ತುಳು ಭಾಷೆಗೆ ಮಾನ್ಯತೆ ನೀಡಲು ಅಭಿಯಾನ ! ಘಟಾನುಘಟಿ ನಾಯಕರಿಂದ ಬೆಂಬಲ..

0
46

ಮಂಗಳೂರು:ತುಳು ಭಾಷೆಗೆ ಕರ್ನಾಟಕ ಮತ್ತು ಕೇರಳ ಸರಕಾರ ಅಧಿಕೃತ ಮಾನ್ಯತೆ ನೀಡಿ, ರಾಜ್ಯ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಜೈ ತುಳುನಾಡು ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ತುಳು ಭಾಷಿಕರು ಭಾನುವಾರ ಟ್ವಿಟರ್ ಅಭಿಯಾನ ಆರಂಭಿಸಿದ್ದಾರೆ.

ಭಾನುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಆಯೋಜಿಸಲಾಗಿರುವ ಟ್ವೀಟ್ ಅಭಿಯಾನಕ್ಕೆ ಸಾವಿರಾರು ಜನರು ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಟ್ವೀಟ್ ಅಭಿಯಾನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 1 ಲಕ್ಷಕ್ಕೂ ಹೆಚ್ಚಿನ ಟ್ವೀಟ್ ಗಳು ದಾಖಲಾಗಿವೆ.

ಕಾಸರಗೋಡಿನ ಕೆಲವು ಭಾಗಗಳು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆ ಮಾತನಾಡುವ ಜನರಿದ್ದು, ಈ ಭಾಷೆಗೆ 2500 ವರ್ಷಗಳ ಹಿಂದಿನ ಇತಿಹಾಸವಿದೆ. ಪ್ರಾಚೀನ ಸಂಸ್ಕೃತಿ ಈ ಭಾಷೆಗಿದೆ.
ತುಳುಭಾಷೆಯ ಸ್ಥಾನಮಾನಕ್ಕಾಗಿ ಈ ಹಿಂದೆಯೂ ಟ್ವೀಟ್‌ ಅಭಿಯಾನ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಅಲ್ಲದೆ, ತುಳು ಸಾಹಿತ್ಯ ಅಕಾಡೆಮಿ, ಜನಪ್ರತಿನಿಧಿಗಳು ಗಣ್ಯರು ಕೂಡ ರಾಜ್ಯ, ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ಆದರೆ ಸರಕಾರ ಈ ‌ಬಗ್ಗೆ ಗಮನಹರಿಸಿಲ್ಲ.


ತುಳು ಟ್ವೀಟ್‌ ಅಭಿಯಾನಕ್ಕೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಶೀಘ್ರವೇ ಈ ಮಾನ್ಯತೆ ನೀಡುವ ಕಾರ್ಯ ಮಾಡುವುದಾಗಿ ತುಳುವಿನಲ್ಲಿ ಟ್ವೀಟ್ ಮಾಡಿದ್ದಾರೆ.
ಪೆದ್ದ್ ತಾಂಕಿದಿನ ಅಪ್ಪೆ ಲೆಕ ಮಟ್ಟೆಲ್ ಡ್ ಮಾನಾಯಿನ ಅಪ್ಪೆ ಬಾಸೆಗ್ ರಾಜ್ಯ ಬಾಸೆದ ಮಾನಾದಿಗೆ ತಿಕ್ಕೊಡು ಪನ್ಪಿನ ಪೊರಂಬಾಟಗ್ ಎನ್ನ ಬೆರಿಸಾಯ ಉಂಡು. ತುಲು ಬಾಸೆನ್ 8ನೇ ಪರಿಚ್ಛೇದಗ್ ಸೇರ್ಪಾವರೆ ಸರಕಾದೊಟ್ಟುಗು ಪಾತೆರಕತೆ ಆವೊಂದುಂಡು. ಒಂಜಾತ್ ತಾಂತ್ರಿಕ ದೋಷಲೆನ್ ಸರಿ ಮಲ್ತ್ದ್ ನಮ್ಮ ಅವಧಿಡ್ ತುಲು ಬಾಸೆಗ್ ರಾಜ್ಯದ ಅಧಿಕೃತ ಬಾಸೆ ಪನ್ಪುನ ಮಾನಾದಿಗೆ ಕೊರ್ಪಾವ. ( ಹೆತ್ತ ತಾಯಿಯಂತಿರುವ ನಮ್ಮ ಮಾತೃಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ಸಿಗಬೇಕೆಂಬ ಹೋರಾಟಕ್ಕೆ ನನ್ನ ಬೆಂಬಲವಿದೆ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಒಂದಷ್ಟು ತಾಂತ್ರಿಕ ದೋಷಗಳನ್ನು ಸರಿಪಡಿಸಿ ನಮ್ಮ ಅವಧಿಯಲ್ಲೇ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆ ಎಂಬ ಮಾನ್ಯತೆ ಕೊಡಿಸುತ್ತೇವೆ) ಎಂದು ಕಟೀಲ್ ಹೇಳಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಬೆಂಬಲ:
ಈ ಅಭಿಯಾನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತುಳು ರಾಜ್ಯದ ಆಡಳಿತಾತ್ಮಕ ಭಾಷೆ ಆಗಬೇಕು, ತುಳುವಿಗೆ ವಿಶೇಷ ಮಾನ್ಯತೆ ಸಿಗಬೇಕೆನ್ನುವ ತುಳುನಾಡಿನ ಬಂಧುಗಳ ಹೋರಾಟಕ್ಕೆ ನನ್ನದೂ ಧ್ವನಿ ಇದೆ. ತುಳು ಒಂದು ಭಾಷೆ ಮಾತ್ರವಲ್ಲ, ತುಳು ಒಂದು ಸಂಸ್ಕೃತಿ-ಪರಂಪರೆ. ಅದ್ಭುತ ಇತಿಹಾಸ ಇರುವ ತುಳುನಾಡಿನ ಭಾಷೆಗೆ ಶೀಘ್ರ ವಿಶೇಷ ಮಾನ್ಯತೆ ಸಿಗಬೇಕು ಎನ್ನುವುದು ನನ್ನ ಆಶಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here