No menu items!
11.8 C
Munich
Friday, May 15, 2026

ಖಾಸಗಿ ಬಸ್ ಪ್ರಯಾಣ ದುಬಾರಿ: ಇಂದು ಮಧ್ಯರಾತ್ರಿಯಿಂದಲೇ ಹೊಸ ಟಿಕೆಟ್ ದರ ಜಾರಿ

Must read

ಖಾಸಗಿ ಬಸ್ ಪ್ರಯಾಣ ದುಬಾರಿ: ಇಂದು ಮಧ್ಯರಾತ್ರಿಯಿಂದಲೇ ಹೊಸ ಟಿಕೆಟ್ ದರ ಜಾರಿ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ರಾಜ್ಯದಲ್ಲಿ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಖಾಸಗಿ ಬಸ್ ಮಾಲೀಕರು ತೀರ್ಮಾನಿಸಿದ್ದು, ಪರಿಷ್ಕೃತ ದರಗಳು ಇಂದಿನ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.
ಈ ಕುರಿತು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಮಾಹಿತಿ ನೀಡಿದ್ದು, ಟಿಕೆಟ್ ದರವನ್ನು ಶೇ.20ರಿಂದ 30ರವರೆಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದೆ.
ಸಂಘದ ಪ್ರಕಾರ, ಖಾಸಗಿ ಬಸ್ಗಳಿಗೆ ಪ್ರತಿದಿನ ಕನಿಷ್ಠ 150 ಲೀಟರ್ ಇಂಧನ ಅಗತ್ಯವಿದ್ದು, ಇಂಧನ ದರ ಏರಿಕೆಯಿಂದ ಪ್ರತಿ ಟ್ರಿಪ್ಗೆ ಸುಮಾರು 450 ರೂ. ಹೆಚ್ಚುವರಿ ವೆಚ್ಚವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಂಘ ಸ್ಪಷ್ಟಪಡಿಸಿದೆ.
ಈ ದರ ಏರಿಕೆಯ ಪರಿಣಾಮ ನೇರವಾಗಿ ಪ್ರಯಾಣಿಕರ ಮೇಲೆಯೇ ಬೀಳಲಿದ್ದು, ಪ್ರಯಾಣ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇದೇ ವೇಳೆ ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನಗಳ ಯುನಿಯನ್ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಶಾಲಾ ವಾಹನಗಳ ದರವನ್ನು ಶೇ.10ರವರೆಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಟ್ರಾವೆಲ್ ಮತ್ತು ಪ್ಯಾಸೆಂಜರ್ ವಾಹನಗಳ ದರದಲ್ಲಿಯೂ ಶೇ.10ರಿಂದ 15ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ, ಒಲಾ ಮತ್ತು ಉಬರ್ ಸೇವೆಗಳ ದರ ಹೆಚ್ಚಳದ ಕುರಿತೂ ಚರ್ಚೆಗಳು ಆರಂಭವಾಗಿದ್ದು, ಮೇ 18ರಂದು ಚಾಲಕರ ಸಂಘ ಸಭೆ ನಡೆಸಲಿದೆ. ದರ ಪರಿಷ್ಕರಣೆ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಂಘಟನೆ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

- Advertisement -spot_img

More articles

- Advertisement -spot_img

Latest article