ಮೇ 20ರ ಸಾರಿಗೆ ಮುಷ್ಕರಕ್ಕೆ ಬ್ರೇಕ್ ಹಾಕಿದ ಕರ್ನಾಟಕ ಹೈಕೋರ್ಟ್!
ಬೆಂಗಳೂರು: ಮೇ 20ರಂದು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ನೌಕರರ ಸಂಘಟನೆಗಳಿಗೆ ಕರ್ನಾಟಕ ಹೈಕೋರ್ಟ್ ಶಾಕ್ ನೀಡಿದೆ. ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ನಿರ್ಬಂಧ ವಿಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಹಾಗೂ ಕೆ. ಮನ್ಮಥರಾವ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಸರ್ಕಾರ ಮತ್ತು ಸಾರಿಗೆ ಸಂಘಟನೆಗಳು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಮುಷ್ಕರ ನಡೆಸಬಾರದು ಎಂದು ಸೂಚಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಸಾರಿಗೆ ಸಚಿವರೊಂದಿಗೆ ಸಭೆ ನಡೆಸುವಂತೆ ನಿರ್ದೇಶನ ನೀಡಿದೆ.
ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಕೆಲಸದ ಮಹಿಳೆ ಹಾಗೂ ಕಟ್ಟಡ ಕಾರ್ಮಿಕರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಅರ್ಜಿಯಲ್ಲಿ, KESMA ಕಾಯ್ದೆಯಡಿ ಜನವರಿ 1ರಿಂದ ಜೂನ್ 30ರವರೆಗೆ ಮುಷ್ಕರ ನಿಷೇಧಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು.
ಇದಲ್ಲದೆ, 2025ರ ಜುಲೈ 18ರಂದು ಆರಂಭವಾದ ಕಾರ್ಮಿಕ ಆಯುಕ್ತರ ರಾಜಿ ಸಂಧಾನ ಪ್ರಕ್ರಿಯೆ ಇನ್ನೂ ಮುಂದುವರಿದಿದ್ದು, ಮುಂದಿನ ವಿಚಾರಣೆಯನ್ನು ಮೇ 25ಕ್ಕೆ ನಿಗದಿಪಡಿಸಲಾಗಿದೆ. ಈ ಮಧ್ಯೆ ಮುಷ್ಕರ ನಡೆಸುವುದು ಕಾನೂನುಬಾಹಿರವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಮುಷ್ಕರಕ್ಕೆ ನಿಯಮಾನುಸಾರ 14 ದಿನಗಳ ಮುನ್ನ ನೋಟಿಸ್ ನೀಡಬೇಕಾದರೆ, ಕೇವಲ 7 ದಿನಗಳ ಮುನ್ನವೇ ನೋಟಿಸ್ ನೀಡಲಾಗಿದೆ ಎಂಬ ವಿಚಾರವೂ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಇದೇ ಅವಧಿಯಲ್ಲಿ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಮುಷ್ಕರ ತಡೆಯುವಂತೆ ಮನವಿ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಅರ್ಜಿದಾರರ ಹಿನ್ನೆಲೆ ಕುರಿತೂ ಅಚ್ಚರಿ ವ್ಯಕ್ತಪಡಿಸಿದೆ.
ಇನ್ನೊಂದೆಡೆ, ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನದಲ್ಲಿ ನಿನ್ನೆ ನಡೆದ ಸಂಧಾನ ಸಭೆ ವಿಫಲಗೊಂಡಿತ್ತು. ಸರ್ಕಾರದ ಅಧಿಕಾರಿಗಳು ಹಲವು ಬಾರಿ ಮನವೊಲಿಸಲು ಯತ್ನಿಸಿದರೂ ಸಾರಿಗೆ ಸಂಘಟನೆಗಳ ಮುಖಂಡರು ತಮ್ಮ ನಿಲುವಿನಿಂದ ಹಿಂದೆ ಸರಿದಿರಲಿಲ್ಲ.
ಮತ್ತೆ ಮೇ 25ರಂದು ಸಭೆ ನಡೆಸಲು ಅಧಿಕಾರಿಗಳು ಆಹ್ವಾನ ನೀಡಿದರೂ, ನೇರವಾಗಿ ಮುಖ್ಯಮಂತ್ರಿ ಜೊತೆ ಸಭೆ ನಡೆಸಬೇಕೆಂದು ಸಂಘಟನೆಗಳು ಪಟ್ಟು ಹಿಡಿದಿದ್ದವು. ಸರ್ಕಾರ ತಕ್ಷಣ ಬೇಡಿಕೆಗಳ ಕುರಿತು ಚರ್ಚೆ ನಡೆಸದಿದ್ದರೆ ಮುಷ್ಕರ ಅನಿವಾರ್ಯ ಎಂದು ಸಂಘಟನೆಗಳು ಎಚ್ಚರಿಕೆ ನೀಡಿದ್ದವು.



