ಪ್ರೀತಿಸುವ ಹೃದಯಗಳೇ ಎಚ್ಚರಿಕೆ!

0
1077

ಹೌದಲ್ಲಾ…! ಈ ಪ್ರೀತಿಯನ್ನೋ ವಿಷಯ ಎಷ್ಟೋ ಜನರನ್ನು ಎಷ್ಟೋ ಶತಮಾನಗಳಿಂದ ತಲೆ ಕೆಡಿಸಿ ಬಿಟ್ಟಿದೆ. ಗ್ರೀಕ್ ಪುರಾಣದ ಹೆಲನ್ ಒಬ್ಬಳ ಪ್ರೀತಿ ಸಾವಿರ ಹಡಗುಗಳನ್ನು ಹತ್ತು ವರ್ಷಗಳ ಕಾಲ ಯುದ್ಧಕ್ಕಾಗಿ ಕಳಿಸಿ ಇಲಿಯಮ್ ನಗರವನ್ನೇ ಸುಟ್ಟುಹಾಕಿದ ಕಥೆಯಿಂದ ಮೊಬೈಲ್ಗಳಲ್ಲಿ ಡೇಟಿಂಗ್ ಆಪ್ ಆಗಿ ಬೆಳಗ್ಗೆ ರೈಟ್ಸ್ ಸ್ವೀಪ್ ಮಾಡಿ ರಾತ್ರಿ ಡಿನ್ನರ್ ಡೇಟಿಗೆ ಹೋಗುವಷ್ಟು ಸರಳವಾಗಿ ಬಿಟ್ಟಿದೆ.

ಹಾಗಂತ ಈಗಿನ ಲವ್ ಸ್ಟೋರಿಗಳೇನು ಬಾರಿ ಪರ್ಫೆಕ್ಟ್ ಅಂತ ಮಾತ್ರ ಅನ್ಕೋಬೇಡಿ, ನಮ್ಮ ಜನರೇಶನ್ ಲವ್ಗಳು ಪಕ್ಕಾ ಕಾಂಪ್ಲಿಕೇಟೆಡ್ ಹಾಗೂ ಪಕ್ಕಾ ಕನ್ಫ್ಯೂಸಿಂಗ್.

ನಮ್ ಜನರೇಶನ್ ಒಂಥರಾ ಯಡವಟ್ಟು ಜನರೇಶನ್ ಕಣ್ರೀ, ನಾವು ಲ್ಯಾಂಡ್ಲೈನ್ ನಲ್ಲಿ ಲವರ್ಸ್ ಕೋಡ್ ಅಂತ ಮೂರು ಸಪರೇಟರ್ ರಿಂಗು ಕೊಟ್ಟಿದ್ದೀವಿ, ವಾಟ್ಸಪ್ಪಲ್ಲಿ ಸಾವಿರಾರು ಸರಿ ಹಾರ್ಟ್ ಇಮೋಜಿ, ಕಿಸ್ ಇಮೋಜಿನೂ ಕಳಿಸಿದ್ದೇವೆ. ಪಾಪ ನಮ್ ಹುಡುಗರು ಸೈಕಲ್‌ನಲ್ಲಿ ಹುಡುಗಿ ಹಿಂದೆ ಇಡೀ ದಿನ, ಎಲ್ಲಿ ಹೋಗ್ತಾಳೆ ಏನ್ ಮಾಡ್ತಾಳೆ ಅಂತ ಹಿಂದೆ ಹಿಂದೆ ತಿರುಗಿದ್ದೂ ಹೌದು! ಈಗ ರಾತ್ರಿಯೆಲ್ಲಾ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ವಾಟ್ಸಪ್ಪಲ್ಲಿ ಫೇಸ್ಬುಕಲ್ಲಿ ಇನ್ಸ್ಟಾದಲ್ಲಿ ಹುಡುಗಿ ಸ್ಟೇಟಸ್ ಹಾಕ್ತಾಳಾ ಅಂತ ಕಾದು ಅದನ್ನು ಫಸ್ಟ್ ಲೈಕ್ ಮಾಡ್ತಾರೆ.

ಆದರೆ, ಪ್ರೀತಿ ಮಾತ್ರ ಹಾಗೆಯೇ ಇದೆ. ಅದನ್ನು ಸಂವಾದಿಸುವ ಹಾಗೂ ಸಂವಹಿಸುವ ರೀತಿ ಮಾತ್ರ ಬದಲಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ನಮ್ಮನ್ನು ಎಷ್ಟು ಹತ್ತಿರ ತರುತ್ತದೆಯೋ ಅಷ್ಟೇ ಪರಿಣಾಮಕಾರಿಯಾಗಿ ನಮ್ಮನ್ನು ನಮ್ಮಿಂದ ದೂರ ಕರೆದೊಯ್ಯುತ್ತಿದೆ. ನಮ್ಮ ಜೀವನವನ್ನು ಸಿಂಪಲ್ ಮಾಡುವ ಬದಲು ಇನ್ನೂ ಕಾಂಪ್ಲಿಕೇಟೆಡ್ ಮಾಡಿದೆ.

ಹೌದು. ನಮ್ಮ ಜನರೇಶನ್ ಗೆ ಎಲ್ಲವೂ ಸುಲಭವಾಗಿ ಅತೀ ಕಡಿಮೆ ಶ್ರಮದಿಂದ ಸಿಗುತ್ತಿದೆ. ಆದರೆ ಅದನ್ನು ಹೇಗೆ, ಯಾವಾಗ,ಎಲ್ಲಿ,ಎಷ್ಟು ಬಳಸಬೇಕೆಂಬ ಯೂಸರ್ ಮ್ಯಾನುಯಲ್ ಸಿಕ್ಕಿಲ್ಲ! ಹಾಗೆಯೇ ಪ್ರೀತಿಯ ವಿಷಯದಲ್ಲಿಯೂ ಕೂಡ. ಸೋಶಿಯಲ್ ಮೀಡಿಯ ಪ್ಲಾಟ್ಫಾರ್ಮ್, ಡೇಟಿಂಗ್ ಆಪ್ ಹೀಗೆ ತರಹೇವಾರಿ ಆಪ್ಷನ್‌ಗಳಿದ್ದು , ಇದಕ್ಕೂ ಸಹ ಯಾವ ಯೂಸರ್ ಮ್ಯಾನುಯಲ್ ಗಳು ಲಭ್ಯವಿಲ್ಲ. ಇದಿಷ್ಟೇ ಅಲ್ಲದೆ ಫ್ರೆಂಡ್ಸ್ ವಿತ್ ಬೆನಿಫಿಟ್ಸ್, ನೋ ಸ್ಪ್ರಿಂಗ್ಸ್, ಅಟ್ಯಾಚ್ಡ್, ಹೋಕ್ ಅಪ್ಸ್, ಒನ್ ನೈಟ್ ಸ್ಟ್ಯಾಂಡ್‌ಗಳಲ್ಲಿ ಕಳೆದು ಹೋಗಿದ್ದೇವೆ! ಇದು ಪಿಯರ್ ಪ್ರೆಶರ್ ಸಲುವಾಗಿಯೋ ಅಥವಾ ನಾವು ತುಂಬಾ ಕೂಲ್ ಎನಿಸಿಕೊಳ್ಳಬೇಕು ಎಂದೋ ಇದನ್ನು ಪಾಲಿಸುತ್ತೇವೆ. ಇವೆಲ್ಲ ನಮಗೆ ಬಹಳ ಸುಲಭವಾಗಿ ಸಿಕ್ಕಿದೆ ನಿಜ. ಆದರೆ ಇದನ್ನು ಕಾಪಾಡಿಕೊಳ್ಳುವ, ನಿಭಾಯಿಸುವ, ಮುಂದಾಗುವ ಪರಿಣಾಮಗಳನ್ನು ಎದುರಿಸುವ ಯಾವ ತಯಾರಿಯೂ ಯಾರ ಹತ್ತಿರವೂ ಇಲ್ಲ.

ಪ್ರೀತಿಯಲ್ಲಿ ಕಾಯುವಿಕೆ, ತಾಳ್ಮೆ, ಸಹನೆ, ಸಹಾನುಭೂತಿ, ಉತ್ಸಾಹ, ಪರಸ್ಪರ ನಂಬಿಕೆ, ಪರಿಪಕ್ವತೆ ಇವೆಲ್ಲವೂ ಕ್ರಮೇಣ ಮರೆಯಾಗುತ್ತಿವೆ ಎಂಬುದು ಕಟುಸತ್ಯ.

ಪ್ರೀತಿಯ ತಾತ್ಕಾಲಿಕತೆ ಹಾಗೂ ಅಲ್ಪಾವಧಿ ನಮ್ಮನ್ನು ಎತ್ತ ಸಾಗಿಸುತ್ತದೆ, ಎಲ್ಲಿಗೆ ತಲುಪಿಸುತ್ತದೆ ಎಂದು ಯೋಚಿಸಿದರೆ ಜ್ಞಾನೋದಯವಾಗಬಹುದು.

– ಸಂಜನಾ ಸೂಕಿ

LEAVE A REPLY

Please enter your comment!
Please enter your name here