ಇಂದಿನ ಟಾಪ್ 10 ಸುದ್ದಿಗಳು..! 14.01.2016

1
67

1. ವಿಶ್ವ ದಾಖಲೆ ನಿರ್ಮಿಸಿದ ಸಾನಿಯಾ-ಮಾರ್ಟಿನಾ ಜೋಡಿ
ಮಹಿಳೆಯರ ಡಬಲ್ಸ್ ನಲ್ಲಿ ಸತತ 29 ಪಂದ್ಯಗಳನ್ನು ಗೆಲ್ಲುವ ಮೂಲಕ ಸಾನಿಯಾ- ಮಾರ್ಟಿನಾ ಜೋಡಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ವಿಶ್ವದ ನಂ1 ಜೋಡಿಯಾಗಿರುವ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಝರ್ ಲ್ಯಾಂಡಿನ ಮಾರ್ಟಿನಾ ಹಿಂಗಿಸ್ ಜೋಡಿ ಮಹಿಳಾ ಸಿಡ್ನಿ ಅಂತರಾಷ್ಟ್ರೀಯ ಟೆನಿಸ್ ಟೂರ್ನಿಯ ಸೆಮಿಫೈನಲ್ ನಲ್ಲಿ 4-6,6-3, 10-08 ಸೆಟ್ ಗಳ ಅಂತರದಲ್ಲಿ ಯರೋಸ್ಲೋವಾದ ಶೆವೆಡೋವಾ ಹಾಗೂ ರ್ಯಾಲುಕಾ ಜೋಡಿಯನ್ನು ಸೋಲಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವುದರೊಡನೆ ನಿರಂತರ 29 ಗೆಲುವಿನ ನಗೆಯನ್ನು ಬೀರಿ ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ನಿನ್ನೆ ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ ಪೆಂಗ್ ಮತ್ತು ಲಿಯಾಂಗ್ ಜೋಡಿಯನ್ನು 6-2,6-3 ಸೆಟ್ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದ ಸಾನಿಯಾ ಹಿಂಗಿಸ್ ಜೋಡಿ ಹೊಸ ದಾಖಲೆಯೊಂದಿಗೆ ಫೈನಲ್ಗೆ ಲಗ್ಗೆ ಇಟ್ಟಿದೆ. 1994ರ ಅವಧಿಯಲ್ಲಿ ಗೀಗಿ ಫೆರ್ನಾಂಡಿಸ್ ಹಾಗೂ ನತಾಶಾ ಜ್ವೇರೇವಾ ಜೋಡಿ ದಾಖಲಿಸಿದ್ದ ಸತತ 28 ಪಂದ್ಯಗಳ ಗೆಲುವಿನ ದಾಖಲೆಯನ್ನು ಇವರು ಮುರಿದಿದ್ದಾರೆ.

2. ಶ್ರೀನಗರದಲ್ಲಿ ಪತ್ತೆಯಾದ ಕತ್ತು ಸೀಳಿದ ದೇಹ; ಪರಿಸ್ಥಿತಿ ಉದ್ವಿಗ್ನ
ಶ್ರೀನಗರದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರ ಕತ್ತು ಸೀಳಿದ ದೇಹವನ್ನು ಅಲ್ಲಿನ ಪೊಲೀಸರು ಪತ್ತೆ ಹಚ್ಚಿದ್ದು, ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿಮರ್ಾಣವಾಗಿದೆ.
ಬಶೀರ್ ಮಲ್ಲಿಕ್ ಎಂಬ ವ್ಯಕ್ತಿಯ ಮಗನಾದ ಒವೈಸ್ ಬಶೀರ್ ಮಲ್ಲಿಕ್ ಎಂಬಾತನ ಮೃತ ದೇಹವನ್ನು ಪೊಲೀಸರು ರೈಲು ಸೇತುವೆ ಬಳಿ ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ. ತದನಂತರ ಜನರು ಪೊಲೀಸ್ ಮುಖ್ಯ ಕಚೇರಿ ಎದುರು ಧರಣಿ ನಡೆಸಿದ್ದಾರೆಂದು ತಿಳಿದು ಬಂದಿದೆ.

3. ದೆಹಲಿಯಲ್ಲಿ ಸಮ-ಬೆಸ ಪ್ರಶ್ನಿಸಿ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ
ದೆಹಲಿ ಸರ್ಕಾರ 15 ದಿನಗಳ ಕಾಲ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಸಮ-ಬೆಸ ಸಂಖ್ಯೆವಾಹನ ಸಂಚಾರ ನಿಯಮ ಹಾಗೂ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ರೀತಿಯ ಅರ್ಜಿ ಪ್ರಚಾರದ ಗೀಳಾಗಿದೆ ಎಂದು ಹೇಳಿರುವ ಸುಪ್ರೀಂ, ಬೇರೆ ಬೇರೆ ವ್ಯಕ್ತಿಗಳು ಒಂದೇ ಕಡೇ ಹೋಗಲು ಒಂದೇ ಒಂದು ಕಾರನ್ನು ಬಳಸುವಂತೆ ಯೋಜನೆ ಹಾಕಿಕೊಂಡಿದ್ದರೆ ಅದನ್ನು ನೀವು ಪ್ರಶ್ನಿಸುತ್ತಿದ್ದೀರಲ್ಲವೇ ಎಂದು ಅರ್ಜಿದಾರರಿಗೆ ತಪರಾಕಿ ನೀಡಿದೆ.

4. ಜೈಷ್ ನಾಯಕ ಮಸೂದ್ ಬಂಧನ ಪಾಕ್ ಗೇ ಗೊತ್ತಿಲ್ವಂತೆ…!
ಜೈಷ್-ಇ- ಮಹಮ್ಮದ್ ಉಗ್ರ ಸಂಘಟನೆಯ ನಾಯಕ ಮೌಲಾನಾ ಮಸೂದ್ ಅಜರ್ ಬಂಧನದ ಬಗ್ಗೆ ಪಾಕಿಸ್ಥಾನಕ್ಕೆ ಯಾವುದೇ ಮಾಹಿತಿ ಇಲ್ವಂತೆ…! ಹೀಗೆಂದು ಸ್ವತಃ ಪಾಕ್ ವಿದೇಶಾಂಗ ಸಚಿವಾಲಯವೇ ಹೇಳಿದೆ..!
ಪಾಕ್ ವಿದೇಶಾಂಗ ಸಚಿವ ಖ್ವಾಜಿ ಖುಲೀಲುಲ್ಲಾ ವರದಿಗಾರರೊಂದಿಗೆ ಮಾತಾಡುತ್ತಾ ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ದಿನಾಂಕ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕ್ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗೆ ಹಿನ್ನಡೆ ಉಂಟಾದಂತಾಗಿದೆ.
ಪಾಕ್ ಮಾಧ್ಯಮಗಳು ನಿನ್ನೆ ಜೈಷ್-ಇ- ಮಹಮ್ಮದ್ ಉಗ್ರ ಸಂಘಟನೆಯ ನಾಯಕ ಮೌಲಾನಾ ಮಸೂದ್ ಅಜರ್ನ ಬಂಧನದ ಸುದ್ದಿಯನ್ನು ಬಿತ್ತರಿಸಿದ್ದವು. ಭಾರತದ ಒತ್ತಡಕ್ಕೆ ಮಣಿದು ಪಾಕ್ ಉಗ್ರರ ಬಂಧನಕ್ಕೆ ಮುಂದಾಗಿದೆ ಎಂದೇ ವರದಿಯನ್ನು ವಿಶ್ಲೇಷಿಸಲಾಗಿತ್ತು. ಆದರೆ ಇವತ್ತು ಪಾಕ್ ವಿದೇಶಾಂಗ ಸಚಿವಾಲಯವೇ ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಬಂಧನದ ಬಗ್ಗೆ ಗೊತ್ತೇ ಇಲ್ಲ ಎಂದು ಹೇಳುವ ಮೂಲಕ ಮತ್ತೆ ತನ್ನ ಸಡಿಲ ನಾಲಿಗೆಯನ್ನು ತನ್ನಿಷ್ಟದಂತೆ ತಿರುಗಿಸುವ ನಯವಂಚಕ ತನವನ್ನು ಪ್ರದರ್ಶಿಸಿದೆ.

5 .ಜಕಾರ್ತಾದಲ್ಲಿ ಸರಣಿ ಬಾಂಬ್ ಸ್ಪೋಟ: ಕನಿಷ್ಠ 6 ಮಂದಿ ಸಾವು

ಇಂಡೋನೇಷ್ಯಾ ರಾಜಧಾನಿ ಜಕಾರ್ತ ನಗರದ ಹೃದಯ ಭಾಗದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ಕನಿಷ್ಠ ಮೂವರು ಸಾವಿಗೀಡಾಗಿದ್ದಾರೆ.
ಇಲ್ಲಿನ ವಿಶ್ವಸಂಸ್ಥೆಯ ಕಚೇರಿ ಮತ್ತು ಮಾಲ್ ವೊಂದರ ಹತ್ತಿರ ಆರು ಬಾಂಬ್ ಗಳು ಸ್ಪೋಟಗೊಂಡಿವೆ. ಸ್ಪೋಟ ನಡೆದ ಸ್ಥಳದಲ್ಲಿ ಪೊಲೀಸ್ ಚೌಕಿಯೊಂದು ಹಾನಿಗೀಡಾಗಿದೆ.
6. ನಾರದನಂತೆ ವರ್ತಿಸುವುದನ್ನು ಬಿಡಿ: ಜೇಟ್ಲಿಗೆ ಕಾಂಗ್ರೆಸ್ ಸಲಹೆ

ಸಂಸತ್ ಅಧಿವೇಶನಗಳು ವ್ಯರ್ಥವಾಗಲು ಕಾಂಗ್ರೆಸ್ ನ್ನು ಹೊಣೆ ಮಾಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ. ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕತ್ವದ ನಡುವೆ ಬಿರುಕು ಮೂಡಿಸಲು ಅರುಣ್ ಜೇಟ್ಲಿ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಅರುಣ್ ಜೇಟ್ಲಿ ನಾರದ ಮುನಿಯಂತೆ ವರ್ತಿಸುವುದನ್ನು ಬಿಟ್ಟು ಹಣಕಾಸು ಸಚಿವರ ಜವಾಬ್ದಾರಿಯನ್ನು ನಿರ್ವಹಿಸಲಿ ಎಂದು ಸಲಹೆ ನೀಡಿದ್ದಾರೆ.

7. ಡಾರ್ಜಿಲಿಂಗ್ ನಲ್ಲಿ ಭೂ ಕುಸಿತ: ಇಬ್ಬರು ಸಾವು

ಡಾರ್ಜಿಲಿಂಗ್ ನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮಗು ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಡಾರ್ಜಿಲಿಂಗ್ ನ ಬೆಟ್ಟದ ತಪ್ಪಲ ಪ್ರದೇಶದ ಬೊಟಭೀರ್ ನಲ್ಲಿ ಇಂದು ಬೆಳಗ್ಗೆ ಭೂಕುಸಿತ ಸಂಭವಿಸಿದ್ದು, ಇದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ. ಸಿಕ್ಕಿಂ ಗಡಿಗೆ ಸಮೀಪ ಈ ದುರಂತ ಸಂಭವಿಸಿದ್ದು ಅವಶೇಷಗಳ ಅಡಿ ಸಿಲುಕಿದ್ದ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅವರು ತಿಳಿಸಿದರು.

8. ಪಾಕ್ ಗೆ ಅಪಾಯ ಕಾದಿದೆ; ಮೌಲಾನಾ ಮಸೂದ್ ಅಜರ್ ಎಚ್ಚರಿಕೆ

ಜೈಶ್ ಎ ಮೊಹಮ್ಮದ್ ಸಂಘಟನೆಯನ್ನು ಹತ್ತಿಕ್ಕಲು ಪಾಕ್ ತೆಗೆದುಕೊಂಡಿರುವ ಕ್ರಮ ಅದಕ್ಕೇ ಅಪಾಯಕಾರಿಯಾಗಿದೆ. ಪಾಕಿಸ್ತಾನ ಸಕರ್ಾರ ಮಸೀದಿ, ಮದರಸಾ ಮತ್ತು ಜಿಹಾದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾದರೆ ಅದು ದೇಶದ ಏಕತೆ, ಸಮಗ್ರತೆಗೆ ತೊಂದರೆಯುಂಟಾಗುತ್ತದೆ ಎಂದು ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹೇಳಿದ್ದಾನೆ. ಸೈದಿ ಎಂಬ ಕಾವ್ಯನಾಮದಡಿ ಮೌಲಾನಾ ಮಸೂದ್ ಬರಹಗಳು ಪ್ರಕಟಗೊಂಡಿದ್ದು, ಜೈಶ್ ಎ ಸಂಘಟನೆಯ ಆನ್ ಲೈನ್ ಮುಖವಾಣಿ ಅಲ್ ಖಲಮ್ ನಲ್ಲಿ ಪ್ರಕಟವಾಗಿದೆ.

9. ವಾಟ್ಸಪ್ ನಲ್ಲಿ ವೈರಲ್ ಆಯ್ತು ಗ್ಯಾಂಗ್ ರೇಪ್ ವೀಡಿಯೋ : ನೊಂದ ಮಹಿಳೆ ಆತ್ಮಹತ್ಯೆ
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 40 ವರ್ಷದ ವಿವಾಹಿತ ಮಹಿಳೆ ತನ್ನ ಮೇಲಾದ ಅತ್ಯಾಚಾರದ ವೀಡಿಯೋ ವಾಟ್ಸಪ್ನಲ್ಲಿ ವೈರಲ್ ಆಗಿದ್ದನ್ನು ತಿಳಿದು ಅವಮಾನಿತಳಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಜಾಫರನಗರದಲ್ಲಿ ನಡೆದಿದೆ.
ಆಶಾಕಾರ್ಯಕರ್ತೆಯಾಗಿದ್ದ ವಿವಾಹಿತಳನ್ನು ನಾಲ್ವರು ಕಾಮುಕರು ಕಳೆದ ಭಾನುವಾರ ಅತ್ಯಾಚಾರ ಮಾಡಿದ್ದರು. ಅತ್ಯಾಚಾರಿಗಳಲ್ಲೊಬ್ಬನಾದ 23 ವರ್ಷದ ಸಾಹಿಬ್ ಎಂಬಾತ ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು ಅದನ್ನು ವಾಟ್ಸಪ್ ಮೂಲಕ ಹರಿಬಿಟ್ಟಿದ್ದ ಎಂದು ಹೇಳಲಾಗುತ್ತಿದೆ. ಸಾಹಿಬ್ನನ್ನು ಬಂಧಿಸಲಾಗಿದ್ದು ತಲೆ ಮರೆಸಿಕೊಂಡಿರುವ ಉಳಿದ ಮೂವರು ಅತ್ಯಾಚಾರಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
10. ಜಪಾನ್ ನಲ್ಲಿ ಭೂಕಂಪ: 6.7 ರಷ್ಟು ತೀವ್ರತೆ ದಾಖಲು

ಉತ್ತರ ಜಪಾನ್ ನ ಹೊಕ್ಕಾಯ್ಡೊದ ಕರಾವಳಿ ತೀರ ಪ್ರದೇಶದ ಬಳಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ.
ಹೊಕ್ಕಾಯ್ಡೊನಲ್ಲಿನ ಉರಾಕಾವ ಪ್ರದೇಶದ ಬಳಿ ರಾತ್ರಿ 12.30ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಹೊಕ್ಕಾಯ್ಡೋ ಕರಾವಳಿ ತೀರ ಪ್ರದೇಶದಲ್ಲಿರುವ ಸಮುದ್ರದ 50 ಕಿ.ಮೀನಷ್ಟು ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಕಂಡುಬಂದಿದೆ. ಭೂಕಂಪದಿಂದಾಗಿ ಸಾವು-ನೋವು ಸಂಭವಿಸಿರುವುದಾಗಿ ಈವರೆಗೂ ಯಾವುದೇ ವರದಿಗಳಾಗಿಲ್ಲ.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಭಪ್ಪರೆ ಬಾಸ್..! ತಲೆ ನೋವಿಗೆ ವಯಾಗ್ರಾ ಮಾತ್ರೆ ಕೊಟ್ನಂತೆ..! ಬಾಸ್ ಹುಚ್ಚಾಟಕ್ಕೆ ಕೆರಳಿ ಕಂಪ್ಲೇಂಟ್ ಕೊಟ್ಟ ಹೆಣ್ಣು..!

ಐಎಎಸ್ ಅಧಿಕಾರಿ ಏಕೆ ಕೆಲಸ ಬಿಟ್ಟರು ಗೊತ್ತಾ..? ಐಎಎಸ್ ಕೆಲಸ ಬಿಡುವಂತೆ ಮಾಡಿದ ಕೆಲಸ ಯಾವುದು..?

ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?

1 COMMENT

LEAVE A REPLY

Please enter your comment!
Please enter your name here