ದೈವ ಅವಹೇಳನ ವಿವಾದ: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆ ಕೋರಿದ ರಣವೀರ್ ಸಿಂಗ್
ಬೆಂಗಳೂರು ‘ಕಾಂತಾರ’ ಸಿನಿಮಾದ ದೈವ ಸಂಪ್ರದಾಯ ಕುರಿತು ನೀಡಿದ್ದ ಹೇಳಿಕೆಯಿಂದ ವಿವಾದಕ್ಕೆ ಒಳಗಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಕ್ಷಮೆ ಯಾಚಿಸಿರುವ ಘಟನೆ ಗಮನ ಸೆಳೆದಿದೆ.
ಈ ಹಿಂದೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ರಣವೀರ್ ಸಿಂಗ್ ದೈವ ಸಂಪ್ರದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ದೈವವನ್ನು ದೆವ್ವಕ್ಕೆ ಹೋಲಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹೇಳಿಕೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಸಂಬಂಧ ಹಿರಿಯ ವಕೀಲ ಪ್ರಶಾಂತ್ ಮೆತಲ್ ಕಾನೂನು ಹೋರಾಟ ಆರಂಭಿಸಿ, ರಣವೀರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕ್ರಮ ಕೈಗೊಂಡಿದ್ದರು. ಬಳಿಕ ನ್ಯಾಯಾಲಯದ ಮೆಟ್ಟಿಲೇರಿದ ಅವರು, ನಟನು ತಾಯಿ ಚಾಮುಂಡಿ ಸನ್ನಿಧಿಯಲ್ಲಿ ಕ್ಷಮೆ ಕೇಳಿದರೆ ಪ್ರಕರಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಇದೀಗ ರಣವೀರ್ ಸಿಂಗ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ್ದಾರೆ. ಈ ಬೆಳವಣಿಗೆಯನ್ನು ಕನ್ನಡಪರ ಸಂಘಟನೆಗಳು ಮತ್ತು ಕೆಲ ಅಭಿಮಾನಿಗಳು ಮಹತ್ವದ ಬೆಳವಣಿಗೆ ಎಂದು ಪರಿಗಣಿಸುತ್ತಿದ್ದಾರೆ.
ವಿವಾದದ ನಡುವೆಯೂ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ದೈವ ಸಂಪ್ರದಾಯದ ಬಗ್ಗೆ ಗೌರವ ಕಾಪಾಡಬೇಕೆಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.



