ಉತ್ತರ ಪ್ರದೇಶದಲ್ಲಿ ನಾಲಾಯಕ್ ಸರ್ಕಾರ ಅಧಿಕಾರದಲ್ಲಿರುವವರೆಗೂ ಅಲ್ಲಿ ಮೊಹಮ್ಮದ್ ಇಕ್ಲಾಕ್‍ರಂತವರ ಹತ್ಯೆ ನಡೆಯುತ್ತಲೇ ಇರುತ್ತದೆ. ದಲಿತ ಮಹಿಳೆಯರನ್ನು ಬೆತ್ತಲು ಮಾಡಲಾಗುತ್ತದೆ. ಮಥುರಾದಲ್ಲಿ ರಾಮ್‍ವೃಕ್ಷ್ ಯಾದವ್‍ರಂತ ಕ್ರಿಮಿಗಳು ಅಟ್ಟಹಾಸಗೈಯ್ಯುತ್ತಲೇ ಇರುತ್ತಾರೆ. ಅಲ್ಲಿ ಹೆಸರಿಗೆ ಮಾತ್ರ ಸಮಾಜವಾದಿಗಳ ಆಡಳಿತವಿದೆ. ಮುಲಾಯಂ ಸಿಂಗ್ ಸುಪುತ್ರ ಅಖಿಲೇಶ್ ಯಾದವ್ ರಾಜ್ಯ ಕಾಯ್ತಿದಾರಾ..? ಬೇರೇನಾದರೂ ಕಾಯ್ತಿದಾರಾ..? ಎಂದು ಕೇಳಬೇಕಾದ ಪರಿಸ್ಥಿತಿಯಿದೆ. ಮೊನ್ನೆಯಷ್ಟೆ ದಾದ್ರಿ ಕೇಸಿಗೆ ಸಂಬಂಧಪಟ್ಟಂತೆ ಮಥುರಾ ವಿಧಿವಿಜ್ಞಾನ ಪ್ರಯೋಗಾಲಯ ಅಕ್ಲಾಕ್ ಮನೆಯಲ್ಲಿದ್ದಿದ್ದು ದನದ ಮಾಂಸ ಎಂದು ರಿಪೋರ್ಟ್ ಕೊಟ್ಟಿತ್ತು. ಇದಕ್ಕೂ ಮೊದಲು ನೋಯ್ಡಾದ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯ ಅದು ಕುರಿಮಾಂಸ ಎಂದಿತ್ತು. ಇದೀಗ ಮಥುರಾ ವಿಧಿವಿಜ್ಞಾನ ಪ್ರಯೋಗಾಲಯದ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಶಿವಸೇನೆ ಕಾರ್ಯಕರ್ತರ ಮುಂದಾಳತ್ವದಲ್ಲಿ ದೊಡ್ಡಮಟ್ಟದ ಪ್ರತಿಭಟನೆಗೆ ರೂಪುರೇಶೆ ಸಿದ್ದವಾಗಿದೆ.
ಅಷ್ಟಕ್ಕೂ ಯುಪಿಯಲ್ಲಿ ಗೋಹತ್ಯೆ ನಿಷೇಧವಾಗಿದೆ. ಆದರೆ ಗೋಮಾಂಸ ಸೇವಿಸಬಹುದು. ಒಂದುವೇಳೆ ಮಥುರಾ ವಿಧಿವಿಜ್ಞಾನ ಪ್ರಯೋಗಾಲಯದ ಹೇಳಿಕೆ ನಿಜವೇ ಆದರೆ ಮತ್ತೆ ದಾದ್ರಿಗೆ ಬೆಂಕಿಹಾಕುವ ಪ್ರಮೇಯವೇ ಬರುವುದಿಲ್ಲ. ಮನೆಯಲ್ಲಿ ಗೋಮಾಂಸ ಇಟ್ಟುಕೊಳ್ಳಬಹುದು ಎಂದಮೇಲೆ, ಆ ಕಾರಣಕ್ಕೆ ಕೊಂದವರಿಗೆ ಬೆಂಬಲಿಸಲು ನಿಂತವರ ವಿರುದ್ಧ ಕೆಮ್ಮಲು ತಾಕತ್ತಿಲ್ಲದ ಯುಪಿ ಸರ್ಕಾರ ರಾಮರಾಜ್ಯದಲ್ಲಿ ರಾವಣ ಸಾಮ್ರಾಜ್ಯವನ್ನು ನಿರ್ಮಿಸಲು ಮುಂದಾಗಿರುವುದು ನಿಖರವಾಗಿದೆ. ಇವುಗಳನ್ನು ನೋಡುತ್ತಿದ್ದರೇ ಯುಪಿಯಲ್ಲಿ ಹೆಸರಿಗೆ ಮಾತ್ರ ಸಮಾಜವಾದ, ಜಾತ್ಯಾತೀತ ನಿಲುವು ಗೋಚರವಾಗುತ್ತದೆ. ಅಖಿಲೇಶ್ ಸರ್ಕಾರ ಉತ್ತರಪ್ರದೇಶದಲ್ಲಿ ದೊಡ್ಡಮಟ್ಟದಲ್ಲಿ ಫ್ಲಾಪ್ ಆಗುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ. ಮೊನ್ನೆಯಷ್ಟೆ ಮಥುರಾದಲ್ಲಿ ತನ್ನದೇ ಜಾತಿಯ ರಾಮ್‍ವೃಕ್ಷ್‍ಯಾದವ್‍ನನ್ನು ಬೆಳೆಸಿದ ತಪ್ಪಿಗೆ ಅಖಿಲೇಶ್‍ಗೆ ಮರ್ಮಾಘಾತವಾಗಿತ್ತು. ಇದಕ್ಕೂ ಮುನ್ನ ಅಖಿಲೇಶ್‍ನ ರಾವಣ ರಾಜ್ಯದಲ್ಲಿ ದಲಿತ ಮಹಿಳೆಯರನ್ನು ಇನ್ಸ್‍ಪೆಕ್ಟರ್ ಒಬ್ಬ ಬೀದಿಯಲ್ಲಿ ಬೆತ್ತಲು ಮಾಡಿ ಥಳಿಸಿದ್ದ. ಕೋಮುವೈಷಮ್ಯ, ಅರಾಜಕತೆ, ಜಂಗ್ಲಿನ್ಯಾಯಗಳಿರುವ ಉತ್ತರಪ್ರದೇಶ ಸರ್ಕಾರ ಮುಂದಿನ ಅವಧಿಯಲ್ಲಿ ತೆರಬೇಕಾಗಿರುವುದು ಸಣ್ಣಪುಟ್ಟ ದಂಡವನ್ನಲ್ಲ ಎನ್ನುವುದನ್ನು ಮುಲಾಯಂ, ಅಖಿಲೇಶ್ ಅರ್ಥ ಮಾಡಿಕೊಳ್ಳಬೇಕಿದೆ.
ಇದೀಗ ದಾದ್ರಿಯಲ್ಲಿ ಸರ್ಕಾರಕ್ಕೆ ಇಕ್ಲಾಕ್ ಕುಟುಂಬದ ವಿರುದ್ಧವಾಗಿ ಎಫ್‍ಐಆರ್ ದಾಖಲಿಸುವಂತೆ ಇಪ್ಪತ್ತು ದಿನಗಳ ಕಾಲ ಗಡುವು ನೀಡಲಾಗಿದೆ. ದೊಡ್ಡವರ ಲಾಬಿಗೆ ಮಣಿದು ಅಥವಾ ಹೆದರಿ ಸರ್ಕಾರ ಇಕ್ಲಾಕ್ ಕುಟುಂದ ಮೇಲೆ ಸವಾರಿ ಮಾಡಿದರೇ ಅದು ಜಾಗತಿಕವಾಗಿ ಸದ್ದುಮಾಡುತ್ತದೆ. ದೇಶದ ನಾನಾ ಕಡೆ ಕೋಮುಸಂಘರ್ಷಗಳು ನಡೆಯಬಹುದು. ಅನ್ಯಕೋಮಿನವರು ಎಂದಮಾತ್ರಕ್ಕೆ ಅವರ ವಿರುದ್ಧ ಏನು ಬೇಕಾದರೂ ಮಾಡಬಹುದು ಎನ್ನುವುದಾದರೇ- ಅಸಹಿಷ್ಣುತೆಗೆ ಇದಕ್ಕಿಂತ ತಾಜಾ ದೃಷ್ಟಾಂತಗಳು ಬೇಕಾಗಿಲ್ಲ. ಒಂದೊಂದು ಪ್ರಯೋಗಾಲಯ ಒಂದೊಂದು ರೀತಿಯ ವರದಿ ಕೊಡುವುದಾದರೇ, ಅದರ ಪಾರದರ್ಶಕತೆಯ ಬಗ್ಗೆ ಶಂಕೆವ್ಯಕ್ತವಾಗುತ್ತಿದೆ. ಒಬ್ಬೊಬ್ಬರು ಒಂದೊಂದು ರಿಪೋರ್ಟ್ ಕೊಟ್ಟರೇ ಸತ್ಯ ಯಾವುದು ಸ್ವಾಮಿ..!? ಈ ವರದಿಗಳು ಸುಳ್ಳನ್ನು ಸತ್ಯ, ಸತ್ಯವನ್ನು ಸುಳ್ಳು ಮಾಡುವಂತಿದೆ. ನ್ಯಾಯ ಯಾವುದು..? ಅನ್ಯಾಯ ಯಾವುದು..? ಎಂದು ಯೋಚಿಸುವಂತಾಗಿದೆ. ಅಷ್ಟಕ್ಕೂ ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧವಾಗಿದೆ. ಗೋಮಾಂಸ ಸೇವನೆ ನಿಷಿದ್ಧವಲ್ಲ. ಅವರ ಮನೆಯಲ್ಲಿ ಯಾವ ಮಾಂಸವಿದ್ದರೂ ಅದು ಅಪರಾಧವಲ್ಲ. ಆದರೆ ಅದು ನಿಜಕ್ಕೂ ಗೋಮಾಂಸದ ಕಾರಣಕ್ಕೆ ನಡೆದ ಹತ್ಯೇನಾ..? ಅಥವಾ ಬೇರೆ ಕಾರಣಗಳು ಇರಬಹುದಾ..? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಅದಕ್ಕೆ ಈಗ ಸಿದ್ದವಾಗುತ್ತಿರುವ ಹೋರಾಟದ ರೂಪುರೇಶೆ ಸಾಥ್ ಕೊಡುತ್ತಿವೆ.
ಅವತ್ತು ಕಿಡಿಗೇಡಿಗಳ ಕೃತ್ಯದಿಂದ ಇಕ್ಲಾಕ್ ಸಾವಿಗೀಡಾದರೇ ಅವರ ಮಗ ದನಿಷ್ ಪ್ರಾಣಾಪಾಯದಿಂದ ಪಾರಾದ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮುಖಂಡ ಸಂಜಯ್ ರಾಣಾ ಪುತ್ರ ಸೇರಿದಂತೆ 18 ಮಂದಿಯನ್ನು ಬಂಧಿಸಲಾಗಿತ್ತು. ಗೋಹತ್ಯೆ ನಿಷಿದ್ಧವಾಗಿರುವ ಉತ್ತರಪ್ರದೇಶದಲ್ಲಿ ಗೋಮಾಂಸ ಸೇವನೆಗೆ ಅವಕಾಶವಿದೆ. ಇಂತಹ ಗೊಂದಲದ ನಿಯಮಗಳು ಕಿಡಿಗೇಡಿಗಳಿಗೆ ವರದಾನವಾಗಿದ್ದು ಕಟುವಾಸ್ತವ. ಕೊಲೆಯಾದ ಅಖ್ಲಾಕ್ ಕುಟುಂಬಕ್ಕೆ ನ್ಯಾಯ ಒದಗಿಸುವ ರಾಜಕೀಯದಾಟವನ್ನು ರಾಷ್ಟ್ರೀಯ ಪಕ್ಷಗಳು ಚಾಚೂತಪ್ಪದೆ ನಿಭಾಯಿಸಿದ್ದವು. ಅಂತೆಯೇ ಅಂದು ಅವರ ಮನೆಯಲ್ಲಿ ದೊರಕಿದ್ದು ಗೋಮಾಂಸವಾ..? ಎಂದು ನ್ಯಾಯಾಂಗ ತನಿಖೆಗೆ ಆದೇಶಿಸಿ ಕುಟುಂಬಕ್ಕೆ ನ್ಯಾಯ ಒದಗಿಸುವ ಚೆಂದದ ಕಥೆ ಕಟ್ಟಿದರು. ಆರಂಭದಲ್ಲಿ ಉತ್ತರ ಪ್ರದೇಶದ ನೋಯ್ಡಾದ ಸರ್ಕಾರಿ ವಿಧಿವಿಜ್ಞಾನಾಲಯ ಪರಿಶೀಲಿಸಿ ಅಖ್ಲಾಕ್ ಮನೆಯಲ್ಲಿ ದೊರೆತದ್ದು ಕುರಿ ಮಾಂಸ ಎಂದು ದೃಢಪಡಿಸಿತ್ತು. ಆದರೆ ನಾಲ್ಕೈದು ದಿನಗಳ ಹಿಂದೆ ಮಥುರಾದ ಪಶುವೈದ್ಯ ಮತ್ತು ಪಶುಸಂಗೋಪನಾ ವಿಶ್ವವಿದ್ಯಾಲಯ ಅಖ್ಲಾಕ್ ಮನೆಯಲ್ಲಿದ್ದದ್ದು ಗೋಮಾಂಸ ಎಂದು ವರದಿಯಲ್ಲಿ ಹೇಳಿದೆ. ಇದರಿಂದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗ ತನಿಖಾಧಿಕಾರಿಗಳು ಇವುಗಳಲ್ಲಿ ಯಾವ ವರದಿಯನ್ನು ಪರಿಗಣಿಸಬೇಕೆಂಬ ಗೊಂದಲದಲ್ಲಿದ್ದಾರೆ. ಆದರೆ ಪರೀಕ್ಷೆಗೊಳಪಡಿಸಿದ ಮಾಂಸದ ಮಾದರಿ ಒಂದೇ ಆಗಿದ್ದರಿಂದ ವರದಿ ಭಿನ್ನವಾಗಿ ಬರೋದಕ್ಕೆ ಕಾರಣ ರಾಜಕೀಯವೇ ಹೊರತು ಬೇರೇನಲ್ಲ. ತನಿಖಾ ಸಂಸ್ಥೆಗಳಿಗೆ ಈಗ ದೊರೆತ ವರದಿ ಒಂದಿಡೀ ಸಮುದಾಯದ ಒಳಿತಿಗಾಗಿ ಸಿದ್ದಪಡಿಸಿರಬಹುದು ಎನ್ನಲಾಗುತ್ತಿದೆ. ಆದ್ರೆ ಇವೆರಡರಲ್ಲಿ ಯಾವ ವರದಿ ನಂಬಲರ್ಹ..?? ವರದಿಯನ್ನಿತ್ತ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಬೇಕಾಗಿದೆ. ದೋಷಪೂರಿತ ವರದಿಯನ್ನು ಕೊಟ್ಟ ಪ್ರಯೋಗಾಲಯದ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡರೇ ನಾಳೆ ನಡೆಯುವ ಅನಾಹುತದ ಹಾದಿ ತಪ್ಪಿಸಬಹುದು.
ಈಗ ಉತ್ತರ ಪ್ರದೇಶದಲ್ಲಿ ಚುನಾವಣಾ ತಯಾರಿಗಳು ಭರದಿಂದ ಸಾಗಿವೆ. ಸರಿಯಾಗಿ ಇದೇ ಸಮಯಕ್ಕೆ ದಾದ್ರಿ ಘಟನೆ ಸ್ಫೋಟವಾಗುತ್ತಿದೆ. ಇವುಗಳ ಹಿಂದೆ ಶುದ್ಧ ರಾಜಕೀಯದ ಆಟಾಟೋಪಗಳಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದು ಅಖಿಲೇಶ್ ಸರ್ಕಾರದ ವಿರುದ್ದ ವಿರೋಧಿಗಳು ನಡೆಸುತ್ತಿರುವ ಪಿತೂರಿಯಾ..!? ಅಥವಾ ಖುದ್ದಾಗಿ ಸರ್ಕಾರದ ಅರಾಜಕತೆಗೆ ಹಿಡಿದ ಕೈಗನ್ನಡಿಯಾ..!?. ಉತ್ತರ ಸುಲಭವಿಲ್ಲ. ದಾದ್ರಿಯಲ್ಲಿ ಮೊಹ್ಮದ್ ಅಕ್ಲಾಕ್ ಕೊಲೆಯಾದಾಗ ಹೊತ್ತಿಕೊಂಡಿದ್ದು ಸಣ್ಣಮಟ್ಟದ ಬೆಂಕಿಯಲ್ಲ. ಕೆಲವರು ಸೇಡಿನ ಮಾತಾಡಿದರೇ, ಹಲವರು ಉರಿಯುತ್ತಿದ್ದ ಬೆಂಕಿಗೆ ಪೆಟ್ರೋಲ್ ಸುರಿಸತೊಡಗಿದರು. ಮೊದಲಿಗೆ ದಾದ್ರಿಗೆ ಭೇಟಿಕೊಟ್ಟು `ನಾವು ಹಿಂದೂಗಳ ಪರವಾಗಿದ್ದೇವೆ, ಸರ್ಕಾರ ಮುಸ್ಲೀಮರ ಪರವಾಗಿದೆ’ ಎಂದಿದ್ದು ವಿಶ್ವ ಹಿಂದು ಪರಿಷದ್ ನಾಯಕಿ ಸಾಧ್ವಿ ಪ್ರಾಚಿ. `ವಿರೋಧ ಪಕ್ಷದವರಿಗೆ ಯಾವ ವಿಷಯವೂ ಸಿಗುತ್ತಿಲ್ಲ, ಹಾಗಾಗಿ ದಾದ್ರಿ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ. ಪರೋಕ್ಷವಾಗಿ ಪ್ರಕರಣಕ್ಕೆ ರಾಜಕೀಯ ಬೆರೆಸುತ್ತಿದ್ದಾರೆ. ಗೋಮಾಂಸ ಸೇವನೆ ಮಾಡುವವರಿಗೆ ದಾದ್ರಿ ಹತ್ಯೆ ಪ್ರಕರಣದಂತೆ ಶಿಕ್ಷೆಯಾಗಬೇಕು. ಈ ಘಟನೆಯಲ್ಲಿ ಉತ್ತರಪ್ರದೇಶದ ಸಚಿವ ಅಜಂ ಖಾನ್ ಅವರ ಕೈವಾಡವಿದ್ದರೂ ಇರಬಹುದು’ ಎಂದು ವಿಶ್ವ ಹಿಂದೂ ಪರಿಷದ್ ನಾಯಕಿ ಸಾಧ್ವಿ ಪ್ರಾಚಿ ಹೇಳಿಕೆ ನೀಡಿದ್ದರು. ಸಾದ್ವಿ ಪ್ರಾಚಿಯಂತೆ ಬಿಜೆಪಿ ಶಾಸಕ ಸಂಗೀತ್ ಸೋಮ್, `ನಿರ್ದೋಷಿಗಳಿಗೆ ವಿನಾಕಾರಣ ಶಿಕ್ಷೆಯಾದರೇ ನಾವು ಸುಮ್ಮನಿರುವುದಿಲ್ಲ. ಈ ಹಿಂದೆ ಕೂಡಾ ಸರಿಯಾದ ಪಾಠ ಕಲಿಸಿದ ಅನುಭವವಿದೆ, ಅದನ್ನು ಇಲ್ಲಿ ಪ್ರಯೋಗಿಸುತ್ತೇವೆ’ ಎಂದಿದ್ದರು. ಇಲ್ಲಿ ಕೋಮುಭಾವನೆ ಬಿತ್ತುತ್ತಿರುವುದು ಇವರೇ ಹೊರತು ಬೇರೆ ಯಾರೂ ಅಲ್ಲ.
ಉತ್ತರ ಪ್ರದೇಶ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಆದರೆ, ಗೋಮಾಂಸ ಸೇವನೆ ಅಥವಾ ಗೋವಧೆಯಿಂದಾಗಿಯೇ ಹತ್ಯೆ ನಡೆದಿದೆ ಎಂಬ ವಿಷಯದ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖವಾಗಿರಲಿಲ್ಲ. ವಿಶೇಷವೆಂದರೆ ಇಡೀ ವರದಿಯಲ್ಲಿ ಎಲ್ಲೂ ಗೋಮಾಂಸ ಎಂಬ ಪದವನ್ನೇ ಸರ್ಕಾರ ಬಳಸಿರಲಿಲ್ಲ. ಅದರ ಬದಲು `ಹತ್ಯೆ ನಿಷೇಧ ಇರುವ ಪ್ರಾಣಿಯೊಂದರ ಮಾಂಸ’ ತಿಂದ ಬಗ್ಗೆ ಖಚಿತವಿಲ್ಲದ ಆರೋಪಗಳ ಹಿನ್ನೆಲೆಯಲ್ಲಿ ಇಖ್ಲಾಕ್‍ನನ್ನು ಹತ್ಯೆ ಮಾಡಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿರುವ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಅವತ್ತು ಹಾಗೆಂದ ಸರ್ಕಾರ ಈಗ ಯುಟರ್ನ್ ತೆಗೆದುಕೊಂಡಿದ್ಯಾ..? ಅಥವಾ ಸರ್ಕಾರವನ್ನು ಕೆಡವಲು ದೊಡ್ಡ ಪ್ರಿಪ್ಲಾನ್ ನಡೆದಿದೆಯಾ..? ಒಂದು ವೇಳೆ ಅದು ಪ್ರಿಪ್ಲಾನೇ ಆದರೆ- ಅದಕ್ಕೆ ಇನ್ನೆಷ್ಟು ಹೆಣಗಳು ಬೀಳಬೇಕು ಹೇಳಿ..!?
`ನೀವೇನೋ ಗೋಮಾಂಸ ತಿಂದ ಅಂತ ಮುಸ್ಲಿಂ ಸಹೋದರನನ್ನು ಕೊಂದುಹಾಕಿದಿರಿ, ನಾಳೆ ನಿಮ್ಮ ಅವಸ್ಥೆ ಏನು…? ಭಾರತದ ಮುಸಲ್ಮಾನರಾದ ನೀವು ನಮ್ಮ ಸಂಘಟನೆಯನ್ನು ದ್ವೇಷಿಸಿದರೂ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ದೇಶಾದ್ಯಂತ ನಿಮ್ಮ ಮೇಲೆ ನಡೆದಿರುವ ದೌರ್ಜನ್ಯಗಳಿಗೆ ನಾವು ಸೇಡು ತೀರಿಸಿಕೊಳ್ಳುತ್ತೇವೆ. ಸದ್ಯದಲ್ಲೇ ಇಸಿಸ್ ಗುಜರಾತ್, ಕಾಶ್ಮೀರ್, ಮುಜಾಫರ್ ನಗರ ಘಟನೆಗಳಿಗೆ ಸೂಕ್ತ ಉತ್ತರ ನೀಡಲಿದೆ. ಆದಷ್ಟೂ ಬೇಗ ನಾವು ಇದರ ವಿರುದ್ಧ ಪ್ರತೀಕಾರ ಹೇಳುತ್ತೇವೆ’ ಎಂದಿತ್ತು ಪರದೇಶದ ಉಗ್ರ ಸಂಘಟನೆಗಳು. ನಮ್ಮ ದೇಶದ ಸಮಸ್ಯೆಯ ಬಗ್ಗೆ ಈ ಕಡುಪಾಪಿಗಳು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಬಿಡಿ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, `ದಾದ್ರಿ ಪ್ರಕರಣ ನಡೆದಿದ್ದು ದುರದೃಷ್ಟಕರ. ಆದರೆ, ಈ ಪ್ರಕರಣಕ್ಕೆ ಕೋಮು ಹಾಗೂ ರಾಜಕೀಯ ಬಣ್ಣ ನೀಡುವ ಪ್ರಯತ್ನ ನಡೆಯಬಾರದು ಎಂದರೇ, ಹೈದರಾಬಾದ್ ಸಂಸದ ಓವೈಸಿ, `ಇದು ದನದ ಮಾಂಸದ ವಿಚಾರವಾಗಿ ನಡೆದ ಹತ್ಯೆಯಲ್ಲ. ಧರ್ಮದ ಮೇಲೆ ನಡೆದ ಪೂರ್ವಯೋಜಿತ ದಾಳಿ. ಇಖ್ಲಾಕ್ ಅವರನ್ನು ನಿರ್ದಯವಾಗಿ ಕೊಲ್ಲಲಾಗಿದೆ’ ಎಂದು ಹೇಳಿದ್ದರು. `ದಾದ್ರಿ ಪ್ರಕರಣ ತಪ್ಪು ತಿಳುವಳಿಕೆಯಿಂದ ಆಗಿರುವಂತದ್ದು, ಇದಕ್ಕೆ ರಾಜಕೀಯ ಬಣ್ಣ ನೀಡಬೇಡಿ’ ಎಂದಿದ್ದು ಕೇಂದ್ರಸಚಿವ ಮಹೇಶ್ ಶರ್ಮ.
ಈ ಮಧ್ಯೆ ದಾದ್ರಿಗೆ ಭೇಟಿ ಕೊಡಲು ಬಂದ ಅರವಿಂದ್ ಕೇಜ್ರಿವಾಲ್ ಅವರನ್ನು ಯುಪಿ ಪೊಲೀಸರು ದಾದ್ರಿಗೆ ಪ್ರವೇಶ ಮಾಡದಂತೆ ತಡೆದಿದ್ದರು. ದಾದ್ರಿಯಲ್ಲಿ ಈಗ ಅಶಾಂತಿ ನೆಲೆಸಿದೆ, ಇದೊಂದು ದುರದೃಷ್ಟಕರ ಘಟನೆ ಎಂದು ಅಲ್ಲಿಗೆ ಭೇಟಿ ನೀಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, `ಅಖಿಲೇಶ್ ಸರ್ಕಾರ ಮೃತ ಕುಟುಂಬಕ್ಕೆ ನಲವತ್ತು ಲಕ್ಷ ರೂಪಾಯಿ ನೀಡುತ್ತದೆ. ಈ ರೀತಿಯ ಘಟನೆಯಲ್ಲಿ ಮುಸ್ಲಿಂ ಸಮುದಾಯದವರು ಸತ್ತರೆ ಲಕ್ಷ-ಲಕ್ಷ ರೂಪಾಯಿ ನೀಡುತ್ತದೆ, ಆದರೆ ಹಿಂದೂ ಕುಟುಂಬಕ್ಕೆ ಇಪ್ಪತ್ತು ಸಾವಿರ ರೂಪಾಯಿ ಕೂಡಾ ನೀಡುವುದಿಲ್ಲ’ ಎಂದಿದ್ದರು. ಇನ್ನು ರಾಹುಲ್ ಗಾಂಧಿ, ದಶಕಗಳಿಂದ ಕೋಮು ಸೌಹಾರ್ದತೆಯಿಂದ ಬದುಕುತ್ತಿದ್ದವರು ರಾಜಕೀಯ ಕಾರಣಗಳಿಂದ ಒಬ್ಬರನ್ನೊಬ್ಬರು ದ್ವೇಷಿಸುತ್ತಿರುವುದು ವಿಷಾದನೀಯವೆಂದಿದ್ದರು. ಈಗ ಕಡೆಯದಾಗಿ ಮೇಕೆ, ಕುರಿ ಮಾಂಸ ಎಂಬ ವರದಿ ಸುಳ್ಳಾಗಿ ಅದೀಗ ದನದ ಮಾಂಸವೆಂಬ ರಿಪೋರ್ಟ್ ಬಂದಿದೆ. ನ್ಯಾಯಕ್ಕಾಗಿ ಹೋರಾಡುತ್ತೇವೆ ಎನ್ನುತ್ತಿದೆ ಇಕ್ಲಾಕ್ ಕುಟುಂಬ. ಇದರ ನಡುವೆ ದಾದ್ರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಸಮರ್ಥ ಆಡಳಿತದ ಪರಿಣಾಮಗಳಿವು..!
POPULAR STORIES :
`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video
ಅನುಪಮ ಶೆಣೈಗೆ ಬಿಜೆಪಿ ಟಿಕೆಟ್..! ಇದೀಗ ಬಂದ ಸುದ್ದಿ..!
`ಫೇಸ್’ಬುಕ್ ಆಟ ಮುಗಿದಿಲ್ಲವೇ..!? ತೆರೆಮರೆಯಿಂದ ಹೊರಬನ್ನಿ ಮೇಡಂ..!
ಚೀನಾದಲ್ಲಿ ರಂಜಾನ್ ನಿಷೇಧ..! ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧಾರ..!?
ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!