ನಿನ್ನ ಉತ್ತರದ ನಿರೀಕ್ಷೆ ಇಲ್ಲ…ಅದು ಬೇಕಿಲ್ಲ…! ಯಾಕಂದ್ರೆ…?

0
536

ನಿಜ ಹೇಳಲೇ…? ನನಗೆ ನಿನ್ನೆ ಮೊನ್ನೆಯವರೆಗೂ ಗೊತ್ತಿರಲಿಲ್ಲ. ನಾ ನಿನ್ನ ಬೆಟ್ಟದಷ್ಟು ಹಚ್ಚಿಕೊಂಡಿರುವೆ ಎಂದು. ಈಗ ಅದರ ಅನುಭವವಾಗುತ್ತಿದೆ. ಆದರೇನು ಬಂತು, ಕಾಲ ಮರೆಯಾಗಿದೆ.


ಇತಿಹಾಸ ಮರುಕಳಿಸುತ್ತೆ ಅಂತಾರೆ. ಆದರೆ, ನಿನ್ನ ಜೊತೆ ನಾ ಕಳೆದ ಆ ದಿನಗಳು ಮತ್ತೆಂದೂ ಬರದು. ಒಂದು ವೇಳೆ ಬಂದರೂ ಅದನ್ನು ಪ್ರೀತಿಯಿಂದ ಸ್ವಾಗತಿಸಲು ಅಥವಾ ಅಪ್ಪಿಕೊಳ್ಳಲು ನನಗೂ ಆಗದು, ನಿನಗೂ ಆಗದು…!
ತಪ್ಪು ಯಾರಿಂದಾಯಿತು ಗೊತ್ತಿಲ್ಲ. ಅದರ ಬಗ್ಗೆ ಯೋಚಿಸುವ ಅಗತ್ಯವೂ ಈಗಿಲ್ಲ. ನಿನ್ನ ಕಳೆದುಕೊಂಡಿರುವೆ ಅಂತಷ್ಟೇ ಹೇಳಬಲ್ಲೆ. ಹುಡುಕುತ್ತಿರುವೆ, ನೀ ಮರಳಿ ಬರುತ್ತೀಯ ಅಂತಲ್ಲ, ನನ್ನ ಖುಷಿಗೆ…!


ಇಬ್ಬರು ಒಟ್ಟಿಗೆ ಓದುವಾಗ, ಒಂದೇ ಆಫೀಸಲ್ಲಿ ಜೊತೆಯಾಗಿ ಕೆಲಸ ಮಾಡುವಾಗ ಆರಾಮಾಗಿಯೇ ಇದ್ದೆ. ಎಲ್ಲಾ ಸ್ನೇಹಿತರಂತೆ, ಸಹೋದ್ಯೋಗಿಗಳಂತೆ ನೀನು ಎಂದು ನಾ ಮೇಲ್ನೋಟಕ್ಕೆ ಅಂದುಕೊಂಡಿದ್ದೇನಾದರೂ ಅದೇನೋ ವಿಶೇಷ ಕಾಳಜಿ ನಿನ್ನ ಮೇಲಿತ್ತು. ಅದು ನನಗೂ ಗೊತ್ತಿರಲಿಲ್ಲ…! ಈಗ ಒಂದೊಂದೇ ಅರಿವಿಗೆ ಬರುತ್ತಿದೆ.


ನೀನು ಕ್ಲಾಸ್ ಗೆ ಬರೋದು ಸ್ವಲ್ಪ ತಡವಾಗಿದ್ದರೂ ನಾನು ಚಡಪಡಿಸುತ್ತಿದ್ದೆ. ವೀಕೆಂಡ್, ರಜಾದಿನಗಳಲ್ಲಂತೂ ನನ್ನ ಪಾಡು ಕೇಳಬೇಕೇ…? ಅದ್ಯಾವುದು ನಿನಗೆ ಗೊತ್ತಿರಲಿಕ್ಕಿಲ್ಲ. ಹಿಂಗೆಲ್ಲಾ ಯಾಕ್ ಆಗ್ತಿದೆ ಅಂತ ನಂಗೂ ಅರ್ಥವಾಗ್ತಿರ್ಲಿಲ್ಲ.
ನಿನಗೆ ನೆನಪಿರಬಹುದು? ಮಾಸ್ಟರ್ ಡಿಗ್ರಿ ಮುಗಿದ ಮೇಲೆ ಇಬ್ಬರೂ ಬೆಂಗಳೂರಿಗೆ ಬಂದ್ವಿ. ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಸಿಕ್ತು. ಆರೇಳು ತಿಂಗಳ ಬಳಿಕ ನೀನು ನಾನು ಕೆಲಸ ಮಾಡ್ತಿದ್ದ ಆಫೀಸ್ ಗೆ ಬಂದೆ. ನನಗದು ಸಪ್ರೈಸ್ ಆಗಿತ್ತು…! ಯರ್ಯಾಬಿರ್ರಿ ಖುಷಿ ಆಗಿತ್ತಾದರೂ ಅದನ್ನು ತೋರ್ಪಡಿಸಿರ್ಲಿಲ್ಲ. ಯಾಕೇ ಇಲ್ಲಿಗೆ ಬಂದೆ ಜೀವ ತಿನ್ನೋಕೆ ಅಂತ ನಿನ್ನ ರೇಗಿಸಿದ್ದೆ…!


ಬರು ಬರುತ್ತಾ ನೀ ತುಂಬಾನೇ ಹತ್ತಿರವಾದೆ. ಯಾರೊಂದಿಗೂ ಶೇರ್ ಮಾಡಿಕೊಳ್ಳದ ವಿಷ್ಯಗಳನ್ನು ನನ್ನ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದೆ ನೀ… ಆಗಾಗ ನನ್ನ ಮೊಬೈಲ್ ಕಸಿದುಕೊಂಡು ಪರಿಶೀಲಿಸದೇ ನಿನಗೆ ನೆಮ್ಮದಿ ಇರುತ್ತಿರಲಿಲ್ಲ…! ಇದ್ಯಾವುದರ ಬಗ್ಗೆ ಅಂದು ಗಂಭೀರವಾಗಿ ಯೋಚಿಸಿರಲಿಲ್ಲ. ಇವತ್ತು ಅವೆಲ್ಲವೂ ಕಾಡುತ್ತಿವೆ.


ಯೂನಿವರ್ಸಿಟಿಯಲ್ಲಿ ಫ್ರೆಂಡ್ಸ್ ಹೇಳ್ತಿದ್ರು, ನಿಮ್ಮಿಬ್ಬರ ನಡುವೆ ಏನೋ ಇದೆ ಅಂತ…! ಹೋಗ್ರೋ, ಏನೂ ಇಲ್ಲ ಅನ್ನುತ್ತಿದ್ದೆ…! ಆಫೀಸಲ್ಲಿ ಹಿರಿಯ-ಕಿರಿಯ ಸಹೋದ್ಯೋಗಿಗಳು ಸಹ ಇದನ್ನೇ ಹೇಳುತ್ತಿದ್ರು. ಆಗಲೂ ನಾನು ಇಲ್ಲ ಎನ್ನುವ ಅರ್ಥದಲ್ಲಿ ತಲೆ ಆಡಿಸಿದ್ದೆ…!
ಬರು ಬರುತ್ತಾ ನಿನ್ನ ಜೊತೆ ಕಾಲ ಕಳೆಯೋದೇ ಆಯ್ತು. ನಾ ದೊಡ್ಡ ತಪ್ಪು ಮಾಡಲಾರಂಭಿಸಿದೆ…! ಕೆಲಸಕ್ಕಿಂತ ಹೆಚ್ಚಾಗಿ ನಿನ್ನೇ ಪ್ರೀತಿಸ ತೊಡಗಿದೆ. ನನಗೆ ಅದು ಸೂಕ್ಷ್ಮವಾಗಿ ಅರ್ಥವಾಗ ತೊಡಗಿತು. ಇಲ್ಲೇ ನಾನು ಮುಂದುವರೆದರೆ ಸಂಪೂರ್ಣ ಕಳೆದು ಹೋಗುತ್ತೇನೆ, ಕಂಪನಿಯವರೇ ‘ನಿಮ್ಮ ಸೇವೆ ತೃಪ್ತಿ ತಂದಿದೆ…ಇನ್ನು ಅಗತ್ಯವಿಲ್ಲ’ ಎಂದು ಈ-ಮೇಲ್ ಮಾಡಿ, ರಾಜೀನಾಮೆ ಕೇಳುವ ಮುನ್ನವೇ ಹೊರಟು ಬಿಡೋಣ ಎಂದು ಒಲ್ಲದ ಮನಸ್ಸಿಂದ ಇಷ್ಟದ ಕಂಪನಿಯನ್ನು, ಪ್ರೀತಿಯ ಸಹೋದ್ಯೋಗಿಗಳನ್ನು, ಜೊತೆಗೆ ನಿನ್ನೂ ಬಿಟ್ಟು ಹೊರಟೆ.


ಕಂಪನಿ ಬಿಟ್ಟರು ನಿನ್ನ ಸೆಳೆತ ಬಿಡಲಿಲ್ಲ…! ಎಲ್ಲೋ ಒಂದು ಕಡೆ ನಾ ನಿನ್ನ ಪ್ರೀತಿಸ್ತಿದ್ದೀನಿ ಅಂತ ನನ್ನ ಮನಸ್ಸು ಹೇಳ್ತಿತ್ತು. ಇಲ್ಲ, ಈ ಪ್ರೀತಿ-ಗೀತಿ ಬೇಡ ಎಂದು ಗಟ್ಟಿ ಮನಸ್ಸು ಮಾಡಿ ಪ್ರೀತಿ ನಿವೇಧಿಸಿಕೊಳ್ಳದೇ ಸುಮ್ಮನಾದೆ. ಇನ್ನೊಂದು ಭಯವೂ ಇತ್ತು. ಅಕಸ್ಮಾತ್ ನಾನು ನಿನ್ನ ಪ್ರೀತಿಸ್ತಿದ್ದೀನಿ ಅಂತ ಹೇಳಿದ್ರೆ, ನಿನಗದು ಇಷ್ಟವಾಗದೇ ಇದ್ರೆ ಏನಾಗುತ್ತೋ ಅಂತ.
ಅದಕ್ಕಾಗಿ ದೂರ ಆಗೋ ಪ್ರಯತ್ನ ಮಾಡಿದೆ. ಆದ್ರೆ ನೀನು ಬಿಡಬೇಕಲ್ಲಾ…? ಕರೆ ಮಾಡ್ತಿದ್ದೆ, ಮೆಸೇಜ್ ಮಾಡ್ತಿದ್ದೆ, ಎಂದಿನಂತೆ ವಿಚಾರ ವಿನಿಮಯ ಮಾಡ್ತಿದ್ದೆ…!


ಜೊತೆಯಲ್ಲಿ ಓದುತ್ತಿದ್ದಾಗ, ಒಟ್ಟಿಗೆ ಕೆಲಸ ಮಾಡುವಾಗ ನಿನಗಾಗಿ ಮೀಸಲಿಡ್ತಿದ್ದ ಸಮಯಕ್ಕಿಂತ ಹೆಚ್ಚು ಸಮಯವನ್ನು ದೂರಾದ ಮೇಲೆ ಮೀಸಲಿಡಲಾರಂಭಿಸಿದೆ. ಆಗಲೂ ಇದು ಪ್ರೀತಿ ಎಂಬ ಗಟ್ಟಿ ನನಗೆ ತೋಚಿರ್ಲಿಲ್ಲ.
ನಿನಗೆ ಏನಾಯ್ತೋ ಗೊತ್ತಿಲ್ಲ. ಮೆಸೇಜ್ ಕಮ್ಮಿ ಆಯ್ತು. ಕರೆ ತೀರಾ ಅಪರೂಪವಾಯ್ತು. ಸಹಜ ಇದನ್ನು ನಾನು ಪ್ರಶ್ನಿಸಿದೆ…! ಇದು ನನ್ನಿಷ್ಟ, ನನಗೇಕೆ ಒತ್ತಾಯ ಮಾಡ್ತೀಯ ಎಂಬ ನಿರೀಕ್ಷಿಸದ ಉತ್ತರ ನಿನ್ನಿಂದ ಬಂತು. ಆಗ ಮನಸ್ಸು ಅದೆಷ್ಟು ಭಾರವಾಗಿತ್ತೆನ್ನುವುದನ್ನು ಅಕ್ಷರಗಳಲ್ಲಿ ತಿಳಿಸಲು ಆಗುತ್ತದೆಯೇ…?


ಅಷ್ಟರಲ್ಲಿ ನಾನು ನಿನ್ನ ವಿಪರೀತ ಹಚ್ಚಿಕೊಂಡಿದ್ದೆ. ನಿನಗದು ಗೊತ್ತಿತ್ತು. ನೀನು ಹಚ್ಚಿಕೊಂಡಿದ್ದಿ…? ವಾರಕ್ಕೊಮ್ಮೆ ಮೀಟ್ ಆಗಲೇ ಬೇಕಿತ್ತು. ನಾನು ಬರದೆ ಇದ್ದರೆ ನೀನು ಕೋಪಿಸಿಕೊಳ್ತಿದ್ದಿ. ನಿನ್ನ ಸಮಾಧಾನ ಮಾಡಲು ಮತ್ತೊಂದು ವಾರ ಬೇಕಾಗ್ತಿತ್ತು.
ಹೀಗೆಲ್ಲಾ ಇದ್ದ ನೀನು, ಹೇಳದೆ ಕೇಳದೆ ದೂರಾದ ಮೇಲೆ ಇಬ್ಬರ ಫ್ರೆಂಡ್ಸ್ ಸರ್ಕಲ್ ನಲ್ಲಿ ಹೇಳಿಕೊಂಡು ಬಂದಿದ್ದೇನು…? ನಾನು ನಿನ್ನ ಬಗ್ಗೆ ಅತೀವ ಕಾಳಜಿ ಮಾಡ್ತೀನಿ, ಅದು ಕಿರಿಕಿರಿ ಆಗುತ್ತೆ, ಇರಿಟೀಟ್ ಆಗುತ್ತೆ ಎಂದು…!
ಮದುವೆ ಕಾರಣ ಹೇಳಿಯಾದರೂ ದೂರಾಗಬಹುದಿತ್ತು. ನೀನು ಹಾಗೆ ಮಾಡಲಿಲ್ಲ. ಪರವಾಗಿಲ್ಲ ಬಿಡು.


ಒಪ್ಪಿಕೊಳ್ಳುವೆ, ನನಗೆ ನಿನ್ನ ಮೇಲೆ ಕಾಳಜಿ ಇತ್ತು, ಪ್ರೀತಿಯೂ ಇತ್ತು…! ಹೇಳಿಕೊಳ್ಳಲಿಲ್ಲ… ಆದರೆ, ನೀ ಮಾಡಿದ್ದೇನು. ನಿನಗೂ ಅಂತಹದ್ದೇ ಭಾವನೆ ಇರಲಿಲ್ಲವೇ…? ಈಗ ಉತ್ತರಿಸೋ ಸರದಿ ನಿಂದು.
ನಿನ್ನ ಉತ್ತರದ ನಿರೀಕ್ಷೆ ಇಲ್ಲ…ಅದು ಬೇಕಿಲ್ಲ. ಇಂದು ನೀ ಬೇರೆಯವನ ಜೊತೆಗಾರ್ತಿ. ಆರಾಮಾಗಿದ್ದೀಯ ಅಂತ ಭಾವಿಸಿದ್ದೇನೆ…ಹಾಗೇ ನಗು ನಗುತಲಿರು. ಒಳ್ಳೆಯದಾಗಲಿ.

LEAVE A REPLY

Please enter your comment!
Please enter your name here