No menu items!
11.1 C
Munich
Wednesday, April 29, 2026

ಹಠದಲ್ಲಿ ಸೋತು ಪ್ರೀತಿ ಉಳಿಸಿಕೊಂಡಳು..!

Must read

ಇವತ್ತು ಅವಳಿಗೆ ಪ್ರಪೋಸ್ ಮಾಡಿಯೇ ಮಾಡ್ತೀನಿ..! ಬೇಗ ಬಾ.. ಹೋಗೋಣ ಅಂತ ಗೆಳತಿ ಸುಮಾಳಿಗೆ ದಿನಾಲೂ ಹೇಳ್ತಾ ಇದ್ದ. ಅವನು ದೀಪಕ್. ಹೇ.. ಅವನಿಗೆ ಮಾತಾಡೋ ತಾಕತ್ತೇ ಇಲ್ಲ ಕಣೇ.. ಸುಮ್ಮನೇ ಅವನ ಬಗ್ಗೆ ಏನೇನೋ ಹೇಳ್ಬೇಡ ಅಂತ ಸುಮಾಳಿಗೆ ಬೈತಾ ಇದ್ಲು. ಅವಳು ಅನು..! ಇವರಿಬ್ಬರ ಪ್ರೇಮ್ ಕಹಾನಿಯೇ ವಿಚಿತ್ರ, ರೋಮಾಂಚನ..!

ದಿನದಂತೆ ದೀಪಕ್ ಮತ್ತು ಅವನ ಫ್ರೆಂಡ್ ಸುಮಾ ಒಟ್ಟಿಗೇ ಕ್ಲಾಸಿಗೆ ಹೋಗ್ತಾ ಇದ್ರು. ಅವರಿಬ್ಬರ ಮುಂದೆಯೇ ನಡೆದುಕೊಂಡು ಹೋಗ್ತಾ ಇದ್ದ ಚೆಲುವೆ ಯಾಕೋ ಸುಮ್ಮನೇ ಹಿಂದೆ ತಿರುಗಿ ನೋಡ್ತಾಳೆ..! ಅವಳು ನೋಡೋಕೆ ಸಖತ್ ಆಗಿದ್ಲು..! ಅವಳನ್ನು ನೋಡಿದ್ದೇ ತಡ ದೀಪಕ್ ” ಹೇ ಸುಮಾ.. ಪಕ್ಕಾ ಅವಳೇ ನಿನ್ನ ಅತ್ತಿಗೆ ಕಣೇ” ಅಂದು ಬಿಟ್ಟ..! ಏನೋ ಏನ್ ಆಯ್ತೋ.. ಇದ್ದಕ್ಕಿದ್ದಂತೆ ಹೀಗೆ  ಹೇಳ್ತಿದ್ದಿಯಲ್ಲೋ ಅಂತ ಕೇಳಿದ್ಲು ಅವನ ಫ್ರೆಂಡ್ ಸುಮಾ..!


ಹ್ಞೂಂ ಸುಮಾ.. ಅವಳು ಚೆನ್ನಾಗಿದ್ದಾಳೆ ಅಲ್ವಾ..?! ನನಗೆ ಒಳ್ಳೇ ಜೋಡಿ ಆಗ್ತಾಳೆ ಅಲ್ವಾ..?! ಅಂದ ದೀಪಕ್. ಹೇ ದೀಪು ಅವಳು ನನ್ನ ರೂಂ ಮೇಟ್ ಕಣೋ..ಹೆಸರು ಅನು. ದಿನಾ ನಾನು ಅವಳು ರೂಂನಿಂದಲೂ ಒಟ್ಟಿಗೇ ಹೊರಡೋದು. ನಾನು ನಿನಗೆ ಕಾಯ್ತಾ ಇಲ್ಲೇ ಇರ್ತೀನಿ, ಅವಳು ಮುಂದೆ ಹೋಗ್ತಾಳೆ..! ಇವತ್ತು ನೀನು ಸ್ವಲ್ಪ ಬೇಗ ಬಂದಿ ಅದಕ್ಕೆ ಅವಳು ಸಿಕ್ಕಿದ್ಲು..! ಇಲ್ಲದೇ ಇದ್ರೆ ಅವಳು ಸಿಕ್ತಾ ಇರ್ಲಿಲ್ಲ..! ಅದಿರಲಿ ಏನು ಫುಲ್ ಲವ್ ಆಗಿದ್ಯಾ..?! ಹ್ಞಾಂ. ಹಾಳಾಗೋದೆಯಲ್ಲೋ ತಮ್ಮಾ..ಅಂತ ರೇಗಿಸಿದ್ಲು ಸುಮಾ..! ಸುಮಾಳಿಗೆ ಆ ಹುಡುಗಿ ಗೊತ್ತಿದೆ, ಅವಳ ಫ್ರೆಂಡ್ ಅಂತ ಗೊತ್ತಾಗಿದ್ದೇ ತಡ ದೀಪಕ್ ಗೆ ಫುಲ್ ಖುಷಿ.


ಹೇ, ಸುಮಾ ನೀನೇ ನನಗೆ ಸಪೋರ್ಟ್ ಮಾಡೇ..ಪ್ಲೀಸ್ ಕಣೇ ಅವಳನ್ನು ಪರಿಚಯಿಸೇ.. ಅವಳಿಗೆ ನನ್ನ ಬಗ್ಗೆ ಹೆಮ್ಮೆ ಬರುವಂತೆ ಒಳ್ಳೆ ಮಾತಾಡೇ ಅಂತ ಕೇಳ್ಕೊಂಡ. ಸುಮಾ ಮೊದಮೊದಲಿಗೆ ಆಗಲ್ಲ ಹೋಗೋ ಏನ್ ಬೇಕಾದ್ರೂ ಮಾಡ್ಕೊಳ್ಳೋ ಅಂತ ಹೇಳ್ತಾ ಇದ್ಲು..! ಆದ್ರೆ ದೀಪಕ್ ನಿಜಕ್ಕೂ ಲವ್ ಮಾಡ್ತಾ ಇದ್ದಾನೆ ಅಂತ ಗೊತ್ತಾದ ಮೇಲೆ ಅವರಿಬ್ಬರನ್ನು ಭೇಟಿ ಮಾಡಿಸಿಯೇ ಬಿಟ್ಟಳು..! ಅನುವನ್ನು ಕ್ಯಾಂಟಿನ್ ಗೆ ಬರೋಕೆ ಹೇಳಿ “ನನ್ನ ಗೆಳೆಯ, ನನ್ನ ಒಳ್ಳೆ ತಮ್ಮನೂ ಇವನೇ, ದೀಪಕ್ ಅಂತ ಅನುಗೆ, ಇವಳು ನನ್ನ ಬೆಸ್ಟ್ ಫ್ರೆಂಡ್, ನನ್ನ ರೂಂಮೇಟ್ ಅನು ಅಂತ ದೀಪಕ್ ಗೆ ಪರಿಚಯ ಮಾಡಿಕೊಟ್ಟಳು ಸುಮಾ..! ದೀಪಕ್ ಗೆ ಖುಷಿ ಜೊತೆಗೇ ಭಯ..! ಹಾಯ್ ಅಂತ ಸ್ಮೈಲ್ ಕೊಟ್ಟ. ಅತ್ತ ಅನುನಿಂದಲೂ ಅದೇ ಸ್ಮೈಲ್..! ಹಾಗೇ ಮಾತಾಡ್ತಾ ಐಸ್ಕ್ರೀಂ ತಿನ್ತಾ ಕ್ಯಾಂಟಿನ್ನಿಂದ ಹೊರಟರು..!
ದೀಪಕ್ ತನ್ನ ರೂಂಗೆ ಹೋದವನೇ ಹೇ, ಹೇಳದೇ ಕೇಳದೆ ಅವಳನ್ನು ಮೀಟ್ ಮಾಡಿಸಿದ್ಯಲ್ಲ..! ಮೊದಲೇ ಹೇಳಿದ್ರೆ ಸ್ಟೈಲ್ ಆಗಿ ಬರ್ತಾ ಇದ್ದೆ. ಆಗ ಡೈರೆಕ್ಟ್ ಆಗೇ ಪ್ರಪೋಸ್ ಮಾಡ್ತಾ ಇದ್ದೆ ಅಂತ ಬುಕಾಳಿ ಬಿಡೋಕೆ ಶುರು ಮಾಡ್ದ..! ಸಾಕು, ಸಾಕು ಅವಳ ಎದುರು ಕೂತಗಲೇ ಬೆವರ್ತಾ ಇದ್ದಿ. ಪ್ರಪೋಸ್ ಮಾಡೋ ಮುಖನಾ ನಿಂದು ಅಂತ ಹಂಗಿಸಿದ್ಲು ಸುಮಾ..!
ಮಾರನೇ ದಿನ ಬೇಗನೇ ಹೋಗಿ ಯೂನವರ್ಸಿಟಿ ಗೇಟ್ ಬಳಿ ಕಾಯ್ತಾ ಇದ್ದ..! ಸುಮಾಳ ಜೊತೆ ಅನು ಬರ್ತಾಳೆ ಅಂತ ಕಾಯ್ತ ಇದ್ರೆ ಸುಮಾ ಬರ್ಲೇ ಇಲ್ಲ..! ಅನು ಮಾತ್ರ ಬಂದ್ಲು..! ಇವನಿಗೆ ಗಡಗಡ. ಇವನ ಪಕ್ಕದಲ್ಲೇ ಅನು ಹಾದು ಹೋದ್ಲು. ಅವಳು ಒಂದು ಸ್ಮೈಲ್ ಕೂಡ ಕೊಡ್ಲೇ ಇಲ್ಲ..! ಇವನಿಗೆ ಹೆದರಿಕೆ ಆಗ್ತಾ ಇದ್ರೂ ಹಲ್ಲು ಚಿರಿದುಕೊಂಡೇ ನಿಂತಿದ್ದ..! ಅವಳು ಪಾಸ್ ಆದ್ಮೇಲೆ ಸುಮಾ ಬಂದ್ಲು.


ಹೇ, ಯಾಕೆ ನೀನು ಅವಳ ಜೊತೆ ಬರ್ಲಿಲ್ಲ..! ಬಂದಿದ್ರೆ ಅವಳ ಜಿಯೋಲಜಿ ಡಿಪಾರ್ಟ್ ಮೆಂಟ್ ವರೆಗೂ ಒಟ್ಟಿಗೇ ಹೋಗ್ಬಹುದಿತ್ತು ಅಂದ..!
ಹೋಗೋ ಅವಳಿಗೆ ನಿನ್ನೆ ಕ್ಯಾಂಟಿನ್ನಿಂದ ಹೋಗಿ, ನೀನು ಫೋನ್ ಮಾಡಿದ್ಮೇಲೆ ಮೇಲೆ ಎಲ್ಲಾ ಹೇಳಿದೆ..! ” ನಾನು ಮೊದಲೇ ಹೇಳಿ ನಿನ್ನ ಮೀಟ್ ಮಾಡಿಸಿದ್ರೆ, ದೀಪಕ್ ತಯಾರಾಗಿ ಬಂದು ನಿನಗೆ ಪ್ರಪೋಸ್ ಮಾಡ್ತಿದ್ನಂತೆ” ಅಂತ. ಅದಕ್ಕೆ ಅವಳು ಹೌದಾ..? ಪ್ರಪೋಸ್ ಮಾಡೋಕೆ ಅವನಿಗೆ ಎಲ್ಲೇ ಇದೆ ಮೀಟರ್ ಅಂದ್ಲು..! ನಂಗೆ ನಗು ಬಂತು. ಇವತ್ತು ನೀನು ಕಾಯ್ತ ಇರೋದನ್ನು ನೋಡಿಯೇ ಅವಳು ನಾನು ಮುಂದೆ ಹೋಗ್ತೀನಿ ನೀನು ನಿಧಾನ ಬಾ ಅಂತ ಹೇಳಿ ಬಂದಿದ್ದು, ನೀನು ಇವತ್ತೂ ಪುಕಲ ಅಂತ ತೋರಿಸಿ ಬಿಟ್ಟಿಯಲ್ಲೋ ಅಂತ ರೇಗಿಸಿದ್ಲು ಸುಮಾ..!
ಹೋಗೇ ಹೋಗೆ, ನೀನು ಎಲ್ಲಾ ವಿಚಾರ ಹೇಳಿದ್ದಕ್ಕೇ ಅವಳು ಇವತ್ತು ಗುರ್ ಅಂತ ಹೋಗಿದ್ದು ಅನ್ನೋದು ದೀಪಕ್ ವಾದ..!
ಹೀಗೆ ದಿನಾ ಕಳೀತಾನೇ ಇತ್ತು..! ಅನುಗೂ ದೀಪಕ್ ಇಷ್ಟವಾಗಿದ್ದ. ಆದ್ರೆ ಆಟ ಆಡಿಸ್ತಾ ಇದ್ಲು. ದೀಪಕ್ ದಿನಾಲೂ ಅವಳಿಗೆ ಇವತ್ತು ಪ್ರಪೋಸ್ ಮಾಡ್ತೀನಿ, ಇವತ್ತು ಪ್ರಪೋಸ್ ಮಾಡ್ತೀನಿ ಅಂತ ಸುಮಾಳ ಬಳಿ ಕೊಚ್ಚಿಕೊಳ್ತಾ ಇದ್ದ..! ಬಟ್, ಅವಳಿಗೆ ಪ್ರಪೋಸ್ ಮಾಡೋದಿರಲಿ ಅವಳ ಎದುರುಗಡೆ ನಿಂತು ಮಾತಾಡೋಕೂ ದೈರ್ಯ ಇರ್ಲಿಲ್ಲ..! ಸುಮಾ ಅವನು ನಿಂಗೆ ಪ್ರಪೋಸ್ ಮಾಡ್ತನೇ.. ಒಳ್ಳೇ ಹುಡುಗ ಒಪ್ಪಿಕೊ ಆಯ್ತಾ ಅಂತ ಅವನ ಗೆಳೆಯನ ಬಗ್ಗೆ ಹೊಗಳಿ ಅನು ಬಳಿ ಮಾತಾಡ್ತಾ ಇದ್ಲು ಸುಮಾ..! ಅವನಿಗೆ ಮಾತಾಡೋಕೆ ತಾಕತ್ತೇ ಇಲ್ಲ ಕಣೇ..! ಸುಮ್ಮನೇ ಅವನ ಬಗ್ಗೆ ಏನ್ಏನೋ ಹೇಳ್ಬೇಡ ಅಂತ ಸುಮಾಳಿಗೆ ಬೈತಾ ಇದ್ಲು ಅನು..! ಅನು ಕೋಪ ದೀಪಕ್ ಲವ್ ಮಾಡ್ತಾ ಇದ್ದಾನೆ ಅಂತ ಅಲ್ಲ..! ಪ್ರಪೋಸ್ ಮಾಡೋಕೆ ಹೆದರಿ ಸಾಯ್ತಾ ಇದ್ದಾನೆ ಅಂತ..! ಇವನು ಪ್ರಪೋಸ್ ಮಾಡೋಕೆ ಹೆದರೋದು, ಅವಳಿಗೆ ಇಷ್ಟವಿದ್ದರೂ ಇಲ್ಲದಂತೆ ನಟಿಸೋದು ನಡೀತಾ ಇತ್ತು..!
ಈ ಟೈಮಲ್ಲಿ ದೀಪಕ್ ಗೆ ದೈರ್ಯ ತುಂಬಿದ್ದೇ ಸೂರಜ್..! ಸೂರಜ್ ದೀಪಕ್ ನ ಜೂನಿಯರ್ ಹಾಗೂ ಪಕ್ಕದ ರೂಂನಲ್ಲೇ ಬಾಡಿಗೆಗೆ ಇದ್ದವ..! ಎಲ್ಲಾ ವಿಚಾರದಲ್ಲೂ ಗುರುಗಳೇ ಗುರುಗಳೇ ಅಂತಲೇ ದೀಪಕ್ನನ್ನು ಸಂಭೋದಿಸ್ತಾ ಇದ್ದ ಸೂರಜ್ ಲವ್ ವಿಷಯದಲ್ಲಿ ದೀಪಕ್ ಗೆ ಗುರುವಾದ..! ಇವನೇ ಅವನ ಜೊತೆ ಹೋಗೋಕೆ ಶುರು ಮಾಡ್ದ. ಗುರುಗಳೇ ನಾನ್ ಇದ್ದೇನೆ ಇವತ್ತು ಅವಳಿಗೆ ಪ್ರಪೋಸ್ ಮಾಡಿ ಅಂತ ದಿನಾ ಹೇಳಿ ಹೇಳಿ ಸುಸ್ತಾದ ಸೂರಜ್ ” ಗುರುಗಳೇ ನಿಮ್ಮ ಹತ್ತಿರ ಆಗಲ್ಲ ನಾನೇ ನಿಮ್ಮ ಪರವಾಗಿ ಎಲ್ಲಾ ವರದಿಯನ್ನು ಆಕೆಗೆ ಒಪ್ಪಿಸಿ ಬರ್ತೀನಿ..! ಅವಳೇ ಬಂದು ಮಾತಾಡ್ತಾಳೆ ಆಗಲಾದ್ರೂ ಮಾತಾಡಿ ಅಂತ ಹೇಳಿ ಅವಳ ಹಿಂದೆ ಹೋದ. ಹೇ, ಬೇಡ ಬೇಡ ಅಂದ್ರೂ ಕೇಳದೇ ಅವಳ ಹಿಂದೆ ಹೋದ ಸೂರಜ್ “ಅನು ಅವರೇ ಅವರು ನನ್ನ ಗುರುಗಳು, ಅವರು ನಿಮ್ಮನ್ನು ಲವ್ ಮಾಡ್ತಾ ಇದ್ದಾರೆ. ಹೇಳೋಕೆ ಅವರಿಗೆ ಭಯವಂತೆ ನೀವೇ ದಯವಿಟ್ಟು ಅವರಿಗೆ ಹೋಗಿ ಪ್ರಪೋಸ್ ಮಾಡಿ ಪುಣ್ಯ ಕಟ್ಕೊಳ್ಳಿ ಅಂತ ಹೇಳಿಯೇ ಬಿಟ್ಟ..! ಅನುಗೆ ಖಷಿ ಆದ್ರೂ ಆ ಖುಷಿಯನ್ನು ತೋರಿಸಿ ಕೊಳ್ಳಲಿಲ್ಲ..! ರೀ ನಿಮ್ಮ ಕೆಲಸ ನೀವು ನೋಡ್ಕೊಳ್ರೀ ಅವರೇ ಬೇಕಾದ್ರೆ ಬಂದು ಹೇಳ್ಲಿ ಅಂತ ಹೊರಟು ಹೋದ್ಲು…! ಸೂರಜ್ ಗೆ ನೂರಕ್ಕೆ ನೂರು ಪರ್ಸೆಂಟ್ ಕನ್ಫರ್ಮ್ ಆಯ್ತು ಅನು ದೀಪಕ್ ನನ್ನು ಲವ್ ಮಾಡ್ತಾ ಇದ್ದಾಳೆ ಅಂತ..!
ಸುಮಾ, ಸೂರಜ್ ಇಬ್ಬರೂ ಹೇಳಿದ್ರೂ ದೀಪಕ್ಗೆ ಪ್ರೊಪೋಸ್ ಮಾಡೋಕೆ ದೈರ್ಯ ಬರ್ಲೇ ಇಲ್ಲ. ಅವಳು ಅವನೇ ಬಂದು ಮಾತಾಡ್ಲಿ ಅಂತ ಕಾಯ್ತಾನೇ ಇದ್ಲು..! ಅಷ್ಟೊತ್ತಿಗೆ ದೀಪಕ್ ಓದು ಮುಗೀತು ಅಲ್ಲಿಂದ ಜಾಗ ಕಾಲಿ ಮಾಡ್ದ. ಅನು ಅವನಿಗಿಂತಲೂ ಒಂದು ವರ್ಷ ಚಿಕ್ಕವಳಾದ್ರಿಂದ ಅದೇ ಯೂನಿವರ್ಸಿಟಿಯಲ್ಲಿ ಇದ್ಲು.
ಪ್ರಪೋಸ್ ಮಾಡೋಕೆ ಆಗದೇ ದೀಪಕ್ ಸೋತು ಬಿಟ್ಟ. ಅವನೇ ಬರಲಿ ಅಂತ ಕಾದಿದ್ದ ಅನು ಕೂಡ ಅವಳ ಹಠದಲ್ಲಿ ಸೋತು ಬಿಟ್ಟಳು..! ದೀಪಕ್ ದೂರಾದ ಮೇಲೆ ಅನುಗೆ ಅವನ ನೆನಪು ಜಾಸ್ತಿ ಆಯ್ತೇನೋ..? ಸುಮಾಳಿಗೆ ಫೋನ್ ಮಾಡಿ ದೀಪಕ್ ನಂಬರ್ ಕೇಳಿದ್ಲು. ಯೂನಿವರ್ಸಿಟಿಯಲ್ಲೇ ಸೂರಜ್ ಸಿಕ್ಕಾಗ ಅವನ ಹತ್ತಿರವೂ ದೀಪಕ್ ನಂಬರ್ ಕೇಳಿದ್ಲು..! ಅದೂ ದೀಪಕ್ ಯೂನಿವರ್ಸಿಟಿ ಬಿಟ್ಟು ಹೋದ ಆರು ತಿಂಗಳ ನಂತರ..! ಕೊನೆಗೂ ಫೋನ್ ಮಾಡಿಯೇ ಬಿಟ್ಟಳು. ಮಾತಾಡುತ್ತಾ ಮಾತಾಡುತ್ತಾ ಎಲ್ಲಾ ವಿಚಾರವನ್ನೂ ಮೆಲಕು ಹಾಕಿ ಕೊನೆಗೂ ಅನುವೇ ಪ್ರಪೋಸ್ ಮಾಡಿಬಿಟ್ಟಿದ್ದಾಳೆ..!

ಅವರಿಬ್ಬರ ಪ್ರೀತಿ ಮನೆಯವರಿಗೂ ಗೊತ್ತಾಗಿದೆಯಂತೆ..! ಸಧ್ಯದಲ್ಲೇ ಮದುವೆ ಆಗ್ತಾರಂತೆ. ಎನಿವೇ… ಅವರ ಜೀವನ ಚೆನ್ನಾಗಿರಲಿ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article