ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

0
54

 

ಅದನ್ನು ನೇರವಾಗಿ ಉತ್ತರ ಕೊರಿಯ, ದಕ್ಷಿಣ ಕೊರಿಯ ನಡುವಿನ ಯುದ್ಧ ಎನ್ನುವುದರ ಬದಲು, ಅಮೆರಿಕಾ ಹಾಗೂ ಉತ್ತರ ಕೊರಿಯ ನಡುವಿನ ಸ್ಟ್ರೈಟ್ ವಾರ್ ಎನ್ನಬಹುದು. ಅಮೆರಿಕಾಕ್ಕೆ ಸಡ್ಡು ಹೊಡೆಯುವ ಛಾತಿ ಉತ್ತರ ಕೊರಿಯಕ್ಕಿದೆಯೇ ಎಂಬ ಪ್ರಶ್ನೆ ಎತ್ತುವಂತೆಯೇ ಇಲ್ಲ. ಏಕೆಂದರೇ ಅಮೆರಿಕಾ- ಇರಾಕ್, ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದಷ್ಟು ಈಸಿಯಾಗಿ ಉತ್ತರ ಕೊರಿಯವನ್ನು ಮಣಿಸಲಾಗುವುದಿಲ್ಲ. ಏಕೆಂದರೇ ಹೈಡ್ರೋಜನ್ ನಂತಹ ಅಸ್ತ್ರಗಳನ್ನು ರಾಶಿ ಹಾಕಿಕೊಂಡಿರುವ ಉತ್ತರ ಕೊರಿಯ ಅದನ್ನು ಪ್ರಯೋಗಿಸುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಅದಕ್ಕೆ ಕಾರಣ ಕಿಮ್ ಜಾಂಗ್ ಉನ್..! ಅವನಂತ ತಲೆಕೆಟ್ಟ ಸರ್ವಾಧಿಕಾರಿ ಜಗತ್ತಿನಲ್ಲೇ ಇಲ್ಲ…! ಒಂದು ಹಂತದಲ್ಲಿ ಹಿಟ್ಲರ್ ನನ್ನೇ ಮೀರಿಸುವಂತ ಕ್ರೂರ ಮನಃಸ್ಥಿತಿಯವನು ಇವನು..!?

ಕೆಲ ದಿನಗಳ ಹಿಂದೆ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯದ ಪತ್ತೆದಾರಿ ಏಜೆನ್ಸಿಗಳ ಮೇಲೆ ದಾಳಿ ನಡೆಸಿಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತನ್ನ ಸೈನ್ಯಕ್ಕೆ ಆದೇಶ ನೀಡಿದ್ದ. ಉತ್ತರ ಕೊರಿಯದ ಅಣ್ವಸ್ತ್ರ ಪರೀಕ್ಷೆ ಮತ್ತು ಕ್ಷಿಪಣಿ ಉಡಾವಣೆಯ ಬಳಿಕ ಕೊರಿಯ ಉಪಖಂಡದಲ್ಲಿ ಉದ್ವಿಗ್ನ ವಾತಾವರಣ ಮೂಡಿದೆ. ದಕ್ಷಿಣ ಕೊರಿಯ ಮೇಲೆ ಸೈಬರ್ ಮತ್ತಿತರ ದಾಳಿಗಳನ್ನು ಆಯೋಜಿಸಲು ಸಕ್ರಿಯ ಸಾಮರ್ಥ್ಯಗಳಿಸಿಕೊಳ್ಳಬೇಕೆಂಬ ಕಿಮ್ ಆದೇಶವನ್ನು ಪಾಲಿಸಲು ಗುಪ್ತಚರ ಸಂಸ್ಥೆ ಕಾರ್ಯಾರಂಭ ಮಾಡಿದೆ. ಈಗಾಗಲೇ ಅಣ್ವಸ್ತ್ರ ಕ್ಷಿಪಣಿಗಳ ಪ್ರಯೋಗ ನಡೆಸಿ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೋರಿಯ ಇದೀಗ ದಕ್ಷಿಣ ಕೊರಿಯ ಮೇಲೆ ದಾಳಿ ನಡೆಸಲು ಸಿದ್ಧತೆ ಆರಂಭಿಸಿರುವುದು ವಿಶ್ವ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಉತ್ತರ ಕೊರಿಯದ ಕ್ಷಿಪಣಿ ಪರೀಕ್ಷೆಯ ನಂತರ ಎರಡೂ ದೇಶಗಳ ಮದ್ಯೆ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೇನಾಪಡೆಗಳಿಗೆ ಯುದ್ಧಕ್ಕೆ ಸಿದ್ಧತೆ ನಡೆಸುವಂತೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾನೆ.

ಇದರ ಜೊತೆಗೆ ಉತ್ತರ ಕೊರಿಯ ಗುಪ್ತಚರ ಇಲಾಖೆ ದೇಶದ ಸೇನಾ ಸಾಮರ್ಥ್ಯದ ಬಗ್ಗೆ ವಿಶ್ಲೇಷಣೆ ನಡೆಸಲು ಆರಂಭಿಸಿದ್ದು, ದಕ್ಷಿಣ ಕೊರಿಯದ ಬಲಾಬಲವನ್ನು ಲೆಕ್ಕಹಾಕುತ್ತಿವೆ. ಈ ಬೆಳವಣಿಗೆಯ ನಂತರ ಉತ್ತರ ಕೊರಿಯ ವಿಶ್ವ ಸಮುದಾಯದ ವಿರೋಧದ ನಡುವೆಯೂ ಕ್ಷಿಪಣಿ ಪರೀಕ್ಷೆ ನಡೆಸಿದ ಬಳಿಕ ಅಮೆರಿಕದ ಯುದ್ಧ ವಿಮಾನಗಳು ದಕ್ಷಿಣ ಕೊರಿಯಗೆ ಬೆಂಬಲ ಸೂಚಕವಾಗಿ ಜಪಾನ್ ಹಾಗೂ ದಕ್ಷಿಣ ಕೊರಿಯದ ಗಡಿಭಾಗದಲ್ಲಿ ಹಾರಾಡಿವೆ. ಇದು ಈ ಪ್ರಾಂತ್ಯದಲ್ಲಿ ಯುದ್ಧ ಸನ್ನಿವೇಶ ವಾತಾವರಣ ನಿರ್ಮಾಣ ಮಾಡಿದೆ.

ಉತ್ತರ ಕೊರಿಯದ ಹೈಡ್ರೋಜನ್ ಬಾಂಬ್ ಪರೀಕ್ಷೆಗೆ ದಕ್ಷಿಣ ಕೊರಿಯ, ಜಪಾನ್, ಯುಎಸ್ಎ ವಿರೋಧ ವ್ಯಕ್ತಪಡಿಸಿತ್ತು. ಅಮೆರಿಕ, ಚೀನಾ, ರಷ್ಯಾ, ಜಪಾನ್, ಫ್ರಾನ್ಸ್ ದೇಶಗಳ ಪ್ರತಿನಿಧಿಗಳು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಪಾಲ್ಗೊಂಡು ಈ ಕುರಿತು ಚರ್ಚಿಸಿದ್ದರು. ಅಂತಾರಾಷ್ಟ್ರೀಯ ಪರಮಾಣು ಮೇಲ್ವಿಚಾರಣಾ ಸಮಿತಿಗೆ ಮಾಹಿತಿ ನೀಡದೆ ಪರಮಾಣು ಪರೀಕ್ಷೆ ನಡೆಸಿದ ಉತ್ತರ ಕೊರಿಯದ ವಿರುದ್ಧ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಉತ್ತರ ಕೊರಿಯ ವಿಶ್ವ ಶಾಂತಿಗೆ ಬೆದರಿಕೆ ಹಾಕಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸಿ, ಪರಮಾಣು ಪ್ರಯೋಗ ನಡೆಸಿರುವ ಉತ್ತರ ಕೊರಿಯ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕಾಗಿತ್ತು. ಆದರೆ, ಪರಮಾಣು ಅಸ್ತ್ರ ಹೊಂದುವ ಮೂಲಕ ಮೈತ್ರಿಕೂಟ ಮತ್ತು ಅಂತಾರಾಷ್ಟ್ರೀಯ ಶಾಂತಿ ಭದ್ರತೆಗೆ ಸವಾಲು ಹಾಕಿದೆ ಎಂದು ಒಬಾಮ ಹೇಳಿದ್ದರು. ಆದರೆ ಅವರು ಉತ್ತರ ಕೊರಿಯಕ್ಕೆ ತಾಕೀತು ಮಾಡುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಏಕೆಂದರೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಯಾರ ಮಾತು ಕೇಳಲಾರ..!? ಅವನು ಆಡಿದ್ದೇ ಅಂತಿಮ ಮಾತು…!

ಉತ್ತರ ಕೊರಿಯಾ ಇಲ್ಲಿಯವರೆಗೆ ಮೂರು ಬಾರಿ ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ. ಕೆಲ ತಿಂಗಳ ಹಿಂದೆ ಮೊದಲ ಬಾರಿಗೆ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿತ್ತು. ಅಣ್ವಸ್ತ್ರಕ್ಕಿಂತ ಹೈಡ್ರೋಜನ್ ಬಾಂಬ್ ಅತ್ಯಂತ ವಿಧ್ವಂಸಕಾರಿ ಹಾಗೂ ಭಯಂಕರ ಪರಿಣಾಮಕಾರಿಯಾಗಿದೆ. ಒಂದು ದೊಡ್ಡ ನಗರವನ್ನು ಒಂದೇ ಒಂದು ಬಾಂಬ್ನಿಂದ ಸಂಪೂರ್ಣ ನೆಲಸಮ ಮಾಡಿಬಿಡಬಹುದು. ಅದರ ಅಣು ಸಮ್ಮಿಳನ ಹಾಗೂ ಅಣು ವಿದಳನಗಳಿಂದ ಹೊರ ಹೊಮ್ಮುವ ಶಕ್ತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹೈಡ್ರೋಜನ್ ಬಾಂಬ್ ತಯಾರಿಕೆಯಲ್ಲಿ ಅಣು ಸಮ್ಮಿಳನ ಪ್ರಕ್ರಿಯೆ ನಡೆಸಲಾಗುತ್ತದೆ. ಎರಡು ಅಥವಾ ಹೆಚ್ಚು ಅಣುಗಳು ಒಟ್ಟಾಗಿ ಭಾರಿ ಗಾತ್ರದ ಪರಮಾಣುವಾಗುವ ಪ್ರಕ್ರಿಯೆ ಇದಾಗಿದೆ. ಸಾಮಾನ್ಯವಾಗಿ ಹೈಡ್ರೋಜನ್ ಬಾಂಬ್ ತಯಾರಿಕೆ ಅತ್ಯಂತ ಕಷ್ಟಕರ ಹಾಗೂ ಮಾರಣಾಂತಿಕವಾಗಿದೆ. ಹಿರೋಷಿಮಾ ಹಾಗೂ ನಾಗಾಸಾಕಿಯಲ್ಲಿ ಹಾಕಿದ ಅಣು ಬಾಂಬ್ನಿಂದಾದ ಪರಿಣಾಮದ ಬಗ್ಗೆ ಜಗತ್ತಿಗೆ ಗೊತ್ತಿದೆ. ಹೀಗಾಗಿ ಹೈಡ್ರೋಜನ್ ಬಾಂಬ್ ಪರಿಣಾಮದ ಬಗ್ಗೆ ಜಗತ್ತಿಗೆ ಸಹಜವಾಗಿ ಆತಂಕ ಉಂಟಾಗಿದೆ.

ಇನ್ನು ಅಮೆರಿಕಾಕ್ಕೆ ದುರ್ಬಲ ಇಸ್ಲಾಂ ರಾಷ್ಟ್ರಗಳನ್ನು ಮಟ್ಟ ಹಾಕಿದಂತೆ ಉತ್ತರ ಕೊರಿಯದ ಜೊತೆ ಸೆಣಸಲು ಸಾಧ್ಯವಿಲ್ಲ. ಅಮೆರಿಕಾಕ್ಕೆ ಸಡ್ಡು ಹೊಡೆಯುವ ಶಕ್ತಿಯಿರುವ ಉತ್ತರ ಕೊರಿಯಕ್ಕೆ ಚೀನಾ ಸೇರಿದಂತೆ ಹಲವು ಪ್ರಬಲ ರಾಷ್ಟ್ರಗಳ ಬೆಂಬಲವಿದೆ. ಸ್ವಲ್ಪ ಏರುಪೇರಾದರೂ ಅಮೆರಿಕಾದ ಮೇಲೆಯೇ ಹೈಡ್ರೋಜನ್ ಮಳೆ ಸುರಿಸಲು ಉತ್ತರ ಕೊರಿಯ ಹಿಂದೆ ಮುಂದೆ ಯೋಚಿಸುವುದಿಲ್ಲ. ಅಸಲಿಗೆ ಅಮೆರಿಕಾದ ಆತಂಕಕ್ಕೆ ಇದೇ ಕಾರಣ. ಹಾಗಿದ್ದು ದಕ್ಷಿಣ ಕೊರಿಯದ ಮೇಲೆ ಉತ್ತರ ಕೊರಿಯ ದಾಳಿ ಮಾಡುವ ಸುಳಿವು ಸಿಕ್ಕಿದ್ದೇ, ಕೊರಿಯ ಇಬ್ಭಾಗವಾಗುವುದಕ್ಕಿಂತ ಮುಂಚಿನಿಂದಲೂ ದಕ್ಷಿಣ ಕೊರಿಯ ಜೊತೆಗಿರುವ ಅಮೆರಿಕಾ, ಅವರಿಗೆ ಸಾಥ್ ಕೊಡುವ ಭರವಸೆ ನೀಡಿದೆ. ಈ ಬೆಳವಣಿಗೆ ಭಯಾನಕ ಯುದ್ಧವೊಂದರ ಸೂಚನೆ ಎನ್ನಲಾಗುತ್ತಿದೆ.

ಕ್ರಿಸ್ತಶಕ 918ರಿಂದ ಕ್ರಿಸ್ತ ಶಕ 1910ರವರೆಗೆ ಸರಿ ಸುಮಾರು ಸಾವಿರ ವರ್ಷಗಳ ಕಾಲ ಒಂದಾಗಿದ್ದ ಕೊರಿಯ 1910ರಲ್ಲಿ ಅಂದಿನ ವಸಾಹತುಶಾಹಿ ಜಪಾನಿನ ಕೈವಶವಾಗಿತ್ತು. ಅಲ್ಲಿಂದ ನಿರಂತರವಾಗಿ ಕೊರಿಯ ದೇಶವನ್ನು ಸಂಪೂರ್ಣವಾಗಿ ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಜಪಾನಿನೊಂದಿಗೆ ವಿಲೀನಗೊಳಿಸಲು ಜಪಾನ್ ಪ್ರಯತ್ನಿಸಿತ್ತು. ಫಲವತ್ತಾದ ಕೊರಿಯ ದೇಶಕ್ಕೆ ಜಪಾನಿ ರೈತರನ್ನು ದೊಡ್ಡ ಸಂಖ್ಯೆಯಲ್ಲಿ ವಲಸೆ ಮಾಡಿಸಿ, ಅವರಿಗೆ ಕೊರಿಯ ಭೂಮಿಯ ಒಡೆತನ ಕೊಡಿಸಿ, ಕೊರಿಯನ್ನರನ್ನು ಅವರ ಆಳುಗಳನ್ನಾಗಿಸಿಕೊಂಡು ಅವರ ದುಡಿಮೆಯ ಫಲವನ್ನು ಲೂಟಿ ಮಾಡತೊಡಗಿತ್ತು. 1945ರಲ್ಲಿ ಜಪಾನ್ ಎರಡನೇ ಮಹಾಯುದ್ಧದಲ್ಲಿ ಸೋತು ನೆಲಕ್ಕಚ್ಚಿದಾಗ ಅಮೆರಿಕಾ, ರಷ್ಯಾ- ಅಖಂಡ ಕೊರಿಯವನ್ನು ಉತ್ತರ-ದಕ್ಷಿಣವೆಂಬ ಎರಡು ಭಾಗ ಮಾಡಿತ್ತು. ಅದರ ಉಸ್ತುವಾರಿ ವಹಿಸಿಕೊಂಡು ಸೂಕ್ತ ಸಮಯದಲ್ಲಿ ಕೊರಿಯಗೆ ಸ್ವತಂತ್ರ ಕೊಡುವ ಭರವಸೆ ನೀಡಿತ್ತು.

ಹೀಗಾಗಿ ಉತ್ತರದಲ್ಲಿ ಸೋವಿಯತ್ ನೇತೃತ್ವದ ಕಮ್ಯೂನಿಸ್ಟ್ ಸರ್ಕಾರ ಜಾರಿಗೆ ಬಂದರೆ, ದಕ್ಷಿಣದಲ್ಲಿ ಅಮೇರಿಕ ಸರ್ಕಾರ ಜಾರಿಗೆ ಬರುತ್ತದೆ. ಎರಡೂ ಸರ್ಕಾರಗಳು ತಾವೇ ಕೊರಿಯದ ನಿಜವಾದ ಪ್ರತಿನಿಧಿ ಎಂದು ವಾದಿಸುತ್ತವೆ. ಆದರೆ ಅವರೊಳಗಿನ ಬಿಕ್ಕಟ್ಟು ಬಗೆಹರಿಯದೇ ಇದ್ದಾಗ ಮಧ್ಯಸ್ಥಿಕೆ ವಹಿಸುವ ಅಮೇರಿಕ ವಿವಾದವನ್ನು ವಿಶ್ವಸಂಸ್ಥೆಗೆ ಎಳೆದು 1948ರಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯ ಎಂಬ ಎರಡು ಪ್ರತ್ಯೇಕ ದೇಶಗಳಾಗುವಂತೆ ಮಾಡುತ್ತವೆ. ಕಮ್ಯೂನಿಸ್ಟ್ ರಷ್ಯಾದ ಬೆಂಬಲದ ಜೊತೆ ಹೇಗಾದರೂ ದಕ್ಷಿಣ ಕೊರಿಯ ಗೆದ್ದು ಕಮ್ಯೂನಿಸ್ಟ್ ಆಡಳಿತದಡಿ ಒಂದಾಗಿಸಬೇಕೆಂಬ ಉತ್ತರ ಕೊರಿಯದ ಪ್ರಯತ್ನ 1950ರಲ್ಲಿ ಯುದ್ಧಕ್ಕೆ ನಾಂದಿ ಹಾಡುತ್ತದೆ. ಮೂರು ವರ್ಷ ನಡೆಯುವ ಈ ಯುದ್ಧ ಕೊನೆಯಲ್ಲಿ ಅಮೇರಿಕ ನೇತೃತ್ವದ ವಿಶ್ವಸಂಸ್ಥೆಯ ಗುಂಪು ಮಧ್ಯ ಪ್ರವೇಶಿಸಿ ದಕ್ಷಿಣ ಕೊರಿಯ ಪರ ಯುದ್ಧ ಮಾಡಿ ಉತ್ತರ ಕೊರಿಯವನ್ನು ಹಿಮ್ಮೆಟ್ಟಿಸುವುದರೊಂದಿಗೆ ಕೊನೆಯಾಗುತ್ತದೆ. ಇದರೊಂದಿಗೆ ಎರಡು ದೇಶಗಳ ನಡುವೆ ಬಿಗಿ ಭದ್ರತೆಯ ನಾಲ್ಕು ಕಿಲೋಮೀಟರ್ ಅಗಲದ ಡಿಮಿಲಿಟರೈಸ್ಡ್ ವಲಯವೊಂದು ಸೃಷ್ಟಿಯಾಗುತ್ತೆ. ಅಷ್ಟಕ್ಕೂ ರಷ್ಯಾ, ಚೀನಾ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಕೊರಿಯ ಒಂದಾಗುವುದು ಬೇಕಿರಲಿಲ್ಲ. ಅದಕ್ಕೆ ತಕ್ಕಂತೆ ಒಡೆದು ಆಳುವ ರಾಜಕೀಯ ಮಾಡುವ ಈ ದೇಶಗಳು ಕೊರಿಯನ್ನರ ನಡುವಿನ ಅಂತರ ಹೆಚ್ಚುವಂತೆ ಮಾಡುತ್ತಾರೆ.

ಇದೇ ಹೊತ್ತಿನಲ್ಲಿ ಜಾಗತೀಕರಣಕ್ಕೆ ತೆರೆದುಕೊಳ್ಳುತ್ತಿರುವ ನಾಡುಗಳೆಲ್ಲ ಎಲೆಕ್ಟ್ರಾನಿಕ್ಸ್, ಕಂಪ್ಯೂಟಸರ್್ ಮುಂತಾದ ಸುಧಾರಿತ ತಂತ್ರಜ್ಞಾನದ ಅಭಿವೃದ್ಧಿಯತ್ತ ಗಮನ ಹರಿಸಿ ಮುನ್ನಡೆಯುವ ಹೊತ್ತಿನಲ್ಲಿ ಅಮೆರಿಕದ ಸಹಾಯದೊಂದಿಗೆ ಇಂತಹದೊಂದು ಆರ್ಥಿಕ ಮಾದರಿಯನ್ನು ದಕ್ಷಿಣ ಕೊರಿಯ ಅಳವಡಿಸಿಕೊಳ್ಳುತ್ತದೆ. ಅದರಂತೆ ಹ್ಯುಂಡಾಯ್, ಸ್ಯಾಮಸಂಗ್, ಎಲ್ಜಿ ತೆರನಾದ ವಿಶ್ವಮಾನ್ಯ ಸಂಸ್ಥೆಗಳು ಅಲ್ಲಿ ಯಶಸ್ವಿಯಾಗುತ್ತವೆ. ಅಲ್ಲಿನ ಜನರ ಜೀವನಮಟ್ಟ ವ್ಯಾಪಕವಾಗಿ ಸುಧಾರಿಸುತ್ತದೆ.

ಇನ್ನೊಂದೆಡೆ ಮಾವೋ-ಸ್ಟಾಲಿನ್ ವಾದಕ್ಕೆ ಅಂಟಿಕೊಂಡ ಉತ್ತರ ಕೊರಿಯ ಆಡಳಿತದ ಎಲ್ಲ ವ್ಯವಸ್ಥೆಯನ್ನು ಕೇಂದ್ರಿಕರಿಸಿ, ಖಾಸಗಿ ಬಂಡವಾಳ, ಉದ್ಯಮಶೀಲತೆಯೆಲ್ಲವನ್ನು ಕಡೆಗಣಿಸಿ ಮೈನಿಂಗ್, ಸ್ಟೀಲ್ ಉತ್ಪಾದನೆ, ಮಿಲಿಟರಿ ಉದ್ದಿಮೆಯತ್ತ ಗಮನಹರಿಸುತ್ತದೆ. ತಮ್ಮದೇ ಸ್ವಾರ್ಥದ ಕಾರಣಕ್ಕೆ ಇದನ್ನು ಬೆಂಬಲಿಸುತ್ತಿದ್ದ ಸೋವಿಯತ್ ಒಕ್ಕೂಟ ತೊಂಬತ್ತರ ದಶಕದಲ್ಲಿ ಛಿದ್ರವಾಗುತ್ತದೆ. ಇನ್ನೊಂದೆಡೆ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯೆಡೆಗೆ ಸಾಗುವ ಚೀನಾ ದೊಡ್ಡ ಮಟ್ಟದಲ್ಲಿ ತನ್ನ ಅರ್ಥವ್ಯವಸ್ಥೆಯನ್ನು, ಜನರ ಆರ್ಥಿಕ ಮಟ್ಟವನ್ನು ಸುಧಾರಿಸಿ ಮುನ್ನುಗ್ಗುತ್ತದೆ. ಚೀನಿಯರು ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ಮೋಸ ಮಾಡಿದರು ಎಂದು ಗೊಣಗುವ ಉತ್ತರ ಕೊರಿಯದ ನಾಯಕರು ಪಕ್ಕದಲ್ಲೇ ಕ್ಷಿಪ್ರ ವೇಗದಲ್ಲಿ ಏಳಿಗೆಯತ್ತ ಸಾಗಿರುವ ದಕ್ಷಿಣ ಕೊರಿಯವನ್ನು ಕಂಡು ಕಾಣದಂತೆ ಕೂರುತ್ತಾರೆ. ದಿನೇದಿನೇ ಕುಸಿಯುವ ಅಲ್ಲಿನ ಅರ್ಥ ವ್ಯವಸ್ಥೆಯಿಂದ ಕಂಗೆಟ್ಟ ಜನರು ದಂಗೆ ಏಳಬಾರದು ಎಂದು ಇಡೀ ಸರ್ಕಾರವನ್ನೇ ಹೆಚ್ಚು ಕಡಿಮೆ ಮಿಲಿಟರಿ ಸರ್ವಾಧಿಕಾರದತ್ತ ಕೊಂಡೊಯ್ಯುತ್ತಾರೆ. ದಕ್ಷಿಣ ಕೊರಿಯಕ್ಕೆ ಹೋಲಿಸಿದರೇ ಉತ್ತರ ಕೊರಿಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಆದರೆ ಮಿಲಿಟರಿ ಶಕ್ತಿ ಅಪಾಯಕಾರಿಯಾಗಿದೆ. ಹಾಗಾಗಿಯೇ ಮಾತೆತ್ತಿದರೇ ಅದು ಯುದ್ಧಕ್ಕೆ ಸಿದ್ದವಾಗುತ್ತದೆ.

ಹಾಗೆ ನೋಡಿದರೇ ಕೊರಿಯನ್ನರನ್ನು ಇಬ್ಭಾಗ ಮಾಡಿದ ಅಪಕೀರ್ತಿ ಅಮೆರಿಕಾ, ರಷ್ಯಾಕ್ಕಿದ್ದರೇ, ಒಟ್ಟಾರೆ ಕೊರಿಯಾವನ್ನು ಚಿಂದಿ ಮಾಡಿದ್ದು ಜಪಾನ್. ಯುದ್ಧಕೋರ ಮನಃಸ್ಥಿತಿ ಜಪಾನಿನ ಆಳುವ ವ್ಯವಸ್ಥೆಯೊಳಗೇ ಇತ್ತು. ಈಗ ಅದರ ಕಾವು ತಣ್ಣಗಾದಂತಿದೆ. ಮೊದಲ ಮಹಾಯುದ್ಧದ ಸಂದರ್ಭದಲ್ಲೇ ಅದೊಂದು ಸಾಮ್ರಾಜ್ಯಶಾಹಿಯ ರೂಪ ಪಡೆದಿತ್ತು. `ಏಷ್ಯಾ ಖಂಡ ಏಷ್ಯಾ ಖಂಡದಲ್ಲಿದ್ದವರಿಗೆ’ ಎನ್ನುತ್ತ ಹಲವು ಒಪ್ಪಂದಗಳನ್ನು ಬಹಳ ವರ್ಷಗಳ ಹಿಂದೆಯೇ ಮಾಡಿಕೊಂಡಿತ್ತು. ರಷ್ಯಾ, ಚೀನಾ, ಕೊರಿಯ ಜೊತೆಗೆ ಪಾಶ್ಚಿಮಾತ್ಯ ದೇಶಗಳೊಂದಿಗೂ ಯುದ್ಧ ನಡೆಸಿದ, ಯುದ್ಧ ಘೋಷಿಸಿದ ದೇಶವದು. ಅದು ಅಮೇರಿಕಾ ಜೊತೆ ಸಾಮಾಜಿಕ, ರಾಜಕೀಯ, ಆರ್ಥಿಕ ಕಾದಾಟವನ್ನು ಇವತ್ತಿಗೂ ನಡೆಸುತ್ತಿದೆ.

ಆ ಕಾಲಕ್ಕೆ ಬಂಡವಾಳಶಾಹಿ ದೈತ್ಯನಾಗಿ ಬೆಳೆದು ನಿಂತಿದ್ದ ಅಮೆರಿಕಾ ಜಗತ್ತಿನ ಮೇಲೆ ಹಿಡಿತ ಸ್ಥಾಪಿಸಲು 1945 ಅಗಸ್ಟ್ 6 ಮತ್ತು 9ರಂದು ಹಿರೋಶಿಮ-ನಾಗಾಸಾಕಿಯ ಮೇಲೆ ಅಣು ಬಾಂಬ್ ಎಸೆದು 2 ಲಕ್ಷಕ್ಕೂ ಅಧಿಕ ಜನರ ಸಾವಿಗೆ ಕಾರಣವಾಯಿತು. ಲಕ್ಷ-ಲಕ್ಷಗಳ ಸಂಖ್ಯೆಯಲ್ಲಿ ಜನರನ್ನು ಸಾಮೂಹಿಕವಾಗಿ ಹತ್ಯೆಗೈಯುವ ವಿನಾಶಕಾರಿ ಬಾಂಬ್ ಅನ್ನು ಅಲ್ಲೀತನಕ ಯಾರೂ ಬಳಸಿರಲಿಲ್ಲ. ಮುಗ್ಧ ಜನರನ್ನು ಅಣು ವಿಕಿರಣದ ನರಕಕ್ಕೆ ನೂಕುವ, ಜಗತ್ತು ಕಂಡು ಕೇಳರಿಯದ ಹಿಂಸೆಗಳಿಗೆ ಗುರಿ ಮಾಡುವ ಅಣು ಬಾಂಬ್ ಪ್ರಯೋಗದ ಮಾಡಿದ ಕುಖ್ಯಾತಿ ಅಮೆರಿಕಾಕ್ಕೆ ಸೇರಿದೆ. ತಾನು ಮಾತ್ರ ಇಂದಿಗೂ ರಾಶಿ ರಾಶಿ ಅಣ್ವಸ್ತ್ರಗಳನ್ನು ಪೇರಿಸಿಟ್ಟುಕೊಂಡು ಜಗತ್ತಿಗೆಲ್ಲ ಅಣ್ವಸ್ತ್ರ ತಯಾರಿಕೆ ವಿರುದ್ಧ ಎಚ್ಚರಿಕೆ ಕೊಡುವ ಅಮೆರಿಕದ ಧೋರಣೆ ಎಷ್ಟು ಅಭಾಸಕರ ಎಂಬುದು ಅದರ ಇತಿಹಾಸವನ್ನು ತಿಳಿದುಕೊಂಡರೆ ಅರ್ಥವಾಗುತ್ತದೆ.

ಮೂಲಗಳ ಪ್ರಕಾರ ಜಗತ್ತಿನಲ್ಲಿ ಆರು ಸಾವಿರಕ್ಕೂ ಅಧಿಕ ಅಣ್ವಸ್ತ್ರಗಳಿವೆ. ಆರು ಸಾವಿರ ಅಣ್ವಸ್ತ್ರಗಳ ಪೈಕಿ ಶೇಕಡಾ ಒಂದರಷ್ಟನ್ನು ಬಳಸಿದರೂ ವಿಶ್ವವ್ಯಾಪಿ ಹವಾಮಾನ ಬದಲಾವಣೆಯಾಗುತ್ತದೆ. ಭೂಮಿ ಸುಡತೊಡಗುತ್ತದೆ. ಇಷ್ಟು ಮಾತ್ರವಲ್ಲ, ಅಣ್ವಸ್ತ್ರಗಳ ಶಸ್ತ್ರಾಗಾರ ನಿರ್ವಹಣೆ ಮತ್ತು ಆಧುನಿಕರಣಕ್ಕೆ ವಾರ್ಷಿಕ 1.7 ಟ್ರಿಲ್ಲಿಯನ್ ಡಾಲರ್ ಖರ್ಚು ತಗಲುತ್ತದೆ ಎನ್ನಲಾಗುತ್ತದೆ. ಜಗತ್ತಿನಾದ್ಯಂತ ಈ ಹಣಕಾಸು ಸಂಪನ್ಮೂಲವನ್ನು ಬಡತನ ನಿವಾರಣೆ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ, ಆರೋಗ್ಯ, ಶಿಕ್ಷಣ ರಂಗದ ಸವಾಲು, ಸಮಸ್ಯೆ ಬಗೆಹರಿಸಲು ಉದ್ಯೋಗ ನೀಡಲು ಬಳಸಿದರೇ ಜಗತ್ತಾದರೂ ಸುಭಿಕ್ಷವಾಗುತ್ತದೆ. ಆದರೆ ಕಿಮ್ ಜಾಂಗ್ ಉನ್ನಂತವರ ಹಿಟ್ಲರ್ ಮನಃಸ್ಥಿತಿಗಳಿಗೆ ಇವೆಲ್ಲ ಅರ್ಥವಾಗುವುದೇ ಇಲ್ಲ. ಸ್ಮಾರ್ಟ್ ಗೇಮ್ ಗಳಿಗೆ ಹೆಸರುವಾಸಿಯಾಗಿರುವ ಅಮೆರಿಕಾ, ಚೀನಾ ಇನ್ನಿತರೆ ಯುದ್ಧದಾಹಿ ದೇಶಗಳೇ ಅಸಲಿಗೆ ಜಾಗತಿಕ ಹಂಟರ್ ಗಳಾಗಿವೆ. ಜಾಗತಿಕ ಸ್ವಾರ್ಥಗಳೇ ಹಲವು ದೇಶಗಳನ್ನು ಒಡೆದುಹಾಕುತ್ತಿವೆ. ಯುದ್ಧದ ಭೀತಿ ಜಗತ್ತನ್ನು ಆತಂಕ್ಕಕೀಡುಮಾಡುತ್ತಿವೆ. ಅದೇನೇ ಪಿತೂರಿಗಳಿದ್ದರೂ, ಅದೇನೇ ಸಿದ್ಧಾಂತಗಳ ತಿಕ್ಕಾಟವಿದ್ದರೂ, ಕೊರಿಯನ್ ಯುವ ಸಮುದಾಯವೇ ಮುಂದೊಂದು ದಿನ ಕೊರಿಯನ್ನರ ಏಕೀಕರಣ ಸಾಧ್ಯವಾಗಿಸಬಲ್ಲರು ಎಂಬ ಆಶಾವಾದ ಕೋರಿಯನ್ ಸಮಾಜದಲ್ಲಿದೆ. ಅವರಂದುಕೊಂಡಂತೆ ಆಗಲಿ; ಜಗತ್ತು ನೆಮ್ಮದಿಯಿಂದಿರಲಿ..!

  •  ರಾ ಚಿಂತನ್

POPULAR  STORIES :

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

ನಾಯಿ, ಬೆಕ್ಕುಗಳು ಮತ್ತು ಇಸ್ಲಾಂ ರಾಷ್ಟ್ರ..!?

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

LEAVE A REPLY

Please enter your comment!
Please enter your name here