ಬೆಂಗಳೂರು : ಬೆಂಗಳೂರಿನಿಂದ ತಿರುಪತಿಗೆ ಕೆಎಸ್ಆರ್ಟಿಸಿ ಪ್ಯಾಕೇಜ್ ಪ್ರವಾಸದ ಆಫರ್ ಘೋಷಿಸಿದೆ. ತಿರುಪತಿ ದರ್ಶನ ಮಾಡಬಯಸುವವರು ಈ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ. ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯಲು ಕೆಎಸ್ಆರ್ಟಿಸಿ ಈ ಪ್ಯಾಕೇಜ್ ಪ್ರವಾಸ ಆರಂಭಿಸಿದೆ. ಐರಾವತ್ ಮಲ್ಟಿ ಆಕ್ಸೆಲ್ ಬಸ್ನಲ್ಲಿ ತಿರುಪತಿಗೆ ಹೋಗಬಹುದಾಗಿದೆ.
ಅಲ್ಲದೇ ಗೈಡ್ ಸೌಲಭ್ಯ, ಹೋಟೆಲ್ನಲ್ಲಿ ಫ್ರೆಶ್‌ಅಪ್ ಆಗುವ ಸೌಲಭ್ಯ, ಶ್ರೀ ಪದ್ಮಾವತಿ ದೇವಸ್ಥಾನ ದರ್ಶನ, ತಿಂಡಿ, ತಿರುಪತಿ-ತಿರುಮಲ ಪ್ರಯಾಣ, ಶೀಘ್ರ ದರ್ಶನ ಮತ್ತು ಊಟದ ಸೌಲಭ್ಯಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ. ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ತಿರುಪತಿ ಪ್ಯಾಕೇಜ್ ಪ್ರವಾಸದ ಬಸ್ ಹೊರಡಲಿದೆ. ತಿರುಪತಿ ಪ್ಯಾಕೇಜ್ ಪ್ರಯಾಣಿಕರು ಕಡ್ಡಾಯವಾಗಿ ಬೆಂಗಳೂರು ಮತ್ತು ಹೊರವಲಯದಿಂದ ಪ್ರಯಾಣಿಸಬೇಕು. ತಿರುಪತಿಯಲ್ಲಿ ಅಥವಾ ಸ್ಥಳಗಳ ನಡುವಿನ ಮಾರ್ಗದಲ್ಲಿ ಪ್ಯಾಕೇಜ್ ಕಾರ್ಯಕ್ರಮಕ್ಕೆ ಸೇರಲು ಯಾವುದೇ ಪ್ರಯಾಣಿಕರಿಗೆ ಅನುಮತಿ ಇಲ್ಲ. ಈ ನಿಟ್ಟಿನಲ್ಲಿ ಪ್ರಯಾಣಿಕರು ಸಹಕರಿಸಬೇಕಾಗಿ ಕೆಎಸ್ಆರ್ಟಿಸಿ ವಿನಂತಿ ಮಾಡಿದೆ.