ಕಲರ್ಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಬಾಲಿಕಾ ವಧು’ ಧಾರಾವಾಹಿಯಲ್ಲಿ ಆನಂದಿ ಪಾತ್ರವನ್ನು ಪ್ರಶಂಸಿಸದವರಿಲ್ಲ. ಪಾತ್ರದಲ್ಲಿ ಮಾತ್ರವಲ್ಲ, ನೋಡುವುದಕ್ಕೂ ಸುಂದರವಾಗಿದ್ದಳು ಪ್ರತ್ಯೂಷ ಬ್ಯಾನರ್ಜಿ. ಇನ್ನೆರಡು ತಿಂಗಳು ಕಳೆದಿದ್ದಿದ್ದರೇ ಗೆಳೆಯ ರಾಹುಲ್ ರಾಜ್ ಸಿಂಗ್ ಜೊತೆ ಅವಳ ವಿವಾಹವಾಗಬೇಕಿತ್ತು. ಅದೇಕೋ ಮುಂಬೈನ ಕಂಡಿವಿಲಿಯ ಬಂಗೂರ್ ನಗರ್ ಫ್ಲಾಟ್ನಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಭವಿಷ್ಯದ ದಂಪತಿಗಳ ನಡುವೆ ಗಲಾಟೆಯಾಗಿತ್ತು, ರಾಹುಲ್ ಅವಳಿಂದ ದೂರವಾಗುವುದಾಗಿ ಹೇಳಿದ್ದ. ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದ ಪ್ರತ್ಯೂಷ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದ್ದರೂ, ಅಸಲಿ ಕಾರಣಗಳು ಪೊಲೀಸರ ತನಿಖೆಯ ನಂತರವಷ್ಟೆ ಸ್ಪಷ್ಟವಾಗಬೇಕಿದೆ. ಈ ಹಂತದಲ್ಲಿ ಚಿಕ್ಕವಯಸ್ಸಿನಲ್ಲಿ ದುರಂತ ಸಾವನ್ನಪ್ಪಿದ ಜಿಯಾಖಾನ್ ನೆನಪಾಗುತ್ತಾಳೆ.
`ಯಾವತ್ತು ನಮಗೆ, ನಮ್ಮದೇ ಆದ ಸಮಯವನ್ನು ಕಳೆಯಲು ಅವಕಾಶ ಸಿಗುವುದಿಲ್ಲವೋ, ಅಂಥ ಸಮಯಕ್ಕಾಗಿ ಹುಡುಕಾಟ ನಡೆಸುತ್ತೇವೆ. ನನಗೂ ನನ್ನ ವಿಚಾರ ಮತ್ತು ಕನಸುಗಳನ್ನು ಈಡೇರಿಸಿಕೊಳ್ಳಲು ಧೀರ್ಘ ಕಾಲದ ರಜೆ ಬೇಕಿದೆ’ ಹೀಗೆ ಕಟ್ಟಕಡೆಯದಾಗಿ ಟ್ವಿಟ್ ಮಾಡಿ ಸತ್ತುಹೋಗಿದ್ದಳು ಜಿಯಾ ಖಾನ್. ಇನ್ನೇನು ಕೈಗೆಟುಕುತ್ತಾಳೆ ಎನ್ನುವಷ್ಟರಲ್ಲಿ ಮುಗಿದು ಹೋದ ಚೆಲುವೆ ಈಕೆ. ತುಂಬಾ ಚಿಕ್ಕ ವಯಸ್ಸು. ಬದುಕಲು ಅರ್ಧ ಶತಮಾನಕ್ಕೂ ಹೆಚ್ಚು ಆಯಸ್ಸಿತ್ತು. ಆದರೆ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಂಡಳು. ಕೊಲೆ ಎಂಬ ಶಂಕೆಯಿಂದ ಶುರುವಾದ ಅವಳ ಸಾವಿನ ನಿಗೂಢಗಳು, ಅಂತಿಮವಾಗಿ ಆತ್ಮಹತ್ಯೆ ಎಂದು ಪೊಲೀಸರು ಮುಚ್ಚಳಿಕೆ ಬರೆಯುವ ಮೂಲಕ ಅಂತ್ಯವಾಗಿತ್ತು. ಕಡೆಗೆ ಸಿಬಿಐ ಅವಳ ಸಾವಿನ ಹಿಂದಿದ್ದ ಗರ್ಭಪಾತದ ಎಳೆಯನ್ನು ಬಿಚ್ಚಿಟ್ಟಿದ್ದರು.
ಜಿಯಾಖಾನ್ಗೆ ಹಲವು ಬಾರಿ ಗರ್ಭಪಾತವಾಗಿತ್ತು. ಅದಕ್ಕೆ ಕಾರಣವಾಗಿದ್ದು ಸೂರಜ್ ಪಾಂಚೋಲಿ. ಅದೇ ಕಾರಣಕ್ಕೆ ಒತ್ತಡಕ್ಕೆ ಸಿಲುಕಿದ ಜಿಯಾಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಗಂತ ಜಿಯಾ ಕೇಸ್ ತನಿಖೆ ನಡೆಸುತ್ತಿರುವ ಸಿಬಿಐ ಹೇಳಿತ್ತು. ಹಲವು ಬಾರಿ ಜಿಯಾ ಖಾನ್ಗೆ ಅಬಾರ್ಷನ್ ಮಾಡಿಸಿದ್ದ ಸೂರಜ್, ಅವಳನ್ನು ಬಳಸಿಕೊಂಡಾಗೆಲ್ಲ ಗರ್ಭಪಾತದ ಮಾತ್ರೆಗಳನ್ನು ಕೊಡುತ್ತಿದ್ದನಂತೆ..! ಅದು ಫಲಪ್ರದವಾಗದಿದ್ದಾಗ. ಅಬಾರ್ಷನ್ ಮಾಡಿಸುತ್ತಿದ್ದ. ಅವಳು ಸಾಯುವ ನಿರ್ಧಾರಕ್ಕೆ ಬರುವ ಮುನ್ನ ಸೂರಜ್ ಎಂದಿನಂತೆ ಅವಳ ಜೊತೆಯಿರಲಿಲ್ಲ. ತಡವಾಗಿ ಬಂದವ್ನು ಅವಳ ಗರ್ಭದ ಕಲ್ಮಶವನ್ನು ಕ್ಲೀನ್ ಮಾಡಿದ್ದ. ಹೀಗಂದಿದ್ದು ಸಿಬಿಐ. ಅಷ್ಟಕ್ಕೂ ಜಿಯಾ ಸಾವಿಗೀಡಾದ ದಿನಗಳಲ್ಲಿ ಹುಟ್ಟಿಕೊಂಡ ಪ್ರಶ್ನೆಗಳು ಒಂದೆರಡಲ್ಲ.
ಜಿಯಾಖಾನ್ ಮುಂಬೈನ ವಿಲೇ ಪಾರ್ಲೆಯ ಸಾಗರ್ ಸಂಗೀತ್ ಅಪಾರ್ಟ್ ಮೆಂಟಿನ ಫ್ಲಾಟ್ ನಂಬರ್ 102ರಲ್ಲಿ ತಾಯಿ ಮತ್ತು ತಂಗಿಯ ಜೊತೆ ವಾಸವಾಗಿದ್ದಳು. ಜೂನ್ 3, 2013ರಂದು ತಂಗಿಗೆ ಗಿಫ್ಟ್ ತೆಗೆದುಕೊಂಡು ತಾನೇ ಕಾರ್ ಡ್ರೈವ್ ಮಾಡಿಕೊಂಡು ಫ್ಲಾಟ್ ಕಡೆ ಬಂದಿದ್ದಳು. ಅಮ್ಮ ಮತ್ತು ತಂಗಿ ಕಸಿನ್ ಮನೆಗೆ ಹೊರಟರೇ, ಇವಳು ಚಿಕ್ಕ ಕೆಲಸದ ಸಬೂಬು ಹೇಳಿ ಮತ್ತೊಂದು ದಿಕ್ಕಿಗೆ ಹೋಗಿದ್ದಳು. ವಿಧಿ ನಿರ್ಣಯ ನೋಡಿ, ಅವತ್ತೇ ರಾತ್ರಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಜಿಯಾಖಾನ್ ಸತ್ತನಂತರ ಮತ್ತೊಂದು ತೆರನಾದ ಊಹಪೋಹ ಹರಡಿಕೊಂಡಿತ್ತು. ಅವಳು ವಿಪರೀತ ಖಿನ್ನತೆಯಿಂದ ನರಳುತ್ತಿದ್ದಳು. ಚಿತ್ರರಂಗದಲ್ಲಿ ಹೇಳಿಕೊಳ್ಳುವ ಅವಕಾಶಗಳು ಸಿಗುತ್ತಿರಲಿಲ್ಲ. ಆ ಕಾರಣಕ್ಕೆ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಯಿತು. ಆದರೆ ಅದು ನಿಜವಾಗಿರಲಿಲ್ಲ. ಈ ಮಧ್ಯೆ ಅವನೊಬ್ಬನ ಹೆಸರೂ ಕೇಳಿಬಂತು; ಸೂರಜ್ ಪಾಂಚೋಲಿ. ಈತ ಬಾಲಿವುಡ್ನ ಖ್ಯಾತ ನಟ ಆದಿತ್ಯ ಪಾಂಚೋಲಿಯ ಸುಪುತ್ರ. ಸೂರಜ್ ಪಾಂಚೋಲಿ, ಜಿಯಾಳನ್ನು ಪ್ರೀತಿಸುತ್ತಿದ್ದ. ಅವಳ ಜೊತೆ ಸಹಜವಾಗಿ ಎಲ್ಲಾ ಪ್ರೇಮಿಗಳಂತೆ ಪಬ್ಬು, ಪಾರ್ಟಿ, ಪಾರ್ಕು, ಸಿನಿಮಾ ಅಂತೆಲ್ಲಾ ಸುತ್ತಾಡಿದ್ದ. ಅದರಲ್ಲೇನು ತಪ್ಪಿಲ್ಲ. ಆದರೆ ಜಿಯಾ ಸಾಯುವ ದಿನ ಸೂರಜ್ ಪಾಂಚೋಲಿ ಜೊತೆ ಸುಮಾರು ಇಪ್ಪತ್ತೊಂಬತ್ತು ನಿಮಿಷಗಳ ಕಾಲ ಫೋನ್ನಲ್ಲಿ ಮಾತನಾಡಿದ್ದಳು. ಆನಂತರ ಇಬ್ಬರ ನಡುವೆ ಪರಸ್ಪರ ಎಸ್ಸೆಮ್ಮೆಸ್ ವಿನಿಮಯವಾಗಿತ್ತು.
ಸೂರಜ್ ಹಾಗೂ ಜಿಯಾ ಇಬ್ಬರ ಮೊಬೈಲ್ ನಂಬರಿನ ಕೊನೆಯ ನಾಲ್ಕು ಡಿಜಿಟ್ ಒಂದೇ ತೆರನಾಗಿತ್ತು. ತೀರಾ ಆಪ್ತರಲ್ಲಿ ಮಾತ್ರ ಈ ತೆರನಾದ ಅಟ್ಯಾಚ್ಮೆಂಟ್ ಇರುತ್ತದೆ. ಜಿಯಾಖಾನ್ ಗೆ ಈ ಸಿಮ್ ಅನ್ನು ಸೂರಜ್ ಪಾಂಚೋಲಿ ಕೊಡಿಸಿದ್ದ. ನಿಜ ಅವರಿಬ್ಬರು ಅಪ್ಪಟ ಪ್ರೇಮಿಗಳು, ಆದರೆ ಅವರಿಬ್ಬರ ಪ್ರೇಮ ಒಂದೇ ವರ್ಷಕ್ಕೆ ಮುರಿದುಬಿತ್ತಾ..? ನಾಟ್ ಶ್ಯೂರ್. ಅದಕ್ಕೆ ಸಾಕ್ಷಿ ಈ ಪತ್ರ.
`ನನಗೆ ನಿನ್ನ ಸಂಬಂಧದಲ್ಲಿ ನಂಬಿಕೆ ಇತ್ತು. ನನಗೆ ನಿನ್ನಿಂದ ಪ್ರೀತಿ ಬೇಕಿತ್ತು. ಆದ್ರೆ ನೀನು ಅದನ್ನು ಕೊಡಲಿಲ್ಲ. ನಾನು ನಮ್ಮಿಬ್ಬರಿಗಾಗಿ ಕೆಲ್ಸ ಮಾಡ್ತಾ ಇದ್ದೀನಿ. ನೀನು ಯಾವತ್ತೂ ನನ್ನ ಸಂಗಾತಿ ಆಗ್ಲಿಲ್ಲ. ನನ್ ಕುಟುಂಬದವರನ್ನು ನೀನು ಯಾವತ್ತೂ ಗೌರವಿಸಿಲ್ಲ. ನನ್ನ ಭವಿಷ್ಯ ಹಾಳಾಗಿದೆ. ನನ್ನ ಜೀವನದ ಸಂತೋಷವನ್ನು ನೀನು ಕಸಿದುಕೊಂಡಿದ್ದೀಯ. ನಾನು ಯಾವತ್ತೂ ನಿನ್ನ ಒಳ್ಳೆಯದನ್ನೇ ಬಯಸಿದ್ದೀನಿ. ನನ್ನ ಬಳಿ ಇದ್ದ ಅಲ್ಪಸ್ವಲ್ಪ ಹಣವನ್ನೂ ನಾನು ನಿನಗೊಸ್ಕರ ಖರ್ಚು ಮಾಡೋದಕ್ಕೆ ರೆಡಿ ಇದ್ದೆ. ನೀನು ನನ್ನನ್ನು ದೂರವಿಟ್ಟೆ. ನಾನು ನಿನ್ನ ಬಗ್ಗೆ ಆತ್ಮವಿಶ್ವಾಸವನ್ನಾಗಲಿ ಅಭಿಮಾನವನ್ನಾಗಿ ಇಟ್ಟುಕೊಳ್ಳೋದಕ್ಕೆ ಇನ್ನು ಮುಂದೆ ಸಾಧ್ಯವಿಲ್ಲ. ನನ್ನ ಹುಟ್ಟುಹಬ್ಬದ ಪಾರ್ಟಿಯ ಸಂತೋಷ ಕೂಡ ನಿನ್ನಿಂದ ಹಾಳಾಯ್ತು. ಗೋವಾ ಟ್ರಿಪ್ ಕೂಡ ನಿನ್ನಿಂದ ಮಣ್ಣುಪಾಲಾಯ್ತು. ನೀನು ಸಂಬಂಧಗಳಿಗೆ ಬೆಲೆ ಕೊಡಲಿಲ್ಲ. ನೀನು ನಾನು ಬರೆದಿರೋ ಈ ಪತ್ರವನ್ನು ಓದುವಾಗ ನಾನು ಈ ಪ್ರಪಂಚದಲ್ಲಿ ಇಲ್ಲದೇ ಇರಬಹುದು. ನೀನಲ್ಲದ ನನ್ನ ಬದುಕಿನಲ್ಲಿ ನಾನು ದಿನ ಬೆಳಿಗ್ಗೆ ಎದ್ದು ಸೂರ್ಯನ ಕಿರಣಗಳನ್ನು ನೋಡೋಕೆ ಇಷ್ಟ ಪಡಲ್ಲ. ಹಾಗಾಗಿ ನಾನು ಇಲ್ಲದಿರೋದೆ ಒಳ್ಳೇದು ಅಂತ ಯೋಚಿಸಿದ್ದೀನಿ. ಅಮ್ಮ ನಾನು ನಿನ್ನನ್ನು ಬಿಟ್ಟ ಹೋಗ್ತಾ ಇರೋದಕ್ಕೆ ಬೇಜಾರಿದೆ, ನಿನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸು. ನಂಬಿದವರೇ ನನಗೆ ಮೋಸ ಮಾಡಿದ್ರು. ಹಾಗಾಗಿ ಈ ನಿರ್ಧಾರ ಮಾಡಿದ್ದೀನಿ. ನಾನು ಬದುಕೋದಕ್ಕೆ ಯಾವ ಕಾರಣಗಳೂ ಉಳಿದಿಲ್ಲ. ಐ ಆಮ್ ಸಾರಿ..’ ಇಂತಿ ಜಿಯಾ ಖಾನ್.
ಈ ಡೆತ್ ನೋಟ್ ಜಿಯಾ ಮೃತಪಟ್ಟ 4 ದಿನಗಳ ನಂತರ ಅವಳ ಕೋಣೆಯಲ್ಲೇ ಸಿಗುತ್ತದೆ. ಅವತ್ತೇ ಸಿಗಲಿಲ್ಲ ಯಾಕೆ ಎಂಬ ಪ್ರಶ್ನೆಯೂ ಮೂಡಿತ್ತು. ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರು ಅಂತಿಮ ಪತ್ರವನ್ನು ಮುಚ್ಚಿಡುವುದಿಲ್ಲ. ಕೈಗೆಟುಕುವ ರೀತಿಯಲ್ಲಿ ಇಟ್ಟಿರುತ್ತಾರೆ. ಆದರೆ ಜಿಯಾ ಸತ್ತ ನಾಲ್ಕು ದಿನಗಳ ನಂತರ ಆಕೆಯ ತಾಯಿ ರಾಬಿಯಾಗೆ ಪತ್ರ ಸಿಕ್ಕಿತ್ತು. ಆ ಪತ್ರದ ಪ್ರಕಾರ ಸೂರಜ್ ಪಾಂಚೋಲಿಯೇ ತನ್ನ ಮಗಳ ಸಾವಿಗೆ ಕಾರಣ ಅಂದಿದ್ದು ರಾಬಿಯಾ.
ಅದೇನೇ ಇದ್ದರೂ ತಾಯಿ ಹೃದಯ, ಅದರಲ್ಲೂ ಖ್ಯಾತಿಯ ಪರ್ವತ ಏರುತ್ತಿದ್ದ ಮುದ್ದಿನ ಮಗಳು, ಕಣ್ಣೆದುರಿಗೆ ನೇಣುಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡರೇ ಯಾವ ತಾಯಿ ಕರುಳು ತಾನೇ ಸಹಿಸುತ್ತದೆ. ಆ ಕಾರಣಕ್ಕೆ ರಾಬಿಯಾ ಮಗಳ ಸಾವನ್ನು ಆತ್ಮಹತ್ಯೆ ಎಂದು ಒಪ್ಪಿಕೊಳ್ಳಲಿಲ್ಲ. ಅದು ಕೊಲೆ, ಯಾರೋ ಬಲವಂತವಾಗಿ ಆಕೆಯ ಕುತ್ತಿಗೆ ಹಿಸುಕಿ ಸಾಯಿಸಿ ನೇಣು ಬಿಗಿದಿದ್ದಾರೆ ಎಂದಿದ್ದರು. ಡೆತ್ನೋಟ್ ಪ್ರಕಾರ ಸೂರಜ್ ಪಾಂಚೋಲಿಯೇ ಆರೋಪಿಯಾಗಿದ್ದ. ಪೊಲೀಸ್ರು ಎಫ್ಐಆರ್ ಬರೆದು ಅವನನ್ನು ಬಂಧಿಸಿದರು. ಸೆಕ್ಷನ್ 306 ದಾಖಲಾಯಿತು. ಹತಾಶನಾದ ಸೂರಜ್ ತಂದೆ ಆದಿತ್ಯ ಪಾಂಚೋಲಿ, ಆ ಪತ್ರ ಫೇಕ್, ಅದರ ಪರಿಣಾಮ ಬೇರೆಯಿರುತ್ತೆ ಎಂದು ಕೂಗಾಡಿದ. ಮಾಧ್ಯಮದವರ ಜೊತೆಯೂ ಕ್ಯಾತೆ ತೆಗೆದ.
ಜಿಯಾ ಸತ್ತನಂತರ ದಿನಕ್ಕೊಂದು ರಹಸ್ಯಗಳು, ಊಹಪೋಹಗಳು ಹುಟ್ಟಿಕೊಳ್ಳುತ್ತಿತ್ತು. ಜಿಯಾಳ ಉಗುರಿನಲ್ಲಿ ಮಾನವ ಅಂಗಾಂಶ ಪತ್ತೆಯಾಗಿದೆ, ಜಿಯಾ ಸಾಯುವ ಮುನ್ನ ಟ್ರ್ಯಾಕ್ ಪ್ಯಾಂಟ್ ಹಾಕಿದ್ದಳು. ಆದರೆ ಆಕೆ ಸತ್ತಾಗ ಅವಳ ದೇಹದ ಮೇಲೆ ನೈಟಿಯಿತ್ತು. ನಿಸ್ಸಂಶಯವಾಗಿ ಅದು ಕೊಲೆ. ಆಕೆ ಮನೆಗೆ ಬಂದಾಗ ಹೆಚ್ಚು ಕಡಿಮೆ 10.40. ಆಕೆ 10.53 ರಿಂದ 11.22ರ ತನಕ ಸೂರಜ್ ಪಾಂಚೋಲಿ ಜೊತೆ ಮಾತನಾಡಿದ್ದಾಳೆ. ಆಮೇಲೆ 10 ನಿಮಿಷದಲ್ಲಿ ಕಾಸ್ಟ್ಯೂಮ್ ಬದಲಿಸಿದ್ದಾಳೆ. ಅವಳ ತಾಯಿ ರಾಬಿಯಾ ಮನೆಗೆ ಬಂದಾಗ ರಾತ್ರಿ ಹನ್ನೆರಡಾಗಿತ್ತು. ಮನೆಯ ಹಾಲ್ನಲ್ಲಿ ಲೈಟ್ ಉರಿಯುತ್ತಿತ್ತು. ಅವಳ ಹ್ಯಾಂಡ್ ಬ್ಯಾಗ್ ಹಾಲ್ನಲ್ಲಿ ಬಿದ್ದಿತ್ತು. ಸೀದಾ ಜಿಯಾಳ ರೂಂಗೆ ಹೋಗಿ ನೋಡಿದಾಗ, ಅವಳು ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿದ್ದಳು.
ಆದರೆ ಈ ಅನುಮಾನಗಳೆಲ್ಲಾ ಪೋರ್ಸ್ಟ್ ಮಾರ್ಟಂ ರಿಪೋರ್ಟ್ ಬಂದಿದ್ದೇ ಅರ್ಥ ಕಳೆದುಕೊಂಡಿತ್ತು. ಈ ಮಧ್ಯೆ ಜಿಯಾ ಹೆಚ್ಚುಕಮ್ಮಿ ಖಿನ್ನತೆಯಿಂದ ನರಳುತ್ತಿದ್ದಳು ಎಂಬ ವಾದವೂ ಇದೆ. ಸಿನಿಮಾವೊಂದರ ಅಡಿಷನ್ಗೆ ಹೈದ್ರಾಬಾದ್ಗೆ ಹೋಗಿದ್ದ ಅವಳು ಸರಿಯಾಗಿ ಪರ್ಫಾರ್ ಮನ್ಸ್ ಮಾಡದೇ ವಾಪಾಸಾಗಿದ್ದಳಂತೆ. ಅಮ್ಮನ ಮುಂದೆ, `ಇನ್ನು ಚಿತ್ರರಂಗ ನನಗೆ ಬೇಡ, ಇಂಟಿರಿಯರ್ ಡಿಸೈನಿಂಗ್ ಮಾಡಿಕೊಂಡಿರುತ್ತೇನೆಂದಳಂತೆ. ಆದರೆ ವೃತ್ತಿಜೀವನದ ಆರಂಭದಲ್ಲೇ ಅಮಿತಾಬ್ ಬಚ್ಚನ್ ಜೊತೆ `ನಿಶಬ್ದ್’ ಚಿತ್ರದಲ್ಲಿ ನಟಿಸಿದ್ದ ಜಿಯಾ ಖಾನ್, ಅಮಿರ್ ಖಾನ್ ಜೊತೆ ಘಜ್ನಿ, ಅಕ್ಷಯ್ಕುಮಾರ್ ಜೊತೆ `ಹೌಸ್ಫುಲ್’ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಳು. ಅಲ್ಲದೇ ಹಿಂದಿಯ `ಆಪ್ ಕಿ ಸಾಯಾ’ ಸೇರಿದಂತೆ, ತಮಿಳಿನ ಮೂರು ಹೊಸ ಚಿತ್ರಗಳಿಗೆ ಸಹಿ ಹಾಕಿದ್ದಳು. ಅವಕಾಶಗಳು ಭರಪೂರ್ತಿಯಾಗಿರುವಾಗ ಚಿತ್ರರಂಗ ಬೇಡ ಎಂದನಿಸುತ್ತದೆ ಎಂದರೆ ನಂಬುವ ವಿಚಾರವಲ್ಲ. ಹಾಗಾದ್ರೆ ಪ್ರೇಮ ವೈಫಲ್ಯವೇ ಅವಳ ಸಾವಿಗೆ ಕಾರಾಣಾನಾ..? ನಾಟ್ ಶ್ಯೂರ್.
ನಗುತ್ತಿರೋ ಮುಖದ ಹಿಂದೆ ಕಾಣದ ಅದೆಷ್ಟೋ ನೋವುಗಳಿರುತ್ತವೆ. ಅಷ್ಟಕ್ಕೇ ಆತ್ಮಹತ್ಯೆ ಮಾಡಿಕೊಳ್ಳಬಾರದು. ಎಲ್ಲಾ ನೋವುಗಳಿಗೂ, ಸಮಸೈಗಳಿಗೂ ಪರಿಹಾರವಿದೆ. ಕಾಯಬೇಕಷ್ಟೇ..! ಅದೆಷ್ಟೋ ಸೆಲೆಬ್ರಿಟಿಗಳು ಟ್ವೀಟ್ ಮಾಡಿ ಜಿಯಾ ಸಾವಿಗೆ ತಮ್ಮ ಶ್ರದ್ದಾಂಜಲಿ ಹೇಳಿದ್ದರು. ಇವೆಲ್ಲಾ ಯಾರೇ ಸತ್ತರೂ ಸಹಜವೆನ್ನಿಸುವ ಸಂತಾಪಗಳಷ್ಟೇ. ಅವತ್ತು ಸಾವಿನ ಮನೆಯಲ್ಲಿ ಸಾವಿರಾರು ಜನರ ದಂಡು ನೆರೆದಿತ್ತು. ಅವಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದವರಲ್ಲಿ ಅನೇಕರಿದ್ದರು. ಜಿಯಾಖಾನ್ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜ. ಆದರೆ ಅವಳನ್ನು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಂದಿದ್ದು ಸೂರಜ್ ಪಾಂಚೋಲಿ ಎಂದು ಸಿಬಿಐ ಹೇಳಿದೆ. ಈ ಬೆಳವಣಿಗೆಯಿಂದ ಸೂರಜ್ ಸಂಕಷ್ಟಕ್ಕೆ ಸಿಲುಕುವುದು ಬಹುತೇಕ ಖಾತ್ರಿಯಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳ ಹಣೆಬರಹ ನೋಡಿ. ಒಬ್ಬರಾದ ಮೇಲೊಬ್ಬರು ವಿವಾದ, ಕೇಸುಗಳಲ್ಲಿ ತಗಲಾಕಿಕೊಳ್ಳುತ್ತಲೇ ಇದ್ದಾರೆ.
ಜಿಯಾ ಖಾನ್. ನೋಡುವುದಿಕ್ಕೆ ನಿಜಕ್ಕೂ ಕಣ್ಮನ ಸೆಳೆಯುವಂತಿದ್ದ ಸುಂದರಿ. ಇವಳ ತಂದೆ ಆಲಿ ರಿಜ್ವಿ ಖಾನ್ ಅಮೇರಿಕಾದಲ್ಲಿ ಬಿಸಿನೆಸ್ ಮಾಡಿಕೊಂಡಿದ್ದರು. ತಾಯಿ ರಾಬಿಯಾ ಅಮೀನ್ ಎಂಬತ್ತರ ದಶಕದಲ್ಲಿ ಹಿಂದಿಯ ಮೂರ್ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದಳು. ಜಿಯಾಳ ಮೂಲ ಹೆಸ್ರು ನಫೀಸಾ. ಇವಳು ಹುಟ್ಟಿ ಬೆಳೆದದ್ದೆಲ್ಲಾ ನ್ಯೂಯಾರ್ಕ್ ನಲ್ಲಿ. ಆರು ವರ್ಷದವಳಿದ್ದಾಗ ಅಮಿರ್ಖಾನ್ ಅಭಿನಯದ `ರಂಗೀಲಾ’ ಚಿತ್ರ ನೋಡಿ, ತಾನೂ ನಟಿಯಾಗಬೇಕೆಂದು ಕನಸು ಕಂಡ ಪುಟ್ಟ ಹುಡುಗಿ ಈಕೆ. ಜಿಯಾಖಾನ್ಗೆ ಚಿಕ್ಕ ವಯಸ್ಸಿನಲ್ಲೇ ಅಭಿನಯದ ಗೀಳಿತ್ತು. ಮ್ಯಾನ್ಹಟ್ಟನ್ನಲ್ಲಿರುವ ಲೀಸ್ಟ್ರಾಸ್ ಬರ್ಗ್ ಥಿಯೇಟರ್ ಅಂಡ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ನಟನಾ ತರಬೇತಿ ಕೋರ್ಸ್ ಮಾಡಿದಳು. ಸಲ್ಸಾ, ಬೆಲ್ಲಿ, ಕಥಕ್, ಲಂಬಡಾ, ಜಾಜ್, ಇನ್ನಿತರೆ ನೃತ್ಯ ಪ್ರಕಾರಗಳನ್ನು ಕಲಿತಳು.
ಅಷ್ಟಕ್ಕೂ ಜಿಯಾಖಾನ್, ಮುಖೇಶ್ ಭಟ್ ಅವರ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಬೇಕಿತ್ತು. ಇಮ್ರಾನ್ ಹಶ್ಮೀ ಅಭಿನಯದ ಆ ಚಿತ್ರದ ಹೆಸ್ರು `ತುಮ್ಸಾ ನಹೀ ದೇಖಾ’. ಆದರೆ ಅವಳು ತುಂಬಾ ಚಿಕ್ಕವಳು ಎನ್ನುವ ಕಾರಣಕ್ಕೆ ಅವಕಾಶ ಕೈ ತಪ್ಪಿತ್ತು. ಅದೃಷ್ಟ ದಿಯಾ ಮಿರ್ಜಾ ಕೈ ಹಿಡಿಯಿತು. ಆದರೆ ಜಿಯಾಳ ನಸೀಬು ದಿವೀನಾಗಿತ್ತು, ಅವಳನ್ನು ರಾಮ್ಗೋಪಾಲ್ ವರ್ಮ ತನ್ನ `ನಿಶಬ್ಧ್’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಲು ಅವಕಾಶ ಕೊಟ್ಟರು. ಅದೂ ಬಿಗ್ ಬಿ ಅಮಿತಾಬ್ ಜೊತೆ, ಅವರಿಗೆ ಸರಿಸಮನಾದ ಪಾತ್ರ, ಜಿಯಾ ಫುಲ್ ಖುಷ್ ಆದಳು. ಯಾರಿಗೇ ಆದರೂ ಮೊದಲ ಚಿತ್ರದಲ್ಲಿ ಸ್ಟಾರ್ಗಳ ಜೊತೆ ನಟಿಸಬೇಕೆನ್ನುವ ಹುಕಿಯಿರುತ್ತದೆ. ಅದೃಷ್ಟ ಜಿಯಾಳ ಪಾಲಿಗಿತ್ತು.
ನಿಶ್ಶಬ್ಧ್ ಚಿತ್ರದ ನಂತರ ಅಮೀರ್ ಖಾನ್ ಅಭಿನಯದ ಸೂಪರ್ಹಿಟ್ ಚಿತ್ರ `ಘಜ್ನಿ’ಯಲ್ಲಿ ಸಣ್ಣ ಪಾತ್ರವನ್ನು ನಿಭಾಯಿಸಿದ್ದಳು. `ಘಜ್ನಿ’ ಚಿತ್ರದ ಬೆನ್ನಿಗೆ ಸಾಜಿದ್ ಖಾನ್ ನಿರ್ದೇಶನದ ಹೌಸ್ ಫುಲ್ ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಳು. ಅವಕಾಶಗಳು ಜಿಯಾಳ ಬೆನ್ನು ಬಿದ್ದಿದ್ದವು. ತಮಿಳಿನಲ್ಲಿ `ಯಾರಡೀ ಮೋಹಿನಿ’ ಸೇರಿದಂತೆ ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಹಿಂದಿಯಲ್ಲಿ `ಆಪ್ ಕೀ ಸಾಯಾ..’ ಚಿತ್ರದ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದಳು. ಇನ್ನೇನು ಜಿಯಾಖಾನ್ ಚಿತ್ರರಂಗದಲ್ಲಿ ಮಿಂಚು ಹರಿಸುತ್ತಾಳೆ ಎನ್ನುವಷ್ಟರಲ್ಲಿ ಆಕೆ ಫ್ಯಾನಿಗೆ ದುಪ್ಪಟ್ಟ ಕಟ್ಟಿ ನೇತಾಡುತ್ತಿದ್ದಳು. ಜಿಯಾ ಹೇಡಿಯಾಗಿದ್ದಳು. ಬದುಕಿನಲ್ಲಿ ಸೋತು ಮುಗಿದುಹೋದಳು. ಸಾಯುವಾಗ ಅವಳ ವಯಸ್ಸು ಕೇವಲ ಇಪ್ಪತ್ತೈದು. ಇನ್ನೂ ವಯಸ್ಸಿತ್ತು. ಅವಕಾಶವಿತ್ತು. ಅವಳ ಸಾವಿನೊಂದಿಗೆ ಎಲ್ಲವೂ ಅಂತ್ಯವಾಗಿತ್ತು. ಈಗ ಅವಳ ಸಾಲಿಗೆ ಪ್ರತ್ಯೂಷ ಬ್ಯಾನರ್ಜಿ ಸೇರಿಕೊಂಡಿದ್ದಾಳೆ. ಚಂದದ ನಟಿಯರೇಕೆ ಸೂಸೈಡ್ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
POPULAR STORIES :
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?
`ಸಾಯುವ ಮನಸ್ಸೆ..! ನಿನ್ನ ಕಡೆ ನನಗಿದೆ ತಿರಸ್ಕಾರ..!!’
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?