ಇಂಡಿಯನ್ ಪ್ರೀಮಿಯರ್ ಲೀಗ್ ನ ‘ಮಾಸ್ಟರ್ ಮೈಂಡ್’ ಲಲಿತ್ ಮೋದಿ ಅವರ ಬರೋಬ್ಬರಿ 16 ವರ್ಷಗಳ ವನವಾಸ ಕೊನೆಗೂ ಅಂತ್ಯವಾಗಿದೆ. ಭಾರತಕ್ಕೆ ಮರಳುವ ದಿನ ಸನ್ನಿಹಿತವಾಗಿದೆ. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ ಎರಡನೇ ಆವೃತ್ತಿಯ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ವಿಧಿಸಿದ್ದ ದಂಡ ಹಾಗೂ ಸಾಲು ಸಾಲು ಗಂಭೀರ ಆರೋಪಗಳನ್ನು ಮೇಲ್ಮನವಿ ನ್ಯಾಯಾಧಿಕರಣ ರದ್ದುಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ: ಲಂಡನ್‌ನಿಂದ ಲಲಿತ್ ಮೋದಿ ಭಾವುಕ ಪೋಸ್ಟ್
ತಮ್ಮ ಪರವಾಗಿ ತೀರ್ಪು ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಖುಷಿ ಹಂಚಿಕೊಂಡಿರುವ ಲಲಿತ್ ಮೋದಿ, ನನಗೆ ಈ ತೀರ್ಪಿನಿಂದ ತೀವ್ರ ಸಂತಸವಾಗಿದೆ. ಕಳೆದ 16 ವರ್ಷಗಳಿಂದ ನಾನು ಸತತವಾಗಿ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇನೆ. ನಾನು ಮೊದಲಿನಿಂದಲೂ ಮಾಧ್ಯಮಗಳಿಗೆ ಹಾಗೂ ಪ್ರತಿಯೊಬ್ಬರಿಗೂ ಏನು ಹೇಳುತ್ತ ಬಂದಿದ್ದೆನೋ, ಕೊನೆಗೂ ಅದೇ ಅಂತಿಮ ಸತ್ಯವೆಂದು ಸಾಬೀತಾಗಿದೆ. ಟ್ರಿಬ್ಯೂನಲ್ ನನ್ನ ಪರವಾಗಿ ನೀಡಿದ ಈ ತೀರ್ಪು ನನಗೆ ನಿಜವಾದ ಸಮಾಧಾನ ತಂದಿದೆ ಎಂದಿದ್ದಾರೆ.
ಐಪಿಎಲ್ ಹೊರತುಪಡಿಸಿ ನನಗೆ ಬೇರೆ ಸ್ವಾರ್ಥವಿರಲಿಲ್ಲ
ತಮ್ಮ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರದ ಆರೋಪಗಳಿಗೆ ತಿರುಗೇಟು ನೀಡಿರುವ ಲಿತ್ ಮೋದಿ, ನನಗೆ ಭಾರತೀಯ ಕ್ರಿಕೆಟ್ ಹಾಗೂ ಐಪಿಎಲ್ ಬೆಳೆಸುವುದನ್ನು ಬಿಟ್ಟು ಬೇರೆ ಯಾವುದೇ ವೈಯಕ್ತಿಕ ಸ್ವಾರ್ಥವಿರಲಿಲ್ಲ. ಈಗ ಆ ಕಪ್ಪು ಅಧ್ಯಾಯ ಸಂಪೂರ್ಣವಾಗಿ ಮುಗಿದಿದೆ. ನಾನು ನನ್ನ ಜೀವನದಲ್ಲಿ ಮುಂದಕ್ಕೆ ಹೋಗಲು ಬಯಸುತ್ತೇನೆ ಮತ್ತು ನನ್ನ ಮಾತೃಭೂಮಿಯಾದ ಭಾರತಕ್ಕೆ ಮರಳಲು ಕಾತರದಿಂದ ಕಾಯುತ್ತಿದ್ದೇನೆ. ಬರುವ ಅಕ್ಟೋಬರ್‌ನಲ್ಲಿ ಮಗಳಿಗೆ ಮಗು ಜನಿಸಲಿದ್ದು, ಎಲ್ಲವೂ ಶುಭವಾಗಿ ಮುಗಿದು ತಕ್ಷಣವೇ ತಾಯ್ನಾಡಿಗೆ ಮರಳುವ ಭರವಸೆಯಿದೆ ಎಂದಿದ್ದಾರೆ.
ಇಡಿ (ED) ಆರೋಪ ಧೂಳೀಪಟ ಮಾಡಿದ ನ್ಯಾಯಾಧಿಕರಣ: ತೀರ್ಪಿನಲ್ಲಿ ಏನಿದೆ?
ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ನೇತೃತ್ವದ ಪೀಠ, ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಸಲು ಮಾಡಿದ ವೆಚ್ಚವು ‘ಚಾಲ್ತಿ ಖಾತೆ ವಹಿವಾಟು’ (Current Account transaction) ಆಗಿದ್ದು, ಇದಕ್ಕೆ ಆರ್‌ಬಿಐನ ಪೂರ್ವಾಪರ ಅನುಮತಿ ಅಗತ್ಯವಿರಲಿಲ್ಲ ಎಂದು ಹೇಳಿದೆ. ಅಲ್ಲದೆ, ಬಿಸಿಸಿಐ (BCCI)ನ ಶಾಸನಬದ್ಧ ನಿಯಮಾವಳಿಗಳ ಉಲ್ಲಂಘನೆಗೆ ಲಲಿತ್ ಮೋದಿ ವೈಯಕ್ತಿಕವಾಗಿ ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಾಧಿಕಾರ, ಅವರ ಮೇಲಿದ್ದ ಭಾರಿ ಮೊತ್ತದ ದಂಡವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ
2010ರಿಂದ ಲಂಡನ್‌ನಲ್ಲಿ ವನವಾಸ: ಕ್ರಿಕೆಟ್ ಜಗತ್ತಿನ ಕರಾಳ ಇತಿಹಾಸ
2010ರ ಐಪಿಎಲ್ ಆಡಳಿತದಲ್ಲಿ ಅಕ್ರಮ, ಫ್ರಾಂಚೈಸಿ ಬಿಡ್ಡಿಂಗ್‌ನಲ್ಲಿ ಸ್ವಜನಪಕ್ಷಪಾತ ಹಾಗೂ ಪ್ರಸಾರ ಹಕ್ಕುಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದಂತೆಯೇ ಲಲಿತ್ ಮೋದಿ ದೇಶ ತೊರೆದು ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದರು. ಇದಾದ ನಂತರ 2013ರಲ್ಲಿ ಬಿಸಿಸಿಐ (BCCI) ಅವರ ಮೇಲೆ ಜೀವಮಾನದ ನಿಷೇಧ ಹೇರಿ ಹೊರಹಾಕಿತ್ತು. ದಶಕಗಳ ಕಾಲ ಭಾರತೀಯ ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಿ ವಿದೇಶದಲ್ಲೇ ನೆಲೆಸಿದ್ದ ಮೋದಿ, ಕಾನೂನು ಹೋರಾಟವನ್ನು ಮಾತ್ರ ಬಿಟ್ಟಿರಲಿಲ್ಲ.
ಭಾರತಕ್ಕೆ ಮರಳಲಿರುವ ಐಪಿಎಲ್ ಶಿಲ್ಪಿ
ಇದೀಗ SAFEMA ಮೇಲ್ಮನವಿ ನ್ಯಾಯಾಧಿಕರಣ ನೀಡಿದ ಈ ಐತಿಹಾಸಿಕ ತೀರ್ಪು ಲಲಿತ್ ಮೋದಿ ಅವರ ಮೇಲಿದ್ದ ಬೃಹತ್ ಕಾನೂನು ಅಡೆತಡೆಯನ್ನು ತೆರವುಗೊಳಿಸಿದೆ. ಈ ವರ್ಷದ ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ಅವರು ಭಾರತಕ್ಕೆ ಆಗಮಿಸುವುದು ಖಚಿತವಾಗಿದೆ. 16 ವರ್ಷಗಳ ನಂತರ ಐಪಿಎಲ್ ಶಿಲ್ಪಿಯ ಭಾರತ ಪ್ರವೇಶ, ಇಷ್ಟು ವರ್ಷಗಳಿಂದ ಅವರ ಸುತ್ತ ಹೆಣೆಯಲಾಗಿದ್ದ ವಿವಾದಗಳು, ಕ್ರಿಕೆಟ್ ರಾಜಕೀಯ ಹಾಗೂ ಬಿಸಿಸಿಐ ಆಂತರಿಕ ವಲಯದಲ್ಲಿ ಮತ್ತೆ ಭಾರಿ ಚರ್ಚೆ ಮತ್ತು ಸಂಚಲನ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ



