ಮುಟ್ಟಿನ ಮೊದಲ ದಿನವೇ ಹೆಚ್ಚು ನೋವು ಯಾಕೆ? ಇದಕ್ಕೆ ಕಾರಣ ಹೀಗಿದೆ ನೋಡಿ
ಮಹಿಳೆಯರ ಜೀವನದಲ್ಲಿ ಮುಟ್ಟು ಒಂದು ಸಹಜ ಪ್ರಕ್ರಿಯೆಯಾಗಿದ್ದರೂ, ಅದರ ಮೊದಲ ದಿನ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದೈಹಿಕ ಆಯಾಸ, ಮನೋಭಾವದ ಬದಲಾವಣೆ, ವಾಂತಿ, ತಲೆತಿರುಗುವಿಕೆ, ಬೆನ್ನುನೋವು ಇತ್ಯಾದಿ ಸಮಸ್ಯೆಗಳ ನಡುವೆ ಹೊಟ್ಟೆ ಕೆಳಭಾಗದಲ್ಲಿ ಕಾಣಿಸುವ ತೀವ್ರ ಸೆಳೆತ ಮಹಿಳೆಯರನ್ನು ಹೆಚ್ಚು ಕಾಡುತ್ತದೆ. ಶಾಲೆಗೆ ಹೋಗುವ ಬಾಲಕಿಯರಿಂದ ಹಿಡಿದು ಕಚೇರಿಗೆ ತೆರಳುವ ಮಹಿಳೆಯರವರೆಗೆ ಹಲವರು ಮೊದಲ ದಿನ ತೀವ್ರ ನೋವಿನಿಂದ ಬಳಲುತ್ತಾರೆ.
ಇತರೆ ದಿನಗಳಿಗೆ ಹೋಲಿಸಿದರೆ ಮೊದಲ ದಿನವೇ ಹೆಚ್ಚು ನೋವು ಕಾಣಿಸಿಕೊಳ್ಳಲು ಕಾರಣವೇನು? ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ.
ಡಿಸ್ಮೆನೋರಿಯಾ – ಸಾಮಾನ್ಯವಾದರೂ ಕಾಡುವ ಸಮಸ್ಯೆ
ಮುಟ್ಟಿನ ಸಮಯದಲ್ಲಿ ಕಾಣಿಸುವ ನೋವನ್ನು ವೈದ್ಯಕೀಯವಾಗಿ ಡಿಸ್ಮೆನೋರಿಯಾ ಎಂದು ಕರೆಯುತ್ತಾರೆ. ಜಗತ್ತಿನಾದ್ಯಂತ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಮೊದಲ ದಿನವೇ ನೋವು ಹೆಚ್ಚಾಗಲು ಪ್ರಮುಖವಾಗಿ ನಾಲ್ಕು ಜೈವಿಕ ಕಾರಣಗಳಿವೆ ಎಂದು ಅಧ್ಯಯನಗಳು ತಿಳಿಸಿವೆ.
- ಪ್ರೊಸ್ಟಗ್ಲ್ಯಾಂಡಿನ್ ಹಾರ್ಮೋನ್ ಹೆಚ್ಚಳ
ಮುಟ್ಟಿನ ಆರಂಭಕ್ಕೂ ಮುನ್ನ ‘ಪ್ರೊಸ್ಟಗ್ಲ್ಯಾಂಡಿನ್’ ಎಂಬ ರಾಸಾಯನಿಕ ಗರ್ಭಾಶಯದ ಒಳಪದರದಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಇದು ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಳ್ಳಲು ಸಹಾಯ ಮಾಡಿ, ಒಳಪದರವನ್ನು ಹೊರಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.
ತೀವ್ರ ನೋವು ಅನುಭವಿಸುವ ಮಹಿಳೆಯರಲ್ಲಿ ಈ ರಾಸಾಯನಿಕದ ಪ್ರಮಾಣ ಹೆಚ್ಚಿರುತ್ತದೆ. ಮೊದಲ 24 ಗಂಟೆಗಳಲ್ಲಿ ಇದರ ಮಟ್ಟ ಅತ್ಯಧಿಕವಾಗಿರುವುದರಿಂದ ನೋವು ಕೂಡ ಹೆಚ್ಚು ತೀವ್ರವಾಗಿರುತ್ತದೆ.
- ಗರ್ಭಾಶಯದ ಸ್ನಾಯುಗಳ ಸಂಕೋಚನ ಮತ್ತು ರಕ್ತಹರಿವು ಕಡಿಮೆ
ಮುಟ್ಟಿನ ಸಮಯದಲ್ಲಿ ಗರ್ಭಾಶಯದ ಸ್ನಾಯುಗಳು ಪದೇ ಪದೇ ಸಂಕುಚಿತಗೊಳ್ಳುತ್ತವೆ. ಈ ತೀವ್ರ ಸಂಕೋಚನಗಳಿಂದ ಗರ್ಭಾಶಯದ ಸುತ್ತಲಿನ ರಕ್ತನಾಳಗಳು ತಾತ್ಕಾಲಿಕವಾಗಿ ಒತ್ತಡಕ್ಕೆ ಒಳಗಾಗುತ್ತವೆ. ಪರಿಣಾಮವಾಗಿ ಆ ಭಾಗಕ್ಕೆ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ.
ನಮ್ಮ ದೇಹದ ಇತರ ಸ್ನಾಯುಗಳಲ್ಲಿ ಸೆಳೆತ ಬಂದಾಗ ನೋವು ಅನುಭವಿಸುವಂತೆಯೇ, ಇಲ್ಲಿ ಕೂಡ ಅದೇ ರೀತಿಯ ನೋವು ಕಾಣಿಸುತ್ತದೆ. ಎರಡನೇ ಹಾಗೂ ಮೂರನೇ ದಿನಗಳಲ್ಲಿ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತಾ ನೋವು ಸಹ ಸ್ವಲ್ಪ ಕಡಿಮೆಯಾಗುತ್ತದೆ.
- ಮೊದಲ ದಿನ ಹೆಚ್ಚಿನ ರಕ್ತಸ್ರಾವ
ಬಹುತೇಕ ಮಹಿಳೆಯರಲ್ಲಿ ಮೊದಲ ದಿನ ರಕ್ತಸ್ರಾವ ಪ್ರಮಾಣ ಹೆಚ್ಚು ಇರುತ್ತದೆ. ಗರ್ಭಾಶಯ ತನ್ನ ಒಳಪದರವನ್ನು ಹೊರಹಾಕಲು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಇದರಿಂದ ಒಳ ಒತ್ತಡ ಹೆಚ್ಚಾಗಿ ಸೆಳೆತ ತೀವ್ರಗೊಳ್ಳುತ್ತದೆ.
- ದೇಹದಲ್ಲಿ ಉರಿಯೂತದ ಹೆಚ್ಚಳ
ಮುಟ್ಟು ಕೇವಲ ಗರ್ಭಾಶಯಕ್ಕೆ ಮಾತ್ರ ಸೀಮಿತವಲ್ಲ; ಇದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮೊದಲ ದಿನ ದೇಹದಲ್ಲಿ ಉರಿಯೂತದ ಪ್ರಮಾಣ ಹೆಚ್ಚಾಗುವುದರಿಂದ ಕೆಲವರಿಗೆ ತಲೆನೋವು, ವಾಕರಿಕೆ, ಆಯಾಸ ಮತ್ತು ಜ್ವರದಂತೆ ಕಾಣುವ ಲಕ್ಷಣಗಳು ಕಾಣಿಸಬಹುದು. ಇದರಿಂದ ಹೊಟ್ಟೆನೋವು ಇನ್ನಷ್ಟು ತೀವ್ರವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.






