ಬಡವರ ಕೊರೋನಾ‌ ಮತ್ತು ಮುದುಡಿದ ಕಮಲ

0
53

*ಬಡವರ ಕೊರೋನಾ‌ ಮತ್ತು ಮುದುಡಿದ ಕಮಲ*

ಆ ತಾಯಿ ಉಸಿರುಗಟ್ಟಿ ಸಾಯ್ತಿರೋ ತನ್ನ ಮಗನ ಮುಖದ ಮೇಲೆ ಸೆರಗನ್ನ ಹೊದಿಸಿ, ಮಗನೇ ಆ ಯಮ ಬಂದ್ರು ನನ್ನಿಂದ ನಿನ್ನನ್ನ ಕಿತ್ತುಕೊಳ್ಳೋಕೆ ಆಗಲ್ಲ. ನೀನು ಬದುಕೇ ಬದುಕ್ತೀಯಾ‌, ನಿಮ್ಮಪ್ಪ ನಮ್ಮನ್ನ ಬಿಟ್ಟು ಬರಲಾರದ ಲೋಕಕ್ಕೆ ಹೋಗಿದ್ದಾನೆ, ನೀನೂ ಹೋದ್ರೆ ನಾನ್ ಬದ್ಕೋದ್ ಹೇಗೋ..? ಅಂತ ಗಂಟಲುಕಟ್ಟಿದ ಧ್ವನಿಯಲ್ಲೇ ಕಣ್ಣೀರು ಸುರಿಸುತ್ತಿದ್ದಳು. ತಾಯಿಯ ಕಣ್ಣೀರಿನ ಹನಿ ಪ್ರಾಣಪಕ್ಷಿ ಹಾರಿಹೋಗೋ ಸ್ಥಿತಿಯಲ್ಲಿರುವ ಮಗನ ಕೆನ್ನೆಗೆ ಬಿದ್ದು ಜಾರಿ ಮಣ್ಣು ಸೇರಿತ್ತು. ಸೆರಗಲ್ಲಿ ಮಗ ದುಡಿಮೆಯಲ್ಲಿದ್ದಾಗ ಕೊಟ್ಟಿದ್ದ ನೂರಿನ್ನೂರು ರೂಪಾಯಿಯ ಒಂದಿಷ್ಟು ನೋಟುಗಳನ್ನ ಸೆರಗಲ್ಲಿ ಆ ತಾಯಿ ಗಂಟುಕಟ್ಟಿಕೊಂಡು ಬಂದಿದ್ದಳು. ಅದುವೇ ಮಗನನ್ನ ಉಳಿಸೋ ಆಸ್ತಿಯಾಗಿತ್ತು. ಆದರೆ, ಏನ್ ಹೇಳೋದು ಆಸ್ಪತ್ರೆಯ ಸಿಬ್ಬಂದಿ ನಿಮ್ಮ ಮಗನಿಗೆ ‘ಕೊರೋನಾ’ ಎಂಬ ಮಹಾಮಾರಿ ಬಂದಿದೆ, ನಮ್ಮ ಆಸ್ಪತ್ರೆಯಲ್ಲಿ ಬೆಡ್ಡಿಲ್ಲ. ನಿಮ್ಮ ಮಗನಿಗೆ ಟ್ರೀಟ್ಮೆಂಟ್ ಬೇಕು ಅಂದ್ರೆ ಒಂದೇ ಒಂದು ಬೆಡ್ ಖಾಲಿ ಇದೆ. ಅದಕ್ಕೆ, ಐದು ಲಕ್ಷ ರೂಪಾಯಿ ಮುಂಗಡ ಹಣವನ್ನ ಪಾವತಿಸಿ ಅಂತ ಹೇಳಿ ಹೊರಡಲು ಸಿದ್ದರಾಗಿದ್ದರು.

ಇದೇ ವೇಳೆ ಆ ಮಹಿಳೆ ಸರ್, ನನ್ನ ಬಳಿ ಕೂಡಿಟ್ಟಿದ್ದು‌ ಈ ಹರಿದೋದ ಸೀರೆಯ ಮಗ ಕೊಟ್ಟ ಸಣ್ಣ ಮೊತ್ತದ ಹಣವಷ್ಟೇ, ಅದನ್ನ ಬಿಟ್ರೆ ಇನ್ನೇನೂ ನನ್ನ ಬಳಿ ಇಲ್ಲ ಸ್ವಾಮಿ. ನನ್ನ ಮಗನನ್ನ ಉಳಿಸಿಕೊಡಿ. ಅವನೇ ನನ್ನ ಒಂದೊತ್ತಿನ ಕೂಳಿನ, ತಿಂಗಳ‌ ಮಾತ್ರೆ ಖರ್ಚಿಗೆ ಹಣ ನೀಡೋನು. ಅವನನ್ನ ಬಿಟ್ರೆ ನನಗ್ಯಾರು ಇಲ್ಲ ..ಅವನನ್ನ ಉಳಿಸಿ ಕೊಡಿ. ನಿಮ್ಮ ಮನೆ ಜೀತ ಮಾಡ್ಕೊಂಡು ಜೀವನ ಪೂರ್ತಿ ಇದ್ದುಬಿಡ್ತೀನಿ ಅಂತ ಆ ತಾಯಿ ಭಾವುಕಳಾಗಿಬಿಟ್ಟಳು. ಆದ್ರೆ, ಹಣ-ಹೆಣದ ಮುಖ ನೋಡಿದ್ದ ಆ ವೈದ್ಯ‌ ಹೋಗಮ್ಮ‌ ಹೋಗು ಇದೇನು ಧರ್ಮ ಛತ್ರ ಅಲ್ಲ ದುಡ್ಡಿದ್ರೆ ಹಾಸಿಗೆ. ಇಲ್ಲಾ ಅಂದ್ರೆ ಸೀದಾ ಮಸಣಕ್ಕೆ ಕರ್ಕೊಂಡ್ ಹೋಗು ಅಂತ ಮುಖ ತಿರುಗಿಸಿ ನಡೆದೇ ಬಿಟ್ಟಿದ್ದ.
ಹರಿದ ಸೆರಗಲ್ಲಿ ಕೂತ ಆ ತಾಯಿಗೆ ಆ ವೈದ್ಯನ ಮಾತು ಬೆಂಕಿಯಲ್ಲಿ ಕಾಯಿಸಿದ ಸಲಾಕೆಯಿಂದ ಎದೆಗಿರಿದಂತಾಗಿತ್ತು.‌ ಇನ್ನೇನು ಕೆಲವೇ ಕ್ಷಣದಲ್ಲಿ ಉಸಿರುಚೆಲ್ಲಲು ಮುಂದಾಗಿದ್ದ ಮಗನನ್ನ ಬಾಚಿ ತಬ್ಬಿಕೊಂಡು, ಮಗನೇ ನೀನು ಉಸಿರು ನಿಲ್ಲಿಸೋದನ್ನ ನಾನು ನೋಡಲಾರೆ. ನಿನ್ನ ಬದಲು ನಾನೇ ಸಾಯಬೇಕು ಅಂದ್ರೂ ಆ ಕೆಟ್ಟ ಕಾಯಿಲೆ ನನ್ನನ್ನ ಇನ್ನೂ ಬದುಕುಳಿಯುವಂತೆ ಮಾಡಿದೆ. ಮಗನೇ ನಮ್ಮಂತಹ ನಿರ್ಗತಿಕರು ಯಾವ ಕಾರಣಕ್ಕೂ ಈ ಭೂಮಿ ಮೇಲೆ ಹುಟ್ಟಬಾರದಪ್ಪ. ನನ್ನ ಕಣ್ಣಲ್ಲಿ ನಿನ್ನ ಸಾವು ನೋಡುವ ಪರಿ ಯಾವ ತಾಯಿಗೂ ಬಾರದಿರಲಿ ಅಂತ ಹೇಳುತ್ತಿದ್ದಂತೆ ಕಣ್ಣೀರು ಆ ತಾಯಿಯ ಕೆನ್ನೆ ಸವರಿ ಮಗನ ಬಟ್ಟೆಯನ್ನ ತಾಕಿತ್ತಷ್ಟೇ. ತಾಯಿಯ ಹೃದಯದ ಬಡಿತ ಅಲ್ಲೇ ನಿಂತು ಮಗನೆದೆಯ ಮೇಲೆ ಒರಗಿ ಬಿದ್ದಳಷ್ಟೇ. ತಾಯಿಗಾಗಿ ಉಸಿರು ಬಿಗಿಹಿಡಿದಿದ್ದ ಮಗ ಮೇಲುಸಿರಿನಲೇ ಕಣ್ಣೀರು ಸುರಿಸಿ ಚಿರನಿದ್ರೆಗೆ ಜಾರಿಬಿಟ್ಟಿದ್ದ.


ಯಾಕಪ್ಪ.. ದತ್ತರಾಜ್ ಪಡುಕೋಣೆ ಓದಿದೋರ ಕಣ್ಣಿಗೆ ಕಣ್ಣೀರು ಅಂಟಿಸಿದ ಅಂತ ಜರಿಯಬೇಡಿ. ಇಂದಿನ ಕೊರೋನಾ ಪರಿಸ್ಥಿತಿ ಹೀಗೆಯೇ ಇರೋದು, ಪ್ರತಿಷ್ಟಿತರು ದುಡ್ಡಿನಲ್ಲೇ ಕೊರೋನಾ ಗೆಲ್ತಾರೆ, ಬಡವರು ದುಡ್ಡಿಲ್ಲದೇ ಆಸ್ಪತ್ರೆಯ ಗೇಟು ಕಾದು ಸಾಯ್ತಾರೆ. ಈ ಎಲ್ಲಾ ಹಣೆಬರಹಕ್ಕೆ ಕೇವಲ ಬಡತನವಷ್ಟೇ ಕಾರಣವಲ್ಲ. ಈಗಿರುವ ಈ ಮಹಾನ್ ಸರ್ಕಾರ ಕೂಡ ಕಾರಣ ಸ್ವಾಮಿ. ಆಕ್ಸಿಜನ್, ವ್ಯಾಕ್ಸಿನ್ ಒದಗಿಸಲು ಅಸಮರ್ಪಕವಾಗಿದ್ದು. ಎಲೆಕ್ಷನ್ ಗುದ್ದಾಟದಲ್ಲೇ ಮೀಸೆ ತಿರುವುತ್ತಿದೆ ಸರ್ಕಾರ. ಏನ್ ಯಡಿಯೂರಪ್ಪನವರೇ ನೀವು ಚೇರಿಟ್ಟಾಗೆಲ್ಲ ಜನರ ನೋವಿನ ಚೀರಾಟ ಹೆಚ್ಚಾಗುತ್ತಿದೆ. ಕಾಕತಾಳಿಯ ಪದ ನಿಮ್ಮಿಂದಲೇ ಜನಿಸಿತೋ ಎಂಬ ಅನುಮಾನ ನನ್ನನ್ನ ಕಾಡ್ತಿದೆ. ಮೂಲ ಬಿಜೆಪಿಯ ಪಂಟರಿಗೂ- ಮಾಮೂಲಿ ವಲಸೆ ಬಂದ ಅವರಿವರ ಬಂಟರಿಗೋ ತಿಕ್ಕಾಟ ಹಿಂದಿತ್ತು-ಇಂದಿತ್ತು ಅನ್ನೋದು ಲೋಕಕ್ಕೆ ಗೊತ್ತು. ಇಲ್ಲಿ ನಿಮ್ಮ ಐರನ್ ಲೆಗ್ ಬಗ್ಗೆ ಮಾತಾಡ್ತಿಲ್ಲ ಸ್ವಾಮಿ. ಜನರಿಂದಲೇ ಆಯ್ಕೆಯಾಗಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡೋದನ್ನ ಬಿಟ್ಟು ಜನರ ಉಸಿರಿಗೆ ಉಸಿರಾಗಿ. ಡಿನೋಟಿಫಿಕೇಷನ್ನು, ಕೋಟಿ ರೂಪಾಯಿ ಟ್ರಾನ್ಫರ್ರು, ಮಹಾನಾಯಕರಿಕೆ ಬಕೆಟ್ಟು ಹಿಡಿಯೋದನ್ನ ಬಿಟ್ಟು ಜನರ ಆರೋಗ್ಯದ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳ ವಸೂಲಿಗೆ ಬ್ರೇಕ್ ಹಾಕಿ ಸರ್ಕಾರಿ ಸ್ವಾಧೀನಕ್ಕೆ ಪಡೀರಿ. ಅದೇ ರೀತಿ ಕಾಳಸಂತೆಯಲ್ಲಿ ಮಾರಾಟವಾಗ್ತಿರೋ ಕೊರೋನಾ ಲಸಿಕೆ, ಔಷಧಗಳನ್ನ ಡ್ರಗ್ ಬೋರ್ಡ್ ಹಾಗೂ ಪೊಲೀಸ್ ಇಲಾಖೆಯ ಜೊತೆ ಸೇರಿ ಮಟ್ಟಹಾಕುವ ಕೆಲಸವನ್ನ ಮಾಡಿ. ಇದು ಕಷ್ಟ ಅನ್ನಿಸಿದ್ರೆ ದಯಮಾಡಿ ಈ ಮುದಿ ವಯಸ್ಸಲ್ಲಿ ನಮ್ಮತ್ರ ಈ ಸರ್ಕಾರ ನಡೆಸೋಕೆ ಸಾಧ್ಯವಿಲ್ಲ ನಾವೆಲ್ಲ ಜನಸೇವೆಗೆ ಬಂದವರಲ್ಲ ಅಂತ ಸಾಲು-ಸಾಲಾಗಿ ರಾಜೀನಾಮೆ ನೀಡಿ. ಕೆಸರಲ್ಲಿ ಹುಟ್ಟಿದ್ದು ಕೆಸರಿಗೆ ಸಮರ್ಪಣೆಯಾಗೋಗ್ಲಿ.

*ಇಂತಿ,*
*ದತ್ತರಾಜ್ ಪಡುಕೋಣೆ*
*ಕರುನಾಡ ಗುರಿಕಾರ*

LEAVE A REPLY

Please enter your comment!
Please enter your name here