ರೋಗಿಗಳ ಮನೆಬಾಗಿಲಿಗೆ ಔಷಧ -ಪೋಸ್ಟ್ ಮ್ಯಾನ್ ಮಾನವೀಯ ಕೆಲಸಕ್ಕೊಂದು ಸಲಾಂ!

0
102

ಈ ರೀತಿ ಲಾಕ್‌ಡೌನ್‌ನಿಂದ ಸಂತ್ರಸ್ತರಾಗಿರುವವರಿಗೆ ಅಂಚೆ ಇಲಾಖೆ ಆಸರೆಯಾಗಿದ್ದು, ದೀರ್ಘ ಕಾಲದ ರೋಗದಿಂದ ಬಳಲುತ್ತಿರುವ ರೋಗಿಗಳ ಮನೆ ಬಾಗಿಲಿಗೆ ಔಷಧ ತಲುಪಿಸುವ ಮೂಲಕ ಅವರ ಜೀವನಕ್ಕೆ ಆಧಾರವಾಗಿದೆ.
ಅಂಚೆ ಇಲಾಖೆ ಹಿಂದಿನಿಂದಲೂ ಪತ್ರ ಮತ್ತು ಪಾರ್ಸೆಲ್‌ ಸೇವೆ ನೀಡುತ್ತಿದೆ. ಆದರೆ, ಲಾಕ್‌ಡೌನ್‌ ವೇಳೆಯಲ್ಲಿ ಪಾರ್ಸೆಲ್‌ ಸೇವೆಗೆ ಬೇಡಿಕೆ ಹೆಚ್ಚಾಗಿದೆ. ವೈದ್ಯಕೀಯ ಔಷಧಗಳನ್ನು ತಲುಪಿಸುವ ಕಾರ್ಯ ಹೆಚ್ಚಾಗಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ, ಅದರಲ್ಲಿಯೂ ಬಸ್‌ ಸಂಚಾರ ಇರದ ಕುಗ್ರಾಮಗಳ ಮನೆಗಳಿಗೆ ಔಷಧ ಪೂರೈಕೆಯ ಸೇವೆಯನ್ನು ಅಂಚೆಯಣ್ಣ ಮಾಡುತ್ತಿದ್ದಾನೆ.
‘ಕೊರೊನಾ ಅಲೆ ಪ್ರಾರಂಭವಾದ ಒಂದು ವರ್ಷದಿಂದ ಅಂಚೆ ಇಲಾಖೆ ಪಾರ್ಸಲ್‌ ಸೇವೆಯಲ್ಲಿ ಔಷಧ ಪೂರೈಕೆ ಹೆಚ್ಚಾಗಿದೆ. ಸಾಮಾನ್ಯ ಪಾರ್ಸಲ್‌ಗಿಂತ, ಮೆಡಿಸನ್‌ ಪಾರ್ಸಲ್‌ ಬಂದರೆ ಆದ್ಯತೆ ಮೇರೆಗೆ ಶೀಘ್ರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಅಂಚೆ ಇಲಾಖೆಯ ಮೈಸೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಕೊರಗಪ್ಪ ನಾಯಕ್‌.
‘ಗ್ರಾಮಾಂತರ ಪ್ರದೇಶದಲ್ಲಿರುವ ಹಿರಿಯ ನಾಗರಿಕರು, ತಮಗೆ ಬೇಕಿರುವ ಅಗತ್ಯ ಔಷಧಗಳನ್ನು ಪೋಸ್ಟ್‌ ಮೂಲಕ ಕಳುಹಿಸುವಂತೆ ಮನವಿ ಮಾಡುತ್ತಿದ್ದು, ಅದಕ್ಕೆ ತಕ್ಕಂತೆ ಮೆಡಿಕಲ್‌ ಶಾಪ್‌ ಮಾಲೀಕರು ಅಂಚೆ ಮೂಲಕ ಔಷಧ ಪೂರೈಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಔಷಧ ವ್ಯಾಪಾರಿ ಬಸವರಾಜು.


ಮಧುಮೇಹ, ಬಿಪಿ ಹಾಗೂ ಮತ್ತಿತರ ದೀರ್ಘ ಕಾಲದ ರೋಗಗಳಿಂದ ಬಳಲುತ್ತಿರುವವರು ನಿತ್ಯವೂ ಮಾತ್ರೆ ಸೇವಿಸಲೇಬೇಕು. ಈ ರೀತಿಯ ಮಾತ್ರೆಗಳನ್ನು ಬೇರೆ ಊರುಗಳಿಂದ ತರಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ಕಾರಣದಿಂದ ತಮ್ಮಲ್ಲಿದ್ದ ಮಾತ್ರೆಗಳು ಖಾಲಿಯಾದ ಕಾರಣದಿಂದ ಬೇರೆ ಊರಿಗೆ ಹೋಗಿ ತೆಗೆದುಕೊಂಡು ಬರುವುದಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಅನ್‌ಲೈನ್‌ ಮೂಲಕ ಹಣವನ್ನು ಅಂಗಡಿಗೆ ಪಾವತಿಸಿ ಮಾತ್ರೆಗಳನ್ನು ತರಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಔಷಧ ವ್ಯಾಪಾರಿ.
‘ಅಂಚೆ ಇಲಾಖೆಯ ಪಾರ್ಸಲ್‌ ಸೇವೆಯಲ್ಲಿ ಜನರಿಗೆ ಅನುಕೂಲವಾಗುವ ವಸ್ತುಗಳನ್ನು ಕಳುಹಿಸುವ ವ್ಯವಸ್ಥೆ ಇತ್ತು. ಈಗ ಲಾಕ್‌ಡೌನ್‌ನಿಂದ ಬಸ್‌ ಸಂಚಾರ ಸೇರಿದಂತೆ ಎಲ್ಲದಕ್ಕೂ ನಿರ್ಬಂಧ ವಿಧಿಸಿರುವುದರಿಂದ ಔಷಧಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಸಲ್‌ನಲ್ಲಿ ಪೂರೈಕೆಯಾಗುತ್ತಿವೆ. ಆದ್ಯತೆ ಮೇರೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ’

ಎಂದು ಅಂಚೆ ಇಲಾಖೆ ಮೈಸೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಕೊರಗಪ್ಪ ನಾಯಕ್‌ ತಿಳಿಸಿದ್ದಾರೆ  ಎಂದು ದಿನಪತ್ರಿಕೆಯೊಂದು ವರದಿ ಮಾಡಿದೆ.

LEAVE A REPLY

Please enter your comment!
Please enter your name here