ರೇಣುಕಾಸ್ವಾಮಿ ಕೇಸ್: ಪ್ರದೋಷ್ ಗೆ 5 ದಿನ ಹೈಕೋರ್ಟ್ ಅನುಮತಿ: ತಂದೆಯ ತಿಥಿ ಕಾರ್ಯಕ್ಕೆ ಅವಕಾಶ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ಗೆ ಹೈಕೋರ್ಟ್ ಐದು ದಿನಗಳ ಕಾಲ ಮಧ್ಯಂತರ ಅನುಮತಿ ನೀಡಿದೆ. ತಮ್ಮ ತಂದೆಯ ತಿಥಿ ಕಾರ್ಯದಲ್ಲಿ ಭಾಗಿಯಾಗಲು ಪ್ರದೋಷ್ಗೆ ಇಂದಿನಿಂದ ಐದು ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ತಿಥಿ ಕಾರ್ಯದಲ್ಲಿ ಭಾಗಿಯಾಗಲು ಹೈಕೋರ್ಟ್ ಅನುಮತಿ ನೀಡಿದೆ.
ಈ ಸಂಬಂಧ ಪ್ರದೋಷ್ ಪರ ವಕೀಲರು ಹೈಕೋರ್ಟ್ ಆದೇಶವನ್ನು 59ನೇ ಸೆಷನ್ಸ್ ಕೋರ್ಟ್ಗೆ ಸಲ್ಲಿಸಿದ್ದಾರೆ. ಇದೇ ವೇಳೆ ಸೆಷನ್ಸ್ ಕೋರ್ಟ್ ಒಂದು ಲಕ್ಷ ರೂಪಾಯಿ ಬಾಂಡ್ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದೆ.
ಪ್ರಕರಣದ ಆರೋಪಿಗಳು ಹಾಗೂ ಸಾಕ್ಷಿಗಳೊಂದಿಗೆ ಯಾವುದೇ ಸಂಪರ್ಕ ಮಾಡಬಾರದು. ಪ್ರಕರಣದ ತನಿಖಾಧಿಕಾರಿಗಳೊಂದಿಗೂ ಮಾತನಾಡುವಂತಿಲ್ಲ ಎಂದು ಸೂಚಿಸಲಾಗಿದೆ. ತಿಥಿ ಕಾರ್ಯದಲ್ಲಿ ಭಾಗವಹಿಸುವ ಕುಟುಂಬಸ್ಥರು, ಅಡುಗೆ ಭಟ್ಟರು ಮತ್ತು ಪುರೋಹಿತರ ಮಾಹಿತಿಯನ್ನು ಕೋರ್ಟ್ಗೆ ನೀಡಬೇಕು. ಪ್ರತಿದಿನ ಸಂಜೆ 6 ಗಂಟೆಯೊಳಗೆ ಪ್ರದೋಷ್ ಜೈಲಿಗೆ ವಾಪಸ್ ಆಗಬೇಕು ಎಂದು ಷರತ್ತು ವಿಧಿಸಲಾಗಿದೆ.



