ಬೈಜೂಸ್ ಸಂಸ್ಥಾಪಕ ರವೀಂದ್ರನ್ ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಸಿಂಗಾಪುರ: ಶಿಕ್ಷಣ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಕತಾರ್ ಇನ್ವೆಸ್ಟ್ಮೆಂಟ್ ಅಥಾರಿಟಿಯ ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್ ದಾಖಲಿಸಿದ್ದ ಒಪ್ಪಂದ ಉಲ್ಲಂಘನೆ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಾಲಯ 2024ರ ಏಪ್ರಿಲ್ನಿಂದ ಹಲವು ಬಾರಿ ಆದೇಶ ನೀಡಿದ್ದರೂ, ಅವನ್ನು ನಿರಂತರವಾಗಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಬೈಜು ರವೀಂದ್ರನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಯಾವುದೇ ಕಾರಣ ಹೇಳದೇ ತಕ್ಷಣವೇ ಸಿಂಗಾಪುರದ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಜೊತೆಗೆ ಕಾನೂನು ವೆಚ್ಚಗಳಿಗಾಗಿ ಸುಮಾರು 90 ಸಾವಿರ ಸಿಂಗಾಪುರ ಡಾಲರ್, ಅಂದರೆ ಸುಮಾರು 67.47 ಲಕ್ಷ ರೂಪಾಯಿ ಪಾವತಿಸುವಂತೆ ಆದೇಶಿಸಲಾಗಿದೆ.
ಹೂಡಿಕೆದಾರರ ಹಣವನ್ನು ದುರುಪಯೋಗಪಡಿಸಿಕೊಂಡು, ಆಸ್ತಿ ವಿವರಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯಗಳಿಂದ ಮುಚ್ಚಿಡಲು ಯತ್ನಿಸಿರುವ ಆರೋಪವೂ ಅವರ ವಿರುದ್ಧ ಕೇಳಿಬಂದಿದೆ. ವೈಯಕ್ತಿಕ ಹಾಗೂ ಕಂಪನಿಯ ಆಸ್ತಿ ಮಾಹಿತಿಯನ್ನು ಬಹಿರಂಗಪಡಿಸುವಂತೆ ನೀಡಿದ್ದ ಸರಣಿ ಆದೇಶಗಳನ್ನು ಅವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಹಾಗೂ ಮಾಹಿತಿಯನ್ನು ಮರೆಮಾಚಲು ಪ್ರಯತ್ನಿಸಲಾಗಿದೆ ಎಂದು ಕೋರ್ಟ್ ಕಟುವಾಗಿ ಟೀಕಿಸಿದೆ.
ಈ ನಡುವೆ ವಿದೇಶಿ ಹೂಡಿಕೆದಾರರು ಹಾಗೂ ಸಾಲದಾತರು ತಮ್ಮ ನಷ್ಟ ವಸೂಲಿಗಾಗಿ ಜಾಗತಿಕ ಮಟ್ಟದಲ್ಲಿ ಬೈಜು ರವೀಂದ್ರನ್ ವಿರುದ್ಧ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಈ ಹಿಂದೆ ಅಮೆರಿಕದ ನ್ಯಾಯಾಲಯವೂ ಆದೇಶ ಉಲ್ಲಂಘನೆ ಪ್ರಕರಣದಲ್ಲಿ ಅವರಿಗೆ ಭಾರಿ ದಂಡ ವಿಧಿಸಿತ್ತು.
ಇನ್ನೊಂದೆಡೆ, ಜಾರಿ ನಿರ್ದೇಶನಾಲಯವು ಬೈಜುಸ್ ಸಂಸ್ಥೆಯ ವಿರುದ್ಧ ತನಿಖೆ ನಡೆಸುತ್ತಿದ್ದು, ವಿದೇಶಿ ಹೂಡಿಕೆ ಹಾಗೂ ಹಣ ವರ್ಗಾವಣೆಯಲ್ಲಿ ಸುಮಾರು 9 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಫೆಮಾ ನಿಯಮ ಉಲ್ಲಂಘನೆ ನಡೆದಿದೆ ಎಂಬ ಆರೋಪ ಪರಿಶೀಲನೆಯಲ್ಲಿದೆ. ಹೂಡಿಕೆದಾರರನ್ನು ಸೆಳೆಯಲು ಕಂಪನಿಯ ಆದಾಯದ ಕುರಿತು ತಪ್ಪು ಲೆಕ್ಕಪತ್ರ ಸೃಷ್ಟಿಸಿರುವ ಆರೋಪವೂ ಕೇಳಿಬಂದಿದೆ.



