ಸ್ವಲ್ಪ ನಿದ್ರೆಭಾಗ್ಯವನ್ನೂ ಕರುಣಿಸಿ, ಪ್ಲೀಸ್…!

1
117

– ಇಂದು ವಿಶ್ವ ನಿದ್ರಾ ದಿನ. ಆಗಾಗ ಅಲ್ಲಲ್ಲಿ ತೂಕಡಿಸುತ್ತಿರುತ್ತಾರೆ ಎಂಬ ಆರೋಪಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದೇ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ವಿಶೇಷವೆಂದರೆ ಕಳೆದ ವರ್ಷ ಕೂಡ ಅವರು ವಿಶ್ವ ನಿದ್ರಾ ದಿನದಂದೇ ಬಜೆಟ್ ಮಂಡಿಸಿದ್ದರು. ಆ ಹಿನ್ನೆಲೆಯಲ್ಲಿ ಪತ್ರಕರ್ತ ರವಿಕಾಂತ ಕುಂದಾಪುರ ಅವರು ಬರೆದಿರುವ ವಿಡಂಬನಾತ್ಮಕ ಲೇಖನವಿದು.

“ವಿತ್ತಸಚಿವನಾದ ನಾನು ಈ ಸಲದ ಆಯವ್ಯಯದಲ್ಲಿ ಜನರ ಎಲ್ಲ ಆಶೋತ್ತರಗಳೂ ಈಡೇರಬೇಕು ಎಂದುಕೊಂಡಿದ್ದು, ಅವುಗಳಿಗೆ ಪೂರಕವಾಗಿ ಈ ಬಜೆಟನ್ನು ಅಪಾರ ಕಾಳಜಿಯಿಂದ ರೂಪಿಸಿದ್ದೇನೆ. ರಾಜ್ಯದ ಎಲ್ಲ ಜನಸಾಮಾನ್ಯರು ವಿಶೇಷವಾಗಿ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬುವುದು ನಮ್ಮ ಸರ್ಕಾರದ ಹಾಗೂ ವೈಯಕ್ತಿಕವಾಗಿ ನನ್ನ ಕನಸಾಗಿದೆ. ಈ ಎಲ್ಲ ಕನಸುಗಳು ಈಡೇರಬೇಕಿದ್ದರೆ ಅವರೆಲ್ಲರೂ ವೈಯಕ್ತಿಕವಾಗಿ ಸದೃಢರಾಗಬೇಕಾದ್ದು ಅಗತ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ಆರೋಗ್ಯವಾಗಿರಬೇಕಾದ್ದು ಅನಿವಾರ್ಯ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಹೊತ್ತಿಗೆ ಸರಿಯಾಗಿ ಊಟ ಮಾಡುವುದರ ಜೊತೆಗೆ ಹೊತ್ತಿಗೆ ಸರಿಯಾಗಿ ಮಲಗಿ ನಿದ್ರಿಸಬೇಕಾದ್ದು ಅತ್ಯಗತ್ಯ. ಊಟದ ವಿಷಯದಲ್ಲಿ ನಮ್ಮ ಸರ್ಕಾರ ಈಗಾಗಲೇ ಅನ್ನಭಾಗ್ಯ, ಕ್ಷೀರ ಭಾಗ್ಯ ಜಾರಿಗೆ ತಂದಿದೆ. ಆದರೆ ದಿನವಿಡೀ ಶ್ರಮವಹಿಸಿದ ಮನುಷ್ಯ ಮರುದಿನ ಮತ್ತೆ ಚೈತನ್ಯಭರಿತನಾಗಿ ಕೆಲಸ ಮಾಡಬೇಕಿದ್ದರೆ ಹಿಂದಿನ ದಿನ ರಾತ್ರಿ ಚೆನ್ನಾಗಿ ನಿದ್ರೆ ಮಾಡಿರಬೇಕು. ನಿದ್ರೆ ಚೆನ್ನಾಗಿ ಬಂದರೆ ಮಾತ್ರ ಆತನಲ್ಲಿ ಕನಸುಗಳು ಹುಟ್ಟಲು ಸಾಧ್ಯ ಎಂಬುದನ್ನು ಅರಿತು ಈ ಬಾರಿ ಅತಿ ವಿಶಿಷ್ಟವಾದ ಯೋಜನೆಯೊಂದನ್ನು ಈ ಬಜೆಟ್‍ನಲ್ಲಿ ಮಂಡಿಸಲಾಗುತ್ತಿದೆ. ದೇಶದಲ್ಲೇ ಕರ್ನಾಟಕ ಪ್ರಥಮ ಬಾರಿಗೆ ಇಂಥದ್ದೊಂದು ಯೋಜನೆ ಜಾರಿಗೆ ತರುತ್ತಿದ್ದು, ಅದಕ್ಕೆ 100 ಕೋಟಿ ರೂ. ಮೀಸಲಿರಿಸಲಾಗಿದೆ. ಬಜೆಟ್ ಅಧಿವೇಶನಕ್ಕೆ ಅನುಮೋದನೆ ಸಿಕ್ಕ ಮಧ್ಯರಾತ್ರಿಯಿಂದಲೇ ಈ ವಿನೂತನ ಯೋಜನೆ ಅನುಷ್ಠಾನಗೊಳ್ಳಲಿದೆ. ಯಾವುದೇ ಜಾತಿಭೇದ, ಮತಭೇದ, ಲಿಂಗ ತಾರತಮ್ಯ, ವಯೋಮಿತಿ ಪರಿಗಣಿಸದೆ ರಾಜ್ಯದ ಅಷ್ಟೂ ಜನತೆಗೆ ಅನ್ವಯಿಸುವಂತೆ ಈ ಯೋಜನೆ ರೂಪಿಸಲಾಗಿದೆ. ಅಂದಹಾಗೆ ಈ ವಿಶಿಷ್ಟ ಯೋಜನೆಗೆ `ನಿದ್ರೆಭಾಗ್ಯ’ ಎಂದು ಹೆಸರಿಸಲಾಗಿದೆ..”

ಅಷ್ಟರಲ್ಲಿ ಏನೋ ಬಿಸಿಬಿಸಿಯಾದಂತಾಗಿ `ನಿದ್ರಾಮಯ್ಯ’ನವರಿಗೆ ಎಚ್ಚರಿಕೆ ಆಯಿತು. ಕಣ್ತೆರೆದು ನೋಡಿದರೆ ಫ್ಯಾನು ತಿರುಗುವುದು ನಿಲ್ಲಿಸಿತ್ತು. ಆಗಲೇ ಅವರಿಗೆ ಈಗ ಕರೆಂಟು ಹೋಗಿದೆ ಹಾಗೂ ತಾವಿಷ್ಟು ಹೊತ್ತು ಕಂಡಿದ್ದು ಕನಸು ಎಂಬುವುದರ ಅರಿವಾಗಿದ್ದು. ಸಮಯ ನೋಡಿದರೆ ಸರಿಯಾಗಿ ಬೆಳಗಿನ ಜಾವ 4.20. ಅರೆ ಬೆಳಗಿನ ಜಾವದ ಕನಸು ನಿಜವಾಗಬಹುದಾ ಎಂಬ ಆಸೆ ಹುಟ್ಟಿದರೂ ಕೈಯಲ್ಲಿದ್ದ ವಾಚು, ಅದು ತೋರಿಸುತ್ತಿದ್ದ ಟೈಮು ಅವರಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ನೆನಪಿಸಿತು. ಯಾಕೋ ಎಚ್ಚರವಾದ ಟೈಮೇ ಸರಿ ಇದ್ದಂಗಿಲ್ಲ ಎಂದುಕೊಂಡ ಅವರಿಗೆ ಮತ್ತೆ ನಿದ್ರೆ ಬರಲಿಲ್ಲ.

ಅಂದಹಾಗೆ ನಿದ್ರಾಮಯ್ಯ ಅವರು `ಅಖಿಲ ಕರ್ನಾಟಕ ನಿದ್ರಾಹೀನರ ಸಂಘ’ದ ಅಧ್ಯಕ್ಷರು. ರಾಜ್ಯದ ಬಹುಸಂಖ್ಯಾತರ ಪ್ರಮುಖ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿ ರಾಜಕೀಯ ಲಾಭ ಗಳಿಸುವುದನ್ನೇ ನೈಜ ರಾಜಕೀಯ ಎಂದುಕೊಂಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ತಲೆಕೆಡಿಸಿಕೊಂಡಿದ್ದು ಮಾತ್ರವಲ್ಲದೆ, ನಿದ್ರೆ ಕೆಡಿಸಿಕೊಂಡವರಲ್ಲಿ ನಿದ್ರಾಮಯ್ಯ ಪ್ರಮುಖರು. ಅವರಂತೆಯೇ ಸರ್ಕಾರದ ಇಂಥ ಏಕಪಕ್ಷೀಯ ಹಾಗೂ ಮಲತಾಯಿ ಧೋರಣೆಗಳಿಂದಾಗಿ ನಿದ್ರಾಹೀನರಾದ ಹಲವಾರು ಸಮಾನಮನಸ್ಕರು ಸಾಮಾಜಿಕ ತಾಣಗಳ ಮೂಲಕ ಸಂಪರ್ಕಕ್ಕೆ ಬಂದ ಮೇಲೆ ಅವರು ‘ಅಖಿಲ ಕರ್ನಾಟಕ ನಿದ್ರಾಹೀನರ ಸಂಘ’ ಸ್ಥಾಪಿಸಿದ್ದರು.

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಬಗ್ಗೆ ಮಾತ್ರ `ಅಭಯ ಹಸ್ತ’ ತೋರುತ್ತಿದ್ದು, ಬಹುಸಂಖ್ಯಾತರನ್ನು ಭಯಗ್ರಸ್ತರನ್ನಾಗುವಂತೆ ಮಾಡಿದೆ. ದೇವರ ಮೂರ್ತಿ ಮೇಲೆ ಮೂತ್ರ ಮಾಡಿದರೂ ಏನೂ ಆಗಲ್ಲ ಎಂದಿದ್ದ ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನು ವಿನಾಕಾರಣ ಹಿಂದೂ ಸಂಘಟನೆಗಳ ಮೇಲೆ ಆರೋಪಿಸಿ ಅದರ ಸದಸ್ಯರ ಕುತ್ತಿಗೆಗೆ ಕಟ್ಟಲು ಪ್ರಯತ್ನಿಸಿ ಹಿಂದು ವಿರೋಧಿಗಳನ್ನು ಓಲೈಸಿದ್ದು, ಶ್ರೀರಾಮನಿಗೆ ಅಪ್ಪ ಇಲ್ಲ, ರಾಮ ದೇವರೇ ಅಲ್ಲ ಎಂದು ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರೊ.ಕೆ.ಎಸ್.ಭಗವಾನ್‍ಗೆ ಪೊಲೀಸ್ ಬಂದೋಬಸ್ತಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಕೊಟ್ಟು ಪ್ರೋತ್ಸಾಹಿಸಿದ್ದು, ಸಾಮಾಜಿಕ ತಾಣಗಳಲ್ಲಿ ಇವುಗಳನ್ನು ವಿರೋಧಿಸಿ ಸ್ಟೇಟಸ್ ಹಾಕಿದ ಹಿಂದುಪರರನ್ನು ಬಂಧಿಸಿ ಜೈಲಿಗೆ ತಳ್ಳಿದ್ದು, ಅದೇ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಸ್ಟೇಟಸ್‍ಗಳನ್ನು ಹಾಕಿದ ಸೋ ಕಾಲ್ಡ್ ಪ್ರಗತಿಪರ-ಬುದ್ಧಿಜೀವಿಗಳ ಬಗ್ಗೆ ಜಾಣ ಕುರುಡು ಹಾಗೂ ಜಾಣ ಕಿವುಡುತನ ತೋರಿದ್ದು ಸಹಜವಾಗಿಯೇ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಬಹುಸಂಖ್ಯಾತ ಹಿಂದುಗಳಲ್ಲಿ ಆತಂಕ ಮೂಡಿಸಿದೆ.

ಅಷ್ಟು ಮಾತ್ರವಲ್ಲದೆ ಮೂಡಬಿದಿರೆಯ ಪ್ರಶಾಂತ, ಕೊಡಗಿನ ಕುಟ್ಟಪ್ಪ, ಮೈಸೂರಿನ ರಾಜು ಮುಂತಾದ ಹಿಂದು ಯುವಕರು ಅನ್ಯಕೋಮಿನವರ ಆಟಾಟೋಪಕ್ಕೆ ಬಲಿಯಾಗಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸದಿರುವುದು.. ಮತ್ತೊಂದೆಡೆ ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿಯ ಹತ್ಯೆಯಾಗಿದ್ದರೂ ಕೊಲೆಗಡುಕರು ಪತ್ತೆಯಾಗದಿರುವುದು, ಮಲ್ಲಿಕಾರ್ಜುನ ಬಂಡೆ, ಎಸ್‍ಐ ಜಗದೀಶ್ ಅವರಂಥ ಪೊಲೀಸ್ ಅಧಿಕಾರಿಗಳು ಕರ್ತವ್ಯದಲ್ಲಿದ್ದಾಗಲೇ ಹತ್ಯೆಯಾದರೂ ಅವರ ಕುಟುಂಬಕ್ಕೆ ನ್ಯಾಯ ಸಿಗದಿರುವುದು ರಾಜ್ಯದ ಬಹುಸಂಖ್ಯಾತರಲ್ಲಿ ಭಯ ಮೂಡಿಸಿದೆ. ಏಕಪಕ್ಷೀಯ ಕಾನೂನು ವ್ಯವಸ್ಥೆ, ಮಲತಾಯಿ ಧೋರಣೆಗಳಿಂದಾಗಿ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ರಾಜ್ಯದಲ್ಲಿ ಮತ್ತೆ ಯಾವಾಗ ದಕ್ಷ ಅಧಿಕಾರಿಗಳ ಹತ್ಯೆಯಾಗುವುದೋ, ಹಿಂದು ಯುವಕರ ಕೊಲೆಯಾಗುವುದೋ ಎಂಬ ಭೀತಿ ಬಹುಸಂಖ್ಯಾತರ ನಿದ್ದೆಗೆಡಿಸಿದೆ.

ನಿದ್ರಾಮಯ್ಯನವರು ಇಷ್ಟೆಲ್ಲ ಚಿಂತೆ ಮಾಡುತ್ತಿರುವಾಗ ಪತ್ರಿಕೆ ಹಂಚುವ ಹುಡುಗ ಕನ್ನಡದ ನಂಬರ್ ವನ್ ಪತ್ರಿಕೆ `ವಿಜಯವಾಣಿ’ಯನ್ನು ಎಂದಿನಂತೆ ಕೈಗಿಟ್ಟುಹೋದ. ಒಂದು ಕೈಯಲ್ಲಿ ಪತ್ರಿಕೆ ಮತ್ತೊಂದು ಕೈಯಲ್ಲಿ ಟೀ ಕಪ್ ಹಿಡಿದುಕೊಂಡು `ಚಾಯ್ ಪೆ ಚರ್ಚಾ’ ಎಂಬ ರೀತಿ ಪತ್ರಿಕೆ ನೋಡುತ್ತಿದ್ದ ಅವರಿಗೆ ತಟ್ಟನೆ ಕಾಣಿಸಿದ ಎರಡು ಪ್ರಮುಖ ಹೆಡ್ಡಿಂಗ್‍ಗಳೆಂದರೆ.. `ಇಂದು ಸಿಎಂ ಸಿದ್ದರಾಮಯ್ಯ ಅವರಿಂದ ಬಜೆಟ್ ಮಂಡನೆ’, ಮತ್ತೊಂದು `ಇಂದು ವಿಶ್ವ ನಿದ್ರಾ ದಿನ..’. ಈ ಎರಡು ಶೀರ್ಷಿಕೆಗಳು ನಿದ್ರಾಮಯ್ಯ ಅವರನ್ನು ಚಿಂತೆಯ ಬದಲಿಗೆ ಚಿಂತನೆಗೆ ಹಚ್ಚಿದವು. ಅಲ್ಲ.. ನಮ್ಮ ಸಿಎಂ ಸಿದ್ದು ಅವರ ಸರ್ಕಾರದಲ್ಲಿ ಜಾಸ್ತಿ ಸದ್ದು ಮಾಡಿದ್ದೆಂದರೆ `ಭಾಗ್ಯ’ ಮತ್ತು `ಜಯಂತಿ’. ಅದು ಬಿಟ್ಟು ಸುದ್ದಿಯಾದ ಮತ್ತೊಂದು ವಿಷಯ ಎಂದರೆ, ಅವರು ಎಲ್ಲೆಂದರಲ್ಲಿ ಸದ್ದೇ ಇಲ್ಲದೆ ಮಾಡುತ್ತಿದ್ದ `ನಿದ್ದೆ’. ಅವರು ಹಾಗೆ ಎಲ್ಲೆಂದರಲ್ಲಿ ನಿದ್ರೆ ಮಾಡುತ್ತಿದ್ದುದರಿಂದ ತಮಗೂ ಮುಖ್ಯಮಂತ್ರಿ ಎನಿಸಿಕೊಳ್ಳುವ ಭಾಗ್ಯ ಆಗಾಗ ಲಭಿಸಿದ್ದಕ್ಕೆ ನಿದ್ರಾಮಯ್ಯ ಮನದೊಳಗೆ ಖುಷಿಪಟ್ಟರು.(ಏಕೆಂದರೆ, ಸಿದ್ದರಾಮಯ್ಯ ಅವರನ್ನು ಕೆಲವರು ನಿದ್ರಾಮಯ್ಯ ಎಂದು ಕರೆದಿದ್ದು ಈ ರಿಯಲ್ ನಿದ್ರಾಮಯ್ಯ ಅವರ ಮನಸಲ್ಲಿ ಅಚ್ಚೊತ್ತಿತ್ತು.) ಆದರೆ, ನಿದ್ರಾಮಯ್ಯ ಅವರಿಗೆ ನಿಜಕ್ಕೂ ಅಚ್ಚರಿ ಮೂಡಿಸಿದ್ದು ವಿಶ್ವ ನಿದ್ರಾ ದಿನದಂದೇ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರಲ್ಲ ಅಂತ.

  • ರವಿಕಾಂತ ಕುಂದಾಪುರ

POPULAR  STORIES :

ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

ನಾಯಿ, ಬೆಕ್ಕುಗಳು ಮತ್ತು ಇಸ್ಲಾಂ ರಾಷ್ಟ್ರ..!?

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

1 COMMENT

LEAVE A REPLY

Please enter your comment!
Please enter your name here