ಟೋಲ್ ತಪ್ಪಿಸಲು ನಂಬರ್ ಪ್ಲೇಟ್ ಮರೆಮಾಚಿದರೆ 5 ಪಟ್ಟು ದಂಡ! ವಾಹನ ಸವಾರರಿಗೆ ಕೇಂದ್ರದ ಎಚ್ಚರಿಕೆ
ನವದೆಹಲಿ: ತಡೆಗೋಡೆಗಳಿಲ್ಲದ ತಡೆರಹಿತ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸುವುದನ್ನು ತಪ್ಪಿಸಲು ವಾಹನಗಳ ನೋಂದಣಿ ಸಂಖ್ಯೆಯ ಫಲಕಗಳನ್ನು (Number Plate) ಮರೆಮಾಚುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಇಂತಹ ವಾಹನ ಸವಾರರಿಗೆ ಮೂಲ ಟೋಲ್ ಶುಲ್ಕಕ್ಕಿಂತ ಐದು ಪಟ್ಟು ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಟೋಲ್ ಶುಲ್ಕದ ಜೊತೆಗೆ ಹೆಚ್ಚುವರಿ ದಂಡದ ಮೊತ್ತವನ್ನೂ ವಸೂಲಿ ಮಾಡಲಾಗುತ್ತದೆ. ಈಗಾಗಲೇ ತಡೆರಹಿತ ಟೋಲಿಂಗ್ ವ್ಯವಸ್ಥೆ ಜಾರಿಯಲ್ಲಿರುವ ಸ್ಥಳಗಳಲ್ಲಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಪರಿಚಯಿಸುವ ಹೊಸ ಸ್ಥಳಗಳಲ್ಲಿಯೂ ಈ ನಿಯಮ ಅನ್ವಯವಾಗಲಿದೆ.
ಟೋಲ್ ತಪ್ಪಿಸಲು ನಂಬರ್ ಪ್ಲೇಟ್ ಮರೆಮಾಚುವ ತಂತ್ರಕ್ಕೆ ಕಡಿವಾಣ
ಸಚಿವಾಲಯದ ಪ್ರಕಾರ, ಸಾವಿರಾರು ವಾಹನಗಳು ಯಾವುದೇ ಟೋಲ್ ಶುಲ್ಕ ಪಾವತಿಸದೆ ತಡೆರಹಿತ ಟೋಲ್ ಪ್ಲಾಜಾಗಳನ್ನು ದಾಟುತ್ತಿವೆ. ಇದರಿಂದ ಸರ್ಕಾರಕ್ಕೆ ಗಣನೀಯ ಪ್ರಮಾಣದ ಆದಾಯ ನಷ್ಟವಾಗುತ್ತಿದೆ. ಇಂತಹ ವಾಹನಗಳನ್ನು ಗುರುತಿಸಲಾಗದ ವಾಹನಗಳು ಎಂದು ಪರಿಗಣಿಸಲಾಗುತ್ತಿದ್ದು, ಅವುಗಳ ನಂಬರ್ ಪ್ಲೇಟ್ ಅಥವಾ ಫಾಸ್ಟ್ಟ್ಯಾಗ್ ಕ್ಯಾಮೆರಾಗಳಿಗೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ.
ಟೋಲ್ ಶುಲ್ಕ ತಪ್ಪಿಸುವ ಉದ್ದೇಶದಿಂದಲೇ ವಾಹನದ ನಂಬರ್ ಪ್ಲೇಟ್ಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿರುವುದು ಕಂಡುಬಂದರೆ ಮಾತ್ರ ಐದು ಪಟ್ಟು ದಂಡ ವಿಧಿಸಲಾಗುತ್ತದೆ. ಫಾಸ್ಟ್ಟ್ಯಾಗ್ ಪತ್ತೆಯಾಗದ ಸಂದರ್ಭಗಳಲ್ಲಿ ವಾಹನದ ಮುಂಭಾಗದ ನಂಬರ್ ಪ್ಲೇಟ್, ಹಿಂಭಾಗದ ನಂಬರ್ ಪ್ಲೇಟ್ ಅಥವಾ ಎರಡನ್ನೂ ಮರೆಮಾಚಿರುವ ಪ್ರಕರಣಗಳನ್ನೂ ಈ ನಿಯಮದಡಿ ಪರಿಗಣಿಸಲಾಗುತ್ತದೆ.
ಸುಧಾರಿತ ತಂತ್ರಜ್ಞಾನ ಆಧಾರಿತ ಪ್ರಕ್ರಿಯೆಯ ಮೂಲಕ ಇಂತಹ ಉಲ್ಲಂಘನೆಗಳನ್ನು ಪತ್ತೆಹಚ್ಚಿ, ತಪ್ಪಿತಸ್ಥ ವಾಹನಗಳನ್ನು ಗುರುತಿಸಲಾಗುವುದು ಎಂದು ಸಚಿವಾಲಯ ಹೇಳಿದೆ.
ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣಿಸುವುದು ಕಡ್ಡಾಯ
ವಾಹನಗಳ ನೋಂದಣಿ ಸಂಖ್ಯೆಗಳನ್ನು ಹಾಳುಮಾಡುವುದು, ಮರೆಮಾಚುವುದು ಹಾಗೂ ಟೋಲ್ ಶುಲ್ಕ ತಪ್ಪಿಸುವ ಉದ್ದೇಶದಿಂದ ಫಾಸ್ಟ್ಟ್ಯಾಗ್ ಅಳವಡಿಸದಿರುವುದು ಉದ್ದೇಶಪೂರ್ವಕ ವಂಚನೆಯ ಕೃತ್ಯವಾಗಿದೆ ಎಂದು ಸಚಿವಾಲಯ ಎಚ್ಚರಿಸಿದೆ.
ಹೀಗಾಗಿ ಎಲ್ಲಾ ವಾಹನ ಸವಾರರು ತಮ್ಮ ವಾಹನಗಳ ನೋಂದಣಿ ಸಂಖ್ಯೆಯ ಫಲಕಗಳು ಯಾವುದೇ ಅಡೆತಡೆಯಿಲ್ಲದೆ ಸ್ಪಷ್ಟವಾಗಿ ಕಾಣಿಸುವಂತೆ ನೋಡಿಕೊಳ್ಳಬೇಕು. ಟೋಲ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಇಂತಹ ಕೃತ್ಯಗಳಲ್ಲಿ ತೊಡಗಿದರೆ ಐದು ಪಟ್ಟು ದಂಡ ತೆರಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.



