ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಸುಮ್ಮನೇ ಕೂರುವುದೆಂದರೆ ಆಗಲ್ಲ. ಸದಾ ಒಂದಲ್ಲ ಒಂದು ಚಟುವಟಿಯಲ್ಲಿ ಬ್ಯುಸಿ ಇರ್ತಾರೆ. ಸಿನಿಮಾ, ರಿಯಾಲಿಟಿ ಶೋ , ಕ್ರಿಕೆಟ್ ಹೀಗೆ ಎಲ್ಲೆಲ್ಲೂ ಕಿಚ್ಚ ಆ್ಯಕ್ಟೀವ್ ಆಗಿರ್ತಾರೆ.
ಈ ಬಾರಿ ಅವರು ‘ಕನ್ನಡ ಚಲನಚಿತ್ರ ಕಪ್’ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದಾರೆ. ಟಿ10 ಮಾದರಿಯ ಈ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ 7 ಮತ್ತು 8ರಂದು ಬೆಂಗಳೂರಿನ ಆದಿತ್ಯ ಗ್ಲೋಬಲ್ ಮೈದಾನದಲ್ಲಿ ನಡೆಯಲಿದೆ.
ಸಿಸಿಎಲ್ ನಲ್ಲಿ ಕಿಚ್ಚ ಬೆಂಗಳೂರು ಬುಲ್ಡೋಜರ್ಸ್ವ ತಂಡದ ಸಾರಥಿ. ಇವರೀಗ ವಿಭಿನ್ನ ಶೈಲಿಯಲ್ಲಿ ಕ್ರಿಕೆಟ್ ಟೂರ್ನಿ ನಡೆಸಲು ಮುಂದಾಗಿದ್ದು, ಇದರಲ್ಲಿ ಸ್ಟಾರ್ ನಟರಲ್ಲದೆ ನಿರ್ಮಾಪಕರು, ವಿತರಕರು, ತಂತ್ರಜ್ಞರು ಮತ್ತು ಮಾಧ್ಯಮದವರೂ ಪಾಲ್ಗೊಳ್ಳುತ್ತಿದ್ದಾರೆ.
ಜೊತೆಗೆ ರಾಜ್ಯ ರಣಜಿ ತಂಡದ ಹಾಗೂ ಕೆಪಿಎಲ್ ಆಡಿದ ಆಟಗಾರರೂ ಸಹ ಟೂರ್ನಿಯ ಮೆರಗು ಹೆಚ್ಚಿಸುತ್ತಿದ್ದಾರೆ. ವಿವಿಧ ಕ್ಷೇತ್ರದ ಹಿರಿಯರು 6ತಂಡಗಳ ನಾಯಕರಾಗಿದ್ದಾರೆ.
6 ತಂಡಗಳು ಇಂತಿವೆ :
ರಾಷ್ಟ್ರಕೂಟ ಪ್ಯಾಂಥರ್ಸ್ : ನಿರ್ದೇಶಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಈ ತಂಡದ ಕ್ಯಾಪ್ಟನ್. ರಕ್ಷಿತ್ ಶೆಟ್ಟಿ, ರಾಜ್ಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಸಿಎಂ ಗೌತಮ್ ಮತ್ತು ಯುವ ಆಟಗಾರ ಶುಭಾಂಗ್ ಹೆಗ್ಡೆ ಈ ತಂಡದ ಪರ ಆಡಲಿರುವ ಪ್ರಮುಖರು.
ಒಡೆಯರ್ ಚಾರ್ಜರ್ಸ್ : ಪತ್ರಕರ್ತ ಸದಾಶಿವ ಶೆಣೈ ನಾಯಕತ್ವದ ಈ ತಂಡದಲ್ಲಿ ನಟ ದಿಗಂತ್, ಮನೋರಂಜನ್ ರವಿಚಂದ್ರನ್, ನಿಹಾಲ್ ಉಳ್ಳಾಲ್, ಪ್ರಶಾಂತ್ ಮತ್ತಿತರರಿದ್ದಾರೆ.
ವಿಜಯನಗರ ಪ್ಯಾಟ್ರಿಯಾಟ್ಸ್ : ನಿರ್ದೇಶಕ ಹಾಗೂ ಛಾಯಗ್ರಾಹಕ ಕೃಷ್ಣ ನಾಯಕರಾಗಿರುವ ಈ ತಂಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದ್ದಾರೆ. ರಾಜ್ಯ ತಂಡದ ಶರತ್, ಕಿಶೋರ್ ಕಾಮತ್ ಹಾಗೂ ವಿಜಯವಾಣಿ ಸಹಾಯಕ ಸುದ್ದಿ ಸಂಪಾದಕ ಮಲ್ಲಿಕಾಚರಣ ವಾಡಿ ಈ ತಂಡದಲ್ಲಿ ನ ಪ್ರಮುಖರು.
ಹೊಯ್ಸಳ ಈಗಲ್ಸ್ : ವಿತರಕರಾದ ಜಾಕ್ ಮಂಜು ಅವರ ನೇತೃತ್ವದ ತಂಡವಿದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ತಂಡದಲ್ಲಿನ ಸ್ಟಾರ್ ಆಟಗಾರ. ನವೀನ್ ಮತ್ತು ರಜತ್ ಹೆಗ್ಡೆ ಈ ತಂಡ ಸೇರಿರೋ ವೃತ್ತಿಪರ ಕ್ರಿಕೆಟಿಗರು.
ಕದಂಬ ಲಯನ್ಸ್ : ನಿರ್ದೇಶಕ ನಂದಕಿಶೋರ್ ಈ ತಂಡ ಕ್ಯಾಪ್ಟನ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕೆಪಿಎಲ್ ಖ್ಯಾತಿಯ ಕೆಸಿ ಕಾರ್ಯಪ್ಪ, ರೋಹಿತ್ ಗೌಡ ಈ ತಂಡದ ಪ್ರಮುಖ ಆಟಗಾರರು.
ಗಂಗಾ ವಾರಿಯರ್ಸ್ : ನಿರ್ಮಾಪಕ ಕೆ.ಪಿ ಶ್ರೀಕಾಂತ್ ನಾಯಕತ್ವದ ಈ ತಂಡದಲ್ಲಿನ ಸ್ಟಾರ್ ರಾಕಿಂಗ್ ಸ್ಟಾರ್ ಯಶ್. ಸ್ಟಾಲಿನ್ ಹೂವರ್ ಹಾಗೂ ರಿತೇಶ್ ಭಟ್ಕಳ್ ತಂಡದ ಪ್ರಮುಖ ಆಟಗಾರರು.
ಆಯ್ಕೆವೇಳೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ರವಿಚಂದ್ರನ್, ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, ನಟ ಪುನೀತ್ ರಾಜ್ಕುಮಾರ್, ಕರ್ನಾಟಕ ತಂಡದ ಆರ್. ವಿನಯ್ ಕುಮಾರ್, ಶಾಸಕ ಅಶೋಕ್ ಖೇಣಿ, ಸುದೀಪ್ ಮತ್ತಿತರರು ಉಪಸ್ಥಿತರಿದ್ದರು.