ಈ ವಿಶಿಷ್ಟ ಜಗತ್ತಿನಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳಿಲ್ಲ, ಅಂತಹ ಪ್ರಶ್ನೆಗಳ ಬೆನ್ನತ್ತಿ ಹೊಗುವುದರಲ್ಲಿ ಹುರುಳಿಲ್ಲ. ಪ್ರಪಂಚಕ್ಕಂಟಿದ ಮಹಾಮಾರಿ ಮನವ ನಿರ್ಮಿತವೊ, ಪ್ರಕೃತಿ ಶಾಪವೊ!? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ಇಡೀ ಜಗತ್ತೆ ಕಾದು ಕುಳಿತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡವ ಇದರಲ್ಲಿ ಮೊದಲಿಗ. ಈ ಪ್ರಶ್ನೆಗೆ ಉತ್ತರ ಸಿಕ್ಕರೂ ಪ್ರಯೋಜನವಿಲ್ಲ ಎಂಬುದೇ ಇದಕ್ಕೆ ಉತ್ತರವೆನಿಸಬಹುದು. ಆದರೆ ಒಮ್ಮೆ ಯೋಚಿಸಿದರೆ ಮುಂದಾಗಬಹುದಾದ ಇದಕ್ಕಿಂತ ದೊಡ್ಡ ಅಪಾಯ ಸಣ್ಣದಾಗಬಹುದೇನೊ.
ಕಾಲಕಾಲಕ್ಕೆ ಮಳೆ, ಬೆಳೆ, ಶುದ್ದ ನೀರು, ಸ್ವಚ್ಛಂದ ಪರಿಸರ, ಆರೋಗ್ಯ, ನೆಮ್ಮದಿ ಇವೆಲ್ಲಾ ಬೇಕೆಂಬುದು ಪ್ರತಿಯೊಬ್ಬನ ಆಸೆ. ಅದನ್ನು ಹುಡುಕುತ್ತ ಅನುಭವಿಸುತ್ತ ಮುನ್ನಡೆವುದೇ ಜೀವನ. ತಿಂಗಳುಗಳೆ ಕಳೆದರೂ ನಾಲ್ಕು ಗೋಡೆಗಳಷ್ಟೇ ನಮ್ಮ ಜಗತ್ತಾಗಿದೆ. ಮೊಬೈಲ್, ಟಿವಿ, ನ್ಯೂಸ್ ಪೆಪರ್‌ಗಳೇ ನಮ್ಮ ಸ್ನೇಹಿತರಾಗಿದ್ದಾರೆ.
ಇಂತಹ ಸ್ಥಿತಿಯಲ್ಲಿ ನನ್ನೊಳಗೂ ಸಹ ಹಲವು ಪ್ರಶ್ನೆಗಳು ಉದ್ಭವವಾದವು. ಆ ಪ್ರಶ್ನೆಗಳು ಮಹತ್ವದ ಅರಿವೊಂದನ್ನು ಮೂಡಿಸಿದವು. ಕೆಲವಕ್ಕೆ ತೃಪ್ತಿಕರ ಉತ್ತರ ಸಿಕ್ಕಿತು, ಹಲವು ಕಲಿಕೆಗೆ ದಾರಿಯಾದವು.
ಅಂದು ಮುಂಜಾನೆ ಕಸ ಸಂಗ್ರಹಸಿ ನಮ್ಮ ನಗರವನ್ನೂ ಸ್ವಚ್ಛ ಮಾಡಲು ಪಣ ತೊಟ್ಟ ಪೌರ ಕಾರ್ಮಿಕನ ಕೈಗಳು ನಾನು ನಿಮ್ಮಂತೆಯೇ ಒಬ್ಬನಲ್ಲವೇ? ಎಂದು ಪ್ರಶ್ನಿಸಿದಾಗ ಸಮಾಜಕ್ಕೆ ನನ್ನ ಕೊಡುಗೆಯೇನು ಎಂಬುದರ ಅರಿವಾಯಿತು. ಅಮ್ಮ ತರಕಾರಿ ಮಾರುವವನ ಹತ್ತಿರ ಚೌಕಾಸಿ ಮಡುವುದನ್ನು ಗಮನಿಸುತ್ತಿದ್ದೆ, ಅವನ ಮಾತುಗಳು ಮತ್ತು ಆ ಕಣ್ಗಳಲಿದ್ದ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ವಾರಕ್ಕೊಮ್ಮೆ ಸಹ ಕರೆ ಮಾಡಲು ಬಿಡುವಿಲ್ಲದಿದ್ದಾಗ ಅಮ್ಮ ನನ್ನ ಬಗ್ಗೆ ಎಷ್ಟೆಲ್ಲಾ ಯೋಚಿಸುತ್ತಿದ್ದಳು ಎಂಬುದನ್ನು ಅವಳ ಆ ನಗು, ಮಮತೆ, ಪ್ರೀತಿ ಪ್ರಶ್ನೆ ಮಾಡಿದವು. ಇದಕ್ಕೂ ನನ್ನ ಬಳಿ ಉತ್ತರಿಸಲಾಗಲಿಲ್ಲ. ಬಿಡುವಿನ ವೇಳೆಯಲ್ಲಿ ಈ ನಾಲ್ಕು ಗೋಡೆಗಳ ಮಧ್ಯೆ ಓದಿದ ಪುಸ್ತಕ, ಕಂಡ ಸಿನೆಮಾ, ಬರೆದ ಕಥೆ, ಪ್ರತಿಯೊಂದು ತನ್ನದೇ ಪ್ರಶ್ನೆಗಳನ್ನು ಹುಟ್ಟಿಸಿದವು. ಇದಕ್ಕೆಲ್ಲ ನನಗೆ ಸಿಕ್ಕ ಉತ್ತರ ಪ್ರಶ್ನೆಯಷ್ಟೇ.
ಪ್ರತಿಯೊಂದು ಅರಂಭಕ್ಕೂ ಕೊನೆ ಇರುತ್ತದೆ, ಆ ಕೊನೆಯೇ ಮತ್ತೊಂದು ಹೊಸತನವ ಹೊತ್ತು ತಂದಿರುತ್ತದೆ. ಅದೇ ರೀತಿ ಈ ಕೊರೊನ, ಇಂದಲ್ಲಾ ನಾಳೆ ಶಾಂತವಾಗಲೇ ಬೇಕು. ಆ ದಿನ ದೂರವಿದ್ದರೂ ಸಾಗುವ ದಾರಿ ಶುದ್ಧವಾಗಿದ್ದರೆ ಪ್ರಯಾಣದ ಕಷ್ಟ ಅರಿವಾಗುವುದಿಲ್ಲ. ಹುರುಳಿಲ್ಲದ ಪ್ರಶ್ನೆಯ ಮೂಲ ಹುಡುಕುವುದರ ಬದಲು ಅದರಿಂದ ಕಲಿತು ಸೂಕ್ತ ಅರಿವು ಮೂಡಿಸಿಕೊಳ್ಳುವುದೇ ಮುಖ್ಯ.
ಪ್ರಜ್ವಲ್. ಎನ್.ಆರ್, ಮಂಡ್ಯ