No menu items!
17.3 C
Munich
Wednesday, May 20, 2026

ವನ್ಯಜೀವಿ ಸಫಾರಿಗಳಿಗೆ ಹೊಸ ನಿಯಮ: ಇನ್ಮುಂದೆ ತೆರೆದ ವಾಹನಗಳಿಗೆ ಅವಕಾಶ ಇಲ್ಲ-ಈಶ್ವರ ಖಂಡ್ರೆ

Must read

ವನ್ಯಜೀವಿ ಸಫಾರಿಗಳಿಗೆ ಹೊಸ ನಿಯಮ: ಇನ್ಮುಂದೆ ತೆರೆದ ವಾಹನಗಳಿಗೆ ಅವಕಾಶ ಇಲ್ಲ-ಈಶ್ವರ ಖಂಡ್ರೆ

ಬೆಂಗಳೂರು: ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿಧಾಮಗಳಲ್ಲಿ ನಡೆಯುವ ಸಫಾರಿಗಳ ವೇಳೆ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ತೆರೆದ ಕ್ಯಾಂಪರ್ ವಾಹನಗಳ ಬದಲು ಸುರಕ್ಷಿತ ಬಸ್‌ಗಳನ್ನು ಬಳಕೆ ಮಾಡಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ಎರಡು ಸಾಕಾನೆಗಳ ಕಾಳಗದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ಹಿನ್ನೆಲೆ ಸಚಿವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಸಫಾರಿಗಳಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವಂತೆ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚನೆ ನೀಡಲಾಗಿದೆ.

ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳ ಜೊತೆಗೆ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ ಮತ್ತು ಕೆ.ಗುಡಿ ಸೇರಿದಂತೆ ರಾಜ್ಯದ ವಿವಿಧ ವನ್ಯಜೀವಿಧಾಮಗಳಲ್ಲಿ ಸಫಾರಿ ವ್ಯವಸ್ಥೆ ಇದೆ. ರಾಜ್ಯದ ವಿವಿಧ ಭಾಗಗಳಷ್ಟೇ ಅಲ್ಲದೆ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಹಾಗೂ ವನ್ಯಜೀವಿ ಪ್ರಿಯರು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಇದುವರೆಗೆ ಸಫಾರಿ ವೇಳೆ ಆನೆ, ಹುಲಿ ಸೇರಿದಂತೆ ಯಾವುದೇ ವನ್ಯಮೃಗಗಳು ವಾಹನಗಳ ಮೇಲೆ ದಾಳಿ ಮಾಡಿ ಜೀವಹಾನಿ ಉಂಟುಮಾಡಿದ ಘಟನೆಗಳು ವರದಿಯಾಗಿಲ್ಲ. ಆದರೂ ಅನಾಹುತ ಸಂಭವಿಸುವ ಮುನ್ನವೇ ಎಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಚಿವರು ತಿಳಿಸಿದ್ದಾರೆ.

ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಇನ್ನು ಮುಂದೆ ತೆರೆದ ಕ್ಯಾಂಪರ್ ವಾಹನಗಳ ಬದಲು ಸಂಪೂರ್ಣ ಸುರಕ್ಷಿತ ಬಸ್ ಸಫಾರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಜೊತೆಗೆ ಈಗ ಬಳಕೆಯಲ್ಲಿರುವ ಕ್ಯಾಂಪರ್ ವಾಹನಗಳಿಗೆ ಕಬ್ಬಿಣದ ಜಾಲರಿ ಅಥವಾ ಒಡೆಯಲಾಗದ ಗಾಜು ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಯಾವುದೇ ಪ್ರವಾಸಿಗರು ಅರಣ್ಯದೊಳಗೆ ವಾಹನದಿಂದ ಇಳಿಯದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಬೇಕು. ಪ್ರತಿ ಸಫಾರಿ ವಾಹನದಲ್ಲೂ ಪ್ರಥಮ ಚಿಕಿತ್ಸಾ ಕಿಟ್ ಇರಬೇಕು. ಜೊತೆಗೆ ಸಫಾರಿ ಕೇಂದ್ರಗಳ ಸಮೀಪ ಅಂಬುಲೆನ್ಸ್ ವ್ಯವಸ್ಥೆ ಕಡ್ಡಾಯವಾಗಿ ಇರಬೇಕೆಂದು ಸಚಿವರು ನಿರ್ದೇಶನ ನೀಡಿದ್ದಾರೆ.

ಇದಕ್ಕೂ ಮುನ್ನ ದುಬಾರೆ ಆನೆ ಶಿಬಿರದಲ್ಲಿ ನಡೆದ ಘಟನೆ ಬೆನ್ನಲ್ಲೇ ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ರೂಪಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಪ್ರವಾಸಿಗರು ಕನಿಷ್ಠ 100 ಅಡಿ ದೂರದಲ್ಲಿ ನಿಂತು ಆನೆಗಳ ಸ್ನಾನ ವೀಕ್ಷಿಸುವಂತೆ ನಿಯಮ ರೂಪಿಸಲು ಹಾಗೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಲಾಗಿದೆ.

- Advertisement -spot_img

More articles

- Advertisement -spot_img

Latest article