ನಮ್ಮ ಬೆಂಗಳೂರಿಗೆ ಹತ್ತಾರು ಹೆಸರುಗಳಿವೆ. ಉದ್ಯಾನ ನಗರಿ, ಸಿಲಿಕಾನ್ ಸಿಟಿ ಸೇರಿದಂತೆ ಹತ್ತು ಹಲವು ಹೆಸರುಗಳು ನಮ್ಮ ರಾಜಧಾನಿಗೆ ಇದೆ. ಆದರೆ ಕೆಲ ವರ್ಷಗಳ ಹಿಂದೆ ಈ ನಗರಕ್ಕೆ ಹೊಸ ಹೆಸರೊಂದು ದಕ್ಕಿತ್ತು. ಅದೇ `ತ್ಯಾಜ್ಯದ ನಗರ’. ಎಲ್ಲೆಂದರಲ್ಲಿ ಬಿದ್ದು ಗಬ್ಬು ನಾರುವ ಕಸದ ಗುಂಡಿಗಳೇ ಈ ಹೆಸರು ಬರಲು ಕಾರಣವಾಗಿತ್ತು. ಬಿಬಿಎಂಪಿಯು ಎಷ್ಟೇ ಜನ ಕಾರ್ಮಿಕರನ್ನು ನೇಮಿಸಿದರೂ ಉಪಯೋಗವಾಗಿರಲಿಲ್ಲ. ಆದರೆ ಇಲ್ಲೋರ್ವ ವ್ಯಕ್ತಿ ಬೆಂಗಳೂರಿನ ಕಸಕ್ಕೆ ಒಂದು ಮಟ್ಟಿಗಿನ ಪರಿಹಾರ ಕಂಡುಹಿಡಿದಿದ್ದಾರೆ. ಕಸ ಆಯುತ್ತಲೇ ವಿಶ್ವದ ಗಮನವನ್ನು ಸೆಳೆದಿದ್ದಾರೆ.
ಅವರು ಮನ್ಸೂರ್ ಅಹ್ಮದ್. ಬೆಂಗಳೂರಿನ ಜಯನಗರ 168ನೇ ವಾರ್ಡ್ ನಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕವನ್ನು ನೋಡಿಕೊಳ್ಳುತ್ತಾರೆ. ಹಾಗಂತ ಬೇರೆಯವರಂತೆ ಮನ್ಸೂರ್ ಮನೆ ಮನೆಗೆ ಹೋಗಿ ಕಸ ತಂದು ವಿಲೇವಾರಿ ಮಾಡಲು ಸೀಮಿತವಾಗಿಲ್ಲ. ಬದಲಿಗೆ ತನ್ನ ಕೆಲಸವನ್ನು ಒಂದು ವ್ಯವಸ್ಥಿತ ಉದ್ಯಮದಂತೆ ನಡೆಸುತ್ತಿದ್ದಾರೆ. ಈ ಮೂಲಕ ಹಲವಾರು ಕಸ ಆಯುವ ಮಂದಿಗೆ ಕೆಲಸ ಕೊಟ್ಟು, ಅವರೂ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿದ್ದಾರೆ
ಕಸ ಆಯುವವರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಸಿರು ದಳ ಎಂಬ ಸ್ವಯಂ ಸೇವಾ ಸಂಸ್ಥೆಯು ಮನ್ಸೂರ್ ಗೆ ಪ್ರಾರಂಭದಲ್ಲಿ ಆರ್ಥಿಕ ಸಹಾಯ ಮಾಡುವ ಮೂಲಕ ಬೆಂಬಲಕ್ಕೆ ನಿಂತಿತು. ಈ ಮೂಲಕ ಮನ್ಸೂರ್ ಹಂತ ಹಂತವಾಗಿ ಕಸ ಆಯುವುದನ್ನು ವ್ಯವಸ್ಥಿತವಾಗಿ ಮಾಡತೊಡಗಿದರು. ಇಂದು ಮನ್ಸೂರ್ ರ ಜಯನಗರ ಒಣ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 10 ಜನ ಕೆಲಸ ಮಾಡುತ್ತಿದ್ದಾರೆ. ಈಗ ಪ್ರತಿ ತಿಂಗಳು ಅವರ ತಂಡ 10ರಿಂದ 12 ಟನ್ನಷ್ಟು ಕಸ ಸಂಸ್ಕರಿಸುತ್ತದೆ. ತ್ಯಾಜ್ಯ ಪುನರ್ ಬಳಕೆಗೂ ಮುನ್ನ ಪ್ಲಾಸ್ಟಿಕ್, ಪೇಪರ್, ಗಾಜು, ಬಟ್ಟೆ, ಕಬ್ಬಿಣ ಸೇರಿದಂತೆ ಸುಮಾರು 72 ಬೇರೆ ಬೇರೆ ವಿಭಾಗದಲ್ಲಿ ಕಸವನ್ನು ವಿಂಗಡಿಸಲಾಗುತ್ತಿದೆ. ಇಷ್ಟು ಮಾತ್ರವಲ್ಲ ಮನ್ಸೂರ್ ಕ್ಲೀನ್ ಸಿಟಿ ರೀ-ಸೈಕ್ಲರ್ಸ್ ಅಸೋಸಿಯೇಷನನ್ನೂ ಹುಟ್ಟುಹಾಕಿದ್ದಾರೆ. ಈ ಮೂಲಕ ಎಂಬಿಎ ಪದವೀಧರರ ಸಹಾಯದೊಂದಿಗೆ ತಮ್ಮ ಯೋಜನೆ ಕಾರ್ಯರೂಪಕ್ಕೆ ತರುತ್ತಿದ್ದಾರೆ.
ಒಣ ಹಾಗೂ ಹಸಿ ಕಸವನ್ನು ಮೊದಲೇ ವಿಂಗಡಿಸಬೇಕು. ಇಲ್ಲದಿದ್ದಲ್ಲಿ ಸಂಸ್ಕರಣಾ ಘಟಕಕ್ಕೆ ತಂದರೂ ಉಪಯೋಗವಿಲ್ಲ. ಪ್ರಾರಂಭದಲ್ಲಿ ಜನ ಕಸವನ್ನು ವಿಂಗಡಣೆ ಮಾಡುತ್ತಿರಲಿಲ್ಲ. ಹೀಗಾಗಿ ಪೌರ ಕಾರ್ಮಿಕರು ಸಂಸ್ಕರಣಾ ಘಟಕಕ್ಕೆ ಕಸ ತಂದು ಹಾಕಿದಾಗ ದುರ್ನಾತದಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿಯೇ ವಿಂಗಡಣೆಯಾಗದ ಕಸವನ್ನು ಪಡೆಯದೇ ಜನರಲ್ಲಿ ಅರಿವು ಮೂಡಿಸಲಾಯ್ತು. ಈಗ ಜಯನಗರದ ಶೇಕಡಾ 75ರಷ್ಟು ಮಂದಿ ಒಣ ಮತ್ತು ಹಸಿ ತ್ಯಾಜ್ಯ ವಿಂಗಡಿಸಿ ನೀಡುತ್ತಿದ್ದಾರೆ ಎನ್ನುತ್ತಾರೆ ಮನ್ಸೂರ್.
ವಿಶೇಷ ಅಂದ್ರೆ ಮೈಂಡ್ ಟ್ರೀ ಎಂಬ ಸಂಸ್ಥೆಯ ಸಹಾಯದೊಂದಿಗೆ ಐ ಗಾಟ್ ಗಾರ್ಬೇಜ್ ಎಂಬ ಆಂಡ್ರಾಯ್ಡ್ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಮನೆ ಮನೆಯಿಂದ ಕಸ ವಿಲೇವಾರಿ ಮಾಡುವುದು ಸರಳವಾಗಿದೆ. ವಿಶೇಷ ಅಂದ್ರೆ ಮನ್ಸೂರ್ ಅಹ್ಮದ್ ಅವರ ಬುದ್ಧಿವಂತಿಕೆ ಹಾಗೂ ಶ್ರಮದಿಂದಾಗಿ, ಇವರ ಬಳಿ ಕೆಲಸ ಮಾಡುತ್ತಿರುವ ಕಸ ಆಯುವವರು ಪ್ರತಿ ತಿಂಗಳು 9 ಸಾವಿರದಿಂದ 12 ಸಾವಿರ ರೂಪಾಯಿವರೆಗೂ ಗಳಿಸುತ್ತಿದ್ದಾರೆ.
ಪ್ಯಾರಿಸ್ ಗೆ ಹಾರಿದ ಕನ್ನಡಿಗ..!
ಯೆಸ್.. ಮನ್ಸೂರ್ ಅಹ್ಮದ್ ರ ಕಾರ್ಯವನ್ನು ಗುರುತಿಸಿರುವ ವಿಶ್ವಸಂಸ್ಥೆಯು ಪ್ಯಾರಿಸ್ ನಲ್ಲಿ ನವೆಂಬರ್ 30ರಿಂದ ಡಿಸೆಂಬರ್ 11ರವರೆಗೆ ನಡೆಯುತ್ತಿರುವ ಹವಾಮಾನ ವೈಪರಿತ್ಯ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಇವರು ಕನ್ನಡ, ತಮಿಳು, ಹಿಂದಿ ಭಾಷೆಗಳನ್ನು ನೀರು ಕುಡಿದಷ್ಟು ಸುಲಭವಾಗಿ ಮಾತನಾಡುತ್ತಾರೆ. ಆದರೆ ಇಂಗ್ಲೀಷ್ ಬರುವುದಿಲ್ಲ. ಆದ್ದರಿಂದ ಪ್ಯಾರಿಸ್ ಶೃಂಗಸಭೆಯಲ್ಲಿ ಅನುವಾದಕರ ಸಹಾಯ ಪಡೆದು ಭಾಷಣ ಮಾಡಲಿದ್ದಾರೆ.
ಅದೇನೇ ಇರಲಿ, ಕಸದಿಂದಲೇ ಬದುಕು ಕಂಡುಕೊಂಡಿರುವ ಮನ್ಸೂರ್ ರವರು ಹಲವರಿಗೆ ಮಾದರಿಯಾಗಿದ್ದಾರೆ. ಅವರ ಕಠಿಣ ಪರಿಶ್ರಮವೇ ಇಂದು ವಿಶ್ವಸಂಸ್ಥೆಯಿಂದ ಆಹ್ವಾನ ಪಡೆಯುವಂತೆ ಮಾಡಿದೆ. ಕಸವೆಂದರೆ ಮೂಗು ಮುಚ್ಚಿಕೊಳ್ಳುವ ಮಂದಿಯ ಮಧ್ಯೆ ಕಸ ಆಯುತ್ತಲೇ ಮೇಲೆತ್ತರಕ್ಕೆ ಏರಿರುವ ಮನ್ಸೂರ್ ರವರಿಗೆ ಶುಭವಾಗಲಿ ಎಂದು ಆಶಿಸೋಣ.
- ರಾಜಶೇಖರ ಜೆ
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
‘ಧ್ಯಾನ್ ಚಂದ್’ರನ್ನು ಸಂಪರ್ಕಿಸಿದ್ದ ಹಿಟ್ಲರ್..! ಹಿಟ್ಲರ್ ಧ್ಯಾನ್ ಚಂದರನ್ನು ಭೇಟಿ ಮಾಡಿದ್ದೇಕೆ..?!
ಚೆನ್ನೈ ಸಂತ್ರಸ್ಥರಿಗೆ ಸಹಾಯ ಮಾಡಿ..! ಬೆಂಗಳೂರಿನಿಂದ ಹೊರಡುತ್ತಿದೆ ಕಿರಿಕ್ ಕೀರ್ತಿ ತಂಡ..!
ಇದು ಓರ್ವ ಭಿಕ್ಷುಕಿ ಮತ್ತು ಆಕೆಯ ಮಕ್ಕಳ ಕಥೆ..!
ಯಾವ್ಯಾವ ದೇಶದಲ್ಲಿ ಡ್ರೈವಿಂಗ್ ಮಾಡೋಕೆ ಇಂಡಿಯನ್ ಲೈಸೆನ್ಸ್ ಇದ್ರೆ ಸಾಕು ಗೊತ್ತಾ..?!
99ರಷ್ಟು ಶೇರುಗಳನ್ನು ದಾನ ಮಾಡುತ್ತಿರುವ ಫೇಸ್ ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್ ..!