ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ತನಿಖಾಧಿಕಾರಿ ದಿಢೀರ್ ವರ್ಗಾವಣೆ
ದಾವಣಗೆರೆ: ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖಾಧಿಕಾರಿಯನ್ನು ದಿಢೀರ್ ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ಮಂಜುಳಾ ಡಿ. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ದಾವಣಗೆರೆ ಅಜಾದ್ ನಗರ ಠಾಣೆಯ ಎಸ್ಐ ಜಯರತ್ನಮ್ಮ ಅವರನ್ನು ನಿಯೋಜಿಸಲಾಗಿದೆ.
ಈ ಸಂಬಂಧ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಹೆಚ್.ಟಿ. ಶೇಖರ್ ಆದೇಶ ಹೊರಡಿಸಿದ್ದಾರೆ. ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಅವರ ಸೂಚನೆಯಂತೆ ಈ ವರ್ಗಾವಣೆ ನಡೆದಿರುವುದಾಗಿ ತಿಳಿದುಬಂದಿದೆ.
ಎಸ್ಐ ಮಂಜುಳಾ ಅವರು ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ದೂರಿನ ತನಿಖೆ ನಡೆಸುತ್ತಿದ್ದರು. ಪ್ರಕರಣ ಸಂಬಂಧ ಸ್ವಾಮೀಜಿಯನ್ನು ಹರಿಹರ ಪೊಲೀಸ್ ಠಾಣೆಗೆ ಎರಡು ಬಾರಿ ಕರೆಯಿಸಿ ವಿಚಾರಣೆ ನಡೆಸಿದ್ದರು ಎನ್ನಲಾಗಿದೆ.
ಈ ನಡುವೆ ತನಿಖಾಧಿಕಾರಿಯ ದಿಢೀರ್ ವರ್ಗಾವಣೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸ್ ಇಲಾಖೆಯ ಕ್ರಮದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಇದೀಗ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ಜಯರತ್ನಮ್ಮ ಅವರಿಗೆ ಪ್ರಕರಣದ ಮುಂದಿನ ತನಿಖೆಯ ಜವಾಬ್ದಾರಿ ನೀಡಲಾಗಿದೆ.



