ಮಳೆ ಅವಾಂತರ: ಕಾರವಾರದಲ್ಲಿ ಮನೆಗಳು ನೆಲಸಮ

0
43

ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದಿಂದ ಭರಪೂರ ನೀರನ್ನು ಹೊರಬಿಟ್ಟಿರುವ ಕಾರಣ ಜಲಾಶಯದ ಸುತ್ತಮುತ್ತ ಪ್ರದೇಶದಲ್ಲಿ ಸಾಲು ಸಾಲು ಮನೆಗಳು ನೆಲಸಮವಾಗಿವೆ.

ಘಟ್ಟದ ಮೇಲಿನ ದಾಂಡೇಲಿ, ಜೊಯಿಡಾ, ಹಳಿಯಾಳ ಭಾಗದಲ್ಲಿ ಶುಕ್ರವಾರ ಭಾರೀ ಮಳೆಯಾದ ಕಾರಣ ತಾಲೂಕಿನ ಕದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿತ್ತು. ಗುರುವಾರ ರಾತ್ತಿಯಿಂದಲೂ ನೀರಿನ ಪ್ರಮಾಣ ಏರುತ್ತಲೇ ಇದ್ದು, ಶುಕ್ರವಾರ ಅದು ಒಂದೂವರೆ ಲಕ್ಷ ಕ್ಯುಸೆಕ್ಸ್‌ಗೂ ಅಧಿಕವಾಗಿತ್ತು.

ಜಲಾಶಯದ ಸುರಕ್ಷತಾ ದೃಷ್ಟಿಯಿಂದ ಸುಮಾರು ಎರಡು ಲಕ್ಷ ಕ್ಯುಸೆಕ್ಸ್ ನೀರನ್ನು ಹೊರ ಬಿಡಲಾಗಿತ್ತು. ಇದರಿಂದಾಗಿ ಸುತ್ತಮುತ್ತಲಿನ ಕದ್ರಾ, ಮಲ್ಲಾಪುರ, ಕೈಗಾ ವಸತಿ ಸಂಕೀರ್ಣ, ಗಾಂಧಿನಗರ ಸೇರಿದಂತೆ ಅನೇಕ ಗ್ರಾಮಗಳು ಜಲಾವೃತವಾಗಿದ್ದವು. ಹೀಗಾಗಿ ಭಾರತೀಯ ಕೋಸ್ಟ್‌ಗಾರ್ಡ್, ಭಾರತೀಯ ನೌಕಾಪಡೆಯ ತುರ್ತು ರಕ್ಷಣಾ ಪಡೆಗಳು ನೆರವಿಗೆ ಧಾವಿಸಿ, ರಕ್ಷಣಾ ಸಾಮಗ್ರಿಗಳ ಮೂಲಕ ನಿರಾಶ್ರಿತರನ್ನು ರಕ್ಷಿಸಿ, ಕಾಳಜಿ ಕೇಂದ್ರಗಳಲ್ಲಿ ಸೇರಿದಂತೆ ಸುರಕ್ಷಿತ ಪ್ರದೇಶಗಳಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು.

ರಾತ್ರಿ ಜಲಾವೃತವಾದ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದ್ದ ಕಾರಣ ಗಾಂಧಿನಗರ ಒಂದರಲ್ಲೇ 18 ಮನೆಗಳು ನೆಲಸಮವಾಗಿವೆ. ಒಂದೇ ರಾತ್ರಿ ತುಂಬಿದ ನೀರಿನಿಂದಾಗಿ ಮನೆಗಳು ಕುಸಿದಿದ್ದು, ಮನೆಬಳಕೆ ವಸ್ತುಗಳ ಸಮೇತ ಮನೆಗಳು ನೆರೆಗೆ ಬಲಿಯಾಗಿವೆ.

ಶುಕ್ರವಾರ ನೀರು ತುಂಬುತ್ತಿದ್ದ ಕಾರಣ ಮನೆಯಲ್ಲಿದ್ದ ಅಕ್ಕಿ- ಬೇಳೆಗಳನ್ನೂ ತೆಗೆದಿಡಲು ಸಾಧ್ಯವಾಗದೇ ನಿವಾಸಿಗಳು ರಕ್ಷಣಾ ತಂಡಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದರು. ಶನಿವಾರ ಬೆಳಿಗ್ಗೆ ನೀರು ಇಳಿದ ಹಿನ್ನಲೆ ಕುಟುಂಬಗಳು ಮನೆಗಳತ್ತ ಧಾವಿಸಿದಾಗ ಎಲ್ಲವೂ ನೆಲಸಮವಾಗಿದ್ದವು. ಮನೆಗಳ ಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಸಾಲ‌ ಮಾಡಿ ಕಟ್ಟಿದ್ದ ಮನೆ ಕುಸಿದು ಬಿದ್ದಿದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ಸುಮಾರು 20ಕ್ಕೂ ಅಧಿಕ ಕುಟುಂಬಗಳು ಉಟ್ಟ ಬಟ್ಟೆ ಬಿಟ್ಟು ಎಲ್ಲವನ್ನೂ ಕಳೆದುಕೊಂಡಿವೆ.

 

 

 

LEAVE A REPLY

Please enter your comment!
Please enter your name here