ರಾಜ್ಯಾದ್ಯಂತ ಮಳೆ ಅಬ್ಬರ: ಈ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

0
24

ರಾಜ್ಯಾದ್ಯಂತ ಅಬ್ಬರದ ಮಳೆ ಸುರಿಯುತ್ತಿದ್ದು, ರಾಜ್ಯದ ಕರಾವಳಿ ಸೇರಿದಂತೆ ಒಟ್ಟು 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ, ಮನೆಗಳು ಕುಸಿದು ಬಿದ್ದಿವೆ, ನದಿಗಳು ತುಂಬಿ ಹರಿಯುತ್ತಿವೆ, ಹೊಲ ಗದ್ದೆಗಳು ನದಿಯಂತಾಗಿವೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕನ್ನಡದಲ್ಲಿ ಇಬ್ಬರು, ಬೆಳಗಾವಿಯಲ್ಲಿ ಇಬ್ಬರು ಮಹಾಮಳೆಗೆ ಬಲಿಯಾಗಿದ್ದಾರೆ. ಹಾಗೆಯೇ ಚಿಕ್ಕಮಗಳೂರು, ದಾವಣಗೆರೆಯಲ್ಲಿ ಮಳೆಗೆ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಬೆಳಗಾವಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ, ಹಳ್ಳ, ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗ್ರಾಮಗಳು ಜಲಾವೃತಗೊಂಡಿವೆ. ದೇಗುಲ, ಮನೆಗಳು ಮುಳುಗಡೆಯಾಗಿವೆ. ಹಳ್ಳಿಗಳು ದ್ವೀಪದಂತಾಗಿದ್ದು, ಜನ ಪರದಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ ಕಾರಣ ಕೊಯ್ನಾ, ರಾಧಾನಗರಿ, ಕಳಂಬ ಡ್ಯಾಂಗಳಿಂದ ರಾಜ್ಯಕ್ಕೆ ಹರಿದುಬರ್ತಿರುವ ನೀರಿನಿಂದ ಇಡೀ ಬೆಳಗಾವಿ ಜಿಲ್ಲೆ ಹೆಚ್ಚು ಕಡಿಮೆ ಜಲದಿಗ್ಬಂಧನದಲ್ಲಿ ಸಿಲುಕಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆ ಪ್ರಮಾಣ ಹೆಚ್ಚಾದ ಹಿನ್ನೆಲೆ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಮತ್ತೆ ಮಹಾಪ್ರವಾಹದ ಭೀತಿ ಎದುರಾಗಿದೆ. ವೇದಗಂಗಾ ನದಿ ಪ್ರವಾಹಕ್ಕೆ ನಿಪ್ಪಾಣಿ ತಾಲೂಕು ಸಿಲುಕಿದೆ. ಇಲ್ಲಿನ ಕೊಡಣಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಈ ಕೊಡಣಿ ಗ್ರಾಮದಲ್ಲಿ ಸಿಲುಕಿದ್ದ 200 ಜನರನ್ನು ರಕ್ಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here