ನಾನು ಸಣ್ಣವನಾಗಿದ್ದಾಗ ಯಾರಾದ್ರೂ ನನ್ನನ್ನ `ನೀನು ಯಾರನ್ನ ಮದ್ವೆ ಆಗ್ತಿಯ..?’ ಅಂತ ಕೇಳಿದ್ರೆ `ಮಾಲಾಶ್ರೀನಾ’ ಅಂತಿದ್ನಂತೆ..! ಅವಾಗ ನಂಗೆ ಹೆಚ್ಚಂದ್ರೆ 5-6 ವರ್ಷ ಇರಬಹುದು..! ಇನ್ನೂ ಚಡ್ಡಿ ಸರಿಯಾಗಿ ಹಾಕ್ಕೊಳೋಕೆ ಬರದೇ ಇರೋ ನನಗೆ ಮಾಲಾಶ್ರೀ ಅಂದ್ರೆ ಅಷ್ಟಿಷ್ಟ ಆಗಿದ್ರ ಅಂದ್ರೆ, ಇನ್ನು ಪಡ್ಡೆಹುಡುಗರ ಕಥೆ ಏನಾಗಿರಬೇಡ..! ಕನಸಿನ ರಾಣಿ ಅಂತ ಸುಮ್ಮನೆ ಹೆಸರು ಬಂದುಬಿಡ್ತಾ..? ಅದೆಷ್ಟು ಜನ ಹುಡುಗರ ಕನಸಲ್ಲಿ ಬಂದು ಬಂದ್ರೆನಿದ್ದೆಗೆಡಿಸಿದ್ರೋ ನಮ್ಮ ಮಾಲಾಶ್ರೀ..! ಅವತ್ತಿನ ಮಾಲಾಶ್ರೀ ಸಿನಿಮಾ ನೋಡಿ ಮನೆಗೆ ಬಂದು ಮಲಗಿದ್ರೆ ಅದು ನಿದ್ರೆಗಳಿದ್ದ ರಾತ್ರಿಗಳು ಅಂತಾನೇ ಅರ್ಥ..! ರಾಣಿಯರ ರಾಣಿ, ರಾಣಿ ಮಹಾರಾಣಿ, ಕನಸಿನ ರಾಣಿ ಮಾಲಾಶ್ರೀ…!
ಅವರ ಮೊದಲ ಸಿನಿಮಾ `ನಂಜುಂಡಿ ಕಲ್ಯಾಣಿ’ ಬಂದಿದ್ದು 1989ರಲ್ಲಿ. ಅವಾಗ ನಂಗೆ ಬರೀ ಮೂರು ವರ್ಷ..! ಟಿವಿಯಲ್ಲಿ, ರೇಡಿಯೋದಲ್ಲಿ ಆ ಹಾಡು ಯಾವಾಗ್ಲೋ ಒಂದೊಂದ್ ಸಲ ಬರ್ತಿತ್ತಂತೆ..! ಅದನ್ನು ನಾನು ಅದೇ ರಾಗದಲ್ಲಿ ತೊದಲು ತೊದಲಾಗಿ ಹಾಡ್ತಿದ್ನಂತೆ..! ಮೊನ್ನೆಮೊನ್ನೆ ಟಿವಿಯಲ್ಲಿ ಆ ಸಿನಿಮಾ ನೋಡಿದಾಗ್ಲೂ ಆ ಹಾಡು ಗುನುಗ್ತಾ ಇದ್ದೆ..! ಮಾಲಾಶ್ರೀ ಅವರ ಅವತ್ತಿನ ಬ್ಯೂಟಿಗೆ ಅದೆಷ್ಟು ಜನ ಹುಚ್ಚರಾಗಿದ್ರೋ ಏನೋ ಅಂತ ಹಂಗೇ ಯೋಚನೆ ಮಾಡ್ತಿದ್ದೆ..! ಕನ್ನಡಕ್ಕೆ ನೂರು ಜನ ಹೀರೋಯಿನ್ ಗಳು ಬರಬಹುದು, ಹೋಗಬಹುದು. ಆದ್ರೆ ಒಬ್ಬ ಮಾಲಾಶ್ರೀ ಆಳಿರೋದಿದ್ಯಲ್ಲ, ಅದು ಇನ್ನೆಂದಿಗೂ, ಯಾರಿಂದಲೂ ಸಾಧ್ಯವಿಲ್ಲ..! ಅವರ ಕ್ರೇಜ್ ಹೆಂಗಿತ್ತು ಅಂದ್ರೆ, ಸಿನಿಮಾ ರಿಲೀಸ್ ಆದಾಗ `ಹೀರೋ ಯಾರು..?’ ಅಂತ ಕೇಳೋ ಜನ. ಆದ್ರೆ ಆ ಕಾಲಕ್ಕೆ `ಮಾಲಾಶ್ರೀ ಪಿಚ್ಚರ್’ ಅಂತ ಹೋಗಿ ಥಿಯೇಟರಲ್ಲಿ ಕೂರೋರು..! ನನ್ನ ಚಿಕ್ಕಪ್ಪಂದರೇ ದಿನದ ಮೂರು ಶೋಗಳನ್ನೂ ಕಣ್ ಕಣ್ ಬಿಟ್ಕೊಂಡು ನೋಡ್ತಿದ್ರಂತೆ..! ಪ್ರೊಡ್ಯೂಸರ್ ಗಳ ಪಾಲಿಗಂತೂ ಮಾಲಾಶ್ರೀ ಆ ಕಾಲಕ್ಕೆ ಯಾವತ್ತೂ ನಷ್ಟ ಮಾಡದ ಅಕ್ಷಯ ಪಾತ್ರೆ..!
ಕಮಿಂಗ್ ಟು ದ ಪಾಯಿಂಟ್, 1989ರಲ್ಲಿ ನಂಜುಂಡಿ ಕಲ್ಯಾಣ ರಿಲೀಸ್ ಆಯ್ತು, ಅದಿನ್ನೂ ಥಿಯೇಟರ್ ನಲ್ಲಿ ಸಕ್ಸಸ್ ಫುಲ್ ಆಗಿ ಓಡ್ತಾ ಇರುವಾಗಲೇ ರಾಘವೇಂದ್ರ ರಾಜಕುಮಾರ್ ಜೋಡಿಯಾಗಿಯೇ ಬಂದಿತ್ತು `ಗಜಪತಿ ಗರ್ವಭಂಗ’..!
1990ರ ಟೈಮಿಗೆ ಮಾಲಾಶ್ರೀ ಸಿನಿಮಾಗಳ ನಂಬರ್ ಆರಕ್ಕೇರಿತ್ತು.. 1991ರಲ್ಲಿ ಮಾಲಾಶ್ರೀ ಅಭಿನಯಿಸಿದ್ದ ಸಿನಿಮಗಳು 12, 1992ರಲ್ಲಿ ಅದು 19 ಆಗಿತ್ತು..! ಒಂದೇ ವರ್ಷದಲ್ಲಿ ಮಾಲಾಶ್ರಿ ಆಕ್ಟ್ ಮಾಡಿರೋ 19 ಸಿನಿಮಾಗಳು ರಿಲೀಸ್ ಆಗಿದ್ವು..! ಅವರ ಸಿನಿಮಾಗಳೇ ಒಂದೇ ಊರಿನ 3-4 ಬೆರೆ ಬೇರೆ ಥಿಯೇಟರ್ ನಲ್ಲಿ ಓಡ್ತಾ ಇದ್ವು..! ಮನೆಮನೇಲೂ ಮಾಲಾಶ್ರೀ ಫೋಟೋಗಳು ಫಿಕ್ಸ್ ಆಗಿದ್ವು.. ಮಾಲಾಶ್ರೀ ಸಿನಿಮಾದ ಪೋಸ್ಟರ್ ಹಚ್ಚಿಹೋಗಿದ್ರೆ ಅದನ್ನು ಅರ್ಧ ಗಂಟೆಯಲ್ಲಿ ಪಡ್ಡೆ ಹುಡುಗರು ನೀಟಾಗಿ ಹರಿದು ತಗೊಂಡ್ ಹೋಗಿರೋರು..! ಹುಡುಗರ ಪರ್ಸಲ್ಲಿ ಅಪ್ಪ ಅಮ್ಮನ ಫೋಟೋ ಇಲ್ಲದಿದ್ರೂ ಮಾಲಾಶ್ರೀ ಫೋಟೋ ಗ್ಯಾರಂಟಿ ಇರ್ತಿತ್ತು..! ಮದ್ವೆಯಾಗೋ ಪ್ರತೀ ಹುಡುಗನಿಗೂ ತನ್ನ ಹೆಂಡತಿ ಮಾಲಾಶ್ರೀ ತರ ಇರಬೇಕು ಅನ್ನೋ ಆಸೆ ಇತ್ತು..! ಹುಡುಗೀರ ಪಾಲಿನ ಅತಿದೊಡ್ಡ ಶತ್ರು ಆ ಕಾಲಕ್ಕೆ ಮಾಲಾಶ್ರೀ ಮಾತ್ರ..! ಆದ್ರೂ ಅವರ ಡ್ರೆಸ್, ಹೇರ್ ಸ್ಟೈಲ್ ಎಲ್ಲವನ್ನೂ ಹುಡುಗೀರು ಫಾಲೋ ಮಾಡೋರು..! ಅದೊಂಥರಾ ಮಾಲಾಶ್ರೀ ಮೇನಿಯಾ…!
ನಂಜುಂಡಿ ಕಲ್ಯಾಣದ ದೇವಿ, ಗಜಪತಿ ಗರ್ವಭಂಗದ ಸೌಮ್ಯ, ರಾಣಿ ಮಹಾರಾಣಿಯ ರಾಣಿ ಮತ್ತು ಸುಮ, ಹೃದಯ ಹಾಡಿತು ಸಿನಿಮಾದ ಆಶಾ, ಎಸ್.ಪಿ.ಭಾರ್ಗವಿಯ ಭಾರ್ಗವಿ, ರಾಮಾಚಾರಿಯ ನಂದಿನಿ, ಬೆಳ್ಳಿಕಾಲುಂಗುರದ ಭದ್ರ, ಬೆಳ್ಳಿ ಮೋಡಗಳು ಸಿನಿಮಾದ ಸೀತಾ, ಮಾಲಾಶ್ರೀ ಮಾಮಾಶ್ರೀಯಲ್ಲಿ ಮಾವನ ಬೆವರಿಳಿಸೋ ಮಾಲಾಶ್ರೀ, ಹೀಗೆ ಮಾಡಿದ ಸಿನಿಮಾಗಳ ಪ್ರತಿ ಪಾತ್ರದಲ್ಲೂ ಮಾಲಾಶ್ರೀ ಮೋಡಿ..! ಹೇಳಿದ ಅಷ್ಟೂ ಸಿನಿಮಾಗಳಲ್ಲಿ ಯಾವ ಸೀನಲ್ಲಿ ಮಾಲಾಶ್ರೀ ಯಾವ ಡೈಲಾಗ್ ಹೊಡೀತಾರೆ ಅಂದ್ರೆ ಹೇಳೋ ಹುಚ್ಚು ಅಭಿಮಾನಿಗಳು ಮಾಲಾಶ್ರೀಯವರಿಗಿದ್ರು..! ಪ್ರತೀ ಹೀರೋಗೂ ತನ್ನ ಸಿನಿಮಾದಲ್ಲಿ ಮಾಲಾಶ್ರೀ ಇದ್ರೆ ಸಕ್ಸಸ್ ಹತ್ತಿರವಿದೆ ಅಂತ ಅನ್ನಿಸದೇ ಇರ್ತಿರಲಿಲ್ಲ..! ಅಷ್ಟು ಫ್ಯಾನ್ಸ್ ಮಾಲಾಶ್ರೀ ಜೊತೆಗಿದ್ರು…!
ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು, ಜಟಕಾ ಕುದುರೆ ಹತ್ತಿ ಪ್ಯಾಟೇಗ್ ಹೋಗುಮಾ, ಒಲಿದ ಅವರಗಳು ಒಂದಾದರೆ ಬಲಿ ಇಂಪಾದ ಸಂಗೀತ, ಯಾರಿವಳು ಯಾರಿವಳು ಸೂಜಿ ಮಲ್ಲೆ ಕಣ್ಣವಳು, ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ, ಒಂದೇ ಒಂದು ಕಣ್ಣಬಿಂದು ಜಾರಿದರೆ ನನ್ನಾಣೆ, ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೆ ನಾ, ಹೀಗೆ ಮಾಲಾಶ್ರೀ ಸಿನಿಮಾದ ಹಾಡುಗಳು ಅದ್ಹೇಗೆ ತಾನೇ ಕನ್ನಡಿಗರು ಮರೆತು ಬಿಡ್ತಾರೆ..? ಆ ಕಡೆ ಸೌಂದರ್ಯ, ಈ ಕಡೆ ಆಕ್ಟಿಂಗು, ಮತ್ತೊಂದ್ ಕಡೆ ಸಖತ್ ಸ್ಟೋರಿ ಇರೋ ಸಿನಿಮಾ, ಮತ್ತೊಂದು ಸೈಡಲ್ಲಿ ಕಾಡೋ ಹಾಡುಗಳು..! ಆ ಟೈಮ್ ಇತ್ತಲ್ಲಾ, ಅದು ಮಾಲಾಶ್ರೀ ಪಾಲಿಗೆ ಗೋಲ್ಡನ್ ಟೈಂ..! ಮುಟ್ಟಿದ್ದೆಲ್ಲಾ ಚಿನ್ನ, ಮಾಡಿದ್ದೆಲ್ಲಾ ಹಿಟ್..! ಪುಟ್ಟಣ್ಣ ಕಣಗಾಲ್ ರವರ ಮಹಿಳಾ ಪ್ರಧಾನ ಸಿನಿಮಾಗಳು ಬೇರೆ, ಆದ್ರೆ ಮಾಲಾಶ್ರೀ ಯುಗ ಆರಂಭವಾದ ಮೆಲೆ ಬಂದ ಮಹಿಳಾ ಪ್ರಧಾನ ಸಿನಿಮಾಗಳೇ ಬೇರೆ..! ಹೀರೋಗಳಿಗೇ ಟಕ್ಕರ್ ಕೊಡೋ ಪಾತ್ರಗಳಿಂದಾನೇ ಎಲ್ಲರಿಗೂ ಹಾಟ್ ಫೇವರೇಟ್ ಆಗಿದ್ರು ನಮ್ಮ ಕನಸಿನ ರಾಣಿ..!
ಈಗಲೂ ಸಹ ತಮ್ಮದೇ ರಫ್ ಅಂಡ್ ಟಫ್ ಪಾತ್ರಗಳ ಮೂಲಕ ಜನರನ್ನು ರಂಜಿಸೋದ್ರಲ್ಲಿ ಮಾಲಾಶ್ರೀ ಬಿಜಿಯಾಗಿದ್ದಾರೆ..! ಅವರ ಸಿನಿಮಾಗಳನ್ನು ಅವರ ಫ್ಯಾನ್ಸ್ ಇವತ್ತಿಗೂ ಕಾದು ನೋಡ್ತಾರೆ.. ಅವರು ಟಿವಿಯಲ್ಲಿ ಗೆಸ್ಟ್ ಆಗಿ ಬಂದ್ರು ಅಂದ್ರೆ ಆ ಶೋದ ಟಿ.ಆರ್.ಪಿ ಮೇಲಕ್ಕೇರುತ್ತೆ..! ಅವರ ಫೇಮ್ ಯಾವತ್ತೂ ಕುಗ್ಗಿಲ್ಲ, ಕುಗ್ಗಲ್ಲ..! ಅವತ್ತಿನ ಹಾಗೆ ಸೂಪರ್ ಹಿಟ್ ಸಿನಿಮಾ ಕೊಡೋಕೆ ಸಾಧ್ಯವಾಗ್ತಿಲ್ಲ ಅನ್ನೋ ಬೇಸರ ಅವರಿಗೂ ಖಂಡಿತ ಇರುತ್ತೆ..! ಅಂತಹ ಒಂದು ಸೂಪರ್ ಹಿಟ್ ಸಿನಿಮಾ ಮಾಲಾಶ್ರೀಯವರು ಕೊಡೋ ದಿನಗಳು ಬೇಗ ಬರಲಿ ಅಂತ ಹಾರೈಸ್ತಾ ಅವರ ಬರ್ತಡೇಗೊಂದು ವಿಶ್ ಮಾಡೋಣ..! ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಮೇಡಂ..! ನೀವು ಎಂದೆಂದಿಗೂ ಎಲ್ಲರ ನೆಚ್ಚಿನ `ಕನಸಿನ ರಾಣಿ’..! ವಿ ಲವ್ ಯೂ..!
- ಕೀರ್ತಿ ಶಂಕರಘಟ್ಟ
POPULAR STORIES :
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!