No menu items!
16.8 C
Munich
Thursday, July 23, 2026

ಕೈಕೋಳ ಕಳಚಿ ಸಪ್ತಪದಿ ತುಳಿದ ಜೀವಾವಧಿ ಖೈದಿಗಳು : ಖಾಕಿ ಪಡೆಯ ಸಮ್ಮುಖದಲ್ಲೇ ಜೈಲಿನಲ್ಲಿ ನೆರವೇರಿತು ಅಪರೂಪದ ಮದುವೆ

Must read

ಜೈಲು ಅಂದರೆ ಸಾಮಾನ್ಯವಾಗಿ ಎಲ್ಲರಿಗೆ ನೆನಪಾಗುವುದು ಕಂಬಿ, ಕಲ್ಲಿನ ಗೋಡೆ, ಕತ್ತಲೆ ಕೋಣೆ ಮತ್ತು ಸ್ವಾತಂತ್ರ್ಯಕ್ಕೆ ಕೊಳ್ಳಿ ಇಡುವ ನರಕಯಾತನೆ. ಅನುದಿನದ ಮಾನಸಿಕ ಖಿನ್ನತೆ, ಏಕಾಂತದ ನೋವು, ಕಠಿಣ ದಿನಚರಿ ಮತ್ತು ಅನಿವಾರ್ಯದ ಬದುಕು ಎಂತಹವರನ್ನೂ ಜೈಲಿನಲ್ಲಿ ಮಾನಸಿಕವಾಗಿ ಜರ್ಜರಿತಗೊಳಿಸಿಬಿಡುತ್ತದೆ. ಜೈಲಿನ ಕಟ್ಟುಪಾಡುಗಳು ಮತ್ತು ಕಠಿಣ ವಾತಾವರಣದಲ್ಲಿ ಮನುಷ್ಯ ತಾನು ಮಾಡಿದ ತಪ್ಪಿಗೆ ಪ್ರತಿದಿನ ನೊಂದುಕೊಳ್ಳುತ್ತಾ ದಿನ ದೂಡಬೇಕಾಗುತ್ತದೆ.

ಆದರೆ, ಅದೇ ಕತ್ತಲೆಯ ಗೋಡೆಗಳ ನಡುವೆ ಪ್ರೀತಿ, ಭರವಸೆ ಮತ್ತು ಹೊಸ ಬದುಕಿನ ಬೆಳಕು ಮೂಡಲು ಸಾಧ್ಯವೇ? ಹೌದು, ರಾಜಸ್ಥಾನದ ಜೋಧ್‌ಪುರದ ‘ಮಾಂಡೋರ್ ಓಪನ್ ಜೈಲಿನಲ್ಲಿ’ ಬುಧವಾರ ಇಂತಹದ್ದೇ ಒಂದು ಅಪರೂಪದ ಘಟನೆ ನಡೆದಿದೆ.

ಬಂದೀಖಾನೆಯಲ್ಲಿ ಕಲ್ಯಾಣ ವೈಭವ: ಜೀವಾವಧಿ ಶಿಕ್ಷೆ ಅನುಭವಿಸುತ್ತಲೇ ಒಂದಾದ ಪ್ರೇಮಿಗಳು

ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿದ್ದ ಮುಲಾರಾಮ್ ಮತ್ತು ಸೀಮಾ, ಈಗ ಅಧಿಕೃತವಾಗಿ ಪತಿ-ಪತ್ನಿಯಾಗಿದ್ದಾರೆ. ಸಾಮಾನ್ಯವಾಗಿ ಜೈಲಿನಲ್ಲಿ ಖಾಕಿ ಪಡೆಯ ಖಡಕ್ ಆದೇಶಗಳು ಕೇಳಿಸುತ್ತಿದ್ದ ಜಾಗದಲ್ಲಿ, ಬುಧವಾರ ಮಂಗಳವಾದ್ಯ ಮತ್ತು ಮಂತ್ರಘೋಷಗಳು ಮೊಳಗಿದವು. ಕೈಕೋಳ ಧರಿಸುತ್ತಿದ್ದ ಕೈಗಳು ಪ್ರೀತಿಯಿಂದ ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಂಡವು. ಜೈಲಿನ ಕಂಬಿಗಳ ಹಿಂದೆ ಚಿಗುರಿದ ಈ ಅಪರೂಪದ ಪ್ರೇಮಕಥೆಗೆ ರಾಜಸ್ಥಾನ ಹೈಕೋರ್ಟ್ ಕೂಡ ಹಸಿರು ನಿಶಾನೆ ತೋರಿ, ಮದುವೆಗೆ ವಿಶೇಷ ಅನುಮತಿ ನೀಡಿತ್ತು.

ಓಪನ್ ಜೈಲಿನಲ್ಲಿ ಚಿಗುರಿದ ಪ್ರೇಮ

ತಮ್ಮ ಜೈಲು ಜೀವನದಲ್ಲಿ ಅತ್ಯುತ್ತಮ ನಡವಳಿಕೆ ತೋರಿದ್ದಕ್ಕೆ ಈ ಇಬ್ಬರನ್ನೂ ಸಾಮಾನ್ಯ ಜೈಲಿನಿಂದ ‘ಮಾಂಡೋರ್ ಓಪನ್ ಜೈಲಿಗೆ’ ವರ್ಗಾಯಿಸಲಾಗಿತ್ತು. ಅಲ್ಲಿಗೆ ಬಂದ ಮೇಲೆಯೇ ಇಬ್ಬರ ನಡುವೆ ಮೊದಲ ಬಾರಿ ಪರಿಚಯವಾಗಿದ್ದು. ದಿನ ಕಳೆದಂತೆ ಆ ಸಣ್ಣ ಪರಿಚಯ ಗಾಢವಾದ ಪ್ರೀತಿಯಾಗಿ ರೂಪಾಂತರಗೊಂಡಿತು. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಲೇ, ಉಳಿದ ಜೀವನವನ್ನು ಪರಸ್ಪರ ಜೊತೆಯಾಗಿ ಅರ್ಥಪೂರ್ಣವಾಗಿ ಕಳೆಯಲು ಇಬ್ಬರೂ ದೃಢ ನಿರ್ಧಾರ ಮಾಡಿದ್ದರು.

ಜೈಲಾಧಿಕಾರಿಗಳೇ ಬಂಧುಬಳಗ: ನೆರವೇರಿತು ಸರಳ ವಿವಾಹ

ಯಾವುದೇ ಅದ್ಧೂರಿ ಕಲ್ಯಾಣ ಮಂಟಪವಿಲ್ಲ, ನೂರಾರು ಸಂಬಂಧಿಕರ ಸಮ್ಮೇಳನವೂ ಇರಲಿಲ್ಲ. ಆದರೆ ಸಂಪ್ರದಾಯದ ಯಾವ ಶಾಸ್ತ್ರಕ್ಕೂ ಇಲ್ಲಿ ಕುಂದುಕೊರತೆ ಬರಲಿಲ್ಲ. ಜೈಲಾಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯೇ ಬಂಧುಗಳಂತೆ ಮುಂದೆ ನಿಂತು ಮದುವೆಯ ಪ್ರತಿಯೊಂದು ವಿಧಿವಿಧಾನಗಳನ್ನು ನೆರವೇರಿಸಿದರು. ಕೇವಲ 21 ಜನರಿದ್ದ ಈ ಸರಳ ವಿವಾಹದಲ್ಲಿ, ಜೈಲು ಸಿಬ್ಬಂದಿಯೇ ನವಜೋಡಿಗೆ ಅಕ್ಷತೆ ಹಾಕಿ ಆಶೀರ್ವದಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದು ನಿಜಕ್ಕೂ ಭಾವನಾತ್ಮಕ ಕ್ಷಣವಾಗಿತ್ತು.

ಏನಿದು ‘ಓಪನ್ ಜೈಲು’ ಕಲ್ಪನೆ?

ಕೇವಲ ಶಿಕ್ಷೆ ನೀಡುವುದು ಮತ್ತು ಕೈದಿಗಳನ್ನು ಕುಗ್ಗಿಸುವುದು ಜೈಲಿನ ಕೆಲಸವಲ್ಲ. ಉತ್ತಮ ನಡವಳಿಕೆ ತೋರುವ ಕೈದಿಗಳಿಗೆ ಜೀವನೋಪಾಯ ಹಾಗೂ ಸಾಮಾಜಿಕ ಹೊಣೆಗಾರಿಕೆಯ ತರಬೇತಿ ನೀಡಿ, ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಈ ‘ಓಪನ್ ಜೈಲು’ ವ್ಯವಸ್ಥೆಯ ಮುಖ್ಯ ಉದ್ದೇಶ. ಅಪರಾಧಿಗಳು ಮಾಡಿದ ತಪ್ಪಿನಿಂದಲೇ ಇಡೀ ಜೀವನವನ್ನು ಅಳೆಯದೆ, ಅವರನ್ನು ತಿದ್ದಿ ಹೊಸ ಮನುಷ್ಯರನ್ನಾಗಿ ಮಾಡುವುದೇ ಈ ವ್ಯವಸ್ಥೆಯ ಮುಖ್ಯ ಉದ್ದೇಶ.

ಜೈಲಿನ ನಿಯಮಗಳಡಿಯಲ್ಲೇ ಮುಂದುವರಿಯಲಿದೆ ನವಜೀವನ

ಮದುವೆಯ ಸಂಭ್ರಮ ಮುಗಿದ ನಂತರ, ಈ ನವದಂಪತಿ ತಮ್ಮ ಜೀವಾವಧಿ ಶಿಕ್ಷೆಯ ಉಳಿದ ಅವಧಿಯನ್ನು ಓಪನ್ ಜೈಲಿನ ನಿಯಮಾವಳಿಗಳಂತೆಯೇ ಮುಂದುವರಿಸಲಿದ್ದಾರೆ. ಆದರೆ, ಇನ್ಮುಂದೆ ಅವರು ಪ್ರತ್ಯೇಕ ಅಪರಾಧಿಗಳಾಗಿರದೆ, ಬದುಕಿನ ಪ್ರತಿ ಕಷ್ಟ-ಸುಖದಲ್ಲೂ ಹೆಗಲಿಗೆ ಹೆಗಲು ಕೊಟ್ಟು ಸಾಗುವ ಜೀವನ ಸಂಗಾತಿಗಳಾಗಿ ದಿನ ದೂಡಲಿದ್ದಾರೆ. ಕತ್ತಲೆಯ ನಡುವೆಯೂ ಬದುಕನ್ನು ಮರುರೂಪಿಸಿಕೊಳ್ಳಲು ನ್ಯಾಯಾಂಗ ವ್ಯವಸ್ಥೆ ನೀಡಿದ ಈ ಎರಡನೇ ಅವಕಾಶ ಈಗ ಎಲ್ಲರ ಗಮನ ಸೆಳೆಯುತ್ತಿದೆ.

- Advertisement -spot_img

More articles

- Advertisement -spot_img

Latest article