ನಿನ್ನ ಖುಷಿಗೆ ಎಲ್ಲವನ್ನೂ ಬಿಟ್ಟು ಈಗ ನಿನ್ನೊಡನೆ ಮಾತನ್ನೂ ಬಿಟ್ಟೆ….!

0
459

ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಗೀಚುವುದು ಬಿಟ್ಟರೆ ಈಗ ಬೇರೆ ದಾರಿಯಿಲ್ಲ.

ಮನಸ್ಸನ್ನು ಭಾರ ಮಾಡಿ ಕಿತ್ತು ತಿನ್ನುತ್ತಿರುವ ನೋವುಗಳನ್ನು ಯಾರ ಬಳಿ ಹೇಳಿಕೊಳ್ಳಲಿ. ಅದು ನಿನ್ನ ಬಿಟ್ಟರೆ ಬೇರೆ ಅವರೊಡನೆ ಹಂಚಿಕೊಳ್ಳುವ ನೋವು ಅಲ್ಲ. ಏಕೆಂದರೆ ಕೆಲವೊಮ್ಮೆ ನಮ್ಮ‌ಒಡಲಾಳದ ದುಃಖ ಇನ್ನೊಬ್ಬರಿಗೆ ನಗುತರಿಸಬಲ್ಲದಷ್ಟೇ..!

ನೀನು ನಿಜಕ್ಕೂ ಬದಲಾಗಿ ಬಿಟ್ಟೆಯ? ಅಥವಾ ನೀನು ಇದ್ದುದೇ ಹಾಗೆಯೇ? ನಾನು ನಿನ್ನ ಬಗ್ಗೆ ಕಟ್ಟಿಕೊಂಡ ಕಲ್ಪನೆಗಳು, ಕನಸುಗಳೆಲ್ಲವೂ ಸುಳ್ಳೇ?‌ ಒಂದೂ ಅರ್ಥವಾಗುತ್ತಿಲ್ಲ…!

ನನಗೂ ತಿಳಿಯದಷ್ಟು ನಿನ್ನ ಹಚ್ಚಿಕೊಂಡಿದ್ದಂತೂ ಸತ್ಯ. ನಿನ್ನ ಮೇಲೆ ಅರಳಿದ್ದ ಅವ್ಯಕ್ತ ಭಾವನೆ ನಿನಗೂ ಗೊತ್ತಿದೆ. ನಿನಗೆ ನಾನಾರು ಎಂದು ಸಾರಿ ಸಾರಿ ಬಾಯಿ ಮಾತಲ್ಲಿ ಹೇಳಿಲ್ಲ. ಪ್ರತಿ ಹಂತದಲ್ಲೂ ಅದನ್ನು ಸಾಬೀತುಪಡಿಸಿದ್ದೀನಿ.

ನಾನು ನಿನ್ನ ಮೇಲೆ ಅದೆಂಥಾ ಗೌರವಯುತ ಪ್ರೀತಿ ಇಟ್ಟಿರುವೆ…ನಿನ್ನ ಯಾವ ಸ್ಥಾನದಲ್ಲಿಟ್ಟು ಆರಾಧಿಸುತ್ತಿರುವೆ ಎಂಬುದನ್ನಿಲ್ಲಿ ಬಿಡಿಸಿ ಹೇಳಬೇಕಿಲ್ಲ…! ಯಾಕಂದರೆ ನಿನ್ನೆದುರು ಲೆಕ್ಕವಿಲ್ಲದಷ್ಟು ಬಾರಿ ಹೇಳಿರುವೆ.

 

ನಿಜ ಹೇಳಬೇಕೆಂದರೆ ನೀನೇ ಅರ್ಥ ಮಾಡಿಕೊಳ್ಳಬೇಕಿತ್ತು. ನಿನಗದು ಅರ್ಥವಾಗಲೇ ಇಲ್ಲವೇನೋ? ಅಥವಾ ಅರ್ಥವಾದರೂ ಆಗದವಳಂತೆ ಸುಮ್ಮನೇ ಇದ್ದೀಯೋ? ಅದಕ್ಕಾಗಿಯೇ ನಾನು ಪದೇ ಪದೇ ನನ್ನೊಳು ನಿನಗೆ ನೀಡಿದ ಸಾನಿಧ್ಯವನ್ನು ಮನಬಿಚ್ಚಿ ಹೇಳಿದ್ದೆ.
ಅದು ಸ್ನೇಹ ಇರಲಿ, ಪ್ರೀತಿ ಇರಲಿ ಅಥವಾ ಯಾವುದೇ ರೀತಿಯ ಸಂಬಂಧವಿರಲಿ ಕೆಲವರು ಬರೀ ಬಾಯಿ ಮಾತಲ್ಲಿ ಹೇಳಿಕೊಳ್ಳುತ್ತಾರೆ. ಆದರೆ ನಾನು ಹಾಗಲ್ಲ…ನಿನಗೆ ನಾ ನೀಡಿದ ಸ್ಥಾನಕ್ಕೆ ಯೋಗ್ಯವಾಗಿ ಪರರಿಗೆ ಗೊತ್ತಾಗದ ರೀತಿಯಲ್ಲಿ ನಿನ್ನ ನೆರಳಾಗಿದ್ದೆ…! ಮುಂದೆಯೂ ಇರುವ ಭರವಸೆ ಇದೆ..!

ನಿಜ ನಿನ್ನನ್ನು ತುಂಬಾ ಕಾಡಿದ್ದೇನೆ, ಪೀಡಿಸಿದ್ದೇನೆ….ಅನುಮಾ‌ನಿಸಿದ್ದೇನೆ, ಅವಮಾನಿಸಿದ್ದೇನೆ…ಪ್ರಶ್ನೆಗಳನ್ನು ಕೇಳಿ ಅರ್ಥವಿಲ್ಲದ ಉತ್ತರಗಳನ್ನು ಬಯಸಿದ್ದೇನೆ. ನಾ ನಿನಗೆ ಮಾಡಿರುವ ಈ ಕಿರಿಕಿರಿಯ ಹಿಂದೆ ಅತೀವವಾದ ಕಾಳಜಿ, ಪ್ರೀತಿ , ಸ್ವಾರ್ಥವೂ ಇದೆ..! ಕಾಳಜಿ, ಪ್ರೀತಿ , ಸ್ವಾರ್ಥ ಎಂಬುದು ನಿನ್ನ ದೃಷ್ಟಿಯಲ್ಲಿ ಮಾತ್ರ ಯೋಚಿಸಬೇಡ…ಒಮ್ಮೆ ಮನದ ಕಣ್ತೆರೆದು ನನ್ನ ದೃಷ್ಟಿಕೋನದಲ್ಲಿ ಯೋಚಿಸಿ ನೋಡು ನಿನಗದು ಚಂದ ಕಾಣುತ್ತದೆ. ಅದನ್ನು ಬಿಟ್ಟು ಎಲ್ಲವನ್ನೂ ನೆಗಿಟೀವ್ ಆಗಿಯೇ ಯೋಚಿಸಿದರೆ ನಾನಾದರೂ ಏನೂ ಮಾಡಲು ಸಾಧ್ಯ?

ನಿನ್ನ ಒಳ್ಳೆಯದಕ್ಕಾಗಿಯೇ ಸಾಕಷ್ಟು ಪ್ರಶ್ನೆಗಳ ಮೂಲಕ ಪೀಡಿಸಿದೆ, ಸಾಲು ಸಾಲು ಸಂದೇಶಗಳ ಮೂಲಕ ಕಾಡಿದೆ. ನಿನಗೆ ಇಷ್ಟವಿಲ್ಲ ಎಂದ ಮೇಲೆ ಅದನ್ನು ನಿಲ್ಲಿಸಿದೆ.
ನಿನಗೆ ನನ್ನೊಡನೆ ಮಾತಾಡುವುದು ಇಷ್ಟವಿಲ್ಲ ಎಂದು ಅರಿತು ಕರೆ ಮಾಡುವುದು ಸಹ ಬಿಟ್ಟೆ. ಇವತ್ತಲ್ಲ ಸರಿ ಹೋಗುತ್ತೀಯ, ನೀನೇ ಕಾಲ್‌, ಮೆಸೇಜ್ ಮಾಡ್ತೀಯ ಎಂದು ಸುಮ್ಮನಾದೆ‌.
ನೇರವಾಗಿ ಸಿಕ್ಕಿದೆ…ಆಗ ಎರಡೇ ಎರಡು ನಿಮಿಷ ಮುಖಕೊಟ್ಟು ಮಾತಾಡುವ ಸಂಯಮವೂ ನಿನಗಿರಲಿಲ್ಲ.‌ ಗಡಿಬಿಡಿ ಮಾಡಿ ಹೊರಟೇ ಹೋದೆ…!
ಇಷ್ಟೊಂದು ಬೇಡವಾಗವಷ್ಟು ನಾ ಮಾಡಿದ ತಪ್ಪಾದರೂ ಏನೂ? ದಯವಿಟ್ಟು ತಿಳಿಸು..
ಸದಾ ಒಳ್ಳೇಯದನ್ನೇ ಬಯಸಿ, ನಿಶ್ಕಲ್ಮಶ ಕಾಳಜಿ ತೋರುವ ನನಗೇಕೆ ಈ ಶಿಕ್ಷೆ? ನಿನಗೂ ಗೊತ್ತಲ್ಲವೇ ನನ್ನಷ್ಟು ಇನ್ಯಾರು ಕಾಳಜಿ ತೋರಲು ಸಾಧ್ಯವಿಲ್ಲ ಎಂದು…! ಯೋಚಿಸಿ ಮನ್ನಿಸಿ ಮಾತಾಡು…ನಿನ್ನ ಖುಷಿಗಂತ ನಾನು ಮಾತುಬಿಟ್ಟಿದ್ದೇನೆ ಅಷ್ಟೇ..

LEAVE A REPLY

Please enter your comment!
Please enter your name here