಲಿ ಆಕ್ಟಿಂಗ್ ಚಾನ್ಸ್ ಗೋಸ್ಕರ ಪೊಲೀಸ್ ಆಫೀಸರ್ ತರ ಬರೋ ಉಪೇಂದ್ರ ಇವತ್ತು ಅವರ ಸುತ್ತ ನೂರಾರು ಜನರಿಗೆ ಚಾನ್ಸ್ ಕೊಟ್ಟಿದ್ದಾರೆ, ಬೆಳೆಸ್ತಿದ್ದಾರೆ..! ಅವತ್ತು ಸಾಥ್ ಕೊಟ್ಟ ಕಾಶೀನಾಥ್, ಮನೋಹರ್, ಕುಮಾರ್ ಗೋವಿಂದ್, ಎಲ್ಲರನ್ನೂ ನೆನಪಿಸಿಕೊಳ್ತಾರೆ ಉಪ್ಪಿ..! ಅವರ ಬಗ್ಗೆ ಇವತ್ತಿಗೂ ಅದೇ ಗೌರವ, ಪ್ರೀತಿ ಇಟ್ಕೊಂಡಿದ್ದಾರೆ..! ಮೊದಲ ಸಿನಿಮಾ ಡೈರೆಕ್ಟ್ ಮಾಡೋಕೂ ಮುಂಚೆ 7-8 ಸಿನಿಮಾಗಳಲ್ಲಿ ಸಾಂಗ್ ರೈಟರ್, ಡೈಲಾಗ್ ರೈಟರ್, ಸ್ಟೋರಿ ರೈಟರ್ ಆಗಿ ಕೆಲಸ ಮಾಡಿದ್ರು ಉಪೇಂದ್ರ..! ಅನಂತನ ಅವಾಂತರದ ಅವರ ಡೈಲಾಗ್ಸ್ ಸಿಕ್ಕಾಪಟ್ಟೆ ಫೇಮಸ್ ಆಗಿಹೋಯ್ತು. ಅಲ್ಲಿಂದ ಉಪ್ಪಿ ತಿರುಗಿ ನೋಡ್ಲಿಲ್ಲ..!
ಉಪ್ಪಿಗೆ ಕಮ್ಮಿ ಬಜೆಟ್ಟಲ್ಲಿ ಒಂದು ಸಿನಿಮಾ ಮಾಡಿಕೊಡಿ ಅಂತ ಬರೋ ಅವಕಾಶ `ತರ್ಲೆ ನನ್ ಮಗ’. `ಸಿನಿಮಾ ಮಾಡ್ಲಾ.?’ ಅಂತ ಗುರುಗಳಾದ ಕಾಶೀನಾಥ್ ಅವರನ್ನು ಕೇಳಿ, ಅವರು ಓಕೆ ಅಂದಾಗ ಕೈಗೆತ್ತಿಕೊಂಡು ಜಗ್ಗೇಶ್ ಅವರ ಜೊತೆ ತಮ್ಮ ಸಿನಿಲೈಫಿಗೊಂದು ಬ್ರೇಕ್ ಕೊಟ್ಟುಕೊಂಡ್ರು..! ಆ ಸಿನಿಮಾದ ಡೈಲಾಗ್ ಗಳು 25 ವರ್ಷವಾದರೂ ಇನ್ನೂ ಎಲ್ಲರ ಬಾಯಲ್ಲಿವೆ..! ಯಾವುದು ಅಂತ ಕೇಳಬೇಡಿ, ಅದು ಹಿಟ್ ಆದ ಲೆವೆಲ್ ಹೇಗಿತ್ತು ಅಂದ್ರೆ, ಇವತ್ತು ಆ ಪದಗಳು ಸೆನ್ಸಾರ್ ಲೀಸ್ಟಿಗೆ ಸೇರುತ್ತವೆ..! ಕಾಮಿಡಿ ಸಿನಿಮಾ ಡೈರೆಕ್ಟ್ ಮಾಡಿ ಗೆದ್ದ ಉಪ್ಪಿ ಕಾಮಿಡಿ ಡೈರೆಕ್ಟರ್ ಅಂತ ಇಂಡಸ್ಟ್ರಿ ಯೋಚನೆ ಮಾಡ್ತಿದ್ರೆ, ಈ ಕಡೆ ಉಪ್ಪಿ ಕುಮಾರ್ ಗೋವಿಂದ್ ಜೊತೆ `ಶ್’ ಸಿನಿಮಾ ಪ್ಲ್ಯಾನ್ ಮಾಡ್ತಿದ್ರು..! ಮೊದಲು ಕಾಮಿಡಿ, ಈಗ ಹಾರರ್..! ಅದೂ ಯರ್ರಾಬಿರ್ರಿ ಹಿಟ್, ಕುಮಾರ್ ಗೋವಿಂದ್ ಜೀವನದ ಸೂಪರ್ ಸಿನಿಮಾ ಅದಾಗಿಹೋಯ್ತು..! ಮುಂದೇನು ಮಾಡ್ತಾರೆ ಉಪೇಂದ್ರ ಅಂತಿದ್ದಾಗ ಬಂತುನೋಡಿ..`ಓಂ’.. ಅಷ್ಟೆ, ಆಮೇಲೆ ನಡೆದಿದ್ದೆಲ್ಲಾ ಈಗ ಹಿಸ್ಟರಿ. ಲವರ್ ಬಾಯ್ ಆಗಿದ್ದ ಶಿವರಾಜ್ ಕುಮಾರ್ ಅವರ ಜೀವನದ ಅತ್ಯಂತ ಹಿಟ್ ಸಿನಿಮಾದ ಹೀರೋ ಆಗಿದ್ರು..! ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅದಢನೋ `ಮುಟ್ಟಿ ನೋಡ್ಕೊಳೋ’ ಸಿನಿಮಾ ಅಂತಾರಲ್ಲ, ಅಂತಹ ಸಿನಿಮಾ ಮಾಡಿದ್ರು ಉಪೇಂದ್ರ..! ಎಲ್ಲೆಲ್ಲೂ `ಓಂ’ಕಾರ. 20 ವರ್ಷವಾದ್ರೂ ಸಹ ಇವತ್ತಿಗೂ ಓಂ ಸಿನಿಮಾ ರೀರಿಲೀಸ್ ಆದ್ರೆ ಹೌಸ್ ಫೂಲ್ ಆಗೋದು ಗ್ಯಾರಂಟಿ..! ಅದಿನ್ನೆಂತಾ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ಇರಬೇಕು ಯೋಚನೆ ಮಾಡಿ..! ಈಗ ಅದರ ಟಿವಿ ರೈಟ್ಸ್ ಹತ್ತು ಕೋಟಿಗೆ ಸೇಲ್ ಆಗಿದೆ ಅಂತ ಅಲ್ಲಲ್ಲಿ ಮಾತು ಕೇಳಿ ಬರ್ತಿದೆ..! ಅದೂ ನಿಜವಾಗಿದ್ದರೆ ಕನ್ನಡ ಸಿನಿಮಾ ಇತಿಹಾಸಲ್ಲಿ ಅತಿಹೆಚ್ಚು ಸ್ಯಾಟಲೈಟ್ ರೇಟ್ ಪಡೆದ ಸಿನಿಮಾ ಓಂ ಆಗುತ್ತೆ.. ಅದರ ಡೈರೆಕ್ಟರ್ ನಮ್ಮ ಉಪೇಂದ್ರ..! ಅದೇ ವರ್ಷ ರಿಲೀಸ್ ಆದ ಅಂಬರೀಷ್ ಅಭಿನಯದ `ಆಪರೇಶನ್ ಅಂತ’ ಸಿನಿಮಾ ಸಹ ಡೈರೆಕ್ಟ್ ಮಾಡಿದ್ರು ಉಪೇಂದ್ರ. ಆ ಸಿನಿಮಾ ` ಕುತ್ತೇ, ಕನ್ವರ್ ನಹೀ, ಕನ್ವರ್ ಲಾಲ್ ಬೋಲೋ’ ಅನ್ನೋ ಡೈಲಾಗು ಅದೆಷ್ಟು ಫೇಮಸ್ ಅಂತ ಹೇಳೋ ಅವಶ್ಯಕತೆ ಇಲ್ಲ..!
ಇದಲ್ಲಾ ಡೈರಕ್ಟರ್ ಆಗಿದ್ದಾಗಿನ ಸ್ಟೋರಿ, ಆದ್ರೆ 1998ರಲ್ಲಿ ಒಂದು ಸಿನಿಮಾ ಮಾಡಿದ ಮೋಡಿ ಇದಿಯಲ್ಲ, ಅದನ್ನು ಇಡೀ ಕರ್ನಾಟಕ ಯಾವತ್ತಿಗೂ ನೆನಪಿಟ್ಟುಕೊಳ್ಳುತ್ತೆ. ಡೈರೆಕ್ಟರ್, ರೈಟರ್, ಸಾಹಿತಿ ಆಗಿದ್ದ ಉಪ್ಪಿ ಹೀರೋ ಆಗಿದ್ರು..! ಇವನಿಗೇನೋ ತಲೆ ಕೆಟ್ಟಿರಬೇಕು ಅಂತ ಎಲ್ಲರೂ ಮಾತಾಡಿಕೊಂಡ್ರು. ಆ ಚಿತ್ರವಿಚಿತ್ರ ಪೋಸ್ಟರ್ಸ್ ನೋಡಿ ಜನಕ್ಕೆ ಹೇಗೆ ರಿಯಾಕ್ಟ್ ಮಾಡಬೇಕು ಅಂತಾನೇ ಗೊತ್ತಾಗಲಿಲ್ಲ..! ಆದ್ರೆ ಖಾಲಿ ಸೀಟುಗಳ ಜೊತೆ ಆರಂಭವಾದ ಅದೆ ಶೋಗಳು ನೋಡನೋಡ್ತಿದ್ದ ಹಾಗೇ ಹೌಸ್ ಫುಲ್ ಆಗಿಬಿಟ್ವು..! ಬುದ್ಧಿವಂತರಿಗೆ ಮಾತ್ರ ಅನ್ನೋ ಟ್ಯಾಗ್ ಲೈನ್ ನೋಡಿ, ದಡ್ಡರೂ ಬುದ್ಧಿವಂತರಂತೆ ಪೋಸ್ ಕೊಡೋಕೋಸ್ಕರ ಸಿನಿಮಾ ಹಾಲ್ ಒಳಗೆ ಕೂತಿದ್ರು..! ಅಧೇ ಸಿನಿಮಾ ತೆಲುಗಿಗೆ ಡಬ್ ಆಗಿ ಅಲ್ಲೂ ನೂರು ದಿನ ಓಡುತ್ತೆ..! `ಎ’ ನೋಡಿ ಕೆಲವರು ಬೈದ್ರು, ಕೆಲವರು ಸೈಲೆಂಟಾದ್ರು, ಮತ್ತೆ ಕೆಲವರು ಇವನೇನೋ ಆಗ್ತಾನೆ ಅಂದ್ರು..! ನೋಡನೋಡ್ತಿದ್ದ ಹಾಗೆ ಉಪೇಂದ್ರ ರಿಯಲ್ ಸ್ಟಾರ್ ಆಫ್ ಕರ್ನಾಟ ಆಗಿಹೋದ್ರು..!
1998ರಲ್ಲಿ ಮತ್ತೆ ಡೈರೆಕ್ಷನ್ ಮಾಡಿದ್ರು. ರಾಘವೇಂದ್ರ ರಾಜ್ ಕುಮಾರ್ ಹೀರೋ ಆಗಿದ್ದ ಸ್ವಸ್ತಿಕ್ ಸಿನಿಮಾ ಹೆಸರು ಮಾಡಿತಾದ್ರೂ ದುಡ್ಡು ಮಾಡೋದ್ರಲ್ಲಿ ಸೋತುಬಿಡ್ತು..! ಆದ್ರೆ ಆಗಿದಾಗ್ಲಿ ಅಂತ ಮತ್ತೆ 1999ರಲ್ಲಿ ಬಣ್ಣ ಹಚ್ಚಿದ ಉಪ್ಪಿಯ ಲೈಫ್ ಟರ್ನ್ ಆಯ್ತು. ಉಪೇಂದ್ರ ಅನ್ನೋ ಒಂದು ಸಿನಿಮಾ ಕನ್ನಡ ಇಂಡಸ್ಟ್ರಿಯನ್ನೇ ಶೇಕ್ ಮಾಡಿಬಿಡ್ತು..! ಹುಚ್ಚ ಹುಚ್ಚ ಅಂತ ಉಪೇಂದ್ರ ಅವರನ್ನ ಬೈಯ್ಯುತ್ತಲೇ ಸಿನಿಮಾನ ಸೂಪರ್ ಹಿಟ್ ಮಾಡಿಬಿಟ್ರು..! ಪ್ರೀತಿಸದೇ ಇರಲು ಸಾಧ್ಯವಾಗದ ಹುಚ್ಚ ಆಗಿಬಿಟ್ರು ಉಪ್ಪಿ..! `ಬೆಳೆಯದಿದ್ರೆ ಬಗಣಿಗೂಟ’ ಎಂಬ ಮಾತು ಉಪ್ಪಿ ಅವರ ಜೀವನಕ್ಕೂ ಅನ್ವಯಿಸ್ತು..! ಬೆಳೆದ ಉಪೇಂದ್ರ ಅವರ ಮುಂದಿನ ದಾರಿ ಅಷ್ಟು ಸುಲಭವಾಗಿರಲಿಲ್ಲ. ಕಲ್ಲುಮುಳ್ಳು ತುಳಿದು ನಡೆಯೋದು ಉಪ್ಪಿಗೆ ಗೊತ್ತಿತ್ತು, ಆದ್ರೆ ಕೆಲವು ವಿಷಸರ್ಪಗಳು ಕಾಲಿಗೆ ಸುತ್ತಿಕೊಂಡಾಗ ಅದನ್ನು ಹೇಗೆ ಎದುರಿಸೋದು ಹೇಗೆ ಅನ್ನೋದು ಕಲಿತಿರಲಿಲ್ಲ ಅನ್ಸುತ್ತೆ, ಕಷ್ವಾವಾದ್ರೂ ಕಚ್ಚಿದ ಹಾವುಗಳೇ ವಾಪಸ್ ಬಂದು ವಿಷ ಎಳೆದುಕೊಂಡು ಹೋಗೋಹಾಗೆ ಮಾಡಿಬಿಟ್ರು ಉಪ್ಪಿ..! ನೋಡನೋಡ್ತಿದ್ದ ಹಾಗೇ ಉಪ್ಪಿಯ ಸುತ್ತ ಅಭಿಮಾನಿಗಳ ಸಾಮ್ರಾಜ್ಯ ಸೃಷ್ಟಿಯಾಯ್ತು..! ಪ್ರೀತ್ಸೆ, ಎಚ್2ಓ, ಹಾಲಿವುಡ್, ರಕ್ತಕಣ್ಣೀರು, ಬುದ್ಧಿವಂತ, ಹೀಗೇ ಹಿಟ್ ಸಿನಿಮಾಗಳು ಉಪೇಂದ್ರ ಬೆನ್ನಿಗೆ ನಿಲ್ಲುತ್ತೆ..! ಅವುಗಳ ಸಪೋರ್ಟ್ ಉಪೇಂದ್ರಾಗೆ ನೂರಾನೆ ಬಲ ಕೊಡುತ್ತೆ..! ಅಷ್ಟು ಹೊತ್ತಿಗಾಗಲೇ ಕರ್ನಾಟಕ ಮತ್ತು ಆಂಧ್ರದ ಜನರಿಗೆ ಉಪೇಂದ್ರ ಅಂದ್ರೆ ನಮ್ಮನೆ ಹುಡುಗ ಅನ್ನೋ ತರ ಆಗೋಗಿರುತ್ತೆ..! ಕಾಂಟ್ರವರ್ಸಿಗಳಿಗೆ ಕಿವಿಗೊಡದೇ ಬರೀ ಎತ್ತರಕ್ಕೇರೋದ್ರಲ್ಲಿ ಬಿಜಿಯಾಗಿದ್ದ ಉಪೇಂದ್ರ 11 ವರ್ಷ ಗ್ಯಾಪ್ ತಗೊಂಡು 2010ರಲ್ಲಿ `ಸೂಪರ್’ ಸಿನಿಮಾ ಡೈರೆಕ್ಟ್ ಮಾಡ್ತಾರೆ. ಅವರ ಭವಿಷ್ಯದ ಭಾರತದ ಕನಸು ಎಲ್ಲರಿಗೂ ಇಷ್ಟವಾಗುತ್ತೆ..! ಸೂಪರ್ ಸ್ಟಾರ್ ಸೂಪರ್ ಹಿಟ್ ಆಗುತ್ತೆ..!
ಅದಾದ ಮೇಲೆ ಉಪ್ಪಿಗೆ ಅವರ ಸಿನಿಮಾಗಳು ಅಷ್ಟಾಗಿ ಸಾಥ್ ಕೊಡೋದಿಲ್ಲ.. ಆದ್ರೂ ಉಪ್ಪಿಯ ಸ್ಟಾರ್ ಪಟ್ಟಕ್ಕೆ ಅಡ್ಡಿ ಬರೋದಿಲ್ಲ..! ಉಪೇಂದ್ರ ಸಿನಿಮಾ ಅಂದ್ರೆ ಕೊಟ್ಟ ದುಡ್ಡಿಗೆ ಮೋಸ ಇರಲ್ಲ ಅನ್ನೋ ನಂಬಿಕೆ ಅವರ ಅಭಿಮಾನಿಗಳಿಗೆ. ಯಾರದೋ ಡೈರೆಕ್ಷನ್ನಲ್ಲಿ ನಾನು ಆಕ್ಟ್ ಮಾಡಿ ಅಭಿಮಾನಿಗಳಿಗೆ ಬೇಕಾದ ಸಿನಿಮಾ ಮಾಡೋಕೆ ಸಾಧ್ಯವಾಗ್ತಿಲ್ಲ ಅನ್ನಸಿದಾಗ ರೆಡಿಯಾಯ್ತು ಉಪ್ಪಿ2 ಸ್ಕ್ರಿಪ್ಟ್..! ಇವತ್ತು ಇಡೀ ಕರ್ನಾಟಕ ಮತ್ತು ಆಂಧ್ರ ಜನತೆ ಉಪ್ಪಿಟ್ಟು ತಿನ್ನೋಕೆ ಕಾಯ್ತಾ ಇದ್ದಾರೆ. ಅದರ ಪೋಸ್ಟರ್ಸ್ ಈಗಾಗಲೇ ಮತ್ತೊಂದು `ಉಪೇಂದ್ರ’ ಸಿನಿಮಾ ಇದು ಅನ್ನೋದನ್ನು ಸಾಭೀತು ಮಾಡ್ತಿವೆ..! ಈ ಜರ್ನಿಯಲ್ಲಿ ಉಪ್ಪಿಗೆ ಪ್ರಿಯಾಂಕ ಅವರ ಜೊತೆ ಮದುವೆಯಾಯ್ತು, ಇಬ್ಬರು ಮುದ್ದಾದ ಮಕ್ಕಳಾಯ್ತು..! ಕಷ್ಟದಾಚೆಗೆ ಬದುಕಿನ ಯುದ್ಧ ಗೆದ್ದು ಅವರದೀಗ `ಲೈಫ್ ಸೂಪರ್ ಗುರೂ’..! ಮುಂದಿನ ವಾರ ಅವರ ಉಪ್ಪಿ2 ಕರ್ನಾಟಕ ಹಾಗೂ ಆಂಧ್ರದಾದ್ಯಂತ ರಿಲೀಸ್ ಆಗ್ತಿದೆ. ಈ ಟೈಮಲ್ಲಿ ಅವರ ಸಿನಿ ಜೀವನದ ಒಂದು ಫ್ಲ್ಯಾಶ್ ಬ್ಯಾಕ್ ನಿಮಗೆ ಹೆಳಬೇಕು ಅನ್ನಿಸ್ತು ಅಷ್ಟೆ..! ಉಪ್ಪಿಗೆ ನಿಮ್ಮ ಕಡೆಯಿಂದಾನೂ ಒಂದು ಆಲ್ ದ ಬೆಸ್ಟ್ ಹೇಳಿಬಿಡಿ…

-ಕೀರ್ತಿ ಶಂಕರಘಟ್ಟ

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...