ಕೋಟಿ ನಿರ್ಮಾಪಕ ಎಂದೇ ಹೆಸರು ಮಾಡಿದ್ದ ಕನ್ನಡ ಚಲನಚಿತ್ರರಂಗ ಕಂಡ ಉತ್ತಮ ನಿರ್ಮಾಪಕರು ಗಳಲ್ಲೊಬ್ಬರಾದ ರಾಮು ಅವರು ಇತ್ತೀಚೆಗಷ್ಟೆ ಕೊರೊನಾವೈರಸ್ ಗೆ ಬಲಿಯಾದರು. ಕನ್ನಡದ ಖ್ಯಾತ ನಟಿ ಮಾಲಾಶ್ರೀ ಅವರ ಪತಿಯಾಗಿದ್ದ ರಾಮು ಅವರು ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಅವರನ್ನು ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ ನಂತರ ಚಿಕಿತ್ಸೆ ಫಲಕಾರಿಯಾಗದ ಕಾರಣ ಮೃತಪಟ್ಟಿದ್ದಾರೆ.
ರಾಮು ಅವರ ಮೃತ ಸುದ್ದಿಯನ್ನು ತಿಳಿದ ನಟ ಪುನೀತ್ ರಾಜ್ ಕುಮಾರ್ ಅಕ್ಷರಶಃ ಶಾಕ್ ಗೆ ಒಳಗಾಗಿದ್ದಾರೆ. ಹಿಂದೆ ಶಿವರಾಜ್ ಕುಮಾರ್ ಅವರ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ರಾಮು ಮತ್ತು ಪುನೀತ್ ಅವರ ನಡುವೆ ಹಿಂದಿನಿಂದಲೂ ಸಹ ಉತ್ತಮ ಬಾಂಧವ್ಯವಿತ್ತು. ರಾಮು ಅವರ ಸಾವಿನ ಸುದ್ದಿ ಕೇಳಿ ಪುನೀತ್ ಮರುಗಿದರು. ತಮ್ಮ ರಾಜಕುಮಾರ ಚಿತ್ರಕ್ಕೆ ರಾಮು ಮಾಡಿದ ಸಹಾಯವನ್ನು ನೆನೆದು ಪುನೀತ್ ಭಾವುಕರಾಗಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ರಾಜಕುಮಾರ ಎಂದೇ ಚಿತ್ರಕ್ಕೆ ಶೀರ್ಷಿಕೆ ಇಡೋಣ ಎಂದು ಪಟ್ಟು ಹಿಡಿದಿದ್ದರು. ಆದರೆ ಫಿಲ್ಮ್ ಚೇಂಬರ್ ನಲ್ಲಿ ನಿರ್ಮಾಪಕ ರಾಮು ಅವರು ಈ ಹಿಂದೆ ರಾಜಕುಮಾರ ಎನ್ನುವ ಶೀರ್ಷಿಕೆಯನ್ನು ನೋಂದಾಯಿಸಿಬಿಟ್ಟಿದ್ದರಂತೆ. ಹೀಗಾಗಿ ಪುನೀತ್ ಅಭಿನಯದ ತಮ್ಮ ಚಿತ್ರಕ್ಕೆ ರಾಜಕುಮಾರ ಎಂದು ಟೈಟಲ್ ಇಡಬೇಕೆಂದು ರಾಮು ಅವರ ಬಳಿ ಶೀರ್ಷಿಕೆ ಬಿಟ್ಟುಕೊಡಲು ಆಗುತ್ತಾ ಎಂದು ಕೇಳಿದ ಕೂಡಲೇ ರಾಮು ಅವರು ಆ ಹೆಸರಿಗೆ ನೀವೇ ತಕ್ಕ ನಟ, ನಾನು ಆ ಹೆಸರಿನಲ್ಲಿ ಸಿನಿಮಾ ಮಾಡಬೇಕು ಎಂಬ ಆಸೆಯಿಂದ ಶೀರ್ಷಿಕೆಯನ್ನು ನೋಂದಣಿ ಮಾಡಿದ್ದೆ. ಆ ಶೀರ್ಷಿಕೆಯ ಹೆಸರನ್ನು ನಿಮ್ಮ ಚಿತ್ರಕ್ಕೆ ಬಳಸುತ್ತೀರ ಎಂದರೆ ಅದಕ್ಕಿಂತ ಖುಷಿಯ ವಿಚಾರ ಇನ್ನೇನಿದೆ ಅಪ್ಪಾಜಿಯ ಹೆಸರಿನಲ್ಲಿ ನೀವು ಸಿನಿಮಾ ಮಾಡಿದರೆ ಚೆಂದ ಎಂದು ಶೀರ್ಷಿಕೆಯನ್ನು ರಾಮು ಬಿಟ್ಟುಕೊಟ್ಟಿದ್ದರು.